ಇದೇ ವರ್ಷದಿಂದ ವಿವಿಗಳಲ್ಲಿ ‘ಸಾಮಾನ್ಯ ವರ್ಗ ಮೀಸಲು’ ಜಾರಿ

By Web DeskFirst Published Jan 16, 2019, 8:47 AM IST
Highlights

ಇದೇ ವರ್ಷ ವಿವಿಗಳಲ್ಲಿ ‘ಸಾಮಾನ್ಯ ವರ್ಗ ಮೀಸಲು’ ಜಾರಿ | ಎಸ್‌ಸಿ, ಎಸ್‌ಟಿ ಕೋಟಾಗೆ ಧಕ್ಕೆ ಆಗದಿರಲು ಶೇ.25ರಷ್ಟುಸೀಟು ಹೆಚ್ಚಳ |  ಮಾನವ ಸಂಪನ್ಮೂಲ ಸಚಿವಾಲಯ ನಿರ್ಧಾರ

ನವದೆಹಲಿ (ಜ. 16): ‘ಆರ್ಥಿಕವಾಗಿ ಹಿಂದುಳಿದ ಸಾಮಾನ್ಯ ವರ್ಗಗಳ ಶೇ.10 ಮೀಸಲು ಸೌಲಭ್ಯ’ವನ್ನು ವಿಶ್ವವಿದ್ಯಾಲಯಗಳು ಹಾಗೂ ಅಧೀನ ಕಾಲೇಜುಗಳಲ್ಲಿ 2019ರ ಶೈಕ್ಷಣಿಕ ವರ್ಷದಲ್ಲೇ ಕೇಂದ್ರ ಸರ್ಕಾರ ಜಾರಿಗೊಳಿಸಲಿದೆ. ಇದರ ಜತೆಗೆ ಉನ್ನತ ಶಿಕ್ಷಣ ಸಂಸ್ಥೆಗಳು ಮತ್ತು ವಿಶ್ವವಿದ್ಯಾಲಯಗಳಲ್ಲಿ ಎಸ್‌ಸಿ-ಎಸ್‌ಟಿ ಕೋಟಾಗೆ ಧಕ್ಕೆ ಆಗದಂತಾಗಲು, ಶೇ.25ರಷ್ಟುಸೀಟುಗಳನ್ನು ಹೆಚ್ಚು ಮಾಡಲು ನಿರ್ಧರಿಸಿದೆ.

ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ, ಯುಜಿಸಿ ಹಾಗೂ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ ಸಭೆಯಲ್ಲಿ ಪಾಲ್ಗೊಂಡ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್‌ ಜಾವಡೇಕರ್‌ ಈ ಕುರಿತು ಮಾಹಿತಿ ನೀಡಿದರು. ದೇಶದೆಲ್ಲೆಡೆ ಇರುವ 40,000 ಕಾಲೇಜುಗಳು ಹಾಗೂ 900 ವಿಶ್ವವಿದ್ಯಾಲಯಗಳಲ್ಲಿ 2019-20ನೇ ಸಾಲಿನ ಶೈಕ್ಷಣಿಕ ವರ್ಷದಲ್ಲೇ ಜಾರಿಗೊಳಿಸಲಾಗುವುದು ಎಂದು ತಿಳಿಸಿದರು.

ಪ್ರಾಧ್ಯಾಪಕರಿಗೆ 7ನೇ ವೇತನ ಆಯೋಗ

ಸರ್ಕಾರಿ ತಾಂತ್ರಿಕ ಶಿಕ್ಷಣ ಸಂಸ್ಥೆಗಳ ಶೈಕ್ಷಣಿಕ ಸಿಬ್ಬಂದಿ ಹಾಗೂ ಮಾನ್ಯತೆ ಪಡೆದ ತಾಂತ್ರಿಕ ಶೈಕ್ಷಣಿಕ ಸಂಸ್ಥೆಗಳ ನೌಕರರೂ ಇನ್ನು 7ನೇ ವೇತನ ಆಯೋಗದ ಲಾಭಗಳನ್ನು ಪಡೆದುಕೊಳ್ಳಲಿದ್ದಾರೆ. ಸರ್ಕಾರದ ಮುಂದಿದ್ದ ಈ ಪ್ರಸ್ತಾವನೆಗೆ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಮಂಗಳವಾರ ಒಪ್ಪಿಗೆ ನೀಡಿದೆ.

ಇದರಿಂದ ಸರ್ಕಾರಕ್ಕೆ 1,241 ಕೋಟಿ ರು. ಹೆಚ್ಚಿನ ಹೊರೆಯಾಗಲಿದ್ದು, 29,264 ಸರ್ಕಾರಿ ಪ್ರಾಧ್ಯಾಪಕರು ಹಾಗೂ ಮಾನ್ಯತೆ ಪಡೆದ ತಾಂತ್ರಿಕ ಶಿಕ್ಷಣ ಸಂಸ್ಥೆಗಳ 3.5 ಲಕ್ಷ ಸಿಬ್ಬಂದಿ ನೇರವಾಗಿ ಇದರ ಪ್ರಯೋಜನ ಪಡೆದುಕೊಳ್ಳಲಿದ್ದಾರೆ ಎಂದು ಸಚಿವ ಪ್ರಕಾಶ್‌ ಜಾವಡೇಕರ್‌ ತಿಳಿಸಿದ್ದಾರೆ.

ಇದರಿಂದ ತಾಂತ್ರಿಕ ಶಿಕ್ಷಣ ಸಂಸ್ಥೆಗಳತ್ತ ಸಿಬ್ಬಂದಿ ಆಕರ್ಷಿತರಾಗಲಿದ್ದಾರೆ. ಅಲ್ಲದೆ, ಶಿಕ್ಷಣದ ಮೌಲ್ಯವೂ ಹೆಚ್ಚಲಿದೆ ಎಂದಿದ್ದಾರೆ.

click me!