ಈ ತಿಂಗಳೇ ಸರ್ಕಾರ ಪತನ : ಬಿಜೆಪಿ ವಿಶ್ವಾಸ

By Web DeskFirst Published Sep 19, 2018, 8:43 AM IST
Highlights

ಮಂಗಳವಾರ ಅತ್ತ ಕಾಂಗ್ರೆಸ್ ಪಾಳೆಯದಲ್ಲಿ ಬಂಡಾಯ ಶಮನಗೊಳಿಸುವ ಪ್ರಯತ್ನ ಗಳು ಬಿರುಸಿನಿಂದ ನಡೆಯುತ್ತಿರುವ ಹೊತ್ತಿನಲ್ಲೇ ಇತ್ತ ನಗರದ ಡಾಲರ್ಸ್ ಕಾಲೋನಿಯಲ್ಲಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನಿವಾಸದಲ್ಲಿ ಬಿರುಸಿನ ಚಟುವಟಿಕೆಗಳು ಮುಂದುವರೆದಿದ್ದವು. 

ಬೆಂಗಳೂರು(ಸೆ.19): ಆಡಳಿತಾರೂಢ ಕಾಂಗ್ರೆಸ್‌ನಲ್ಲಿ ಶಾಸಕರ ಅತೃಪ್ತಿ ಸದ್ಯಕ್ಕೆ ಕಡಿಮೆಯಾದಂತೆ ಕಂಡು ಬಂದರೂ ಈ ತಿಂಗಳ ಅಂತ್ಯ ದೊಳಗಾಗಿ ಸರ್ಕಾರ ಪತನ ಗೊಳ್ಳುವ ಸಾಧ್ಯತೆ ಹೆಚ್ಚಿದೆ ಎಂಬ ವಿಶ್ವಾಸ ಬಿಜೆಪಿ ಪಾಳೆಯದಲ್ಲಿ ಕಂಡು ಬರುತ್ತಿದೆ.

ಮೇಲ್ನೋಟಕ್ಕೆ ಕಾಂಗ್ರೆಸ್ ಶಾಸಕರ ಅಸಮಾಧಾನ ಕಡಿಮೆಯಾದಂತೆ ಕಾಣುತ್ತಿರಬಹುದು. ವಾಸ್ತವವಾಗಿ ಅದು ಕಡಿಮೆಯಾಗಿಲ್ಲ. ಬೂದಿ ಮುಚ್ಚಿದ ಕೆಂಡದಂತಿದೆ. ಶೀಘ್ರ ಅತೃಪ್ತಿ ಉಲ್ಬಣಿಸಲಿದ್ದು, ಹಲವು ಶಾಸಕರು ರಾಜೀನಾಮೆ ನೀಡಿ ಹೊರಬರಲಿದ್ದಾರೆ ಎಂದು ಬಿಜೆಪಿ ಮೂಲಗಳು ಮಾಹಿತಿ ನೀಡಿವೆ.

ಇದಕ್ಕೆ ಆಧಾರವೇನು ಎಂಬುದಕ್ಕೆ ಬಿಜೆಪಿ ನಾಯಕರ ಬಳಿ ಸ್ಪಷ್ಟ ಉತ್ತರವಿಲ್ಲ. ಅದೆಲ್ಲ ಬಹಿರಂಗಪಡಿಸಲು ಆಗದು. ಇದೆಲ್ಲ ಅಷ್ಟು ಸುಲಭವಾಗಿ ಮುಗಿಯದು. ಕಾದು ನೋಡಿ ಎಂಬ ನಿಗೂಢ ಮಾತುಗಳು ಬಿಜೆಪಿ ಪಾಳೆಯದಿಂದ ಹೊರಬರುತ್ತಿವೆ.

ಮಂಗಳವಾರ ಅತ್ತ ಕಾಂಗ್ರೆಸ್ ಪಾಳೆಯದಲ್ಲಿ ಬಂಡಾಯ ಶಮನಗೊಳಿಸುವ ಪ್ರಯತ್ನ ಗಳು ಬಿರುಸಿನಿಂದ ನಡೆಯುತ್ತಿರುವ ಹೊತ್ತಿನಲ್ಲೇ ಇತ್ತ ನಗರದ ಡಾಲರ್ಸ್ ಕಾಲೋನಿಯಲ್ಲಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನಿವಾಸದಲ್ಲಿ ಬಿರುಸಿನ ಚಟುವಟಿಕೆಗಳು ಮುಂದುವರೆದಿದ್ದವು. 

ಪಕ್ಷದ ಶಾಸಕರು ಹಾಗೂ ಮುಖಂಡರೊಂದಿಗೆ ಯಡಿಯೂರಪ್ಪ ಅವರು ಬೆಳಗ್ಗೆಯಿಂದಲೂ ಸಮಾಲೋಚನೆ ನಡೆಸಿದರು. ಪೌರಾಡಳಿತ ಸಚಿವ ರಮೇಶ್ ಜಾರಕಿಹೊಳಿ ವರು ಮಾತು ಕಡಿಮೆ ಮಾಡಿ ಬಂಡಾಯ ಶಮನಗೊಂಡಂತೆ ಕಂಡು ಬಂದ ಬೆನ್ನಲ್ಲೇ ಕೆಲಕಾಲ ಬಿಜೆಪಿ ಪಾಳೆಯದಲ್ಲಿ ತುಸು ಬೇಸರ ಕಂಡು ಬಂದಂತೆ ಅನಿಸಿತು. ಆದರೂ ಚಟುವಟಿಕೆ ಮತ್ತೆ ಯಥಾಸ್ಥಿತಿಗೆ ತಲುಪಿತ್ತು. ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಅವರ ನಿವಾಸದಿಂದ ಹೊರಬರುವ ಎಲ್ಲ ಶಾಸಕರು ಹಾಗೂ ಮುಖಂಡರು ಹಾಲಿ ಸಮ್ಮಿಶ್ರ ಸರ್ಕಾರ ಪತನಗೊಂಡು ಶೀಘ್ರದಲ್ಲೇ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂಬ ವಿಶ್ವಾಸದ ಮಾತುಗಳನ್ನು ಆಡುತ್ತಿ ರುವುದು ಕುತೂಹಲಕರವಾಗಿದೆ.

ಈ ನಡೆಯುತ್ತಿರುವುದು ಆಪರೇಷನ್ ಕಮಲ ಅಲ್ಲ ಎಂಬುದನ್ನು ಸಾರಿ ಸಾರಿ ಹೇಳುತ್ತಿರುವ ಬಿಜೆಪಿ  ನಾಯಕರು, ತಮಗೂ ಮತ್ತು ಅದಕ್ಕೂ ಯಾವುದೇ ಸಂಬಂಧವಿಲ್ಲ. ಅದು ಸರ್ಕಾರದ ಆಂತರಿಕ ತಿಕ್ಕಾಟ. ಸರ್ಕಾರ ಪತನಗೊಂಡಲ್ಲಿ ಆಗ ನಾವು ಪರ್ಯಾಯ ಸರ್ಕಾರ ರಚಿಸಲು ಮುಂದಾಗುತ್ತೇವೆ. ಆದರೆ, ನಾವಾಗಿಯೇ ಸರ್ಕಾರ ಬೀಳಿಸುವ ಪ್ರಯತ್ನ ಮಾಡುತ್ತಿಲ್ಲ ಎಂದು ಸ್ಪಷ್ಟಪಡಿಸುವುದನ್ನು ಮಾತ್ರ ಬಿಡಲಿಲ್ಲ. ಇದೆಲ್ಲದರ ನಡುವೆಯೂ ಬಿಜೆಪಿಯಿಂದ ಕಾಂಗ್ರೆಸ್ ಶಾಸಕರನ್ನು ಸೆಳೆದು ತರುವ ತೆರೆಮರೆಯ ಪ್ರಯತ್ನ ಮಾತ್ರ ನಡೆದೇ ಇತ್ತು.

click me!