ಟಿಕೆಟ್ ಫೈಟ್: ದಾವಣಗೆರೆಯಲ್ಲಿ ಕೈ-ಕಮಲ ನಡುವೆ ಪ್ರಬಲ ಪೈಪೋಟಿ

By Web Desk  |  First Published Feb 20, 2019, 9:22 AM IST

ಈ ಬಾರಿಯ ಲೋಕಸಭೆ ಚುನಾವಣೆ ದೇಶಾದ್ಯಂತ ಬಿಜೆಪಿ ಹಾಗೂ ಕಾಂಗ್ರೆಸ್ ಅಥವಾ ಬಿಜೆಪಿ ಹಾಗೂ ಇತರರ ನಡುವಣ ಹಣಾಹಣಿ ಎಂದೇ ಬಿಂಬಿತವಾಗಿರಬಹುದು. ಆದರೆ ದಾವಣಗೆರೆಯಲ್ಲಿ ಬಿಜೆಪಿ ವರ್ಸಸ್ ಕಾಂಗ್ರೆಸ್ ಜತೆಗೆ ಇದು ಎರಡು ಕುಟುಂಬಗಳ ನಡುವಣ ಸಮರ. ಸಂಬಂಧಿಕರೇ ಆಗಿರುವ ಜಿ.ಎಂ. ಸಿದ್ದೇಶ್ವರ್ ಹಾಗೂ ಶಾಮನೂರು ಶಿವಶಂಕರಪ್ಪ ನಡುವಣ ಹಣಾಹಣಿ. ಸತತವಾಗಿ ಗೆಲ್ಲುತ್ತಿರುವ ಸಿದ್ದೇಶ್ವರ್ ಅವರಿಗೆ ಈ ಬಾರಿಯೂ ಶಾಮನೂರು ಪುತ್ರ ಎಸ್.ಎಸ್. ಮಲ್ಲಿಕಾರ್ಜುನ ಅವರೇ ಎದುರಾಳಿಯಾಗುವುದು ನಿಶ್ಚಿತ ಎನ್ನುವಂತಾಗಿದೆ.


ದಾವಣಗೆರೆ (ಫೆ. 20): ಅರೆ ಮಲೆನಾಡು, ಬಯಲು ಸೀಮೆಯ ಸಂಗಮ ದಾವಣಗೆರೆಯಲ್ಲಿ ರಾಜಕೀಯ ಜಿದ್ದಾಜಿದ್ದಿಗೆ ಎಂದಿಗೂ ಬರ ಇಲ್ಲ. ಈಗ ಲೋಕಸಭೆ ಚುನಾವಣೆಗೆ ಸಾಂಪ್ರದಾಯಿಕ ಎದುರಾಳಿಗಳಾದ ಕಾಂಗ್ರೆಸ್-ಬಿಜೆಪಿ ಪೈಪೋಟಿ ಮಧ್ಯೆ ಪ್ರಬಲ ಲಿಂಗಾಯತ ಸಮುದಾಯಕ್ಕೆ ಸೇರಿದ ನಾಯಕರಾದ, ಬೀಗರೂ ಆಗಿರುವ ಸಂಸದ ಜಿ.ಎಂ.ಸಿದ್ದೇಶ್ವರ, ಮಾಜಿ ಸಚಿವ ಶಾಮನೂರು ಮಲ್ಲಿಕಾರ್ಜುನ ಕದನ ಗಮನ ಸೆಳೆದಿದೆ.

ನಾಲ್ಕನೇ ಬಾರಿ ಪುನರಾಯ್ಕೆ ಬಯಸಿರುವ ಸಿದ್ದೇಶ್ವರ್ ವಿರುದ್ಧ ಮೂರು ಸೋಲಿನ ಸೇಡು ತೀರಿಸಿಕೊಳ್ಳಲು ಮಲ್ಲಿಕಾರ್ಜುನ ಸಜ್ಜಾಗಿದ್ದಾರೆ. ಅಭ್ಯರ್ಥಿಗಳ ಘೋಷಣೆಯಾಗದಿದ್ದರೂ ಬಹುತೇಕ ಈ ಇಬ್ಬರ ಸ್ಪರ್ಧೆ ನಿಶ್ಚಿತ, ಈ ಇಬ್ಬರ
ನಡುವೆಯೇ ಪ್ರಬಲ ಪೈಪೋಟಿ ಎಂಬ ಮಾತು ದಟ್ಟವಾಗಿದೆ.

Tap to resize

Latest Videos

ಹಾಗೆ ನೋಡಿದರೆ, ಈ ಬಾರಿ ಸಿದ್ದೇಶ್ವರ್ ಅವರ ಬಗ್ಗೆ ಸ್ಥಳೀಯ ವಾಗಿ ಹೆಚ್ಚಿನ ಒಲವು ಕಂಡು ಬರುತ್ತಿಲ್ಲ. ಅಪಸ್ವರಗಳೂ ಕೇಳಿಬರುತ್ತಿವೆ. ಕೇಂದ್ರ ಸಚಿವರಾಗಿದ್ದ ಅವರನ್ನು ಹಠಾತ್ತನೇ ಕೈಬಿಟ್ಟಿದ್ದರ ಹಿಂದೆ ಅವರು ಉತ್ತಮವಾಗಿ ಕೆಲಸ  ಮಾಡದೇ ಇರುವುದೇ ಕಾರಣ ಎಂಬ ಅಭಿಪ್ರಾಯ ಪಕ್ಷದ ಪಾಳೆಯದಲ್ಲಿದೆ. ಆದರೂ ಸಿದ್ದೇಶ್ವರ್ ಅವರನ್ನು ಕೈಬಿಟ್ಟು ಮತ್ತೊಬ್ಬರನ್ನು ಕಣಕ್ಕಿಳಿಸುವ ಮನಸ್ಥಿತಿಯಲ್ಲಿ ಬಿಜೆಪಿ ಇಲ್ಲ. ಒಂದಂತೂ ಸ್ಪಷ್ಟ. ಈ ಬಾರಿ ಸಿದ್ದೇಶ್ವರ್ ಅವರಿಗೆ ಚುನಾವಣೆ
ತುಸು ಪ್ರಯಾಸವಾಗುವ ಸಾಧ್ಯತೆಯೇ ಹೆಚ್ಚು.

2 ಕುಟುಂಬಗಳ ಕದನ ಸಾಂಪ್ರದಾಯಿಕ ವೈರತ್ವದ ಜೊತೆ ಕಾಂಗ್ರೆಸ್ಸಿನ ಶಾಮನೂರು ಶಿವಶಂಕರಪ್ಪ- ಬಿಜೆಪಿಯ ಜಿ.ಮಲ್ಲಿಕಾರ್ಜುನಪ್ಪ ಕಾಲದ ವೈರತ್ವ ಇದೀಗ ೨ನೇ ತಲೆಮಾರಿನ ಎಸ್.ಎಸ್. ಮಲ್ಲಿಕಾರ್ಜುನ- ಜಿ.ಎಂ. ಸಿದ್ದೇಶ್ವರ ಕಾಲದಲ್ಲಿ ಮತ್ತಷ್ಟು ತೀವ್ರವಾಗಿದೆ. ಇತ್ತ ಶಾಮನೂರು ಶಿವಶಂಕರಪ್ಪ ತಮ್ಮ ಪುತ್ರ ಮಲ್ಲಿಕಾರ್ಜುನ ಅವರಿಗೆ ಶಕ್ತಿಯಾಗಿದ್ದರೆ, ಅತ್ತ ಜಿ.ಎಂ.ಸಿದ್ದೇಶ್ವರ್‌ಗೆ ಮಾಜಿ ಸಚಿವ ಎಸ್.ಎ.ರವೀಂದ್ರನಾಥ್ ಬಲವಿದೆ. ಹೀಗೆ ಕಾಂಗ್ರೆಸ್-ಬಿಜೆಪಿ ವೈರತ್ವದ ಜೊತೆ ಒಂದು ಕುಟುಂಬಕ್ಕೆ ಮತ್ತೆರೆಡು ಕುಟುಂಬಗಳ ನಾಯಕರಿಂದಲೂ ಸವಾಲು ಇದ್ದೇ ಇರುತ್ತದೆ.

ಮೈತ್ರಿ ಸರ್ಕಾರ ಬಂದಾಗಿನಿಂದಲೂ ಕಾಂಗ್ರೆಸ್ಸಿನಲ್ಲಿ ಮತ್ತೆ ಲೋಕಸಭಾ ಕ್ಷೇತ್ರ ಕೈವಶದ ಆಸೆ ಗರಿಗೆದರಿದೆ. ಮೈತ್ರಿ ಪಕ್ಷಜೆಡಿಎಸ್‌ನೊಂದಿಗೆ ಕ್ಷೇತ್ರ ಹಂಚಿಕೊಳ್ಳುವಾಗ ಇಲ್ಲಿನ ೮ ವಿಧಾ ನಸಭಾ ಕ್ಷೇತ್ರದ ಪೈಕಿ ಬಹುತೇಕ ಕಡೆ ಅಷ್ಟೇನೂ ಬಲವಾದ ಬೇರನ್ನು ಹೊಂದಿಲ್ಲದ ಜೆಡಿಎಸ್ ಸಹಜವಾಗಿಯೇ ಕಾಂಗ್ರೆಸ್ಗೆ ಕ್ಷೇತ್ರ ಬಿಟ್ಟುಕೊಡುವುದು ಬಹುತೇಕ ನಿಶ್ಚಿತವಾಗಿದೆ.
 

ಎಚ್.ಎಂ. ರೇವಣ್ಣ ನಿಲ್ತಾರಾ?

ಕಳೆದ ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಯಲ್ಲಾದ ಸೋಲಿನ ಹಿನ್ನೆಲೆಯಲ್ಲಿ ಕಾಂಗ್ರೆಸ್ಸಿನ ಅಭ್ಯರ್ಥಿಯಾಗಿ ಮತ್ತೆ ಮಲ್ಲಿಕಾರ್ಜುನ ಅವರನ್ನೇ ಕಣಕ್ಕಿಳಿಸುವ ಸಾಧ್ಯತೆ ಹೆಚ್ಚಾಗಿದ್ದರೂ ಪಕ್ಷದ ಕುರುಬ ಸಮಾಜದ ಮುಖಂಡ, ಮಾಜಿ ಸಚಿವ ಎಚ್.ಎಂ.ರೇವಣ್ಣ ಅವರನ್ನು ಕಣಕ್ಕಿಳಿಸುವಂತೆ ಆ ಸಮಾಜದ ಕೆಲ ಮುಖಂಡರು ಮನವಿ ಮಾಡಿದ್ದಾರೆ. ಮತ್ತೆ ಕೆಲವರು ಸಿದ್ದರಾಮಯ್ಯ ಬಳಿಯೂ ಈ ಬಗ್ಗೆ ಮನವಿ ಮಾಡಿದ್ದಾರೆಂದು ಹೇಳಲಾಗಿದೆ. ಆದರೂ ಅಂತಿಮವಾಗಿ ಮಲ್ಲಿಕಾ
ರ್ಜುನ ಅವರಿಗೇ ಟಿಕೆಟ್ ಲಭಿಸಲಿದೆ ಎನ್ನಲಾಗಿದೆ.

ಬಿಜೆಪಿಗೇ ಹೆಚ್ಚು ಬಲ

ಸಿದ್ದೇಶ್ವರ 1996 ರಿಂದ ದಾವಣಗೆರೆಯಲ್ಲೇ ತಮ್ಮ ತಂದೆ ದಿವಂಗತ ಜಿ.ಮಲ್ಲಿಕಾರ್ಜುನಪ್ಪ ಅವರ ಚುನಾವಣೆಗಾಗಿ ದುಡಿದವರು. ಇದೀಗ ಸತತವಾಗಿ ೩ನೇ ಬಾರಿಗೆ ಸಂಸದರಾಗಿ ಆಯ್ಕೆಯಾದ ಸಾಧನೆ ಹೊಂದಿದ್ದಾರೆ. ರಾಜ್ಯದ ಕೇಂದ್ರ ಬಿಂದು ದಾವಣಗೆರೆ ಲೋಕಸಭಾ ಕ್ಷೇತ್ರ ಒಂದು ಕಾಲದಲ್ಲಿ ಕಾಂಗ್ರೆಸ್ಸಿನ ಅಭೇಧ್ಯ ಕೋಟೆಯಾಗಿತ್ತು. ಯಾವಾಗ ಭೀಮಸಮುದ್ರದ ಜಿ.ಮಲ್ಲಿಕಾರ್ಜುನಪ್ಪ ಇಲ್ಲಿಂದ ಸ್ಪರ್ಧಿಸಿದರೋ ಆಗಿನಿಂದಲೇ ಲೋಕಸಭಾ ಕ್ಷೇತ್ರದಲ್ಲಿ ಕಮಲ ಟಿಸಿಲೊಡೆಯಿತು. ಇತ್ತ 7 ವಿಧಾನಸಭಾ ಕ್ಷೇತ್ರದ ಪೈಕಿ ಬಿಜೆಪಿ ಹಿರಿಯ ನಾಯಕ ಎಸ್.ಎ.ರವೀಂದ್ರನಾಥ ಸತತವಾಗಿ ಮಾಯಕೊಂಡದಿಂದ ಆಯ್ಕೆಯಾಗುತ್ತಿದ್ದರು. ಕ್ಷೇತ್ರ ಪುನರ್ವಿಂಗಡಣೆ ನಂತರದ ಚುನಾವಣೆಯಲ್ಲಿ ಜಿಲ್ಲೆಯ 8 ಕ್ಷೇತ್ರಗಳ ಪೈಕಿ 7 ರಲ್ಲಿ ಬಿಜೆಪಿ ಮೊದಲ ಸಲ ದೊಡ್ಡ ಶಕ್ತಿಯಾಗಿ ಹೊರ ಹೊಮ್ಮಿತ್ತು.

ಬಿಜೆಪಿಯನ್ನು ಜಿಲ್ಲೆಯಲ್ಲಿ ಬಲಿಷ್ಠವಾಗಿ ಕಟ್ಟುವಲ್ಲಿ ಎಸ್.ಎ. ರವೀಂದ್ರನಾಥ, ಸಿದ್ದೇಶ್ವರ ಜೋಡಿ ಎತ್ತಿನಂತೆ ದುಡಿದಿದ್ದಾರೆ. ಆದರೆ, ಕಳೆದ ಕೆಲ ವರ್ಷಗಳಿಂದ ಪಕ್ಷದಲ್ಲೇ ಗುಂಪುಗಾರಿಕೆ ಇರುವುದೂ ಕಾರ್ಯಕರ್ತರ ಚಿಂತೆಗೀಡು ಮಾಡಿದೆ. ಬಿಜೆಪಿ ಮೇಲಿನ ಅಭಿಮಾನ, ಮೋದಿ ಮೇಲಿನ ನಂಬಿಕೆಗಾಗಿ ಪಕ್ಷಕ್ಕಾಗಿ ದುಡಿಯುತ್ತಿದ್ದೇವೆ ಎನ್ನುತ್ತಾರೆ ಹಿರಿಯರು.

ಲಿಂಗಾಯತರ ನಡುವೆ ಹಣಾಹಣಿ

2013 ರ ವಿಧಾನಸಭಾ ಚುನಾವಣೆಯಲ್ಲಿ 8 ಕ್ಷೇತ್ರಗಳ ಪೈಕಿ 7 ರಲ್ಲಿ ಗೆದ್ದಿದ್ದ ಕಾಂಗ್ರೆಸ್ 2014 ರಲ್ಲಿ 2 ಕ್ಷೇತ್ರದಲ್ಲಷ್ಟೇ ಶಾಸಕರನ್ನು ಹೊಂದಿದೆ. ಸದ್ಯಕ್ಕೆ 6 ಕ್ಷೇತ್ರದಲ್ಲಿ ಗೆದ್ದಿರುವ ಬಿಜೆಪಿ ಬಲವಾಗಿ ಬೇರೂರಿದೆ. ಉಳಿದೆರೆಡೂ ಕ್ಷೇತ್ರದಲ್ಲೂ ಬಲವಾಗಿದೆ. ಕಾಂಗ್ರೆಸ್ಸಿನ ಶಾಸಕರೇ ಹೆಚ್ಚಾಗಿದ್ದರೂ ಲೋಕಸಭೆ ಗೆದ್ದಿದ್ದ ಬಿಜೆಪಿಗೆ ಈಗಿರುವ ಶಾಸಕರೂ ಆನೆ ಬಲವಾಗಿದ್ದಾರೆ. ಹಾಗೇ ನೋಡಿದರೆ ಪಕ್ಷದ ವರ್ಚಸ್ಸಿನ ಜೊತೆಗೆ ಅಭ್ಯರ್ಥಿಗಳು, ನಾಯಕರ ವೈಯಕ್ತಿಕ ಪ್ರಭಾವವೂ ಚುನಾವಣೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಪ್ರಬಲ ಲಿಂಗಾಯತಕೋಮಿನ ಅಭ್ಯರ್ಥಿಗಳ ಮಧ್ಯೆ ಚುನಾವಣೆ ಇಲ್ಲಾಗಲಿದೆ.

- ನಾಗರಾಜ ಎಸ್ ಬಡದಾಳ್ 

click me!