ತಗಡಿನ ಶೆಡ್ ನಲ್ಲಿಯೇ ಬಿ ಟೆಕ್ ವಿದ್ಯಾರ್ಥಿಗಳಿಗೆ ಪಾಠ

By Web Desk  |  First Published May 5, 2019, 8:41 AM IST

ರಾಜ್ಯ ಸರ್ಕಾರ ನಿರ್ಲಕ್ಷ್ಯ ಮಾಡಿ​ರುವ ಪರಿಣಾಮ ಹಾವೇರಿ ತಾಲೂಕಿನ ದೇವಿಹೊಸೂರಿನಲ್ಲಿ ಆರಂಭಗೊಂಡಿರುವ ತೋಟಗಾರಿಕಾ ಬಿಟೆಕ್‌ ಮಹಾವಿದ್ಯಾಲಯದ ವಿದ್ಯಾರ್ಥಿಗಳು ತಗಡಿನ ಶೆಡ್‌ನಲ್ಲಿಯೇ ಪಾಠ ಕೇಳಬೇ​ಕಾ​ದ ದುಸ್ಥಿತಿ ಇದೆ.


ಹಾವೇರಿ :  ಅನುದಾನ ಬಿಡುಗಡೆಯಲ್ಲಿ ರಾಜ್ಯ ಸರ್ಕಾರ ನಿರ್ಲಕ್ಷ್ಯ ಮಾಡಿ​ರುವ ಪರಿಣಾಮ ಹಾವೇರಿ ತಾಲೂಕಿನ ದೇವಿಹೊಸೂರಿನಲ್ಲಿ ಆರಂಭಗೊಂಡಿರುವ ತೋಟಗಾರಿಕಾ ಬಿಟೆಕ್‌ ಮಹಾವಿದ್ಯಾಲಯದ ವಿದ್ಯಾರ್ಥಿಗಳು ತಗಡಿನ ಶೆಡ್‌ನಲ್ಲಿಯೇ ಪಾಠ ಕೇಳಬೇ​ಕಾ​ಗಿ​ದೆ. ಪರೀಕ್ಷೆ ಬರೆ​ಯ​ಬೇ​ಕಾ​ಗಿ​ದೆ.

ಬಾಗಲಕೋಟೆ ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯದ ಅಡಿಯಲ್ಲಿ ದೇವಿಹೊಸೂರಿನಲ್ಲಿ ತೋಟಗಾರಿಕಾ ಬಿಟೆಕ್‌(ತೋಟಗಾರಿಕಾ ಅಭಿಯಾಂತ್ರಿಕ ಹಾಗೂ ಆಹಾರ ತಂತ್ರಜ್ಞಾನ) ಕಾಲೇಜನ್ನು ಸರ್ಕಾರ 2016ರಲ್ಲಿ ಆರಂಭ ಮಾಡಿತ್ತು. ಅದೇ ವರ್ಷದಿಂದ ಸಿಇಟಿ ಮೂಲಕ ವಿದ್ಯಾರ್ಥಿಗಳಿಗೆ ಕೋರ್ಸ್‌ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಆದರೆ, ಆ ಸಂದ​ರ್ಭ​ದಲ್ಲಿ ಎದು​ರಾದ ಮೂಲಭೂತ ಸೌಲಭ್ಯದ ಕೊರತೆಯಿಂದ ಕಾಲೇ​ಜನ್ನು ತಾತ್ಕಾಲಿಕವಾಗಿ ಬಾಗಲಕೋಟೆ ತೋಟಗಾರಿಕಾ ವಿಶ್ವವಿದ್ಯಾಲಯದಲ್ಲೇ ಆರಂಭಿಸಲಾಗಿತ್ತು. ಆದರೆ, ಇಲ್ಲಿಗೆ ಮಂಜೂ​ರಾದ ಕಾಲೇ​ಜನ್ನು ಬೇರೆ​ಕಡೆ ಎಷ್ಟುವರ್ಷ ಅಂತ ನಡೆ​ಸುವುದು ಎಂದು ಕಳೆದ ಏ.15 ರಂದು ಮತ್ತೆ ಕಾಲೇ​ಜನ್ನು ದೇವಿ​ಹೊ​ಸೂ​ರಿಗೆ ಸ್ಥಳಾಂತ​ರಿ​ಸಲಾ​ಗಿ​ದೆ.

Latest Videos

undefined

ತಗಡಿನ ಶೆಡ್‌ನಲ್ಲೇ ಪರೀಕ್ಷೆ:  ಸಿಇಟಿ ಮೂಲಕ ರಾಜ್ಯದ ವಿವಿಧ ಜಿಲ್ಲೆಗಳ ವಿದ್ಯಾರ್ಥಿಗಳು ದೇವಿಹೊಸೂರು ತೋಟಗಾರಿಕಾ ಬಿಟೆಕ್‌ ಕಾಲೇಜಿಗೆ ಪ್ರವೇಶ ಪಡೆದಿದ್ದಾರೆ. 2016ರಿಂದ ಮೂರು ಬ್ಯಾಚ್‌ಗಳ 32 ಬಾಲಕಿಯರು ಹಾಗೂ 30 ಬಾಲಕರು ಸೇರಿ 62 ವಿದ್ಯಾರ್ಥಿಗಳು ಕಾಲೇಜಿನಲ್ಲಿ ಓದುತ್ತಿದ್ದಾರೆ. ಸದ್ಯಕ್ಕೆ ದೇವಿಹೊಸೂರಿನಲ್ಲಿರುವ ತೋಟಗಾರಿಕಾ ಸಂಶೋಧನಾ ಕೇಂದ್ರದ ಕಟ್ಟಡದಲ್ಲಿ ತಾತ್ಕಾಲಿಕವಾಗಿ ತರಗತಿ ನಡೆಸಲಾಗುತ್ತಿದೆ. ಸಣ್ಣ ಕೊಠಡಿಗಳಲ್ಲಿ ಬೋಧನೆ ನಡೆಸಲಾಗುತ್ತಿದೆ. ತಗಡಿನ ಶೆಡ್‌ನಲ್ಲಿ ಪರೀಕ್ಷೆ ಬರೆಸಲಾಗುತ್ತಿದೆ. ಪ್ರತ್ಯೇಕ ಹಾಸ್ಟೆಲ್‌ ವ್ಯವಸ್ಥೆ ಕಲ್ಪಿಸಲಾಗಿದ್ದು, ಅಲ್ಲಿ ವಿದ್ಯಾರ್ಥಿನಿಯರಿಗೆ ಸುರಕ್ಷತಾ ಕ್ರಮವಾಗಲಿ, ಸೌಲಭ್ಯವಾಗಲಿ ಇಲ್ಲ. ಈ ಹಿಂದೆ ದನದ ಕೊಟ್ಟಿಗೆಯಾಗಿದ್ದ ಶೆಡ್‌ನ್ನು ಬಾಲಕರ ವಸತಿ ನಿಲಯವನ್ನಾಗಿ ಮಾಡಲಾಗಿದೆ.

ಸರ್ಕಾರದ ನಿರ್ಲಕ್ಷ್ಯ:  ಸಿದ್ದರಾಮಯ್ಯ ಸಿಎಂ ಆಗಿದ್ದಾಗ 2014ರ ಬಜೆæಟ್‌ನಲ್ಲಿ ಈ ಕಾಲೇಜನ್ನು ಘೋಷಿಸಲಾಗಿತ್ತು. ದೇವಿಹೊಸೂರು ಗ್ರಾಮದಲ್ಲಿ ಕೃಷಿ ಇಲಾಖೆಗೆ ಸೇರಿದ್ದ ಜಮೀನಿನಲ್ಲಿ 36 ಎಕರೆ ಜಾಗವನ್ನು ಕಾಲೇಜಿಗೆ ಮಂಜೂರು ಮಾಡಿತ್ತು. ವಿದ್ಯಾರ್ಥಿಗಳಿಗೆ ಹಾಸ್ಟೆಲ್‌, ಗ್ರಂಥಾಲಯ, ಲ್ಯಾಬ್‌, ತರಗತಿ ಕೋಣೆ ಸೇರಿದಂತೆ ಕಾಲೇಜಿನ ಕಟ್ಟಡ ನಿರ್ಮಾಣಕ್ಕೆ .36 ಕೋಟಿ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ, ಸರ್ಕಾರ ಇದುವರೆಗೆ ಕೇವಲ .10 ಕೋಟಿ ಹಣ ಮಂಜೂರು ಮಾಡಿದ್ದು, ಅದರಲ್ಲಿ ಕೇವಲ . 5 ಕೋಟಿ ಬಿಡುಗಡೆ ಮಾಡಿದೆ. ಇದರಿಂದ ಕಟ್ಟಡ ನಿರ್ಮಾಣ ಇನ್ನೂ ಶುರುವಾಗಿಲ್ಲ. ಕಾಲೇಜಿಗೆ ಮಂಜೂರಾತಿ ನೀಡಿ ಮೂಲಭೂತ ಸೌಲಭ್ಯ ಕಲ್ಪಿಸಲು ಸರ್ಕಾರ ತೋರಿದ ನಿರ್ಲಕ್ಷ್ಯದಿಂದ ವಿದ್ಯಾರ್ಥಿಗಳು ಪರದಾಡುವಂತಾಗಿದೆ. ಸ್ಥಳೀಯ ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯೂ ಎದ್ದು ಕಾಣುತ್ತಿದೆ.

ಆಹಾರ ಸಂಸ್ಕರಣೆ, ಆಹಾರ ಸುರಕ್ಷತೆ ಮತ್ತು ಗುಣಮಟ್ಟಭರವಸೆ, ಫುಡ್‌ ಪ್ರೊಸೆಸ್‌ ಎಂಜಿನಿಯರಿಂಗ್‌, ಫುಡ್‌ ಬ್ಯುಸಿನೆಸ್‌ ಮ್ಯಾನೇಜ್‌ಮೆಂಟ್‌, ತೋಟಗಾರಿಕೆ ಹಾಗೂ ಸಂಬಂಧಿತ ವಿಜ್ಞಾನ ವಿಷಯಗಳನ್ನು ಒಳಗೊಂಡಿರುವ ಈ ಪದವಿ ಕೋರ್ಸ್‌ಗೆ ಬೇಡಿಕೆ ಹೆಚ್ಚಿದೆ. ವೃತ್ತಿ ಶಿಕ್ಷಣ ಕೋರ್ಸ್‌ಗಳ ಪ್ರವೇಶ ಪರೀಕ್ಷೆಯಲ್ಲಿ ಪಾಸಾಗಿ ರಾಜ್ಯದ ವಿವಿಧ ಭಾಗಗಳ ವಿದ್ಯಾರ್ಥಿಗಳು ಕಾಲೇಜನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಆದರೆ, ಕಾಲೇಜು ಆರಂಭವಾಗಿ ಮೂರು ವರ್ಷಗಳೇ ಕಳೆದರೂ ಇದುವರೆಗೆ ಕನಿಷ್ಠ ಮೂಲಭೂತ ಸೌಲಭ್ಯಗಳು ಇಲ್ಲದಿರುವುದು ಹಿನ್ನಡೆಯಾಗುವ ಸಾಧ್ಯತೆಯಿದೆ. ಈ ಬಗ್ಗೆ ಸರ್ಕಾರ ಗಮನ ಹರಿಸಿ ಅನುದಾನ ಬಿಡುಗಡೆ ಮಾಡುವ ತುರ್ತು ಅಗತ್ಯವಿದೆ.

ತೋಟಗಾರಿಕಾ ಬಿಟೆಕ್‌ ಕಾಲೇಜು ಆರಂಭವಾಗಿ ಮೂರು ವರ್ಷಗಳೇ ಕಳೆದಿವೆ. ಇಲ್ಲಿಗೆ ಮಂಜೂರಾದ ಕಾಲೇಜನ್ನು ಎಷ್ಟುವರ್ಷ ಬೇರೆ ಕಡೆ ನಡೆಸಲು ಸಾಧ್ಯ. ಅದಕ್ಕಾಗಿ ಈ ವರ್ಷ​ದಿಂದ ಇರುವ ಸೌಲಭ್ಯಗಳನ್ನೇ ಬಳಸಿಕೊಂಡು ಕಾಲೇಜು ಆರಂಭಿಸಲಾಗಿದೆ. ಸದ್ಯಕ್ಕೆ ವಿದ್ಯಾರ್ಥಿಗಳಿಗೆ ಸ್ವಲ್ಪ ತೊಂದರೆಯಾಗುತ್ತಿದೆ. ಆದಷ್ಟುಶೀಘ್ರ ಕಟ್ಟಡ ನಿರ್ಮಾಣ ಆಗಬೇಕಿದೆ.

-ಡಾ.ಟಿ.ಬಿ.ಅಳ್ಳೊಳ್ಳಿ, ದೇವಿಹೊಸೂರು ತೋಟಗಾರಿಕಾ ಬಿಟೆಕ್‌ ಕಾಲೇಜಿನ ಮುಖ್ಯಸ್ಥರು.

ನನ್ನ ಮಗಳು ದೇವಿಹೊಸೂರು ತೋಟಗಾರಿಕೆ ಬಿಟೆಕ್‌ ಕಾಲೇಜಿನಲ್ಲಿ ನಾಲ್ಕನೇ ಸೆಮ್‌ನಲ್ಲಿ ಓದುತ್ತಿದ್ದಾಳೆ. ಅಲ್ಲಿ ಯಾವುದೇ ಸೌಲಭ್ಯವಿಲ್ಲದ್ದರಿಂದ ತೊಂದರೆಯಾಗಿದೆ. ಸರ್ಕಾರ ಶಿಕ್ಷಣದ ಬಗ್ಗೆ ತೋರುತ್ತಿರುವ ನಿರ್ಲಕ್ಷ್ಯದಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ.

-ಸುರೇಶ ಹನುಮಾಪುರ, ವಿದ್ಯಾರ್ಥಿ ಪಾಲಕರು

ವರದಿ :  ನಾರಾಯಣ ಹೆಗಡೆ

click me!