ಶ್ರೀರಂಗಪಟ್ಟಣ ಸೇರಿ ಇನ್ನಷ್ಟು ಸ್ಮಾರಕಕ್ಕೆ ಯುನೆಸ್ಕೋ ಮಾನ್ಯತೆಗೆ ಅರ್ಜಿ

By Kannadaprabha News  |  First Published Aug 22, 2019, 10:35 AM IST

ಮೈಸೂರು ಹಾಗೂ ಹಾಸನದ ಪ್ರಸಿದ್ಧ ಸ್ಮಾರಕಗಳನ್ನು ಯುನೆಸ್ಕೋ ವಿಶ್ವ ಪಾರಂಪರಿಕ ಪಟ್ಟಿಗೆ ಸೇರಿಸುವಂತೆ ಕೋರಿ ಈ ವರ್ಷ ಮತ್ತೊಂದು ಪ್ರಸ್ತಾವನೆ ಕಳುಹಿಸಲು ಸಿದ್ಧತೆ ನಡೆದಿದೆ. 


ಬೆಂಗಳೂರು [ಆ.22]:  ಉತ್ತರ ಕರ್ನಾಟಕದ ಡೆಕ್ಕನ್‌ ಸುಲ್ತಾನರ ಸ್ಮಾರಕಗಳಿಗೆ ಯುನೆಸ್ಕೋ ವಿಶ್ವ ಪರಂಪರೆಯ ತಾಣದ ಮಾನ್ಯತೆ ಪಡೆಯಲು ಕಳೆದ ವರ್ಷ ಪ್ರಸ್ತಾವನೆ ಸಲ್ಲಿಸಿದ್ದ ರಾಜ್ಯ ಸರ್ಕಾರ ಇದೀಗ ದಕ್ಷಿಣ ಕರ್ನಾಟಕದ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಕೆಲ ಸ್ಮಾರಕಗಳು ಮತ್ತು ಹಾಸನದ ಪ್ರಸಿದ್ಧ ಬೇಲೂರು ಮತ್ತು ಹಳೇಬೀಡು ದೇವಾಲಯಗಳನ್ನು ವಿಶ್ವ ಪಾರಂಪರಿಕ ಪಟ್ಟಿಗೆ ಸೇರಿಸುವಂತೆ ಕೋರಿ ಈ ವರ್ಷ ಮತ್ತೊಂದು ಪ್ರಸ್ತಾವನೆ ಕಳುಹಿಸಲು ಸಿದ್ಧತೆ ನಡೆಸಿದೆ.

ಭವ್ಯ ಇತಿಹಾಸ ಮತ್ತು ವಿಶಿಷ್ಟ ವಾಸ್ತುಶಿಲ್ಪ ಹೊಂದಿರುವ ಶ್ರೀರಂಗಪಟ್ಟಣದ ಹಲವು ಸ್ಮಾರಕಗಳು ಮತ್ತು ಬೇಲೂರು, ಹಳೇಬೀಡು ದೇವಾಲಯಗಳನ್ನು ಕೂಡ ಯುನೆಸ್ಕೋ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿಸುವಂತೆ ಕೋರಿ ವಿವರವಾದ ಪ್ರಸ್ತಾವನೆಗಳನ್ನು ಕಳುಹಿಸಿಕೊಡಲು ನಿರ್ಧರಿಸಲಾಗಿದೆ. ಈಗಾಗಲೇ ಈ ಸಂಬಂಧ ಪ್ರಾಥಮಿಕ ವರದಿ ಸಿದ್ಧಪಡಿಸಲಾಗುತ್ತಿದೆ. ಇನ್‌ಟ್ಯಾಕ್‌ ಏಜೆನ್ಸಿ ಮೂಲಕ ಈ ದಸ್ತಾವೇಜಿನ ಪ್ರಸ್ತಾವನೆ ಸಿದ್ಧಪಡಿಸುತ್ತಿದ್ದು, ಇನ್ನೊಂದು ತಿಂಗಳಲ್ಲಿ ಸಂಪೂರ್ಣಗೊಳಿಸಿ ಯುನೆಸ್ಕೋಗೆ ಸಲ್ಲಿಸಲಾಗುವುದು ಎಂದು ಪುರಾತತ್ವ ಇಲಾಖೆ ಆಯುಕ್ತ ಟಿ.ವೆಂಕಟೇಶ್‌ ತಿಳಿಸಿದ್ದಾರೆ.

Latest Videos

undefined

ಹಿಂದೂ ಮತ್ತು ಇಸ್ಲಾಮಿಕ್‌ ಸಂಪ್ರದಾಯಗಳಲ್ಲಿ ಶ್ರೀರಂಗಪಟ್ಟಣವು ರಕ್ಷಣಾ ವಾಸ್ತುಶಿಲ್ಪದ ಸುಂದರ ಪ್ರಾತಿನಿಧ್ಯವನ್ನು ಹೊಂದಿದೆ. ಹೊಯ್ಸಳರಿಂದ ಹಿಡಿದು ವಿಜಯನಗರ ಸಾಮ್ರಾಜ್ಯದವರೆಗೆ ಹೈದರ್‌ ಅಲಿ ಮತ್ತು ಟಿಪ್ಪು ಸುಲ್ತಾನ್‌ ಆಳ್ವಿಕೆಯವರೆಗೂ ಈ ಪಟ್ಟಣವು ಐತಿಹಾಸಿಕ, ಧಾರ್ಮಿಕ ಮತ್ತು ಸಾಂಸ್ಕೃತಿಕ ಮಹತ್ವದ ಕೇಂದ್ರವಾಗಿದೆ. ಇಲ್ಲಿರುವ ಸ್ಮಾರಕಗಳು ವಿವಿಧ ಆಡಳಿತಗಾರರ ಅಡಿಯಲ್ಲಿ ಅಳವಡಿಸಲಾಗಿರುವ ಭಾರತೀಯ, ಇಂಡೋ-ಇಸ್ಲಾಮಿಕ್‌ ಮತ್ತು ಬ್ರಿಟಿಷ್‌ ಶೈಲಿಗಳಲ್ಲಿ ವಿಭಿನ್ನ ವಾಸ್ತುಶಿಲ್ಪ ಮತ್ತು ಅಲಂಕಾರಿಕ ಅಂಶಗಳ ಸಮ್ಮಿಶ್ರಣ ಕಾಣಬಹುದು. ಇಂತಹ ಮಿಶ್ರಣ ಭಾರತದ ಇತರ ಯಾವುದೇ ಸ್ಥಳಗಳಲ್ಲಿ ಕಾಣಸಿಗುವುದಿಲ್ಲ ಎನ್ನುತ್ತಾರೆ ಅಧಿಕಾರಿಗಳು.

ಕಳೆದ ವರ್ಷ ಉತ್ತರ ಕರ್ನಾಟಕದ ಡೆಕ್ಕನ್‌ ಸುಲ್ತಾನರು ನಿರ್ಮಿಸಿದ ಸ್ಮಾರಕ ಕೋಟೆಗಳನ್ನು ಯುನೆಸ್ಕೋ ಮಾನ್ಯತೆಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದರೂ, ಅದಕ್ಕೆ ಇನ್ನೂ ಅನುಮೋದನೆ ಸಿಕ್ಕಿಲ್ಲ. ಆದರೂ, ಧೃತಿಗೆಡುವ ಅಗತ್ಯವಿಲ್ಲ ಈ ವರ್ಷ ಮತ್ತೊಂದು ಪ್ರಸ್ತಾವನೆ ಸಲ್ಲಿಸುತ್ತಿದ್ದಾರೆ. ಕನಿಷ್ಠ ಒಂದು ಗುಂಪಿನ ಸ್ಮಾರಕಗಳಿಗಾದರೂ ಈ ವರ್ಷ ಯುನೆಸ್ಕೋ ಪಟ್ಟಿಯಲ್ಲಿ ಮಾನ್ಯತೆ ಸಿಗುವ ನಿರೀಕ್ಷೆ ಅಧಿಕಾರಿಗಳದ್ದು.

ಕಳೆದ ವರ್ಷ 3 ಕೋಟಿ ರು. ಪ್ರಸ್ತಾವನೆ:  ದಕ್ಷಿಣ ಭಾರತದಲ್ಲಿ 14ನೇ ಶತಮಾನದಿಂದ 18ನೇ ಶತಮಾನದವರೆಗೂ ಆಳ್ವಿಕೆ ನಡೆಸಿದ ಡೆಕ್ಕನ್‌ ಸುಲ್ತಾರು ನಿರ್ಮಿಸಿದ ಭವ್ಯ ಸ್ಮಾರಕ, ಕೋಟೆಗಳು, ಸಮಾದಿ, ಮಸೀದಿಗಳನ್ನು(ವಿಜಯಪುರ, ಕಲಬುರ್ಗಿ, ಬೀದರ್‌, ಗೋಲ್ಕಂಡದ ಸ್ಮಾರಗಳು) ಒಟ್ಟಿಗೆ ಸೇರಿಸಿ ಯುನೆಸ್ಕೋ ವಿಶ್ವಪಾರಂಪರಿಕ ತಾಣ ಎಂದು ಘೋಷಿಸುವಂತೆ 2018ರಲ್ಲಿ ಸುಮಾರು 3 ಕೋಟಿ ರು. ವೆಚ್ಚದಲ್ಲಿ ಪುರಾತತ್ವ ಇಲಾಖೆ ದಾಸ್ತಾಮೇಜಿನ ಪ್ರಸ್ತಾವನೆ ಸಿದ್ಧಪಡಿಸಿ ಯುನೆಸ್ಕೋಗೆ ಸಲ್ಲಿಸಲಾಗಿತ್ತು. ಆದರೆ, ಈ ಪ್ರಸ್ತಾವನೆಗೆ ಇನ್ನೂ ಯುನೆಸ್ಕೋ ಅನುಮೋದನೆ ಸಿಕ್ಕಿಲ್ಲ. ‘ಸದ್ಯ ಆ ಪ್ರಸ್ತಾವನೆ ಯುನೆಸ್ಕೋದಲ್ಲಿ ಚರ್ಚೆಯ ಹಂತದಲ್ಲಿದೆ. ಇನ್ನೂ ಸ್ವಲ್ಪ ಕಾಲಾವಕಾಶ ಬೇಕಾಗುತ್ತದೆ’ ಎಂದು ಆಯುಕ್ತ ವೆಂಕಟೇಶ್‌ ಹೇಳಿದ್ದಾರೆ.

click me!