ಸನಾತನ ಸಂಭ್ರಮದೊಂದಿಗೆ ಜೈಪುರ ಸಾಹಿತ್ಯ ಜಾತ್ರೆ ಶುರು| (ಅಕ್ಷರ ಮೇಳ) 12ನೇ ಆವೃತ್ತಿಯ ಸಾಹಿತ್ಯ ಹಬ್ಬ| ಜ.28ರ ತನಕ ನಡೆಯಲಿರುವ ಜಾಗತಿಕ ಮಟ್ಟದ ಸಮ್ಮೇಳನ
ಜೈಪುರ[ಜ.25]: ಜೈಪುರ ಸಾಹಿತ್ಯ ಸಮ್ಮೇಳನ ಮಾತು, ಚರ್ಚೆ, ಸಂವಾದ ಮತ್ತು ಮುಖ್ಯವಾಗಿ ಭಿನ್ನ ಮತಕ್ಕೆ ದನಿಯಾಗಲಿದೆ. ಇವತ್ತು ಬಹುಸಂಖ್ಯಾತರ ಅಬ್ಬರದ ಮಾತುಗಳಿಗೆ ತಮ್ಮ ಭಿನ್ನಾಭಿಪ್ರಾಯ ವ್ಯಕ್ತಪಡಿಸಲು ಇಚ್ಛಿಸುವವರಿಗೆ ವೇದಿಕೆಯೇ ಇಲ್ಲದ ಪರಿಸ್ಥಿತಿ ಸೃಷ್ಟಿಯಾಗಿದೆ ಎಂದು ಜೈಪುರ ಲಿಟರರಿ ಫೆಸ್ಟಿವಲ್ ಸಂಘಟಕ ಸಂಜಯ್ ರಾಯ್ ಹೇಳಿದ್ದಾರೆ.
ಜೈಪುರದ ದಿಗ್ಗಿ ಪ್ಯಾಲೇಸ್ ಹೋಟೆಲಿನ ಅಂಗಳದಲ್ಲಿ ಆರಂಭಗೊಂಡ ಜೈಪುರ ಲಿಟರೇಚರ್ ಫೆಸ್ಟಿವಲ್‌ನ 12ನೆಯ ಆವೃತ್ತಿಯಲ್ಲಿ ಅವರು ಆಶಯ ನುಡಿಯಾಡಿದರು. 12 ವರ್ಷಗಳ ಹಿಂದೆ 170 ಮಂದಿ ಸಾಹಿತ್ಯಾಸಕ್ತರ ಸಣ್ಣ ಕೂಟವಾಗಿ ಆರಂಭವಾದ ಸಾಹಿತ್ಯ ಹಬ್ಬ, ಇವತ್ತು ಐದು ಲಕ್ಷ ಸಾಹಿತ್ಯಾಸಕ್ತರನ್ನು ಒಳಗೊಳ್ಳುವ ಮೇಳವಾಗಿದೆ ಎಂದು ಅವರು ವರ್ಣಿಸಿದರು.
undefined
ದೈನಂದಿನ ಬದುಕಿನ ಗಡಿಬಿಡಿಯಲ್ಲಿ ನಾವು ಸಾಹಿತ್ಯದ ಮಹತ್ವವನ್ನು ಮರೆಯುತ್ತಿದ್ದೇವೆ. ನಮ್ಮ ಹಣ ಸಂಪಾದನೆಯ ದಂಧೆಯ ಆಚೆಗೊಂದು ಸುಂದರವಾದ ಬದುಕಿದೆ ಎಂದು ನಾವು ಅರ್ಥಮಾಡಿಕೊಳ್ಳಬೇಕಾಗಿದೆ ಎಂದು ಅವರು ಹೇಳಿದರು.
ಶಂಖ, ನಗಾರಿ, ಭೇರಿ, ದೀಪಾರಾಧನೆಯೊಂದಿಗೆ ವೈದಿಕ ಮಂತ್ರಘೋಷಗಳ ಸಹಿತ ಸಾಹಿತ್ಯ ಉತ್ಸವ ಆರಂಭಗೊಂಡಿತು. ಸ್ವತಃ ಸಚಿವರೇ ಹಲವಾರು ಶ್ಲೋಕಗಳನ್ನು ಉದಾಹರಿಸಿ ಮಾತಾಡಿದರು. ಸಾಹಿತ್ಯೋತ್ಸವ ನಿರ್ದೇಶಕಿ ನಮಿತಾ ಗೋಖಲೆ ಶಿವಸ್ಮರಣೆಯೊಂದಿಗೆ ಮಾತು ಆರಂಭಿಸಿ, ಜೈಪುರ ಸಾಹಿತ್ಯೋತ್ಸವ ಸಾಹಿತ್ಯದ ಮಹಾಕುಂಭ ಮೇಳ ಎಂದು ಕರೆದರು.
ಜಗತ್ತಿನ ಅತಿದೊಡ್ಡ ಸಾಹಿತ್ಯ ಹಬ್ಬ ಎಂದೇ ಕರೆಸಿಕೊಳ್ಳುವ ಜೈಪುರ ಸಾಹಿತ್ಯೋತ್ಸವದಲ್ಲಿ ವೇದಿಕೆಯ ಮೇಲೆ ಕುರ್ಚಿಗಳಿರಲಿಲ್ಲ. ಸಮಾರಂಭಕ್ಕೆ ಬಂದಿದ್ದ ರಾಜಸ್ಥಾನದ ಕಲೆ ಮತ್ತು ಸಂಸ್ಕೃತಿ ಸಚಿವ ಬಿ.ಡಿ. ಕಲ್ಲಾ ಸೇರಿದಂತೆ ಎಲ್ಲ ಗಣ್ಯರೂ ಮುಂಭಾಗದ ಕುರ್ಚಿಗಳಲ್ಲಿ ಕೂತು ಕಾರ್ಯಕ್ರಮ ವೀಕ್ಷಿಸಿದರು. ಜನವರಿ 24ರಿಂದ ಜನವರಿ 28ರ ತನಕ ಸುಮಾರು 350 ವಿವಿಧ ಕಾರ್ಯಕ್ರಮಗಳು ದಿಗ್ಗಿ ಪ್ಯಾಲೇಸ್ ಆವರಣದಲ್ಲಿ ನಡೆಯಲಿವೆ.
ಬಾಕ್ಸ್
ವಿಜ್ಞಾನ ಮತ್ತು ಗಣಿತ ಕೂಡ ಸಾಹಿತ್ಯ, ಕಲೆ, ಸಂಸ್ಕೃತಿ, ಚರಿತ್ರೆಯಷ್ಟೇ ಮುಖ್ಯ: ವೆಂಕಿ ರಾಮಕೃಷ್ಣನ್
ವಿಜ್ಞಾನ ಮತ್ತು ಗಣಿತ ಕೂಡ ಸಾಹಿತ್ಯ, ಕಲೆ, ಸಂಸ್ಕೃತಿ ಮತ್ತು ಚರಿತ್ರೆಯಷ್ಟೇ ಮುಖ್ಯ ಎನ್ನುವುದನ್ನು ನಾವು ಅರ್ಥಮಾಡಿಕೊಳ್ಳಬೇಕು. ಸಾಹಿತ್ಯದ ಜೊತೆ ವಿಜ್ಞಾನವನ್ನೂ ಒಳಗೊಳ್ಳಲು ನಮಗೆ ಸಾಧ್ಯವಾಗಬೇಕು ಎಂದು ನೊಬೆಲ್ ಪ್ರಶಸ್ತಿ ಪುರಸ್ಕೃತ ವಿಜ್ಞಾನಿ ವೆಂಕಿ ರಾಮಕೃಷ್ಣನ್ ಹೇಳುವ ಮೂಲಕ ಜೈಪುರ ಸಾಹಿತ್ಯ ಉತ್ಸವಕ್ಕೆ ಅಧಿಕೃತ ಚಾಲನೆ ನೀಡಿದರು. ಸಾಹಿತ್ಯೋತ್ಸವದ ಉದ್ಘಾಟನಾ ಗೋಷ್ಠಿಯಾದ ಇಂದಿನ ಜಗತ್ತಿನಲ್ಲಿ ವಿಜ್ಞಾನದ ಪಾತ್ರ ಕುರಿತು ಅವರು ಮಾತಾಡಿದರು.
ನಾನು ಯಾವುದಾದರೂ ಕಾರ್ಯಕ್ರಮಕ್ಕೆ ಹೋದಾಗ ಅಲ್ಲಿ ಎದುರಾಗುವ ಮಂದಿ ನೀವೇನು ಮಾಡುತ್ತೀರಿ ಎಂದು ಕೇಳುತ್ತಾರೆ. ನಾನು ವಿಜ್ಞಾನಿ, ಜೀವಶಾಸ್ತ್ರಜ್ಞ, ನಮ್ಮ ಜೀನ್‌ಗಳಲ್ಲಿರುವ ಮಾಹಿತಿಯನ್ನು ಬಳಸಿ ಪ್ರೊಟೀನ್ ಉತ್ಪಾದನೆ ಮಾಡುವ ಬಗ್ಗೆ ಸಂಶೋಧನೆ ಮಾಡುತ್ತಿದ್ದೇನೆ ಅಂದರೆ ಮುಖ ತಿರುಗಿಸಿಕೊಂಡು ಹೋಗುತ್ತಾರೆ. ಆಮೇಲೆ ಅವರು ಸಾಹಿತ್ಯ, ಸಿನಿಮಾಗಳ ಬಗ್ಗೆ ಮಾತಾಡುತ್ತಾರೆ. ಆಗ ನಾನು ಕೂಡ ಆ ಬಗ್ಗೆ ನನಗೆ ಗೊತ್ತಿಲ್ಲ ಎಂದು ಮುಖ ತಿರುಗಿಸಿ ಹೋಗಲಾಗುತ್ತದೆಯೇ ಎಂದು ಅವರು ಪ್ರಶ್ನಿಸಿದರು.
ಸಾಹಿತ್ಯ, ಕಲೆಗಳ ಹಾಗೆಯೇ ವಿಜ್ಞಾನ ಕೂಡ ಮನುಷ್ಯ ಸಾಧನೆಯ ಭಾಗವೇ ಆಗಿದೆ. ನಾವು ಕಾಲಯಂತ್ರದಲ್ಲಿ 200 ವರ್ಷ ಹಿಂದಕ್ಕೆ ಹೋಗಿ ಆ ಕಾಲದ ಬುದ್ಧಿವಂತರಿಗೆ ಇತ್ತೀಚಿನ ಜೀವ ವಿಜ್ಞಾನದ ಸಾಧನೆಗಳ ಬಗ್ಗೆ ಹೇಳಿದರೆ ಅವರು ನಮ್ಮನ್ನು ಜಾದೂಗಾರರ ಥರ ನೋಡುತ್ತಿದ್ದರು. ಕಲೆ, ಸಾಹಿತ್ಯದ ಹಾಗೆಯೇ ವಿಜ್ಞಾನ ಕೂಡ ಉಪಯುಕ್ತ ಸತ್ಯವನ್ನು ಹೇಳುತ್ತದೆ. ಹೀಗಾಗಿ ಸಾಹಿತ್ಯದ ಜೊತೆ ವಿಜ್ಞಾನವನ್ನೂ ಒಳಗೊಳ್ಳಿ ಎಂದು ಅವರು ಸಾಹಿತ್ಯಾಸಕ್ತರಲ್ಲಿ ಮನವಿ ಮಾಡಿಕೊಂಡರು.
ಇವತ್ತು ವೈಜ್ಞಾನಿಕ ಭಾಷೆಯಲ್ಲಿ ಸುಳ್ಳುಗಳನ್ನು ಹೇಳಲಾಗುತ್ತಿದೆ. ಇದು ಸುಳ್ಳು ಸುದ್ದಿಗಳ ಕಾಲ. ಮೂಲಭೂತ ಸತ್ಯಗಳನ್ನೂ ಕೂಡ ಈಗ ಪ್ರಶ್ನಿಸಲಾಗುತ್ತಿದೆ. ವಿಜ್ಞಾನ ಸಾಕ್ಷ್ಯಾಧಾರಗಳ ಮೂಲಕ ಎಲ್ಲವನ್ನೂ ಸಾಬೀತು ಮಾಡುವಂತೆ ಒತ್ತಾಯಿಸುವ ಮೂಲಕ ಇಂದಿನ ಹಲವಾರು ಸಮಸ್ಯೆಗಳಿಗೆ ಪರಿಹಾರ ಸೂಚಿಸಿದೆ. ಬಹುಸಂಸ್ಕೃತಿಗಳ ನಡುವೆ ಇರುವ ಕಂದರವನ್ನು ಮುಚ್ಚಲು ವಿಜ್ಞಾನಿಗಳಾದ ನಾವು ಕೂಡ ಕೈಲಾದ ಪ್ರಯತ್ನ ಮಾಡಬೇಕು ಎಂದು ಅವರು ಹೇಳಿದರು.
ವಿಜ್ಞಾನಿಗಳು ಕೂಡ ಪ್ರಕೃತಿಯ ಭಾವನಾತ್ಮಕ ಹಾಗೂ ಮಾನವೀಯ ಮುಖವನ್ನು ಮರೆಯಬಾರದು. ಈ ಜಗತ್ತನ್ನು ನೋಡುವ ಮತ್ತೊಂದು ದೃಷ್ಟಿಕೋನವೂ ಇದೆ. ನಮಗೆ ಚರಿತ್ರೆ ಮತ್ತು ಅದು ಕಲಿಸಿದ ಪಾಠಗಳ ಅರಿವಿರಬೇಕು. ಕಲೆ ಮತ್ತು ಸಂಗೀತ ನಮ್ಮನ್ನು ನಮಗೇ ಗೊತ್ತಿಲ್ಲದ ರೀತಿಯಲ್ಲಿ ಮುದಗೊಳಿಸುತ್ತದೆ. ಹಾಗೆಯೇ ಮಾನವಿಕ ಮತ್ತು ಕಲೆಯಿಂದ ನಾವು ಕಲಿಯುವುದು ಬಹಳಷ್ಟಿದೆ. ಇಂಥ ಸಾಹಿತ್ಯ ಮೇಳಗಳು ಎಲ್ಲ ಬಗೆಯ ಚಿಂತಕರನ್ನು ಒಂದೆಡೆ ಸೇರಿಸುವ ಮೂಲಕ ಒಳ್ಳೆಯ ಕೆಲಸ ಮಾಡುತ್ತಿದೆ ಎಂದು ಅಭಿಪ್ರಾಯಪಟ್ಟರು.
-ಜೋಗಿ