ಹಿರಿಯ ಸಾಹಿತಿ ಕೋ. ಚನ್ನಬಸಪ್ಪ ನಿಧನ

By Web Desk  |  First Published Feb 23, 2019, 12:30 PM IST

ಕೋ ಚನ್ನಬಸಪ್ಪ 1946 ರಲ್ಲಿ ಮುಂಬಯಿ ಹೈಕೋರ್ಟಿನಲ್ಲಿ ವಕೀಲರಾಗಿ ನೋಂದಣಿಗೊಂಡು, ಬಳ್ಳಾರಿ ಡಿಸ್ಟ್ರಿಕ್ಟ್ ಕೋರ್ಟಿನಲ್ಲಿ ವಕೀಲಿ ವೃತ್ತಿ ಆರಂಭಿಸಿದ್ದರು. 1965 ರಲ್ಲಿ ಡಿಸ್ಟ್ರಿಕ್ಟ್ ಸೆಷನ್ ಜಡ್ಜ್ ಆಗಿ ನೇಮಕವಾದರು. 


ಬಳ್ಳಾರಿ(ಫೆ.23): ಹಿರಿಯ ಸಾಹಿತಿ, ಹೈಕೋರ್ಟ್’ನ ನಿವೃತ್ತ ನ್ಯಾಯಾಧೀಶರಾಗಿದ್ದ, ಕನ್ನಡ ಏಕೀಕರಣದ ಹೋರಾಟಗಾರರಾದ ಕೋ.ಚನ್ನಬಸಪ್ಪ ಇಂದು ಬೆಳಗ್ಗೆ  ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ.

ಕೋ.ಚೆನ್ನಬಸಪ್ಪನವರು 1922 ಫೆಬ್ರುವರಿ 21 ರಂದು ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕಾನಾಮಡುಗು ಸಮೀಪದ ಆಲೂರು ಗ್ರಾಮದಲ್ಲಿ ಜನಿಸಿದ್ದರು. ಪ್ರಾಥಮಿಕ ಶಿಕ್ಷಣವನ್ನು ಕಾನಮಡುಗು ಹಳ್ಳಿಯಲ್ಲಿ ಮುಗಿಸಿದ ನಂತರ ಪ್ರೌಢಶಾಲೆಗೆ ಬಳ್ಳಾರಿಯಲ್ಲಿ ಮುಗಿಸಿದರು. ಕಾಲೇಜು ವಿದ್ಯಾಭ್ಯಾಸ ಅನಂತಪುರದಲ್ಲಿ ನಡೆಯಿತು. ಆಗ ದೇಶಕ್ಕೆ ಹಬ್ಬಿದ್ದ ಸ್ವಾತಂತ್ರ್ಯದ ಬಿಸಿ. ಕ್ವಿಟ್ ಇಂಡಿಯಾ ಚಳವಳಿಯಲ್ಲಿ ವಿದ್ಯಾರ್ಥಿ ಮುಖಂಡರಾಗಿ ಭಾಗಿಯಾಗಿ ಬಂಧನಕ್ಕೊಳಗಾಗಿದ್ದರು. ಬಿಡುಗಡೆಯ ನಂತರ ಬಿ.ಎ. ಪದವಿ, ಬೆಳಗಾವಿ ಕಾಲೇಜಿನಿಂದ ಲಾ ಪದವಿ,‌ ಚರಿತ್ರೆ ಮತ್ತು ರಾಜ್ಯಶಾಸ್ತ್ರದಲ್ಲಿ ಎಂ.ಎ. ಪದವಿ ಪಡೆದರು.

Tap to resize

Latest Videos

1946 ರಲ್ಲಿ ಮುಂಬಯಿ ಹೈಕೋರ್ಟಿನಲ್ಲಿ ವಕೀಲರಾಗಿ ನೋಂದಣಿಗೊಂಡು, ಬಳ್ಳಾರಿ ಡಿಸ್ಟ್ರಿಕ್ಟ್ ಕೋರ್ಟಿನಲ್ಲಿ ವಕೀಲಿ ವೃತ್ತಿ ಆರಂಭಿಸಿದ್ದರು. 1965 ರಲ್ಲಿ ಡಿಸ್ಟ್ರಿಕ್ಟ್ ಸೆಷನ್ ಜಡ್ಜ್ ಆಗಿ ನೇಮಕವಾದರು. ನಿವೃತ್ತಿಯ ನಂತರ ಪುನಃ ಕರ್ನಾಟಕ ಹೈಕೋರ್ಟಿನಲ್ಲಿ ವಕೀಲಿ ವೃತ್ತಿ ಪ್ರಾರಂಭಿಸಿ, ಹಲವಾರು ಕಾರ್ಮಿಕ ಸಂಘಗಳ, ಭ್ರಷ್ಟಾಚಾರ ನಿರ್ಮೂಲನಾ ಸಮಿತಿಯ ಅಧ್ಯಕ್ಷರ ಜವಾಬ್ದಾರಿ ನಿರ್ವಹಿಸಿದರು.

1971 ರ ಸುಮಾರಿನಲ್ಲಿ ಅರವಿಂದಾಶ್ರಮದ ಒಡನಾಟ ಇರಿಸಿಕೊಂಡಿದ್ದರು. ಕರ್ನಾಟಕ ವಿಭಾಗದ ಅರವಿಂದಾಶ್ರಮ ಪ್ರಾರಂಭ ಮಾಡಿದರು. ಅಮೆರಿಕದಲ್ಲಿ ನಡೆದ ವೀರಶೈವ ವಾರ್ಷಿಕ ಅಧಿವೇಶನ, ಅರವಿಂದಾಶ್ರಮದ ಕಾರ‍್ಯಕ್ರಮಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಕನ್ನಡಪ್ರಭ ಪತ್ರಿಕೆಯಲ್ಲಿ ನ್ಯಾಯಾಧೀಶರ ನೆನಪುಗಳು ಮತ್ತು ಪ್ರಜಾಮತ ವಾರಪತ್ರಿಕೆಯಲ್ಲಿ ನ್ಯಾಯಾಲಯದಲ್ಲಿ ಸತ್ಯ ಕಥೆಗಳು ಪ್ರಕಟಣೆಗೊಂಡಿದ್ದವು.

ಸ್ವಾತಂತ್ರ್ಯ ಮಹೋತ್ಸವ, ಪ್ರಾಣಪಕ್ಷಿ, ಜೀವತೀರ್ಥ ಮೊದಲಾದ 5 ಕವನ ಸಂಕಲನಗಳು. ಗಡಿಪಾರು, ನಮ್ಮೂರ ದೀಪ, ಗಾಯಕನಿಲ್ಲದ ಸಂಗೀತ ಮುಂತಾದ 6 ಕಥಾ ಸಂಕಲನಗಳು. ಹಿಂದಿರುಗಿ ಬರಲಿಲ್ಲ, ನೊಗದ ನೇಣು, ರಕ್ತತರ್ಪಣ, ಬೇಡಿ ಕಳಚಿತು-ದೇಶ ಒಡೆಯಿತು ಮೊದಲಾದ 9 ಕಾದಂಬರಿಗಳು. ಶ್ರೀ ಅರವಿಂದರು, ಶ್ರೀ ಮಾತಾಜಿ, ಶ್ರೀ ಮೃತ್ಯುಂಜಯಸ್ವಾಮಿಗಳು ಮೊದಲಾದ 8 ಜೀವನಚರಿತ್ರೆಗಳು. ಶ್ರೀ ರಾಮಾಯಣ ದರ್ಶನಂ ಮಹಾಕಾವ್ಯ ಸಮೀಕ್ಷೆ, ದೃಢಪ್ರತಿಜ್ಞೆ, ಕುವೆಂಪು ವೈಚಾರಿಕತೆ ಮೊದಲಾದ ವಿಮರ್ಶಾ ಗ್ರಂಥಗಳು. ರಕ್ಷಾಶತಕಂ, ಶ್ರೀ ಕುವೆಂಪು ಭಾಷಣಗಳು, ಬಿನ್ನವತ್ತಳೆಗಳು ಸಂಪಾದಿತ ಕೃತಿಗಳಾಗಿವೆ.

click me!