ಕರ್ನಾಟಕ ನಗರ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ ಹೊರ ಬಿದ್ದಿದೆ. ಜೆಡಿಎಸ್, ಕಾಂಗ್ರೆಸ್ ಹಾಗೂ ಬಿಜೆಪಿಗೆ ಇದು ಪ್ರತಿಷ್ಠೆಯ ಕಣವಾಗಿತ್ತು. ಕೆಲವು ಕಡೆ ನಿರೀಕ್ಷೆಯಂತೆ ಫಲಿತಾಂಶ ಬಂದರೆ ಇನ್ನು ಕೆಲವು ಕಡೆ ಲೆಕ್ಕಾಚಾರ ತಲೆ ಕೆಳಗಾಗಿದೆ. ಎಲ್ಲೆಲ್ಲಿ ಏನೇನು ನಡೆದಿದೆ ಇಲ್ಲಿದೆ ಸಮಗ್ರ ಚಿತ್ರಣ.
ಬೆಂಗಳೂರು (ಸೆ. 03): ಕರ್ನಾಟಕ ನಗರ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ ಹೊರ ಬಿದ್ದಿದೆ. ಜೆಡಿಎಸ್, ಕಾಂಗ್ರೆಸ್ ಹಾಗೂ ಬಿಜೆಪಿಗೆ ಇದು ಪ್ರತಿಷ್ಠೆಯ ಕಣವಾಗಿತ್ತು. ಕೆಲವು ಕಡೆ ನಿರೀಕ್ಷೆಯಂತೆ ಫಲಿತಾಂಶ ಬಂದರೆ ಇನ್ನು ಕೆಲವು ಕಡೆ ಲೆಕ್ಕಾಚಾರ ತಲೆ ಕೆಳಗಾಗಿದೆ.
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳುವ ಕುರಿತಂತೆ ನಿರ್ಧಾರಕ್ಕೆ ಬಂದಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ಈ ಚುನಾವಣೆಯಲ್ಲಿ ಪ್ರತ್ಯೇಕವಾಗಿಯೇ ಹೋರಾಟ ನಡೆಸಿದ್ದರೂ ಫಲಿತಾಂಶದ ನಂತರ ಅಧಿಕಾರಕ್ಕಾಗಿ ಸ್ಥಳೀಯ ಮಟ್ಟದಲ್ಲಿ ಹೊಂದಾಣಿಕೆ ಮಾಡಿಕೊಳ್ಳುವ ನಿರ್ಣಯ ಕೈಗೊಂಡಿವೆ. ಆದರೆ, ಫಲಿತಾಂಶದ ನಂತರ ಉಭಯ ಪಕ್ಷಗಳ ನಡುವೆ ಎಷ್ಟರ ಮಟ್ಟಿಗೆ ಹೊಂದಾಣಿಕೆ ಆಗುತ್ತದೆ, ತಿಕ್ಕಾಟ ಆಗುತ್ತದೆ ಎಂಬುದನ್ನು ಕಾದು ನೋಡಬೇಕು.
ಚುನಾವಣೆಯ ಕೆಲವು ಇಂಟರೆಸ್ಟಿಂಗ್ ಫ್ಯಾಕ್ಟ್ಸ್ ಹೀಗಿವೆ.
ಒಟ್ಟು ಲೆಕ್ಕಾಚಾರ
21 ಜಿಲ್ಲೆಗಳಲ್ಲಿ ಮತದಾನ
29 ನಗರ ಸಭೆಗಳು
53 ಪುರಸಭೆಗಳು
20 ಪಟ್ಟಣ ಪಂಚಾಯಿತಿ
9121 ಅಭ್ಯರ್ಥಿಗಳು ಕಣದಲ್ಲಿದ್ದರು
ಶಿವಮೊಗ್ಗ ಪಾಲಿಕೆಯಲ್ಲಿ ಅರಳಿದ ಕಮಲ
ಶಿವಮೊಗ್ಗ ಮಹಾನಗರ ಪಾಲಿಕೆ - 35 ವಾರ್ಡ್ಸ್ - ಮ್ಯಾಜಿಕ್ ನಂಬರ್ 18
ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ಸ್ಪಷ್ಟಬಹುಮತದೊಂದಿಗೆ ಬಿಜೆಪಿ ಅಧಿಕಾರ ಪಡೆದಿದೆ. ಕಾಂಗ್ರೆಸ್- ಜೆಡಿಎಸ್ ಮೈತ್ರಿಕೂಟದ ಅಧಿಕಾರ ಅಂತ್ಯಗೊಳಿಸಿದ ಬಿಜೆಪಿ ಅಧಿಕಾರದ ಗದ್ದುಗೆ ಏರಿದೆ. ಶಿವಮೊಗ್ಗ ಪಾಲಿಕೆಯ 35 ವಾರ್ಡ್ ಗಳಲ್ಲಿ ಬಿಜೆಪಿ 20, ಕಾಂಗ್ರೆಸ್ 7, ಜೆಡಿಎಸ್ 2, ಎಸ್ ಡಿಪಿಐ 1 ಹಾಗೂ ಪಕ್ಷೇತರರು 5 ಸ್ಥಾನಗಳನ್ನು ಗಳಿಸಿದ್ದಾರೆ. ಕಳೆದ ಬಾರಿ 8 ಸ್ಥಾನ ಗಳಿಸಿದ್ದ ಬಿಜೆಪಿ ಈ ಬಾರಿ 20 ಸ್ಥಾನ ಗಳಿಸಿ ಜಯಭೇರಿ ಬಾರಿಸುವಲ್ಲಿ ಯಶಸ್ವಿಯಾಗಿದೆ.
ಅತಂತ್ರ ಸ್ಥಿತಿಯಲ್ಲಿ ತುಮಕೂರು ಮಹಾನಗರ ಪಾಲಿಕೆ
ತುಮಕೂರು ಪಾಲಿಕೆ ವಾರ್ಡ್ಸ್ 35, ಮ್ಯಾಜಿಕ್ ನಂಬರ್ - ಒಟ್ಟು 18
ತುಮಕೂರು ಮಹಾನಗರ ಪಾಲಿಕೆಯಲ್ಲಿ ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತ ಸಿಗದೇ ಅತಂತ್ರ ಸ್ಥಿತಿ ಉಂಟಾಗಿದೆ. ಬಿಜೆಪಿ 12, ಕಾಂಗ್ರೆಸ್ 10, ಜೆಡಿಎಸ್ 10, ಪಕ್ಷೇತರರು 3 ಸ್ಥಾನಗಳನ್ನು ಪಡೆದಿದ್ದಾರೆ. ತುಮಕೂರು ಪಾಲಿಕೆಯಲ್ಲಿ ಪ್ರಸ್ತುತ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷ ಅಧಿಕಾರದಲ್ಲಿತ್ತು.
ಮೈಸೂರು ಪಾಲಿಕೆಯಲ್ಲೂ ಅತಂತ್ರ ಫಲಿತಾಂಶ
ವಾರ್ಡ್ಸ್ 65, ಮ್ಯಾಜಿಕ್ ನಂಬರ್ - 33 ಸ್ಥಾನ
ಮೈಸೂರು ಮಹಾನಗರ ಪಾಲಿಕೆಯಲ್ಲಿ ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತ ಇಲ್ಲ. ಮೈಸೂರು ಪಾಲಿಕೆಯಲ್ಲಿ ಬಿಜೆಪಿ ಅತಿದೊಡ್ಡ ಪಕ್ಷವಾದರೂ ಬಹುಮತ ಪಡೆಯುವಲ್ಲಿ ವಿಫಲವಾಗಿದೆ. ಬಿಜೆಪಿ 22, ಕಾಂಗ್ರೆಸ್ 19, ಜೆಡಿಎಸ್ 18, ಪಕ್ಷೇತರ 5, ಬಿಎಸ್ಪಿ 1 ಸ್ಥಾನ ಪಡೆದಿದೆ. ಮೈಸೂರು ನಗರ ಪಾಲಿಕೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸಾಧ್ಯತೆ ಇದೆ.
ಉಡುಪಿಯಲ್ಲಿ ಬಿಜೆಪಿಯದ್ದೇ ಪ್ರಾಬಲ್ಯ
ಒಟ್ಟು 97 ವಾರ್ಡ್‌ಗಳಲ್ಲಿ ಬಿಜೆಪಿ 66, ಕಾಂಗ್ರೆಸ್ 28, ಇತರೆ 3 ಸ್ಥಾನಗಳನ್ನು ಪಡೆದುಕೊಂಡಿದೆ. ನಗರಸಭೆ, ಪುರಸಭೆ, ಪಟ್ಟಣ ಪಂಚಾಯತ್ನಲ್ಲಿ ಬಿಜೆಪಿ ಮೇಲುಗೈ ಸಾಧಿಸಿದೆ. ಪ್ರಮೋದ್ ಮಧ್ವರಾಜ್ ವಾರ್ಡ್ನಲ್ಲೂ ಬಿಜೆಪಿ ಗೆಲುವು ಸಾಧಿಸಿದೆ. ಕಾಂಗ್ರೆಸ್ ಅಭ್ಯರ್ಥಿ ಸೆಲಿನಾ ಕರ್ಕಡಾಗೆ ಮುಖಭಂಗವಾಗಿದೆ. ಮತಎಣಿಕೆ ಕೇದ್ರದಿಂದ ಹೊರ ಬರುತ್ತಿದ್ದಂತೆ ಕಾರ್ಯಕರ್ತರು ಮೋದಿ ಮೋದಿ ಎಂದು ಎಂದು ಕೂಗಿದ್ದಾರೆ. ಸೆಲಿನಾ ಕಿವಿ ಮುಚ್ಚಿಕೊಂಡು ಏಕಾಂಗಿಯಾಗಿ ಹೊರ ಹೋಗಿದ್ದಾರೆ.
ಮಂಗಳೂರಿನಲ್ಲೂ ಬಿಜೆಪಿ ಹವಾ
ಒಟ್ಟು 89 ವಾರ್ಡ್‌ಗಳಲ್ಲಿ ಬಿಜೆಪಿ 42, ಕಾಂಗ್ರೆಸ್ಗೆ 30, ಎಸ್ಡಿಪಿಐ 11, ಜೆಡಿಎಸ್- 4, ಪಕ್ಷೇತರ 2 ಸ್ಥಾನಗಳನ್ನು ಪಡೆದಿದೆ. ದ.ಕನ್ನಡದ ನಗರಸಭೆ, ಪುರಸಭೆಗಳಲ್ಲಿ ಬಿಜೆಪಿಯೇ ಬಾಸ್ ಆಗಿ ಹೊರ ಹೊಮ್ಮಿದೆ.
ಸತತ 3 ನೇ ಬಾರಿಗೆ ದಂಪತಿಗಳ ಆಯ್ಕೆ
ಬೆಳಗಾವಿಯ ಖಾನಾಪುರ ಪಟ್ಟಣ ಪಂಚಾಯತಿಯಲ್ಲಿ ಸತತ ಮೂರನೇ ಬಾರಿಗೆ ದಂಪತಿಗಳು ಆಯ್ಕೆಯಾಗಿದ್ದಾರೆ. ವಾರ್ಡ್ 14 ರಿಂದ ಸಿದ್ದೋಜಿ ಗಾವಡೆ ಹಾಗೂ ಪತ್ನಿ ವಾರ್ಡ್ ನಂ 5 ರಿಂದ ಪತ್ನಿ ಶೋಭಾ ಗಾವಡೆ ಆಯ್ಕೆಯಾಗಿದ್ದಾರೆ. ಇವರಿಬ್ಬರು ಪಕ್ಷೇತರರಾಗಿ ಸ್ಪರ್ಧಿಸಿದ್ದರು.
ಅಪ್ಪ-ಮಗನ ಗೆಲುವು
ಖಾನಾಪುರ ಪಟ್ಟಣದ ವಾರ್ಡ್ ನಂ 12 ರಿಂದ ತಂದೆ ರಫಿಕ್ , ವಾರ್ಡ್ ನಂ 16 ರಿಂದ ಮಗ ಮಜರ್ ಆಯ್ಕೆಯಾಗಿದ್ದಾರೆ. ಇವರು ಪಕ್ಷೇತರರಾಗಿ ಸ್ಪರ್ಧಿಸಿದ್ದರು.
ಚಿಕ್ಕೋಡಿ ಪುರಸಭೆಯಲ್ಲಿ ತಾಯಿ ಮಗ ಗೆಲುವು
ವಾರ್ಡ್ ನಂ 15 ರಿಂದ ಸಾಬೀರ್ ಜಮಾದಾರ್ ವಾರ್ಡ್ ನಂ 14 ರಿಂದ ತಾಯಿ ನೂರ್ ಜಹಾನ್ ಪಕ್ಷೇತರರಾಗಿ ಗೆಲುವು ಸಾಧಿಸಿದ್ದಾರೆ.
ಒಂದೇ ಒಂದು ವೋಟ್ ನಿಂದ ಗೆದ್ದವರು ಸೋತವರು
ಕುಡುತಿನಿ ಪಟ್ಟಣ ಪಂಚಾಯತ್ ನ 5ನೇ ವಾರ್ಡ್ ನಲ್ಲಿ ಬಿಜೆಪಿಯ ಕೆ.ಎಂ ಹಾಲಪ್ಪ ಗೆಲುವು ಸಾಧಿಸಿದ್ದಾರೆ. ಬಿಜೆಪಿಯ ಹಾಲಪ್ಪ 281 ಮತ ಪಡೆದರೆ ಕಾಂಗ್ರೆಸ್ನ ಬಿ.ಸ್ವಾಮಿಗೆ 280 ಮತ ಪಡೆದಿದ್ದಾರೆ.
ಬೀದರ್‌ನ ಹಳ್ಳಿಖೇಡ ಪುರಸಭೆಯಲ್ಲಿ ವಾರ್ಡ್ ನಂ 21 ರಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ. ಕಾಂಗೆಸ್ನ ಹುರ್ಮತ್ ಬೇಗಂ 121 ಮತ ಪಡೆದರೆ ಬಿಜೆಪಿಯ ವಿಜಯಲಕ್ಷ್ಮಿ ನೆಹರುಗೆ 120 ಮತ ಪಡೆದಿದ್ದಾರೆ.
ಬಾಗಲಕೋಟೆ ನಗರಸಭೆಯಲ್ಲಿ ಬಿಜೆಪಿ ಮೇಲುಗೈ
ಬಾಗಲಕೋಟೆಯಲ್ಲಿ ಸಿದ್ದರಾಮಯ್ಯ ಇದ್ದರೂ, ಮ್ಯಾಜಿಕ್ ಇಲ್ಲ. ಸಿದ್ದರಾಮಯ್ಯ ಕ್ಷೇತ್ರದ ಜಿಲ್ಲೆಯಲ್ಲೇ ಕಾಂಗ್ರೆಸ್ ತೀವ್ರ ಹಿನ್ನಡೆ ಅನುಭವಿಸಿದೆ. ಬಾಗಲಕೋಟೆ ನಗರಸಭೆಯ 18 ವಾರ್ಡ್‌ಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಕೇವಲ 4 ರಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ.
ಹೊಳೆನರಸೀಪುರ ಪುರಸಭೆಯಲ್ಲಿ ಜೆಡಿಎಸ್ ಹವಾ
ಎಲ್ಲರನ್ನೂ ಗುಡಿಸಿ ಹಾಕಿದ ಜೆಡಿಎಸ್ ಜಯದ ಮಾಲೆಯನ್ನು ತನ್ನ ಕೊರಳಿಗೆ ಹಾಕಿಕೊಂಡಿದೆ. ಪುರಸಭೆಯಲ್ಲಿ 23ಕ್ಕೆ 23 ವಾರ್ಡ್ಗಳಲ್ಲೂ ಜೆಡಿಎಸ್ ಗೆದ್ದಿದೆ. ಹೊಳೆನರಸೀಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಸಂಪೂರ್ಣ ನಾಮಾವಶೇಷ ಹೊಂದಿದೆ.