ಭಾರೀ ಪ್ರಮಾಣದಲ್ಲಿ ಮಳೆಯಾಗುತ್ತಿದ್ದು ಈ ನಿಟ್ಟಿನಲ್ಲಿ ನಾಲ್ಕು ಜಿಲ್ಲೆಗಳಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಪ್ರವಾಹ ಭೀತಿ ಎದರಾಗಿದೆ.
ಬೆಂಗಳೂರು [ಆ.03]: ಉತ್ತರ ಕರ್ನಾಟಕದ ಕೆಲವೆಡೆ ಮತ್ತು ಮಹಾರಾಷ್ಟ್ರದಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೃಷ್ಣಾ ನದಿ ಅಪಾಯಮಟ್ಟಮೀರಿ ಹರಿಯುತ್ತಿದ್ದು, ಬೆಳಗಾವಿ ಮತ್ತು ಬಾಗಲಕೋಟೆ ಜಿಲ್ಲೆಗಳ ನದಿಪಾತ್ರದ ಗ್ರಾಮಗಳಲ್ಲಿ ಪ್ರವಾಹ ಸ್ಥಿತಿ ನಿರ್ಮಾಣವಾಗಿದೆ. ಉಭಯ ಜಿಲ್ಲೆಗಳಲ್ಲಿ 24ಕ್ಕೂ ಹೆಚ್ಚು ಸೇತುವೆಗಳು ಮುಳುಗಡೆಯಾಗಿದ್ದು, ಸಾವಿರಾರು ಎಕರೆ ಜಮೀನಿಗೆ ನೀರು ನುಗ್ಗಿದೆ. ಮುತ್ತೂರು ಸೇರಿ ಹಲವು ಗ್ರಾಮಗಳು ನಡುಗಡ್ಡೆಯಂತಾಗಿದ್ದು, ಇಲ್ಲಿನ ಗ್ರಾಮಸ್ಥರನ್ನು ಸುರಕ್ಷಿತ ಪ್ರದೇಶಗಳಿಗೆ ರವಾನಿಸಲಾಗಿದೆ.
ಏತನ್ಮಧ್ಯೆ, ಮಹಾರಾಷ್ಟ್ರದ ಕೊಯ್ನಾ ಸೇರಿ ಉಳಿದ ಜಲಾಶಯದಿಂದ ಭಾರೀ ಪ್ರಮಾಣದ ನೀರು ಹೊರಬಿಡಲಾಗುತ್ತಿದ್ದು, ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಇನ್ನೆರಡು ದಿನಗಳಲ್ಲಿ ಬೆಳಗಾವಿ, ಬಾಗಲಕೋಟೆ, ಯಾದಗಿರಿ, ರಾಯಚೂರು ಜಿಲ್ಲೆಗಳ ಕೃಷ್ಣಾ ನದಿ ಪಾತ್ರದ 150ಕ್ಕೂ ಅಧಿಕ ಗ್ರಾಮಗಳು ಪ್ರವಾಹಕ್ಕೆ ತುತ್ತಾಗುವ ಆತಂಕ ಎದುರಾಗಿದೆ. ಈ ಹಿನ್ನೆಲೆಯಲ್ಲಿ ನದಿಪಾತ್ರದ ಗ್ರಾಮಗಳ ಜನರಿಗೆ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಈಗಾಗಲೇ ಸೂಚಿಸಲಾಗಿದ್ದು, ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ (ಎನ್‌ಡಿಆರ್‌ಎಫ್) ಅನ್ನು ಕರೆಸಿಕೊಳ್ಳಲಾಗಿದೆ. ಈಗಾಗಲೇ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಎನ್‌ಆರ್‌ಎಫ್ ತಂಡ ಪರಿಹಾರ ಕಾರ್ಯ ಆರಂಭಿಸಿದೆ.
ಐತಿಹಾಸಿಕ ದೇಗುಲ ಜಲಾವೃತ: ಬೆಳಗಾವಿ ಜಿಲ್ಲೆಯ ರಾಯಬಾಗ, ಚಿಕ್ಕೋಡಿ, ಅಥಣಿ, ಕಾಗವಾಡ ತಾಲೂಕಿನ ಒಟ್ಟು 16 ಹಾಗೂ ಬಾಗಲಕೋಟೆ ಜಿಲ್ಲೆಯ 8 ಸೇತುವೆಗಳು ಮುಳುಗಡೆಯಾಗಿದೆ. ಇನ್ನು ಕಲಬುರಗಿ-ಯಾದಗಿರಿ-ರಾಯಚೂರು ಜಿಲ್ಲೆಗಳ ಸಂಪರ್ಕ ಬೆಸೆಯುವ ರಾಯಚೂರು ಜಿಲ್ಲೆ ಶಹಾಪೂರ ತಾಲೂಕಿನ ಕೋಳೂರು(ಎಂ) ಸೇತುವೆಯಲ್ಲಿ ಶುಕ್ರವಾರ ಸಂಜೆಯಿಂದಲೇ ವಾಹನ ಸಂಚಾರ ಸ್ಥಗಿತಗೊಳಿಸಲಾಗಿದೆ. ಈ ಮಧ್ಯೆ, ಮುಧೋಳ ತಾಲೂಕಿನ ಮಾಚಕನೂರಿನ ಚಾಲುಕ್ಯರ ಕಾಲದ ಐತಿಹಾಸಿಕ ಹೊಳೆ ಬಸವೇಶ್ವರ ದೇವಾಲಯ ಸಂಪೂರ್ಣ ಜಲಾವೃತವಾಗಿದೆ.
ರಾಷ್ಟ್ರೀಯ ವಿಪತ್ತು ತಂಡದ ಆಗಮನ: ಕೃಷ್ಣಾ ನದಿಯಲ್ಲಿ ನೀರಿನ ಮಟ್ಟಹೆಚ್ಚುತ್ತಿರುವುದರಿಂದ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಬಾವನಸೌಂದತ್ತಿ, ಚಿಂಚಲಿ, ಕುಡಚಿ, ಶಿರಗೂರ, ಗುಂಡವಾಡ ಗ್ರಾಮಗಳನ್ನು ನೀರು ಸುತ್ತುವರಿದಿದೆ. ಹೀಗಾಗಿ ಗ್ರಾಮಗಳು ನಡುಗಡ್ಡೆಯಂತಾಗಿದ್ದು, ಹೊರಜಗತ್ತಿನೊಂದಿಗೆ ಸಂಪರ್ಕ ಕಡಿತಗೊಂಡಿದೆ. ತಾಲೂಕಿನ ಕುಡಚಿ ಸೇತುವೆ ಕೂಡ ಮುಳುಗಡೆಯಾಗಿದ್ದು, ಇಲ್ಲೂ ವಾಹನ ಸಂಚಾರ ಸ್ಥಗಿತಗೊಂಡಿದೆ. ಶಿರಗೂರ ಮತ್ತು ಗುಂಡವಾಡ್ ಗ್ರಾಮಗಳಿಗೆ ವೈದ್ಯರ ತಂಡದೊಂದಿಗೆ ರಾಷ್ಟ್ರೀಯ ವಿಪತ್ತು ತಂಡ ಆಗಮಿಸಿದ್ದು, ಪ್ರವಾಹಕ್ಕೆ ಸಿಲುಕಿರುವ ಜನ-ಜಾನುವಾರಗಳನ್ನು ಸುರಕ್ಷಿತ ಸ್ಥಳಕ್ಕೆ ಸಾಗಿಸುವ ಕಾರ್ಯದಲ್ಲಿ ನಿರತವಾಗಿದೆ.
ಮುತ್ತೂರು ಸಂಪೂರ್ಣ ನಡುಗುಡ್ಡೆ: ಕೃಷ್ಣಾ ನದಿ ಉಕ್ಕಿ ಹರಿಯುತ್ತಿರುವುದರಿಂದ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಮುತ್ತೂರು ಗ್ರಾಮ ಸಂಪೂರ್ಣ ನಡುಗಡ್ಡೆಯಾಗಿದೆ. ಹೀಗಾಗಿ ಇಲ್ಲಿನ ತಗ್ಗುಪ್ರದೇಶದಲ್ಲಿ ವಾಸಿಸುತ್ತಿರುವ ಹತ್ತು ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ. ಜತೆಗೆ 35ಕ್ಕೂ ಅಧಿಕ ಜಾನುವಾರುಗಳನ್ನೂ ಸ್ಥಳಾಂತರಿಸಲಾಗಿದೆ.
150 ಗ್ರಾಮಗಳಿಗೆ ನೀರು ನುಗ್ಗುವ ಭೀತಿ: ಮಹಾರಾಷ್ಟ್ರದ (ಕೊಯ್ನಾ, ವರನಾ, ರಾಧಾನದಿ ಡ್ಯಾಂ, ಕನ್ಹೇರಿ, ರಾಜಾಪೂರ ಬ್ಯಾರೇಜ್) ಜಲಾಶಯಗಳಿಂದ ಇದೇ ರೀತಿ ನೀರು ಹರಿಸುವುದು ಮುಂದುವರಿಸಿದರೆ ಬೆಳಗಾವಿಯ ಚಿಕ್ಕೋಡಿ ಉಪ ವಿಭಾಗದ ಚಿಕ್ಕೋಡಿ, ರಾಯಬಾಗ ಹಾಗೂ ಅಥಣಿ ತಾಲೂಕಿನಲ್ಲಿ ಕೃಷ್ಣಾ, ದೂಧಗಂಗಾ, ವೇದಗಂಗಾ ಹಾಗೂ ಪಂಚಗಂಗಾ ನದಿ ತೀರದ ಒಟ್ಟು 37 ಗ್ರಾಮಗಳಿಗೆ ನೀರು ನುಗ್ಗುವ ಸಾಧ್ಯತೆ ಇದೆ. ಅದೇ ರೀತಿ ಬಾಗಲಕೋಟೆಯಲ್ಲಿ ಒಟ್ಟು 73 ಗ್ರಾಮಗಳು ಪ್ರವಾಹಕ್ಕೆ ಒಳಗಾಗುವ ಭೀತಿ ಇದೆ.
ಇದೇವೇಳೆ ನಾರಾಯಣಪುರದ ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ 2.20 ಲಕ್ಷ ಕ್ಯುಸೆಕ್ ನೀರು ಬಿಡುತ್ತಿರುವುದರಿಂದ ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳ ನದಿಪಾತ್ರಗಳ ಗ್ರಾಮಗಳ ಜನರಿಗೆ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಸೂಚಿಸಲಾಗಿದೆ. ಲಿಂಗಸಗೂರು ತಾಲೂಕಿನ ನಡುಗುಡ್ಡೆಗಳ ನಿವಾಸಿಗಳನ್ನು ಈಗಾಗಲೇ ಸ್ಥಳಾಂತರಗೊಳಿಸಲಾಗಿದೆ.