ಹೈಪರ್‌ಸಾನಿಕ್ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿ, ಯಶಸ್ವಿಯಾಗಿ ಪರೀಕ್ಷೆಗೆ ಒಳಪಡಿಸಿದ ವಿಶ್ವದ 4ನೇ ದೇಶ ಎಂಬ ಹಿರಿಮೆಗೆ ಭಾರತ ಪಾತ್ರವಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ
ನವದೆಹಲಿ: ಶಬ್ದಕ್ಕಿಂತ 6 ಪಟ್ಟು ವೇಗವಾಗಿ ನುಗ್ಗಿ ಶತ್ರುವನ್ನು ಛಿದ್ರಗೊಳಿಸುವ ಹೈಪರ್‌ಸಾನಿಕ್ ಕ್ಷಿಪಣಿ ಅಭಿವೃದ್ಧಿ ನಿಟ್ಟಿನಲ್ಲಿ ದಾಪುಗಾಲು ಇಟ್ಟಿರುವ ಭಾರತ, ಅಂತಹ ಕ್ಷಿಪಣಿಗಳನ್ನು ಹೊತ್ತೊಯ್ಯುವ ನೌಕೆಯೊಂದನ್ನು ಸೋಮವಾರ ಯಶಸ್ವಿಯಾಗಿ ಪರೀಕ್ಷೆಗೆ ಒಳಪಡಿಸಿದೆ. ತನ್ಮೂಲಕ ಹೈಪರ್‌ಸಾನಿಕ್ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿ, ಯಶಸ್ವಿಯಾಗಿ ಪರೀಕ್ಷೆಗೆ ಒಳಪಡಿಸಿದ ವಿಶ್ವದ 4ನೇ ದೇಶ ಎಂಬ ಹಿರಿಮೆಗೆ ಪಾತ್ರವಾಗಿದೆ. ಸದ್ಯ ಅಮೆರಿಕ, ರಷ್ಯಾ ಹಾಗೂ ಚೀನಾ ಮಾತ್ರ ಇಂತಹ ತಂತ್ರಜ್ಞಾನವನ್ನು ಸಿದ್ಧಿಸಿಕೊಂಡಿವೆ.
ವಿಶ್ವದ ಹೊಸ ಬ್ರಹ್ಮಾಸ್ತ್ರ ರಷ್ಯಾ ಸೇನೆಗೆ ಸೇರ್ಪಡೆ
ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಅಭಿವೃದ್ಧಿಪಡಿಸಿರುವ ‘ಹೈಪರ್‌ಸಾನಿಕ್ ಟೆಸ್ಟ್ ಡೆಮನ್‌ಸ್ಪ್ರೇಟರ್ ವೆಹಿಕಲ್’ (ಎಚ್‌ಎಸ್‌ಟಿಡಿವಿ) ಅನ್ನು ಒಡಿಶಾದ ಬಾಲಸೋರ್‌ನಲ್ಲಿರುವ ಎಪಿಜೆ ಅಬ್ದುಲ್ ಕಲಾಂ ಟೆಸ್ಟಿಂಗ್ ರೇಂಜ್‌ನಲ್ಲಿ ಸೋಮವಾರ ಬೆಳಗ್ಗೆ 11.03ಕ್ಕೆ ಪರೀಕ್ಷೆಗೆ ಒಳಪಡಿಸಲಾಯಿತು. ಅಗ್ನಿ ಕ್ಷಿಪಣಿಯ ಬೂಸ್ಟರ್ ಈ ನೌಕೆಯನ್ನು ಒಯ್ದು 30 ಕಿ.ಮೀ. ಎತ್ತರಕ್ಕೆ ತಲುಪಿಸಿ ಪ್ರತ್ಯೇಕಗೊಂಡಿತು. ಬಳಿಕ ವಾತಾವರಣದಲ್ಲಿನ ಆಮ್ಲಜನಕವನ್ನು ಬಳಸಿಕೊಂಡು ಹೈಪರ್‌ಸಾನಿಕ್ ನೌಕೆಯಲ್ಲಿನ ಸ್ಕ್ರಾಮ್‌ಜೆಟ್ ಎಂಜಿನ್ ಚಾಲೂ ಆಯಿತು. 20 ಸೆಕೆಂಡ್‌ಗಳ ಕಾಲ ಅದು ಚಾಲನೆಯಲ್ಲಿತ್ತು. ಮ್ಯಾಕ್ 6 (ಶಬ್ದಕ್ಕಿಂತ 6 ಪಟ್ಟು ವೇಗ)ಗೆ ತಲುಪಿತು. ಈ ವೇಳೆ ವಾಹಕವು ಸೆಕೆಂಡ್‌ಗೆ 2 ಕಿ.ಮೀ ವೇಗದಲ್ಲಿ ಚಲಿಸಿತು. 2500 ಡಿಗ್ರಿ ಸೆಲ್ಸಿಯಸ್‌ನಷ್ಟುದಹನ ತಾಪಮಾನ ನಿರ್ವಹಣೆ ಸೇರಿದಂತೆ ಎಲ್ಲ ಅಂಶಗಳಲ್ಲೂ ನೌಕೆ ತೇರ್ಗಡೆ ಹೊಂದಿತು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕಳೆದ ವರ್ಷ ಇಂಥದ್ದೇ ಪ್ರಯೋಗ ನಡೆಸಲಾಗಿತ್ತಾದರೂ, ಆಗ ಅದು ನಿರೀಕ್ಷಿತ ಫಲ ಕೊಡುವಲ್ಲಿ ವಿಫಲವಾಗಿತ್ತು. ಆದರೆ ಇದೀಗ ಎಲ್ಲವೂ ಯೋಜಿತ ರೀತಿಯಲ್ಲೇ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಾಮಾನ್ಯ ಕ್ಷಿಪಣಿಗಳಲ್ಲಿ ರಾರಯಮ್‌ಜೆಟ್ ಎಂಜಿನ್‌ಗಳನ್ನು ಬಳಸಲಾಗುತ್ತದೆ. ಇವು ಮ್ಯಾಕ್ 3 ವೇಗವನ್ನು ಮಾತ್ರವೇ ಒದಗಿಸಬಲ್ಲದಾಗಿರುತ್ತದೆ. ಆದರೆ ಎಚ್‌ಎಸ್‌ಟಿಡಿವಿ ಸ್ಕಾ್ಯಮ್‌ಜೆಟ್ ಎಂಜಿನ್ ಅನ್ನು ಬಳಸಿಕೊಂಡು, ಕ್ಷಿಪಣಿಗಳಿಗೆ ಮ್ಯಾಕ್ 6 ವೇಗವನ್ನು ನೀಡುತ್ತವೆ.
ಡಿಆರ್‌ಡಿಒ ಪ್ರಯೋಗ ಯಶಸ್ವಿಯಾದ ಹಿನ್ನೆಲೆಯಲ್ಲಿ ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರು ವಿಜ್ಞಾನಿಗಳನ್ನು ಅಭಿನಂದಿಸಿದ್ದಾರೆ. ಪ್ರಧಾನಮಂತ್ರಿಗಳ ಆತ್ಮನಿರ್ಭರ ಭಾರತ ಕನಸನ್ನು ಸಾಕಾರಗೊಳಿಸುವನಿಟ್ಟಿನಲ್ಲಿ ಇದೊಂದು ಐತಿಹಾಸಿಕ ಹೆಜ್ಜೆ. ವಿಜ್ಞಾನಿಗಳ ಬಗ್ಗೆ ಭಾರತಕ್ಕೆ ಹೆಮ್ಮೆ ಇದೆ ಎಂದು ತಿಳಿಸಿದ್ದಾರೆ.