ಮೋದಿ ರೂಪದಲ್ಲಿ ಸಿಂಗಾಪುರ ಸಂಸ್ಥಾಪಕ ಲೀ ಭಾರತದಲ್ಲಿ ಮರುಜನ್ಮ?

By Web DeskFirst Published Nov 19, 2018, 11:18 AM IST
Highlights

ಸಿಂಗಾಪುರ ಸಂಸ್ಥಾಪಕ ಲೀ ಕ್ವಾನ್‌ಗೂ ಮೋದಿ ರೂಪದಲ್ಲಿ ಜನ್ಮ ತಾಳಿದ್ದಾರಾ? ಏನಿದು ಅಚ್ಚರಿ ವಿಚಾರ? ನಿಜಾನಾ ಈ ಸುದ್ದಿ? 

ನವದೆಹಲಿ (ನ. 19): ಪ್ರಧಾನಿ ಮೋದಿ ರೂಪದಲ್ಲಿ ಸಿಂಗಾಪುರ ಸಂಸ್ಥಾಪಕ ಲೀ ಕ್ವಾನ್ ಜನ್ಮ ತಾಳಿದ್ದಾರೆ ಎಂದು ಸಿಂಗಾಪುರದ ದಿನಪತ್ರಿಕೆಯೊಂದು ವರದಿ ಮಾಡಿದೆ ಎಂಬ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಇದರೊಂದಿಗೆ ಮೋದಿ ಅವರ ಅರ್ಧ ಫೋಟೋ ಮತ್ತು ಲೀ ಅವರ ಅರ್ಧ ಫೋಟೋವನ್ನು ಜೋಡಿಸಲಾಗಿದೆ. ಪೋಸ್ಟ್ ಕಾರ್ಡ್ ವೆಬ್‌ಸೈಟ್ ಮೊದಲಿಗೆ ಹೀಗೆ ದಿನಪತ್ರಿಕೆಯೊಂದರ ವರದಿಯನ್ನು ಪೋಸ್ಟ್ ಮಾಡಿ, ‘ನಮ್ಮ ದೇಶದ ಮಾಧ್ಯಮಗಳು ಮಾಡದ ಕೆಲಸವನ್ನು ಸಿಂಗಾಪುರದ ಮಾಧ್ಯಮವೊಂದು ಮಾಡಿದೆ. ಇಡೀ ಜಗತ್ತೇ ಮೋದಿ ಕೆಲಸವನ್ನು ಕೊಂಡಾಡುತ್ತಿದೆ’ ಎಂದು ಹೇಳಿದೆ. ಬಳಿಕ ‘ಐ ಸಪೋರ್ಟ್ ನರೇಂದ್ರ ಮೋದಿ’, ‘ಬಿಜೆಪಿ ಸಿಂಗಾಪುರ್’ ಫೇಸ್‌ಬುಕ್ ಪೇಜ್‌ಗಳೂ ಇದನ್ನು ಪೋಸ್ಟ್ ಮಾಡಿವೆ.

ಆದರೆ ನಿಜಕ್ಕೂ ಸಿಂಗಾಪುರ ಮಾಧ್ಯಮ ಹೀಗೆ ವರದಿ ಮಾಡಿತ್ತೇ ಎಂದು ಪರಿಶೀಲಿಸಿದಾಗ ಇದೊಂದು ದಾರಿ ತಪ್ಪಿಸುವ ಸಂದೇಶ ಎಂಬುದು ಸ್ಪಷ್ಟವಾಗಿದೆ. ಸಿಂಗಾಪುರದ ಯಾವ ಮಾಧ್ಯಮಗಳೂ ಇಂಥ ವರದಿ ಮಾಡಿಲ್ಲ. 2016 ರಲ್ಲಿ ಮೋದಿ 500 ಮತ್ತು 10000 ರು. ನೋಟು ರದ್ದು ಮಾಡಿದಾಗ ಭಾರತದ ಮಾಧ್ಯಮವೊಂದು ‘ಸಿಂಗಾಪುರ ಸಂಸ್ಥಾಪಕ ಲೀ ಭಾರತದಲ್ಲಿ ಜನಿಸಿದ್ದಾರೆ’ ಎಂದು ಹೆಸರು ಹೇಳಲು ಬಯಸದ ಸರ್ಕಾರಿ ಅಧಿಕಾರಿಯೊಬ್ಬರು ಹೇಳಿದ್ದಾಗಿ ವರದಿ ಮಾಡಿತ್ತು.

ಅದರಲ್ಲಿ ಸಿಂಗಾಪುರ ಪ್ರಧಾನಿಯಂತೆ ಮೋದಿ ಕ್ರಾಂತಿಕಾರಕ ನಿರ್ಧಾರಗಳನ್ನು ಕೈಗೊಂಡಿದ್ದಾರೆ ಎಂದು ಹೇಳಿದ್ದಾಗಿ ಬರೆಯಲಾಗಿತ್ತು. ಆ ಸುದ್ದಿಯಲ್ಲಿ ಈಗ ವೈರಲ್ ಆಗಿರುವ ಫೋಟೋಶಾಪ್ ಮಾಡಿದ ಫೋಟೋವನ್ನೇ ಬಳಸಲಾಗಿತ್ತು. ಸದ್ಯ ಅದೇ ಸುದ್ದಿ ಬಳಸಿಕೊಂಡು ‘ಭಾರತದಲ್ಲಿ ಲೀ ಜನ್ಮ ತಾಳಿದ್ದಾರೆ’ ಎಂದು ಸಿಂಗಾಪುರ ಮಾಧ್ಯಮ ವರದಿ ಮಾಡಿದೆ ಎಂದು ಸುಳ್ಳುಸುದ್ದಿ ಹರಡಲಾಗುತ್ತಿದೆ. ಅಂದಹಾಗೆ ಲೀ ಮರಣ ಹೊಂದಿದ್ದು 2015 ರಲ್ಲಿ. ಮೋದಿ ಹುಟ್ಟಿದ್ದು 1950 ರಲ್ಲಿ.

-ವೈರಲ್ ಚೆಕ್ 

 

 

 


 

click me!