ಉತ್ತರ ಕರ್ನಾಟಕದಲ್ಲಿ ಕಂಡು ಕೇಳರಿಯದ ಭೀಕರ ಪ್ರವಾಹ| ಹೊಟ್ಟೆಗಿಷ್ಟು ಗಂಜಿ, ಸೂರಿಗಾಗಿ ಗೇಣುದ್ದ ನೆಲ ಬೇಡುತ್ತಿರುವ ನಿರಾಶ್ರಿತರು| 45 ವರ್ಷದಲ್ಲೇ ಭೀಕರ ಪ್ರವಾಹಕ್ಕೆ ತುತ್ತದ ರಾಜ್ಯದ ಉತ್ತರ ಭಾಗ| ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ಕರ್ತವ್ಯನಿರತ ಸುವರ್ಣನ್ಯೂಸ್| ನೆರೆ ಸಂತ್ರಸ್ತರ ನೆರವಿಗೆ ದೌಡಾಯಿಸಿದ ನಿಮ್ಮ ಸುವರ್ಣನ್ಯೂಸ್| ಪರಿಹಾರ ಸಾಮಗ್ರಿ ಕಳುಹಿಸಿ ನೆರೆ ಸಂತ್ರಸ್ತರಿಗೆ ಹೆಲು ಕೊಟ್ಟ ಸುವರ್ಣನ್ಯೂಸ್ ತಂಡ| 'ಉತ್ತರ'ದೊಂದಿಗೆ ಕರುನಾಡು' ಅಡಿಬರಹದಡಿ ನೆರೆ ಸಂತ್ರಸ್ತರ ಪರ ಧ್ವನಿ ಎತ್ತಿದ ಸುವರ್ಣನ್ಯೂಸ್|
ಬೆಂಗಳೂರು(ಆ.10): ಭೀಕರ ಮಳೆ, ಕಂಡು ಕೇಳರಿಯದ ಪ್ರವಾಹ. ಎತ್ತ ಕಣ್ಣು ಹಾಯಿಸಿದರೂ ಮಣ್ಣಿನ ಬಣ್ಣದ ನೀರಿನ ಬೋರ್ಗರೆತ. ಪ್ರವಾಹದ ಹೊಡೆತಕ್ಕೆ ಸಿಕ್ಕು ಕೊಚ್ಚಿಕೊಂಡು ಹೋದ ಮನೆ ಮಠಗಳು, ಎತ್ತ ನೋಡಿದರೂ ನಿರಾಶ್ರಿತರಾಗಿ ಕಣ್ಣೀರಿಡುತ್ತಿರುವ ಜನರ ಹಿಂಡು.
ಇದು ಕರುನಾಡಿನ ಉತ್ತರ ಭಾಗದ ಸದ್ಯದ ಪರಿಸ್ಥಿತಿ. ಇಷ್ಟು ದಿನ ಮಳೆ ಇಲ್ಲ ಎನ್ನುತ್ತಿದ್ದ ಜನ ಇದೀಗ ನೆಲೆ ಇಲ್ಲ ಎಂದು ಬೊಬ್ಬಿಡುತ್ತಿದ್ದಾರೆ. ಹೊಟ್ಟೆಗಿಷ್ಟು ಗಂಜಿ, ಮಳೆಯಿಂದ ಮೈ ರಕ್ಷಿಸಿಕೊಳ್ಳಲು ಗೇಣುದ್ದ ಸೂರನ್ನೇ ಕೇಳುತ್ತಿರುವ ಜನರನ್ನು ಕಂಡು ಮರುಗುತ್ತಿರುವ ಜೀವಗಳದೆಷ್ಟೋ?.
ಹೌದು, ನಮ್ಮ ಕರ್ನಾಟಕ ಭೀಕರ ಪ್ರವಾಹಕ್ಕೆ ತುತ್ತಾಗಿದೆ. ಅದರಲ್ಲೂ ರಾಜ್ಯದ ಉತ್ತರ ಭಾಗ ಪ್ರವಾಹದಿಂದ ತತ್ತರಿಸಿ ಹೋಗಿದ್ದು, ಲಕ್ಷಾಂತರ ಜನರ ಬದುಕು ಸಂಕಷ್ಟಕ್ಕೆ ಸಿಲಿಕಿದೆ.
ಇಂತಹ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಸರ್ಕಾರ ಹಾಗೂ ಸಮಾಜದ ನಡುವಿನ ಕೊಂಡಿಯಾಗಿ, ನೆರವಿಗಾಗಿ ಗೋಳಿಡುತ್ತಿರುವ ಜನರ ಧ್ವನಿಯಾಗಿ ರಾಜ್ಯದ ಪತ್ರಿಕೋದ್ಯಮ ಕ್ಷೇತ್ರ ಕರ್ತವ್ಯನಿರತವಾಗಿದೆ. ಅದರಲ್ಲೂ ದೃಶ್ಯ ಮಾಧ್ಯಮಗಳ ವರದಿಗಾರರು ತಮ್ಮ ಜೀವ ಪಣಕ್ಕಿಟ್ಟು ಪರಿಸ್ಥಿತಿಯ ಭೀಕರತೆಯನ್ನು ಜನತೆಗೆ ಹಾಗೂ ಸರ್ಕಾರಕ್ಕೆ ಮುಟ್ಟಿಸುವಲ್ಲಿ ನಿರತರಾಗಿದ್ದಾರೆ.
ರಾಜ್ಯ ಇಂತಹ ಭೀಕರ ಪ್ರಕೃತಿ ವಿಕೋಪಕ್ಕೆ ಬಲಿಯಾದಾಗ, ಜನರ ಸಂಕಷ್ಟಕ್ಕೆ ಮರುಗುವ ರಾಜ್ಯದ ಪ್ರಮುಖ ಸುದ್ದಿವಾಹಿನಿಗಳ ಪೈಕಿ ನಿಮ್ಮ ಸುವರ್ಣನ್ಯೂಸ್'ಗೆ ಮೊದಲ ಸ್ಥಾನ. ಈ ಹಿಂದೆ ಕೊಡಗು ಪ್ರವಾಹದಲ್ಲಿ ನೆರೆ ಸಂತ್ರಸ್ತರಿಗಾಗಿ ಕೇವಲ ಸುದ್ದಿ ಪ್ರಸಾರವನ್ನಷ್ಟೇ ಮಾಡದೇ, ಪರಿಹಾರ ಸಾಮಗ್ರಿಗಳನ್ನೂ ಕಳುಹಿಸಿದ್ದ ನಿಮ್ಮ ಸುವರ್ಣನ್ಯೂಸ್ ರಾಜ್ಯದ ಜನತೆಯ ಪ್ರೀತಿಗೆ ಪಾತ್ರವಾಗಿದ್ದು ನಿಮಗೆಲ್ಲಾ ಗೊತ್ತೇ ಇದೆ.
ಅದರಂತೆ ಇದೀಗ ನಿಮ್ಮ ಸುವರ್ಣನ್ಯೂಸ್ 'ಉತ್ತರ'ದೊಂದಿಗೆ ಕರುನಾಡು' ಅಡಿಬರಹದಡಿ ಉತ್ತರ ಕರ್ನಾಟಕದ ಭೀಕರ ಪ್ರವಾಹವನ್ನು ಎದುರಿಸಲು ಸರ್ವಸನ್ನದ್ಧವಾಗಿದೆ.
ನೆರೆ ಸಂತ್ರಸ್ತರಿಗಾಗಿ ಪರಿಹಾರ ಸಾಮಗ್ರಿಗಳನ್ನು ವಿತರಿಸಲು ಹಗಲಿರುಳು ಶ್ರಮಿಸುತ್ತಿರುವ ಸುವರ್ಣ ತಂಡಕ್ಕೆ, ಕನ್ನಡಪ್ರಭ ಮತ್ತು ಸುವರ್ಣನ್ಯೂಸ್ ಪ್ರಧಾನ ಸಂಪಾದಕ ರವಿ ಹೆಗಡೆ ಹಾಗೂ ಏಶಿಯಾನೆಟ್ ಮಿಡಿಯಾ ಸಂಸ್ಥೆಯ ಕಾರ್ಯನಿರ್ವಾಹಕ ಅಧಿಕಾರಿ ಅಭಿನವ್ ಖರೆ ಸ್ಪೂರ್ತಿಯ ಸೆಲೆಯಾಗಿ ನಿಂತಿದ್ದಾರೆ.
ಕಳೆದ ಜೂ.01ರಿಂದ ಆ.08ರ ಅವಧಿಯಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ 369 ಮಿ.ಮೀ ಮಳೆಯಾಗಿದೆ. ಈ ಮಳೆಗಾಲದ ಅವಧಿಯಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ 804 ಮಿ.ಮೀ ಮಳೆಯಾಗುವ ಸಂಭವ ಹೆಚ್ಚಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಅದರಲ್ಲೂ ಮಹಾರಾಷ್ಟ್ರದಲ್ಲಿ ಭೀಕರ ಮಳೆಯಾಗುತ್ತಿರುವ ಪರಿಣಾಮ, ಬಹುತೇಕ ಡ್ಯಾಂಗಳ ಗೇಟ್‌ನ್ನು ತೆರೆಯಲಾಗಿದೆ. ಇದು ಬೆಳಗಾವಿ ಜಿಲ್ಲೆಗೆ ಭಾರೀ ಪೆಟ್ಟು ನೀಡಿದ್ದು, ಜಿಲ್ಲೆಯ ಬಹುತೇಕ ಎಲ್ಲಾ ತಾಲೂಕುಗಳು ಮುಳುಗಡೆಯಾಗಿವೆ. ಬೆಳಗಾವಿಯೊಂದರಿಂದಲೇ ಇದುವರೆಗೂ ಸುಮಾರು 40,000 ಜನರನ್ನು ಸ್ಥಳಾಂತರಿಸಿರುವುದು ಪರಿಸ್ಥಿತಿಯ ಭೀಕರತೆಗೆ ಸಾಕ್ಷಿ. ಜಿಲ್ಲೆಯಾದ್ಯಂತ ಸುಮಾರು 270 ಪರಿಹಾರ ಕೆಂದ್ರಗಳನ್ನು ಸ್ಥಾಪಿಸಲಾಗಿದೆ.
ಕಳೆದ 45 ವರ್ಷದಲ್ಲೇ ಉತ್ತರ ಕರ್ನಾಟಕ ಭಾಗ ಭೀಕರ ಪ್ರವಾಹ ಪರಿಸ್ಥಿತಿಗೆ ತುತ್ತಾಗಿದ್ದು, ಈ ಭಾಗದ 17 ಜಿಲ್ಲೆಗಳ 80 ತಾಲೂಕುಗಳು ಪ್ರವಾಹಕ್ಕೆ ತತ್ತರಿಸಿ ಹೋಗಿದೆ. ಸರ್ಕಾರದ ಮಾಹಿತಿ ಪ್ರಕಾರ ಇದುವರೆಗೂ 24 ಜನ ಪ್ರವಾಹದಲ್ಲಿ ಸಿಕ್ಕು ಪ್ರಾಣ ಕಳೆದುಕೊಂಡಿದ್ದು, ಇದುವರೆಗೂ 2,35,105 ಜನರನ್ನು ಸ್ಥಳಾಂತರಿಸಲಾಗಿದೆ. ಅಲ್ಲದೇ 1,57,998 ಜನರು ಈಗಾಗಲೇ ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆದಿದ್ದಾರೆ.
ಪ್ರವಾಹಕ್ಕೆ ತುತ್ತಾದ ಜಿಲ್ಲೆಗಳು:
ಬೆಳಗಾವಿ
ಬಾಗಲಕೋಟೆ
ಧಾರವಾಡ
ಗದಗ
ರಾಯಚೂರು
ಹಾವೇರಿ
ಯಾದಗಿರಿ
ವಿಜಯಪುರ
ಕಲಬುರುಗಿ
ಚಿಕ್ಕಮಗಳೂರು
ದಕ್ಷಿಣ ಕನ್ನಡ
ಹಾಸನ
ಕೊಡಗು
ಮೈಸೂರು
ಶಿವಮೊಗ್ಗ
ಉಡುಪಿ
ಉತ್ತರ ಕನ್ನಡ
ಒಟ್ಟು 3,22,448 ಎಕರೆ ಕೃಷಿ ಭೂಮಿ ಪ್ರವಾಹದಲ್ಲಿ ಮುಳಗಿ ಹೋಗಿದ್ದು, ರಕ್ಷಣಾ ಕಾರ್ಯದಲ್ಲಿ ಕೇಂದ್ರದ NDRF, ರಾಜ್ಯದ SDRF, ಭೂಸೇನೆ, ನೌಕಾಪಡೆ ಸೇರಿದಂತೆ ಅಗ್ನಿಶಾಮಕ ದಳ ಕೂಡ ಹಗಲಿರುಳು ಶ್ರಮಿಸುತ್ತಿದೆ.
ಈ ಕುರಿತು ಮಾತನಾಡಿರುವ ಕನ್ನಡ ಏಶಿಯಾನೆಟ್'ನ್ಯೂಸ್.ಕಾಂ ಪ್ರಧಾನ ಸಂಪಾದಕ ಎಸ್.ಕೆ. ಶಾಮಸುಂದರ್, ಪ್ರಕೃತಿ ವಿಕೋಪಕ್ಕೆ ತುತ್ತಾಗಿರುವ ಉತ್ತರ ಕರ್ನಾಟಕದ ಜನತೆಯ ನೆರವಿಗೆ ಸಮಾಜದ ವಿವಿಧ ಕ್ಷೇತ್ರಗಳು ಮುಂದೆ ಬಂದಿರುವುದು ಕರುನಾಡಿನ ಒಗ್ಗಟ್ಟನ್ನು ಮತ್ತೊಮ್ಮೆ ಪ್ರದರ್ಶಿಸಿದೆ ಎಂದು ಹೇಳಿದರು. ಪರಿಸ್ಥಿತಿಯ ಭೀಕರತೆಯನ್ನು ಕಂಡು ಭಾವುಕರಾದ ಶಾಮಸುಂದರ್, ರಾಜ್ಯದಲ್ಲಿ ಮಳೆ, ಬೆಳೆ ಆಗಲಿ ಆದರೆ ರಾಜ್ಯ ಎಂದಿಗೂ ಪ್ರವಾಹ ಅಥವಾ ಬರದ ಪರಿಸ್ಥಿತಿಗೆ ತುತ್ತಾಗದಿರಲಿ ಎಂದು ದೇವರಲ್ಲಿ ಪ್ರಾರ್ಥಿಸಿದರು.