ಇನ್ನೇನು 2019ರ ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ. ಇದೇ ವೇಳೆ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಭರ್ಜರಿ ಗಿಫ್ಟ್ ಒಂದನ್ನು ರೈತರಿಗೆ ನೀಡುವ ಸಾಧ್ಯತೆ ಇದೆ. ರೈತರ 4 ಲಕ್ಷ ಕೋಟಿ ಬೆಳೆ ಸಾಲ ಮನ್ನಾ ಮಾಡುವ ಬಗ್ಗೆ ಚಿಂತನೆ ನಡೆಸಿದೆ.
ನವದೆಹಲಿ : ಐದು ರಾಜ್ಯಗಳ ಚುನಾವಣಾ ಫಲಿತಾಂಶ ಪ್ರಕಟಣೆಯ ಬೆನ್ನಲ್ಲೇ ಬಿಜೆಪಿ ಎಚ್ಚೆತ್ತಂತೆ ತೋರುತ್ತಿದ್ದು, ಈ ಎಲ್ಲ ರಾಜ್ಯಗಳಲ್ಲಿ ಪಕ್ಷದ ಸೋಲಿಗೆ ರೈತರ ಸಮಸ್ಯೆಗಳು ಕಾರಣ ಎಂಬುದನ್ನು ಮನಗಂಡಂತಿದೆ. ಅದಕ್ಕೆಂದೇ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ರೈತರು ಮಾಡಿಕೊಂಡಿರುವ 4 ಲಕ್ಷ ಕೋಟಿ ರುಪಾಯಿ ಸಾಲ ಮನ್ನಾ ಮಾಡಲು ಚಿಂತನೆಯನ್ನು ಪ್ರಧಾನಿ ನರೇಂದ್ರ ಮೋದಿ ಆರಂಭಿಸಿದ್ದಾರೆ ಎಂಬ ಮಹತ್ವದ ಮಾಹಿತಿ ಲಭಿಸಿದೆ.
ರಾಜಸ್ಥಾನ, ಛತ್ತೀಸ್‌ಗಢ, ಮಧ್ಯಪ್ರದೇಶ, ತೆಲಂಗಾಣ ಹಾಗೂ ಮಿಜೋರಂ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಬಹುತೇಕ ರೈತರ ಸಮಸ್ಯೆಗಳು ಪ್ರಧಾನವಾಗಿ ಪ್ರಚಾರದ ವಿಷಯಗಳಾಗಿದ್ದವು. ಈ ರಾಜ್ಯಗಳಲ್ಲಿ ತಾನು ಅಧಿಕಾರಕ್ಕೆ ಬಂದರೆ, ಆಡಳಿತದ ಚುಕ್ಕಾಣಿ ಹಿಡಿದ 10 ದಿವಸದಲ್ಲಿ ರೈತರ ಸಾಲ ಮನ್ನಾ ಮಾಡುತ್ತೇವೆ. ಈಗಾಗಲೇ ರೈತರ ಸಾಲವನ್ನು ಕರ್ನಾಟಕದ ಕಾಂಗ್ರೆಸ್ ಸಹಭಾಗಿತ್ವದ ಸರ್ಕಾರ ಮನ್ನಾ ಮಾಡಿದೆ ಎಂದು ಪ್ರಚಾರಕ್ಕೆ ಹೋದಲ್ಲೆಲ್ಲ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದರು. ಆದರೆ, ಕರ್ನಾಟಕದಲ್ಲಿ ರೈತರ ಸಾಲ ಮನ್ನಾ ಮಾಡಲು ಕಾಂಗ್ರೆಸ್ ವಿಫಲವಾಗಿದೆ ಎಂದು ಪ್ರಧಾನಿ ಮೋದಿ ಅನೇಕ ಕಡೆ ತಿರುಗೇಟು ನೀಡಿದ್ದರೂ, ರಾಷ್ಟ್ರೀಕೃತ ಬ್ಯಾಂಕ್‌ಗಳ ಸಾಲ ಮನ್ನಾ ಬಗ್ಗೆ ಚಕಾರವೆತ್ತಿರಲಿಲ್ಲ.
ಮತದಾರರ ಮೇಲೆ ಈ ಸಂಗತಿಗಳು ಗಾಢ ಪರಿಣಾಮ ಬೀರಿದವು ಎನ್ನಲಾಗಿದ್ದು, ‘ಅಧಿಕಾರಕ್ಕೆ ಬಂದ 10 ದಿನದಲ್ಲಿ ರೈತರ ಸಾಲ ಮನ್ನಾ ಮಾಡಲಾಗುವುದು’ ಎಂಬ ರಾಹುಲ್ ಗಾಂಧಿ ಹೇಳಿಕೆ ಬಹುವಾಗಿ ಪ್ರಭಾವ ಬೀರಿತು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ವಶದಲ್ಲಿದ್ದ ಮಧ್ಯಪ್ರದೇಶ, ಛತ್ತೀಸ್‌ಗಢ ಹಾಗೂ ರಾಜಸ್ಥಾನಗಳು ಕಾಂಗ್ರೆಸ್ ಪಾಲಾದವು ಎಂಬುದು ಮೂಲಗಳ ಅಂಬೋಣ.
ಈ ವಿಷಯ ಈಗ ಬಿಜೆಪಿ ರಾಜಕೀಯ ಪಡಸಾಲೆಯಲ್ಲಿ ಬಹುಚರ್ಚಿತ ವಿಷಯವಾಗಿದೆ. ರೈತರ ಸಮಸ್ಯೆಗಳು ಹಾಗೂ ಸಾಲ ಮನ್ನಾ ಬಗ್ಗೆ ಕೇಂದ್ರ ಸರ್ಕಾರ ಗಂಭೀರವಾಗಿ ಯೋಚಿಸದೇ ಹೋದರೆ 2019ರ ಲೋಕಸಭೆ ಚುನಾವಣೆಯಲ್ಲಿ ಪಕ್ಷಕ್ಕೆ ಕಷ್ಟವಾಗಬಹುದು ಎಂದು ಬಹುತೇಕರು ಅಭಿಪ್ರಾಯಪಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸುಮಾರು 26 ಕೋಟಿ ರೈತರು ಮಾಡಿಕೊಂಡಿರುವ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿನ 4 ಲಕ್ಷ ಕೋಟಿ ರುಪಾಯಿ ಸಾಲ ಮನ್ನಾ ಮಾಡಲು ಮೋದಿ ಸರ್ಕಾರ ಗಂಭೀರವಾಗಿ ಚಿಂತನೆ ಆರಂಭಿಸಿದೆ ಎಂದು ಅಂತಾರಾಷ್ಟ್ರೀಯ ಸುದ್ದಿಸಂಸ್ಥೆಯೊಂದು ಕೇಂದ್ರ ಸರ್ಕಾರದ ಕೆಲವು ಮೂಲಗಳು ನೀಡಿದ ಮಾಹಿತಿಯನ್ನು ಉಲ್ಲೇಖಿಸಿ ವರದಿ ಮಾಡಿದೆ.
‘ಚುನಾವಣೆಗಳು ಹತ್ತಿರ ಬಂದಾಗ ರೈತರ ಸಮಸ್ಯೆಗಳ ಈಡೇರಿಕೆಗೆ ಸರ್ಕಾರ ಏನು ಮಾಡಿದೆ ಎಂಬ ವಿಷಯ ಪ್ರಧಾನವಾಗುತ್ತದೆ. ಈ ಹಿನ್ನೆಲೆಯಲ್ಲಿ ರೈತರ ಸಾಲ ಮನ್ನಾ ಕ್ರಮಕ್ಕೆ ಸರ್ಕಾರ ಮುಂದಾಗಲೂಬಹುದು’ ಎಂದು ಈ ಹಿಂದೆ ಸರ್ಕಾರದ ಭಾಗವಾಗಿದ್ದ ಆರ್ಥಿಕ ತಜ್ಞರೊಬ್ಬರು ಹೇಳಿದ್ದಾರೆ.
ಈ ಹಿಂದೆ 2008ರಲ್ಲಿ ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಮನಮೋಹನ ಸಿಂಗ್ ಸರ್ಕಾರ 72 ಸಾವಿರ ಕೋಟಿ ರುಪಾಯಿ ರೈತರ ಸಾಲ ಮನ್ನಾ ಮಾಡಿತ್ತು. ಇದು 2009ರಲ್ಲಿ ಮತ್ತೆ ಯುಪಿಎ ಎರಡನೇ ಅವಧಿಗೆ ಅಧಿಕಾರಕ್ಕೆ ಬರಲು ಸಹಕಾರವಾಗಿತ್ತು. ಈಗ ಮೋದಿ ಸರ್ಕಾರ ಕೂಡ 2019ರಲ್ಲಿ ಪುನಃ ಅಧಿಕಾರಕ್ಕೆ ಬರುವ ತವಕದಲ್ಲಿದ್ದು, ಯುಪಿಎಗಿಂತ 6 ಪಟ್ಟು ಹೆಚ್ಚು ಮೊತ್ತದ ಸಾಲ ಮನ್ನಾ ಮಾಡುವ ಅನಿವಾರ್ಯತೆಗೆ ಸಿಲುಕಿದೆ ಎಂದು ಹೇಳಲಾಗಿದೆ.
ತಜ್ಞರ ಎಚ್ಚರಿಕೆ:
ಈ ನಡುವೆ, ಹಲವು ತಜ್ಞರು ಸರ್ಕಾರದ ‘ಸಾಲ ಮನ್ನಾ’ ನಡೆಯನ್ನು ವಿರೋಧಿಸಿದ್ದು, ವಿತ್ತೀಯ ಕೊರತೆಯನ್ನು ನಿಗ್ರಹಿಸುವ ಸರ್ಕಾರದ ಯತ್ನಕ್ಕೆ ಇದರಿಂದ ಭಾರಿ ಹಿನ್ನಡೆಯಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಕೇಂದ್ರ ಸರ್ಕಾರವು ವಿತ್ತೀಯ ಕೊರತೆಯನ್ನು ಒಟ್ಟು ರಾಷ್ಟ್ರೀಯ ಉತ್ಪನ್ನದ (ಜಿಡಿಪಿ) ಶೇ.3.3ಕ್ಕೆ ಸೀಮಿತಗೊಳಿಸಲು ಯತ್ನಿಸುತ್ತಿದೆ. ಇದರಿಂದಾಗಿ ವಿತ್ತೀಯ ಕೊರತೆ ಸುಮಾರು 6.24 ಲಕ್ಷ ಕೋಟಿ ರುಪಾಯಿ ಆಗಲಿದೆ. ಆದರೆ ವಿತ್ತೀಯ ಕೊರತೆಯನ್ನು ನಿಯಂತ್ರಿಸಲು ಸರ್ಕಾರ ಈಗ ಕೈಗೊಳ್ಳುತ್ತಿರುವ ಕಠಿಣ ಕ್ರಮಗಳ ಹೊರತಾಗಿಯೂ 6.24 ಲಕ್ಷ ಕೋಟಿ ರುಪಾಯಿಯ ಮಿತಿಯನ್ನು ತಲುಪಲು ಆಗುತ್ತಿಲ್ಲ. ಬದಲಾಗಿ 6.67 ಲಕ್ಷ ಕೋಟಿ ರುಪಾಯಿ (ಜಿಡಿಪಿಯ ಶೇ.3.5) ಆಗಲಿದೆ ಎಂದು ವಿಶ್ಲೇಷಿಸಲಾಗಿದೆ.
ಒಂದು ವೇಳೆ ಈಗ ಸರ್ಕಾರವು ರೈತರ ಸಾಲ ಮನ್ನಾಗೆ ಮುಂದಾದರೆ ಆರ್ಥಿಕತೆಗೆ ಮತ್ತಷ್ಟುಕಷ್ಟವಾಗಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ.
ಆದರೆ ರೈತರು ಮಾತ್ರ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ‘ಮಂಗಳವಾರದ ಫಲಿತಾಂಶವು ಮೋದಿ ಸರ್ಕಾರದ ಮೇಲಿನ ರೈತರ ಆಕ್ರೋಶದ ದ್ಯೋತಕ’ ಎಂದು ಉತ್ತರ ಪ್ರದೇಶದ ರೈತ ಮುಖಂಡರೊಬ್ಬರು ನುಡಿಯುತ್ತಾರೆ.
‘2014ರಲ್ಲಿ ಮೋದಿ ಅಧಿಕಾರಕ್ಕೆ ಬರಲು ರೈತರು ಕಾರಣ. ರಾಜ್ಯ ಸರ್ಕಾರಗಳಿಗೆ ಸಾಲ ಮನ್ನಾ ಮಾಡುವ ಶಕ್ತಿ ಇಲ್ಲದ ಕಾರಣ ಕೇಂದ್ರ ಸರ್ಕಾರವೇ ಈ ಜವಾಬ್ದಾರಿ ನಿರ್ವಹಿಸಲಿದೆ ಎಂಬ ಆಶಾಭಾವನೆ ರೈತರಲ್ಲಿತ್ತು. ಅದಕ್ಕೆಂದೇ ಮೋದಿಗೆ ಮತ ಹಾಕಿದರು. ಆದರೆ ಮೋದಿ ರೈತರ ಸಾಲ ಮಾಡಲಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಮಧ್ಯಪ್ರದೇಶದ ರೈತರೊಬ್ಬರು ಮಾತನಾಡಿ, ‘ರೈತರ ಸಾಲ ಮನ್ನಾ ಮಾಡುವವರಿಗೆ 2019ರಲ್ಲಿ ನನ್ನ ಮತ’ ಎಂದರು.
ರೈತರ ಸಾಲ ಮನ್ನಾ ಎಂಬುದು ದೇಶದಲ್ಲಿ ದೊಡ್ಡ ಚುನಾವಣಾ ವಿಷಯವಾಗಿದ್ದು, ಈವರೆಗೆ ಕರ್ನಾಟಕ ಸೇರಿದಂತೆ 7 ರಾಜ್ಯಗಳು ಈವರೆಗೆ ಸುಮಾರು 1.80 ಲಕ್ಷ ಕೋಟಿ ರು. ಸಾಲ ಮನ್ನಾ ಭರವಸೆ ನೀಡಿವೆ.
ಆರ್‌ಬಿಐನಿಂದ ಮೀಸಲು ನಿಧಿ ಬಳಸಿ ಸಾಲಮನ್ನಾ?
ರೈತರ ಸಾಲ ಮನ್ನಾ ಮಾಡೋದಕ್ಕೆ ಹಣ ಹೊಂದಿಸುವುದು ಹೇಗೆ ಎಂಬ ಪ್ರಶ್ನೆ ಎಲ್ಲರಲ್ಲೂ ಕಾಡಬಹುದು. ಆದರೆ ಸರ್ಕಾರವು ಭಾರತೀಯ ರಿಸರ್ವ್ ಬ್ಯಾಂಕ್‌ನಲ್ಲಿರುವ ಮೀಸಲು ನಿಧಿಯನ್ನು ಇದಕ್ಕೆ ಬಳಸಿಕೊಳ್ಳಬಹುದು ಎಂದು ಮಾಧ್ಯಮವೊಂದು ವರದಿ ಮಾಡಿದೆ.
ಆರ್‌ಬಿಐನಲ್ಲಿನ ಮೀಸಲು ನಿಧಿಯಲ್ಲಿ 3.6 ಲಕ್ಷ ಕೋಟಿ ರುಪಾಯಿ ಬೇಕು ಎಂಬ ಇರಾದೆಯನ್ನು ಸರ್ಕಾರ ಇತ್ತೀಚೆಗೆ ವ್ಯಕ್ತಪಡಿಸಿತ್ತು. ಆದರೆ ಇದಕ್ಕೆ ಆರ್‌ಬಿಐನ ನಿರ್ಗಮಿತ ಗವರ್ನರ್ ಊರ್ಜಿತ್ ಪಟೇಲ್ ಒಪ್ಪಿರಲಿಲ್ಲ. ಅತ್ಯಂತ ಆಪತ್ಕಾಲೀನ ಸಂದರ್ಭದಲ್ಲಿ ಬಳಕೆಯಾಗಬೇಕಾದ ಈ ಹಣವನ್ನು ನೀಡಲಾಗದು ಎಂದು ಖಂಡತುಂಡವಾಗಿ ಹೇಳಿದ್ದರು ಎನ್ನಲಾಗಿದ್ದು, ಇದು ಸರ್ಕಾರ-ಆರ್‌ಬಿಐ ತಿಕ್ಕಾಟಕ್ಕೆ ಕಾರಣವಾಗಿತ್ತು.
ಆದರೆ ಈಗ ಊರ್ಜಿತ್ ಪಟೇಲ್ ಆರ್‌ಬಿಐಗೆ ರಾಜೀನಾಮೆ ನೀಡಿದ್ದು, ಇವರ ಬದಲು ಸರ್ಕಾರಕ್ಕೆ ಅತ್ಯಂತ ಆಪ್ತರಾದ ಶಕ್ತಿಕಾಂತ ದಾಸ್ ಅವರ ನೇಮಕವಾಗಿದೆ. ಹೀಗಾಗಿ ಆರ್‌ಬಿಐ ಮೀಸಲು ನಿಧಿಯಲ್ಲಿರುವ ಒಟ್ಟು ಮೊತ್ತದ ಪೈಕಿ 4 ಲಕ್ಷ ಕೋಟಿ ರು.ಗಳನ್ನು ಸರ್ಕಾರವು ರೈತರ ಸಾಲ ಮನ್ನಾಗೆ ಬಳಸಿಕೊಂಡರೂ ಅಚ್ಚರಿಯಿಲ್ಲ ಎನ್ನಲಾಗುತ್ತಿದೆ.