ಮುಂಗಾರು ಆರಂಭವಾಗಿ ಎರಡು ತಿಂಗಳು ಕಳೆದರೂ ಕೂಡ ರಾಜ್ಯದ ಹಲವು ಜಲಾಶಯಗಳಲ್ಲಿ ನೀರಿನ ಕೊರತೆ ಕಂಡು ಬರುತ್ತಿದೆ. ಯಾವುದೇ ಡ್ಯಾಂಗಳೂ ಇನ್ನೂ ಭರ್ತಿಯಾಗಿಲ್ಲ. ಮಳೆಗಾಲದಲ್ಲಿಯೂ ನೀರಿನ ಕೊರತೆ ಕಂಡು ಬರುತ್ತಿದೆ.
ಶ್ರೀಕಾಂತ್ ಎನ್.ಗೌಡಸಂದ್ರ
ಬೆಂಗಳೂರು [ಜು.29]: ರಾಜ್ಯದಲ್ಲಿ ಜುಲೈ ತಿಂಗಳಲ್ಲೂ ಮಳೆ ಅಭಾವ ಮುಂದುವರಿದಿದೆ. ಜೂನ್‌ನಲ್ಲಿ ಬರಿದಾಗುವ ಹಂತಕ್ಕೆ ತಲುಪಿದ್ದ ದಕ್ಷಿಣ ಒಳನಾಡು ಭಾಗದ ಜಲಾಶಯಗಳಿಗೆ ಜುಲೈನಲ್ಲೂ ನಿರೀಕ್ಷಿತ ಪ್ರಮಾಣದ ನೀರು ಹರಿದುಬಂದಿಲ್ಲ. ಹೀಗಾಗಿ ಮಳೆಗಾಲದಲ್ಲೇ ಬರ ಪರಿಸ್ಥಿತಿ ಉಂಟಾಗುವ ಭೀತಿ ಎದುರಾಗಿದ್ದು, ಕೃಷಿಗೆ ಮಾತ್ರವಲ್ಲ ಕುಡಿಯುವ ನೀರಿಗೂ ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗುವ ಆತಂಕ ಎದುರಾಗಿದೆ.
ರಾಜ್ಯಾದ್ಯಂತ ಜುಲೈನಲ್ಲೂ ವಾಡಿಕೆಗಿಂತ ಶೇ. 13ರಷ್ಟುಪ್ರಮಾಣದ ಮಳೆ ಕೊರತೆ ಉಂಟಾಗಿದೆ. ದಕ್ಷಿಣ ಒಳನಾಡು ಭಾಗದಲ್ಲಿ ಶೇ.30, ಉತ್ತರ ಒಳಭಾಗದಲ್ಲಿ ಶೇ.26, ಮಲೆನಾಡು ಭಾಗದಲ್ಲಿ ಶೇ.26ರಷ್ಟುಮಳೆ ಕೊರತೆ ಕಂಡುಬಂದಿದೆ. ಕರಾವಳಿ ಭಾಗದಲ್ಲಿ ಮಾತ್ರ ಉತ್ತಮ ಮಳೆ ದಾಖಲಾಗಿದೆ. ಮಹಾರಾಷ್ಟ್ರದಲ್ಲಿ ಉತ್ತಮ ಮಳೆಯಾಗಿರುವುದರಿಂದ ಉತ್ತರ ಕರ್ನಾಟಕದ ಕೆಲ ಜಲಾಶಯಗಳಿಗೆ ಉತ್ತಮ ಒಳಹರಿವು ಬಂದಿದೆ. ಆದರೆ ದಕ್ಷಿಣ ಒಳನಾಡು ವ್ಯಾಪ್ತಿಯ ಬಹುತೇಕ ಜಲಾಶಯಗಳ ನೀರಿನ ಮಟ್ಟಸುಧಾರಿಸಿಲ್ಲ. ಹೀಗಾಗಿ ಮಳೆಯ ಪ್ರಮಾಣ ಇದೇ ರೀತಿ ಮುಂದುವರೆದರೆ ಈ ಬಾರಿಯೂ ರಾಜ್ಯದಲ್ಲಿ ತೀವ್ರ ಬರಗಾಲ ಸೃಷ್ಟಿಯಾಗುವ ಸಾಧ್ಯತೆ ಇದೆ.
ಪ್ರಸಕ್ತ ಸಾಲಿನ ಪೂರ್ವ ಮುಂಗಾರಿನಲ್ಲಿ ರಾಜ್ಯವನ್ನು ಮಳೆ ಅಭಾವ ತೀವ್ರವಾಗಿ ಕಾಡಿದೆ. ಮಾ. 1ರಿಂದ ಮೇ 31ರವರೆಗೆ ರಾಜ್ಯಾದ್ಯಂತ 125 ಮಿ.ಮೀ. ಸರಾಸರಿ ವಾಡಿಕೆ ಮಳೆಯಾಗಬೇಕಿದ್ದರೂ ಕೇವಲ 71 ಮಿ.ಮೀ. ಮಳೆಯಾಗಿತ್ತು. ಮಾನ್ಸೂನ್ ಮಳೆ ಶುರುವಾದ ಬಳಿಕವೂ ಜೂನ್ ತಿಂಗಳಲ್ಲಿ ಶೇ.27 ರಷ್ಟುಮಳೆ ಕೊರತೆ ಉಂಟಾಗಿತ್ತು. ಮಲೆನಾಡು ಭಾಗದಲ್ಲಿ ಶೇ.43, ಕರಾವಳಿ ಭಾಗದಲ್ಲಿ ಶೇ.35 ರಷ್ಟುಮಳೆ ಕೊರತೆ ದಾಖಲಾಗಿತ್ತು. ಇದರಿಂದ ತೀವ್ರ ಬರದತ್ತ ಮುಖ ಮಾಡಿದ್ದ ರಾಜ್ಯವನ್ನು ಜುಲೈ ತಿಂಗಳ ಮಳೆಯೇ ಕಾಪಾಡಬೇಕು ಎಂಬ ಸ್ಥಿತಿ ನಿರ್ಮಾಣವಾಗಿತ್ತು. ಈ ಹಂತದಲ್ಲಿ ಜುಲೈ ತಿಂಗಳಲ್ಲಿ ಮಳೆ ಪ್ರಮಾಣ ತುಸು ಸುಧಾರಿಸಿದರೂ ವಾಡಿಕೆ ಮಳೆಗಿಂತ ಶೇ.13 ರಷ್ಟುಕಡಿಮೆ ಮಳೆ ಉಂಟಾಗಿದೆ.
ಮಳೆ ಕೊರತೆ ಉಂಟಾಗಿರುವುದರಿಂದ ಕಾವೇರಿ ಜಲಾಶಯಗಳ ಒಳಹರಿವು ಹೆಚ್ಚಾಗಿಲ್ಲ. ಮತ್ತೊಂದೆಡೆ ಕಾವೇರಿಯಿಂದ ತಮಿಳುನಾಡಿಗೆ ನೀರು ಬಿಡುಗಡೆ ಮಾಡುವಂತೆ ಕಾವೇರಿ ನಿರ್ವಹಣಾ ಪ್ರಾಧಿಕಾರ ಒತ್ತಡ ಹೇರುತ್ತಿದ್ದು, ನಿರ್ವಹಣಾ ಪ್ರಾಧಿಕಾರದ ಸೂಚನೆಯಂತೆ ನೀರು ಬಿಡುಗಡೆ ಮಾಡಿದರೆ ಬೆಂಗಳೂರಿನ ಜನರ ಕುಡಿಯುವ ಅಗತ್ಯಕ್ಕೂ ನೀರಿಲ್ಲದಂತಾಗಲಿದೆ.
ಬೆಂಗಳೂರಿಗೆ ಕಾದಿದೆ ಆತಂಕ:
ಜುಲೈ ಮುಗಿಯುತ್ತಾ ಬಂದರೂ ಇನ್ನೂ ಎಲ್ಲೆಡೆ ಉತ್ತಮ ಮಳೆಯಾಗಿಲ್ಲ. ಹೀಗಾಗಿ ಜಲಾಶಯಗಳ ಒಡಲು ಬರಿದಾಗಿದೆ. ತಮಿಳುನಾಡಿಗೆ ಬಿಡುಗಡೆ ಮಾಡಬೇಕಿದ್ದ ನೀರನ್ನೂ ಹರಿಸಿಲ್ಲ. ಕಾವೇರಿಯ ನಾಲ್ಕೂ ಜಲಾಶಯಗಳಲ್ಲಿ ಜುಲೈ 26ರ ವೇಳೆಗೆ 35 ಟಿಎಂಸಿ ನೀರು ಮಾತ್ರ ಶೇಖರಣೆಯಾಗಿದೆ. ಇನ್ನಾದರೂ ಉತ್ತಮ ಮಳೆಯಾಗದಿದ್ದರೆ ಬೆಂಗಳೂರು ಜನರಿಗೆ ಜೀವಜಲದ ಕೊರತೆ ಸಾಧ್ಯತೆಯೇ ಹೆಚ್ಚು.
ಪ್ರತಿ ತಿಂಗಳು ಬೆಂಗಳೂರಿಗೆ 1.5 ಟಿಎಂಸಿ ನೀರು ಬೇಕು. ಜತೆಗೆ ಹಾಸನ, ಮೈಸೂರು, ಮಂಡ್ಯ ಸೇರಿ ಕುಡಿಯುವ ಬಳಕೆಗೆ ಕಾವೇರಿ ನೀರು ಅವಲಂಬಿಸಿರುವವರಿಗೆ ಒಟ್ಟು 2.25 ಟಿಎಂಸಿ ನೀರು ಬೇಕಾಗುತ್ತದೆ. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶದಂತೆ ರಾಜ್ಯವು ಕಾವೇರಿಯ 9.19 ಟಿಎಂಸಿ ನೀರನ್ನು ಜೂನ್ ತಿಂಗಳಲ್ಲಿ ಹಾಗೂ 31.24 ಟಿಎಂಸಿ ನೀರನ್ನು ಜುಲೈ ತಿಂಗಳಲ್ಲಿ ಬಿಡುಗಡೆ ಮಾಡಬೇಕಾಗಿತ್ತು. ಆದರೆ, ಮಳೆ ಪ್ರಮಾಣ ಕ್ಷೀಣಿಸಿ ಕಾವೇರಿಯ ನಾಲ್ಕೂ ಜಲಾಶಯಗಳಲ್ಲಿ ನೀರಿನ ಪ್ರಮಾಣ ಗಂಭೀರ ಪ್ರಮಾಣದಲ್ಲಿ ಕುಸಿದಿದೆ. ಒಳ ಹರಿವಿನ ಪ್ರಮಾಣವೂ ತೀರಾ ಕಡಿಮೆ ಇದೆ. ಈ ಅಂಶಗಳನ್ನು ಪರಿಗಣಿಸಿ ಈವರೆಗೆ ರಾಜ್ಯವು ತಮಿಳುನಾಡಿನ ಮೆಟ್ಟೂರು ಜಲಾಶಯಕ್ಕೆ 1.72 ಟಿಎಂಸಿ ನೀರು ಮಾತ್ರ ಬಿಡುಗಡೆ ಮಾಡಿದ್ದರೂ ಕಳೆದ ತಿಂಗಳವರೆಗೆ ವಿನಾಯಿತಿ ನೀಡಲಾಗಿತ್ತು. ಇದೀಗ ಜುಲೈ 20ರಂದು ಮತ್ತೆ 2,453 ಕ್ಯೂಸೆಕ್‌ನಷ್ಟುನೀರು ಬಿಡುಗಡೆ ಮಾಡಿದೆ.
ಕೃಷಿಗೆ ನೀರಿನ ಕೊರತೆ?:
ರಾಜ್ಯದ ಬಹುತೇಕ ಜಲಾಶಯಗಳಲ್ಲಿ ನೀರಿನ ಪ್ರಮಾಣ ವೃದ್ಧಿಸಿಲ್ಲ. ಮಳೆಗಾಲದಲ್ಲೇ ಜಲಾಶಯಗಳಿಗೆ ನೀರು ಬಾರದೆ ರೈತರು ಕಂಗಾಲಾಗಿದ್ದಾರೆ. ಮಳೆಗಾಲ ಕಳೆದ ಬಳಿಕ ಸಂಗ್ರಹವಾಗಿರುವ ಸ್ವಲ್ಪ ನೀರೂ ಖಾಲಿಯಾದರೆ ಕೃಷಿಗೂ ನೀರಿಲ್ಲದಂತಾಗಲಿದೆ. 2018ರ ಜುಲೈನಲ್ಲಿ ಬಹುತೇಕ ಜಲಾಶಯಗಳು ಭರ್ತಿಯಾಗಿದ್ದರೂ ಬೇಸಿಗೆ ವೇಳೆಗೆ ತೀವ್ರ ನೀರಿನ ಅಭಾವ ಕಾಡಿತ್ತು. ಈ ಬಾರಿ ಜಲಾಶಯಗಳಲ್ಲಿ ನೀರಿನ ಅಭಾವ ಹೆಚ್ಚಾಗಿರುವುದರಿಂದ ಮಳೆಗಾಲದಲ್ಲೇ ಕೃಷಿಗೆ ನೀರಿನ ಅಭಾವ ಉಂಟಾಗಿದೆ. ಇನ್ನು ಬೇಸಿಗೆ ಕಾಲದಲ್ಲಿ ಪರಿಸ್ಥಿತಿ ಊಹಿಸಲೂ ಸಾಧ್ಯವಿಲ್ಲ ಎಂದು ನೀರಾವರಿ ತಜ್ಞ ಕ್ಯಾಪ್ಟನ್ ರಾಜಾರಾವ್ ಹೇಳುತ್ತಾರೆ.
ಆಲಮಟ್ಟಿಜಲಾಶಯಕ್ಕೆ ನೀರು
ದಕ್ಷಿಣ ಒಳನಾಡು ಭಾಗದ ಜಲಾಶಯಗಳು ನೀರಿನ ಕೊರತೆ ಎದುರಿಸುತ್ತಿದ್ದರೂ, ಮಹಾರಾಷ್ಟ್ರದಲ್ಲಿ ಆದ ಉತ್ತಮ ಮಳೆಯಿಂದಾಗಿ ಕೃಷ್ಣಾ ನದಿ ಹರಿವು ಹೆಚ್ಚಾಗಿದೆ. ಹೀಗಾಗಿ ಆಲಮಟ್ಟಿಜಲಾಶಯಕ್ಕೆ 112 ಟಿಎಂಸಿ ನೀರು ಹರಿದು ಬಂದಿದೆ. 119.26 ಟಿಎಂಸಿ ನೀರಿನ ಸಾಮರ್ಥ್ಯದ ಜಲಾಶಯದಲ್ಲಿ 112.03 ಟಿಎಂಸಿ ನೀರು ಶೇಖರಣೆಯಾಗಿದೆ. ಉಳಿದಂತೆ ನಾರಾಯಣಪುರ ಜಲಾಶಯಕ್ಕೂ ಉತ್ತಮ ಒಳ ಹರಿವು ಬಂದಿದೆ. 26.14 ಟಿಎಂಸಿ ನೀರಿನ ಸಾಮರ್ಥ್ಯದ ಜಲಾಶಯದಲ್ಲಿ 20.31 ಟಿಎಂಸಿ ನೀರು ಸಂಗ್ರಹವಾಗಿದೆ. ಮಲಪ್ರಭಾದಲ್ಲಿ 10.37 ಟಿಎಂಸಿ, ಘಟಪ್ರಭಾ- 23.92 ಟಿಎಂಸಿ, ತುಂಗಭದ್ರಾ- 19.86 ಟಿಎಂಸಿ, ಭದ್ರ ಜಲಾಶಯದಲ್ಲಿ 18.67 ಟಿಎಂಸಿ ನೀರು ಶೇಖರಣೆಯಾಗಿದೆ.
ಕಾವೇರಿ ಜಲಾಶಯಗಳ ಮಟ್ಟ: (ಜುಲೈ 26ರ ವೇಳೆಗೆ)
ಜಲಾಶಯ - ಜೂ.26ರ ನೀರಿನ ಮಟ್ಟ- ಜುಲೈ 26ರ ನೀರಿನ ಮಟ್ಟ
ಕೆಆರ್‌ಎಸ್- 6.27 ಟಿಎಂಸಿ- 10.61 ಟಿಎಂಸಿ
ಕಬಿನಿ- 2.49 ಟಿಎಂಸಿ- 9.44 ಟಿಎಂಸಿ
ಹೇಮಾವತಿ- 3.54 ಟಿಎಂಸಿ- 13.55 ಟಿಎಂಸಿ
ಹಾರಂಗಿ- 1.23 ಟಿಎಂಸಿ- 3.07 ಟಿಎಂಸಿ