2019 ಲೋಕಸಭಾ ಚುನಾವಣೆಗೆ ದಿನಾಂಕ ಫಿಕ್ಸ್‌?

By Web DeskFirst Published Jan 16, 2019, 8:16 AM IST
Highlights

ಲೋಕಸಭಾ ಚುನಾವಣೆಗೆ ದಿನಾಂಕ ಫಿಕ್ಸ್ | ನಿಜನಾ ಈ ಸುದ್ದಿ? ಯಾವಾಗ ನಡೆಯುತ್ತೆ ಈ ಚುನಾವಣೆ? ನಿಜನಾ ಈ ಸುದ್ದಿ? 

ನವದೆಹಲಿ (ಜ. 16): 2019 ಲೋಕಸಭಾ ಚುನಾವಣೆಯ ದಿನಾಂಕ ನಿಗದಿಯಾಗಿದೆ ಎಂಬ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಅದರಲ್ಲಿ ಬಿಹಾರದಲ್ಲಿ ಏಪ್ರಿಲ್‌ 10, 17,24,30 ಮತ್ತು ಮೇ 7, 12 ರಲ್ಲಿ ನಡೆಯಲಿದೆ ಎಂದು ಹೇಳಿದ್ದರೆ ಒಡಿಶಾ, ಪಶ್ಚಿಮ ಬಂಗಾಳ, ಜಾರ್ಖಂಡ್‌, ಛತ್ತೀಸ್‌ಗಢ, ಮಧ್ಯಪ್ರದೇಶಗಳಲ್ಲಿ ಏಪ್ರಿಲ್‌ 10, 17 ಮತ್ತು 24 ರಂದು ನಡೆಯಲಿದೆ ಎಂದು ಹೇಳಲಾಗಿದೆ. ಹೀಗೆ ಒಂದೊಂದು ರಾಜ್ಯಗಳಲ್ಲಿ ಒಂದೊಂದು ದಿನ ಎಲೆಕ್ಷನ್‌ ನಡೆಯಲಿದೆ ಎಂದು ಹೇಳಲಾಗಿದೆ. ಕರ್ನಾಟಕದಲ್ಲಿ ಏಪ್ರಿಲ್‌ 17ರಂದು ಒಂದೇ ದಿನ ಏಕಕಾಲಕ್ಕೆ ಲೋಕಸಭಾ ಚುನಾವಣೆ ನಡೆಯುತ್ತದೆ ಎಂದು ಹೇಳಲಾಗಿದೆ.

ಸದ್ಯ ಈ ಪ್ರಕಟಣೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಆದರೆ ರಾಷ್ಟ್ರ ರಾಜಕಾರಣದಲ್ಲಿ ಸಾಕಷ್ಟುಕುತೂಹಲ ಮೂಡಿಸುತ್ತಿರುವ ಲೋಕಸಭಾ ಚುನಾವಣೆಯ ದಿನಾಂಕ ನಿಜಕ್ಕೂ ನಿಗದಿಯಾಗಿದೆಯೇ ಎಂದು ಪರಿಶೀಲಿಸಿದಾಗ ಇದೊಂದು ಸುಳ್ಳುಸುದ್ದಿ ಎಂದು ತಿಳಿದುಬಂದಿದೆ.

ಕಾರಣ ವೈರಲ್‌ ಆಗಿರುವ ಈ ಪ್ರಕಟಣೆಯಲ್ಲಿ ಸಾಕಷ್ಟುವ್ಯಾಕರಣ ದೋಷಗಳಿವೆ. ಉದಾಹರಣೆಗೆ ಲಕ್ಷದ್ವೀಪದ ಬದಲಿಗೆ ‘ಲಕ್ಷ್ಯಾದಿಪ್‌’ ಎಂದು ಬರೆಯಲಾಗಿದೆ. ಅದೂ ಅಲ್ಲದೆ ಕೇಂದ್ರ ಚುನಾವಣಾ ಆಯೋಗ ಚುನಾವಣೆಗೆ ದಿನಾಂಗ ನಿಗದಿ ಬಗ್ಗೆ ಪತ್ರಿಕಾ ಪ್ರಕಟಣೆಯನ್ನು ಬಿಡುಗಡೆ ಮಾಡುತ್ತದೆ ಅಥವಾ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸುತ್ತದೆ.

ಇದೊಂದು ಪ್ರಮುಖ ವಿಷಯವಾದ್ದರಿಂದ ಭಾರತದ ಎಲ್ಲಾ ಮಾಧ್ಯಮಗಳೂ ವರದಿ ಮಾಡೇ ಮಾಡುತ್ತವೆ. ಆದರೆ ಈ ಬಗ್ಗೆ ಯಾವುದೇ ಮಾಧ್ಯಮಗಳೂ ಇದುವರೆಗೆ ವರದಿ ಮಾಡಿಲ್ಲ. ಅಲ್ಲದೆ ಕ್ವಿಂಟ್‌ ಚುನಾವಣಾ ಆಯೋಗದ ವಕ್ತಾರರೊಬ್ಬರ ಬಳಿ ಸ್ಪಷ್ಟನೆಯನ್ನೂ ಪಡೆದಿದ್ದು ಅವರೂ ಈ ಸುದ್ದಿ ಸುಳ್ಳೆಂದು ಹೇಳಿದ್ದಾರೆ.

- ವೈರಲ್ ಚೆಕ್ 

click me!