ಸ್ವಚ್ಛ ರೈಲು ನಿಲ್ದಾಣ: ಮೊದಲ ಮೂರು ಸ್ಥಾನ ರಾಜಸ್ಥಾನ ಪಾಲು| ಟಾಪ್ ಟೆನ್‌ನಲ್ಲಿ ಕರ್ನಾಟಕದ ಒಂದೂ ನಿಲ್ದಾಣ ಇಲ್ಲ| ದೆಹಲಿ ಸಾಧನೆ ಕೂಡ ಕಳಪೆ, ದಕ್ಷಿಣ ರೈಲ್ವೆ ಲಾಸ್ಟ್ ಕ್ಲಾಸ್| ಸ್ವಚ್ಛತೆ ಹಾಗೂ ಪರಿಸರ ಸ್ನೇಹಿ ಆಧಾರದ ಮೇಲೆ ರಾರಯಕಿಂಗ್| ರೈಲ್ವೆ ಸಚಿವಾಲಯದ ರಿಪೋರ್ಟ್
ನವದೆಹಲಿ[ಅ.03]: 150ನೇ ಗಾಂಧಿ ಜಯಂತಿಯ ಅಂಗವಾಗಿ ದೇಶದ ಸ್ವಚ್ಛ ರೈಲು ನಿಲ್ದಾಣಗಳ ಪಟ್ಟಿಯನ್ನು ಬುಧವಾರ ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯೆಲ್ ಬಿಡುಗಡೆ ಮಾಡಿದ್ದು, ರಾಜಸ್ಥಾನ ಮೊದಲ ಮೂರು ಸ್ಥಾನಗಳನ್ನು ಬಾಚಿಕೊಂಡಿದೆ. ‘ಸ್ವಚ್ಛ ರೈಲು ಸ್ವಚ್ಛ ಭಾರತ’ ಯೋಜನೆಯಡಿ ದೇಶದ 720 ನಿಲ್ದಾಣಗಳಲ್ಲಿ ಸಮೀಕ್ಷೆ ನಡೆಸಲಾಗಿದ್ದು, ಈ ಪೈಕಿ ರಾಜಸ್ಥಾನದ ಜೈಪುರ, ಜೋಧಪುರ ಹಾಗೂ ದುರ್ಗಾಪುರ ನಿಲ್ದಾಣಗಳು ಮೊದಲ ಮೂರು ಸ್ಥಾನಗಳಗಳನ್ನು ಪಡೆದುಕೊಂಡಿದೆ. ಮೊದಲ ಹತ್ತರಲ್ಲಿ ಕರ್ನಾಟಕ ಯಾವುದೇ ನಿಲ್ದಾಣಗಳು ಸ್ಥಾನ ಪಡೆಯಲು ವಿಫಲವಾಗಿದೆ.
ಖಾಸಗಿ ಕಂಪನಿಗಳ ಮೂಲಕ ರೈಲ್ವೆ ಇಲಾಖೆ ಈ ಸಮೀಕ್ಷೆ ನಡೆಸಿದ್ದು, 109 ಸಬ್ ಅರ್ಬನ್ ನಿಲ್ದಾಣಗಳ ಪೈಕಿ ಅಂಧೇರಿ, ವಿರಾರ್ ಹಾಗೂ ನೈಗೌನ್ ಮೊದಲ ಮೂರು ಸ್ಥಾನಗಳನ್ನು ಪಡೆದಿದೆ. ಸ್ವಚ್ಛ ವಿಭಾಗಗಳ ಪೈಕಿ ವಾಯುವ್ಯ ರೈಲ್ವೆ ಮೊದಲ ಸ್ಥಾನ ಪಡೆದಿದ್ದು, ಆಗ್ನೇಯ ಮಧ್ಯ ರೈಲ್ವೆ ಹಾಗೂ ದಕ್ಷಿಣ ಮಧ್ಯ ರೈಲ್ವೆ ಕ್ರಮವಾಗಿ ಎರಡನೇ ಹಾಗೂ ಮೂರನೇ ಸ್ಥಾನ ಪಡೆದುಕೊಂಡಿದೆ.
ಸಮೀಕ್ಷೆಯಲ್ಲಿ ಸಬ್ ಅರ್ಬನೇತರ ನಿಲ್ದಾಣಗಳ ಪೈಕಿ ಶೇ.2 ರಷ್ಟುನಿಲ್ದಾಣಗಳು ನಿಗದಿತ ಅಂಕಗಳಲ್ಲಿ ಶೇ. 90ರಷ್ಟುಅಂಕಗಳಿಸಿದ್ದು, ಶೇ.5 ರಷ್ಟುನಿಲ್ದಾಣಗಳು ಶೆ.50 ಕ್ಕಿಂತ ಕಡಿಮೆ ಅಂಕಗಳನ್ನು ಗಳಿಸಿವೆ. ಸಬ್ ಅರ್ಬನ್ ನಿಲ್ದಾಣಗಳ ಪೈಕಿ ಶೇ.4 ರಷ್ಟುನಿಲ್ದಾಣಗಳಿ ಶೇ. 70-80 ರಷ್ಟುಹಾಗೂ ಶೇ.14 ರಷ್ಟುನಿಲ್ದಾಣಗಳು ಶೇ. 50ರಷ್ಟುಅಂಕ ಗಳಿಸಿದೆ.
720 ನಿಲ್ದಾಣಗಳ ಪೈಕಿ ಶೇ. 25 ರಷ್ಟುನಿಲ್ದಾಣಗಳು ನೀರಿನ ಸಂರಕ್ಷಣೆ, ಶೇ.18 ರಷ್ಟುಸ್ಟೇಷನ್‌ಗಳು ಮಳೆ ನೀರು ಕೊಯ್ಲು ಹಾಗೂ ಶೇ.9ರಷ್ಟುನಿಲ್ದಾಣಗಳು ನೀರಿನ ಮರುಬಳಕೆಗೆ ಕ್ರಮ ಕೈಗೊಂಡಿವೆ. ಕೇವಲ ಶೇ.2 ರಷ್ಟುಮಾತ್ರ ನಿಲ್ದಾಣಗಳು ಹಸಿರು ಸರ್ಟಿಫಿಕೇಟ್ ಪಡೆದುಕೊಂಡಿದ್ದು, ಶೇ.29ರಷ್ಟುನಿಲ್ದಾಣಗಳು ಸೋಲಾರ್ ಪ್ಯಾನೆಲ್‌ಗಳ ಮೂಲಕ ವಿದ್ಯುತ್ ತಯಾರಿಸುತ್ತಿವೆ. ಅಲ್ಲದೇ ಶೇ. 66 ನಿಲ್ದಾಣಗಳು ಎಲ್‌ಇಡಿ ಬಲ್ಬ್‌ಗಳನ್ನು ಬಳಸುತ್ತಿದೆ ಎಂದು ಸಮೀಕ್ಷೆ ತಿಳಿಸಿದೆ.
ದಕ್ಷಿಣ ರೈಲ್ವೆಯ ಪೆರುಂಗಲತ್ತೂರ್, ಗುಡುವಾಂಚಾರಿ, ಸಿಂಗಪೆರುಮಲ್‌ಕೋಯಿಲ್ ಹಾಗೂ ಒಟ್ಟಪ್ಪಾಲಂ ಕೊನೆಯ ನಾಲ್ಕು ಸ್ಥಾನದಲ್ಲಿವೆ. 2016ರಿಂದ ದೇಶ ಪ್ರಮುಖ 407 ರೈಲು ನಿಲ್ದಾಣಗಳಲ್ಲಿ ನಡೆಸಲಾಗುತ್ತಿದ್ದ ಈ ಸಮೀಕ್ಷೆ ಈ ಬಾರಿ 720 ನಿಲ್ದಾಣ ಹಾಗೂ ಇದೇ ಮೊದಲ ಬಾರಿಗೆ ಸಬ್ ಅರ್ಬನ್ ರೈಲು ನಿಲ್ದಾಣಗಳಿಗೂ ವಿಸ್ತರಿಸಲಾಗಿದೆ.