ತಾಜ್‌ಮಹಲ್‌ನಲ್ಲಿ ಮಂಗಳಾರತಿ! ಗಂಗಾಜಲ ಸಿಂಪಡಿಸಿ ಶುದ್ಧೀಕರಣ

By Web DeskFirst Published Nov 19, 2018, 9:17 AM IST
Highlights

ರಾಷ್ಟ್ರೀಯ ಭಜರಂಗದಳದ ಮಹಿಳಾ ಘಟಕವು ಭಾನುವಾರ ಗಂಗಾಜಲ ಚಿಮುಕಿಸಿ, ಮಂಗಳಾರತಿ ಎತ್ತುವ ಮೂಲಕ ತಾಜ್ ಮಹಲ್ ನಲ್ಲಿ ಜಾಗವನ್ನು ಶುದ್ಧ ಮಾಡುವ ಪ್ರಕ್ರಿಯೆ ನಡೆಸಿದೆ.

ಆಗ್ರಾ: ಯುನೆಸ್ಕೋದಿಂದ ವಿಶ್ವ ಪಾರಂಪರಿಕ ಕಟ್ಟಡವೆಂದು ಗುರುತಿಸಲ್ಪಟ್ಟಿರುವ ತಾಜ್‌ಮಹಲ್‌ನಲ್ಲಿ, ಮುಸ್ಲಿಮರಿಗೆ ನಮಾಜ್‌ಗೆ ಅವಕಾಶ ಮಾಡಿಕೊಟ್ಟಭಾರತೀಯ ಪುರಾತತ್ವ ಇಲಾಖೆಯ ಕ್ರಮಕ್ಕೆ ಹಿಂದೂ ಸಂಘಟನೆಯೊಂದು ಅಸಮಾಧಾನ ವ್ಯಕ್ತಪಡಿಸಿದೆ. ಜೊತೆಗೆ ಶುಕ್ರವಾರ ನಮಾಜ್‌ ಮಾಡಲಾದ ತಾಜ್‌ಮಹಲ್‌ನ ಪ್ರದೇಶದಲ್ಲಿ ರಾಷ್ಟ್ರೀಯ ಭಜರಂಗದಳದ ಮಹಿಳಾ ಘಟಕವು ಭಾನುವಾರ ಗಂಗಾಜಲ ಚಿಮುಕಿಸಿ, ಮಂಗಳಾರತಿ ಎತ್ತುವ ಮೂಲಕ ಜಾಗವನ್ನು ಶುದ್ಧ ಮಾಡುವ ಪ್ರಕ್ರಿಯೆ ನಡೆಸಿದೆ.

ತಾಜ್‌ಮಹಲ್‌ನಲ್ಲಿ ಪ್ರಾರ್ಥನೆ ಮತ್ತು ನಮಾಜ್‌ಗೆ ನಿತ್ಯ ಅವಕಾಶವಿಲ್ಲ. ಆದರೆ, ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧವಿರುವ ಶುಕ್ರವಾರ ನಮಾಜ್‌ಗೆ ಪುರಾತತ್ವ ಇಲಾಖೆ ಅನುವು ಮಾಡಿಕೊಟ್ಟಿದೆ. ಇದರಿಂದ ಕ್ರುದ್ಧಗೊಂಡಿರುವ ರಾಷ್ಟ್ರೀಯ ಭಜರಂಗದಳದ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಮೀನ್‌ ದಿವಾಕರ್‌, ‘ನಮಾಜ್‌ನಿಂದ ಅಪವಿತ್ರವಾಗಿರುವ ತೇಜೋ ಮಹಲ್‌ ಅನ್ನು ನಾವು ಪೂಜಾ ಕೈಂಕರ್ಯ ಕೈಗೊಂಡು, ಗಂಗಾಜಲ ಚಿಮುಕಿಸಿ ಪವಿತ್ರಗೊಳಿಸುತ್ತಿದ್ದೇವೆ. ಇದನ್ನು ಯಾರಿಂದಲೂ ತಡೆಯಲು ಅಸಾಧ್ಯ,’ ಎಂದು ಹೇಳಿದರು.

ಐತಿಹಾಸಿಕ ಸ್ಥಳವಾಗಿರುವ ತೇಜೋ ಮಹಲ್‌ನಲ್ಲಿ ಮುಸ್ಲಿಮರು ಕುರಾನ್‌ ಅನ್ನು ತೆಗೆದುಕೊಂಡು ನಮಾಜ್‌ ಮಾಡುವುದಾದರೆ, ನಾವೇಕೆ ಪೂಜಾ ವಸ್ತುಗಳನ್ನು ತೆಗೆದುಕೊಂಡು ಹೋಗಬಾರದು. ಈ ವಿಚಾರದಲ್ಲಿ ನಾವು ತಪ್ಪು ಮಾಡಿದ್ದೇವೆ ಎಂದು ಅನ್ನಿಸಿದರೆ, ನಮ್ಮ ಮೇಲೆ ಏನು ಕ್ರಮ ಬೇಕಾದರೂ ಕೈಗೊಳ್ಳಲಿ. ಅದನ್ನು ಎದುರಿಸಲು ನಾವು ಸಿದ್ಧ. ಆದರೆ, ಅದಕ್ಕೂ ಮುನ್ನ ಮುಸ್ಲಿಮರ ವಿರುದ್ಧವೂ ಈ ಕ್ರಮ ಕೈಗೊಳ್ಳಬೇಕು ಎಂದು ಮೀನ್‌ ದಿವಾಕರ್‌ ಹೇಳಿದ್ದಾರೆ.

click me!