ನಿರ್ಭಯಾ ರೇಪಿಸ್ಟ್‌ಗಳು ನೇಣು ಕುಣಿಕೆಗೆ ಹತ್ತಿರ

By Kannadaprabha NewsFirst Published Nov 1, 2019, 8:36 AM IST
Highlights

ದೇಶವನ್ನೇ ಬೆಚ್ಚಿ ಬೀಳಿಸಿದ್ದ ನಿರ್ಭಯಾ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಆರೋಪಿಗಳಿಗೆ ಕ್ಷಮಾದಾನ ಅರ್ಜಿ ಸಲ್ಲಿಸಲು 7 ದಿನಗಳ ಗಡುವು ನೀಡಲಾಗಿದೆ. ಈ ಪ್ರಕರಣದ ನಂತರ ಅಂದಿನ ಯುಪಿಎ ಸರಕಾರ ಕಠಿಣ ಕಾನೂನು ಜಾರಿಗೊಳಿಸಿದ್ದು, ರೇಪಿಸ್ಟ್‌ಗಳು ನೇಣಿನ ಕುಣಿಕೆಯಿಂದ ತಪ್ಪಿಸಿಕೊಳ್ಳುವುದು ಕಷ್ಟ.

ನವದೆಹಲಿ (ನ.1): ಚಲಿಸುತ್ತಿದ್ದ ಬಸ್‌ನಲ್ಲಿ ಏಳು ವರ್ಷಗಳ ಹಿಂದೆ 23 ವರ್ಷದ ವಿದ್ಯಾರ್ಥಿನಿಯೊಬ್ಬಳ (ನಿರ್ಭಯಾ) ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ, ಅಮಾನುಷವಾಗಿ ಹತ್ಯೆ ಮಾಡಿದ್ದ ನಾಲ್ವರೂ ಅಪರಾಧಿಗಳು ನೇಣು ಕುಣಿಕೆಗೆ ಹತ್ತಿರವಾಗಿದ್ದಾರೆ. ಕಾನೂನು ಹೋರಾಟದ ಹಾದಿ ಬರಿದಾಗಿರುವ ಹಿನ್ನೆಲೆಯಲ್ಲಿ ರಾಷ್ಟ್ರಪತಿಗಳಿಗೆ ಕ್ಷಮಾದಾನ ಅರ್ಜಿ ಸಲ್ಲಿಸಲು 7 ದಿನಗಳ ಸಮಯಾವಕಾಶವನ್ನು ಹಂತಕರಿಗೆ ಜೈಲಧಿಕಾರಿಗಳು ನೀಡಿದ್ದಾರೆ. ಅವರು ಈ ಆಯ್ಕೆಯನ್ನು ಬಳಸಿಕೊಳ್ಳದೇ ಹೋದಲ್ಲಿ ಶೀಘ್ರದಲ್ಲೇ ಎಲ್ಲ ನಾಲ್ಕೂ ಅಪರಾಧಿಗಳನ್ನು ಗಲ್ಲಿಗೇರಿಸಲಾಗುತ್ತದೆ. ಈ ಕುರಿತ ಮಾಹಿತಿಯನ್ನು ಅ.29ರಂದು ದೋಷಿಗಳಿಗೆ ನೀಡಲಾಗಿದೆ ಎಂದು ಜೈಲು ಅಧಿಕಾರಿಗಳು ತಿಳಿಸಿದ್ದಾರೆ.

ನಿರ್ಭಯಾ ಬದುಕಿದ್ದರೆ ಏನಾಗುತ್ತಿತ್ತು ಎಂಬುವುದೇ 'ರಂಗನಾಯಕಿ'

ಕ್ಷಮಾದಾನ ಅರ್ಜಿ ಸಲ್ಲಿಸದೇ ಹೋದಲ್ಲಿ, ಗಲ್ಲು ಶಿಕ್ಷೆ ಜಾರಿಗೊಳಿಸುವ ಪ್ರಕ್ರಿಯೆ ಪ್ರಾರಂಭವಾಗಲಿದೆ. ಡೆತ್‌ ವಾರಂಟ್‌ ಹೊರಡಿಸುವಂತೆ ಜೈಲಧಿಕಾರಿಗಳು ವಿಚಾರಣಾ ನ್ಯಾಯಾಲಯದ ಮೊರೆ ಹೋಗಲಿದ್ದಾರೆ. ವಾರಂಟ್‌ ಹೊರಟ ಬಳಿಕ ನಾಲ್ವರನ್ನೂ ಗಲ್ಲಿಗೇರಿಸಲಾಗುತ್ತದೆ.

‘ನಿರ್ಭಯಾ’ ಪ್ರಕರಣದಲ್ಲಿ ಮುಕೇಶ್‌ (31), ಪವನ್‌ ಗುಪ್ತಾ (24), ವಿನಯ್‌ ಶರ್ಮಾ (25) ಹಾಗೂ ಅಕ್ಷಯ್‌ ಕುಮಾರ್‌ ಸಿಂಗ್‌ (33) ಸೇರಿ ಆರು ಆರೋಪಿಗಳು ಇದ್ದರು. ಈ ಪೈಕಿ ರಾಮ್‌ಸಿಂಗ್‌ ಎಂಬಾತ ಜೈಲಿನಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದ. ಮತ್ತೊಬ್ಬ ಬಾಲಾಪರಾಧಿಯಾಗಿದ್ದರಿಂದ 3 ವರ್ಷಗಳ ಜೈಲು ಶಿಕ್ಷೆ ಮುಗಿಸಿ ಹೊರಬಂದಿದ್ದಾನೆ. ಉಳಿದ ನಾಲ್ಕು ಮಂದಿ ದೋಷಿಗಳು ಎಂದು ಹೇಳಿದ್ದ ವಿಚಾರಣಾ ನ್ಯಾಯಾಲಯ ಮರಣದಂಡನೆ ವಿಧಿಸಿತ್ತು. ಇದನ್ನು ಹೈಕೋರ್ಟ್‌ ಕೂಡ ಎತ್ತಿ ಹಿಡಿದಿತ್ತು. ಇದರ ವಿರುದ್ಧ ಮುಕೇಶ್‌, ಪವನ್‌ ಹಾಗೂ ವಿನಯ್‌ ಸುಪ್ರೀಂಕೋರ್ಟ್‌ ಮೆಟ್ಟಿಲೇರಿದ್ದರು. ಕಳೆದ ವರ್ಷ ಜು.9ರಂದು ಅದು ವಜಾಗೊಂಡಿತ್ತು. ಅಕ್ಷಯ್‌ ಮೇಲ್ಮನವಿ ಸಲ್ಲಿಸಿರಲಿಲ್ಲ.

ನಿರ್ಭಯಾ ನಿಧಿಯಲ್ಲಿ ಬೆಂಗಳೂರು ಸುರಕ್ಷಿತ ನಗರ

2012ರ ಡಿ.16-17ರ ರಾತ್ರಿ ಚಲಿಸುತ್ತಿದ್ದ ಬಸ್‌ನಲ್ಲಿ ‘ನಿರ್ಭಯಾ’ ಮೇಲೆ ಅತ್ಯಾಚಾರವೆಸಗಿದ್ದ ಈ ದುರುಳರು ಅತ್ಯಂತ ಕ್ರೂರ ರೀತಿಯಲ್ಲಿ ಹಿಂಸಿಸಿ, ರಸ್ತೆ ಬದಿ ಎಸೆದು ಹೋಗಿದ್ದರು. ವೈದ್ಯರು ಎಷ್ಟೇ ಪ್ರಯತ್ನ ಪಟ್ಟರೂ ‘ನಿರ್ಭಯಾ’ ಚೇತರಿಸಿಕೊಂಡಿರಲಿಲ್ಲ. 2012ರ ಡಿ.29ರಂದು ಸಿಂಗಾಪುರದ ಮೌಂಟ್‌ ಎಲಿಜಬೆತ್‌ ಆಸ್ಪತ್ರೆಯಲ್ಲಿ ಆಕೆ ಕೊನೆಯುಸಿರೆಳೆದಿದ್ದಳು.

ಈ ಪ್ರಕರಣ ದೇಶವಾಸಿಗಳನ್ನು ಸಿಡಿದೆಬ್ಬಿಸಿತ್ತು. ಹೋರಾಟ, ಪ್ರತಿಭಟನೆಗಳಿಗೆ ನಾಂದಿ ಹಾಡಿತ್ತು. ಇದಕ್ಕೆ ಮಣಿದಿದ್ದ ಅಂದಿನ ಯುಪಿಎ ಸರ್ಕಾರ ಅತ್ಯಾಚಾರದ ವಿರುದ್ಧ ಬಲಿಷ್ಠ ಕಾಯ್ದೆ ರೂಪಿಸಿ ಜಾರಿಗೊಳಿಸಿತು.

click me!