ಗಾಲಿ ಜನಾರ್ದನ ರೆಡ್ಡಿ ಫೋನೂ ಕದ್ದಾಲಿಕೆ?| ಒಂದೇ ವರ್ಷದಲ್ಲಿ ದೋಸ್ತಿ ಸರ್ಕಾರದಿಂದ 380 ಫೋನ್‌ಗಳಿಗೆ ಕಳ್ಳಗಿವಿ: ಸಿಬಿಐ ಪತ್ತೆ| 200 ಅಪರಾಧ ಕೇಸಿಗೆ ಸಂಬಂಧಿಸಿದ್ದು ಮಿಕ್ಕಿದ್ದು ರಾಜಕಾರಣಿಗಳದ್ದಾ? ಎಂಬ ಶಂಕೆ
ಗಿರೀಶ್ ಮಾದೇನಹಳ್ಳಿ
ಬೆಂಗಳೂರು[ಸೆ.14]: ಜೆಡಿಎಸ್- ಕಾಂಗ್ರೆಸ್ ಮೈತ್ರಿ ಸರ್ಕಾರದ ಆಡಳಿತವಿದ್ದಾಗ ಒಂದೇ ವರ್ಷದ ಅವಧಿಯಲ್ಲಿ ಬೆಂಗಳೂರು ನಗರದ ಸಿಸಿಬಿಯ ತಾಂತ್ರಿಕ ವಿಭಾಗದಲ್ಲಿ ಸುಮಾರು 380 ಮೊಬೈಲ್ ಸಂಖ್ಯೆಗಳ ಸಂಭಾಷಣೆಯನ್ನು ಕದ್ದಾಲಿಕೆ ಮಾಡಲಾಗಿತ್ತು ಎಂಬ ಮಹತ್ವದ ಸಂಗತಿ ಬೆಳಕಿಗೆ ಬಂದಿದೆ.
ಕದ್ದಾಲಿಕೆಗೆ ಒಳಗಾದ ಮೊಬೈಲ್ ಸಂಖ್ಯೆಗಳಲ್ಲಿ ಕೆಲವು ಅಪರಾಧ ಪ್ರಕರಣಗಳಿಗೆ ಸಂಬಂಧಿಸಿದ್ದಾಗಿದ್ದರೆ, ಕೆಲವು ಸರ್ಕಾರದ ಸೂಚನೆ ಮೇರೆಗೆ ರಾಜಕೀಯ ವಿರೋಧಿಗಳ ಬಗ್ಗೆ ಮಾಹಿತಿ ಸಂಗ್ರಹಿಸುವ ಉದ್ದೇಶ ಹೊಂದಿದ್ದವು ಎಂಬ ಆರೋಪ ಕೇಳಿ ಬಂದಿದೆ. ಅಪರಾಧ ಪ್ರಕರಣಗಳ ಕದ್ದಾಲಿಕೆ ಪಟ್ಟಿಯಲ್ಲಿ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಕೂಡ ಸೇರಿದ್ದರು ಎನ್ನಲಾಗಿದೆ.
ಕದ್ದಾಲಿಕೆ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಸಿಬಿಐ ಅಧಿಕಾರಿಗಳು, ಈಗಾಗಲೇ ಸಿಸಿಬಿ ತಾಂತ್ರಿಕ ವಿಭಾಗಕ್ಕೆ ತೆರಳಿ ಪರಿಶೀಲಿಸಿದ್ದಾರೆ. ಅಲ್ಲದೆ, ಆ ವಿಭಾಗದಲ್ಲಿದ್ದ ಕಂಪ್ಯೂಟರ್‌ಗಳು, ಕದ್ದಾಲಿಕೆಗೆ ಬಳಸಿದ ತಾಂತ್ರಿಕ ಪರಿಕರಗಳು ಹಾಗೂ ಹಾರ್ಡ್‌ಡಿಸ್ಕ್ ಸೇರಿದಂತೆ ಮತ್ತಿತರ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ. ಅದರ ಉಸ್ತುವಾರಿ ನಡೆಸಿದ ಇನ್ಸ್‌ಪೆಕ್ಟರ್ ಮತ್ತು ಸಿಬ್ಬಂದಿಯನ್ನು ಸುದೀರ್ಘವಾಗಿ ವಿಚಾರಣೆ ನಡೆಸಿ ಮಾಹಿತಿ ಸಂಗ್ರಹಿಸಿದ್ದಾರೆ ಎಂದು ಗೃಹ ಇಲಾಖೆಯ ಉನ್ನತ ಮೂಲಗಳು ‘ಕನ್ನಡಪ್ರಭ’ಕ್ಕೆ ತಿಳಿಸಿವೆ.
ರಾಜಕೀಯ ವಿರೋಧಿಗಳ ಮೇಲೆ ಸಿಸಿಬಿ ಅಸ್ತ್ರ?
2018ರ ಜೂನ್‌ನಿಂದ 2019ರ ಜೂನ್ ಅವಧಿಯಲ್ಲಿ ಸಿಸಿಬಿ ತಾಂತ್ರಿಕ ವಿಭಾಗದಲ್ಲಿ ಸುಮಾರು 380 ವ್ಯಕ್ತಿಗಳ ಮೊಬೈಲ್ ಕರೆಗಳನ್ನು ಕದ್ದಾಲಿಕೆ ನಡೆಸಲಾಗಿತ್ತು. ಈ ಕರೆಗಳ ಕದ್ದಾಲಿಕೆಗೂ ಮುನ್ನ ಕಾನೂನು ಪ್ರಕಾರವೇ ಅಂದಿನ ಸಿಸಿಬಿ ಅಧಿಕಾರಿಗಳು ಗೃಹ ಇಲಾಖೆ ಪ್ರಧಾನ ಕಾರ್ಯದರ್ಶಿಗಳ ಅನುಮತಿ ಪಡೆದಿದ್ದರು ಎಂದು ತಿಳಿದು ಬಂದಿದೆ.
ಆ ವರ್ಷದಲ್ಲಿ ಪೊಲೀಸ್ ಕಾನ್‌ಸ್ಟೇಬಲ್ ಹುದ್ದೆ ನೇಮಕಾತಿ ಪ್ರಶ್ನೆ ಪತ್ರಿಕೆ ಸೋರಿಕೆ ಹಾಗೂ ಆ್ಯಂಬಿಡೆಂಟ್ ಬಹುಕೋಟಿ ವಂಚನೆ ಸೇರಿದಂತೆ ಹಲವು ಪ್ರಮುಖ ಅಪರಾಧ ಪ್ರಕರಣಗಳನ್ನು ಸಿಸಿಬಿ ತನಿಖೆ ನಡೆಸಿತ್ತು. ಈ ಕದ್ದಾಲಿಕೆಯಿಂದಲೇ ಪೊಲೀಸ್ ನೇಮಕಾತಿ ಪ್ರವೇಶ ಪರೀಕ್ಷೆಗೂ ಮುನ್ನವೇ ಪ್ರಶ್ನೆ ಪತ್ರಿಕೆ ಸೋರಿಕೆ ದಂಧೆಕೋರ ಶಿವಕುಮಾರಯ್ಯ ತಂಡ ಸಿಸಿಬಿ ಬಲೆಗೆ ಬಿದ್ದಿತ್ತು. ಆ್ಯಂಬಿಡೆಂಟ್ ವಂಚನೆ ಪ್ರಕರಣದಲ್ಲಿ ಆರೋಪಿಯಾಗಿದ್ದ ಮಾಜಿ ಸಚಿವ ಜನಾರ್ದನ ರೆಡ್ಡಿ ಬಂಧನ ವೇಳೆ ಅವರ ಆಪ್ತರ ಮೊಬೈಲ್‌ಗಳ ಮೇಲೆ ನಿಗಾ ವಹಿಸಲಾಗಿತ್ತು. ಹೀಗೆ 380 ಕರೆಗಳ ಪೈಕಿ ಸುಮಾರು 200 ಕರೆಗಳು ಅಪರಾಧ ಪ್ರಕರಣಗಳಿಗೆ ಸಂಬಂಧಪಟ್ಟದ್ದಾಗಿದ್ದರೆ, ಇನ್ನುಳಿದ 180 ಕರೆಗಳ ಬಗ್ಗೆ ಶಂಕೆ ಮೂಡಿದೆ ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ಮೈತ್ರಿ ಸರ್ಕಾರವು ತನ್ನ ರಾಜಕೀಯ ವಿರೋಧಿಗಳ ಮೇಲೆ ಸಿಸಿಬಿ ಅಸ್ತ್ರ ಪ್ರಯೋಗಿಸಿತ್ತೇ? ಸಿಸಿಬಿ ಅಧಿಕಾರಿಗಳ ಮೂಲಕ ವಿರೋಧಿಗಳ ಮೊಬೈಲ್‌ಗಳಿಗೆ ಕಳ್ಳಗಿವಿ ಇಟ್ಟು ಸಂಭಾಷಣೆ ಆಲಿಸಿತ್ತೇ ಎಂಬ ಪ್ರಶ್ನೆಗಳು ತನಿಖಾ ತಂಡಕ್ಕೆ ಎದುರಾಗಿವೆ ಎಂದು ತಿಳಿದು ಬಂದಿದೆ.
ಒಂದೊಂದೇ ಕರೆ ಮೇಲೆ ಸಿಬಿಐ ಕಣ್ಣು:
ತನ್ನ ರಾಜಕೀಯ ವಿರೋಧಿಗಳ ಚಟುವಟಿಕೆಗಳ ಮಾಹಿತಿ ಸಂಗ್ರಹಕ್ಕೆ ಅವರ ಮೊಬೈಲ್‌ಗಳಿಗೆ ಮೈತ್ರಿ ಸರ್ಕಾರವು ಕಳ್ಳಗಿವಿ ಇಟ್ಟಿತ್ತು ಎಂಬ ಆರೋಪಗಳು ಕೇಳಿ ಬಂದಿದ್ದವು. ಈ ಹಿನ್ನೆಲೆಯಲ್ಲಿ ಬಿಜೆಪಿ ಸರ್ಕಾರ ಒಂದು ವರ್ಷದ ಅವಧಿಯಲ್ಲಿ (2018ರ ಜೂನ್ 1 ರಿಂದ 2019ರ ಜೂನ್ 31) ನಡೆದಿರುವ ಪೋನ್ ಕದ್ದಾಲಿಕೆಗಳ ಬಗ್ಗೆ ತನಿಖೆ ನಡೆಸುವಂತೆ ಸಿಬಿಐಗೆ ವಹಿಸಿದೆ. ಈ ಬಗ್ಗೆ ತನಿಖೆ ಆರಂಭಿಸಿರುವ ಸಿಬಿಐ, ಪೊಲೀಸ್ ಇಲಾಖೆಯಲ್ಲಿ ಕದ್ದಾಲಿಕೆಗಳಿಗೆ ಅವಕಾಶವಿರುವ ಸಿಸಿಬಿ, ಎಸಿಬಿ, ಸಿಐಡಿ, ಗುಪ್ತದಳ ಹಾಗೂ ಐಎಸ್‌ಡಿ ವಿಭಾಗಗಳಿಗೆ ತೆರಳಿ ಪರಿಶೀಲಿಸಿದೆ.
ಪ್ರಾಥಮಿಕ ಹಂತದಲ್ಲಿ ಕದ್ದಾಲಿಕೆಗೆ ಒಳಗಾದ ದೂರವಾಣಿ ಸಂಖ್ಯೆಗಳ ಪಟ್ಟಿತಯಾರಿಸಿರುವ ಸಿಬಿಐ, ಪ್ರತಿಯೊಂದು ಕರೆಗಳನ್ನು ಕೆದಕುತ್ತಿದೆ. ಯಾರಿಗೆ ಸೇರಿದ ಸಂಖ್ಯೆ, ಯಾವ ಪ್ರಕರಣದಲ್ಲಿ ಕದ್ದಾಲಿಕೆ ನಡೆಸಲಾಗಿತ್ತು? ಯಾವ ಉದ್ದೇಶದಿಂದ ಕರೆ ಪರೀಕ್ಷೆಗೊಳಪಟ್ಟಿತ್ತು ಎಂದು ಕೂಲಂಕಷವಾಗಿ ಶೋಧನೆ ನಡೆಸಿದೆ ಎಂದು ತಿಳಿದು ಬಂದಿದೆ.
ಅನುಮತಿ ಪಡೆದು ದಾರಿ ತಪ್ಪಿಸಿದರೆ?
ಅಪರಾಧ ಪ್ರಕರಣಗಳ ಕಾರಣ ಕೊಟ್ಟು ಗೃಹ ಇಲಾಖೆಯಿಂದ ಕದ್ದಾಲಿಕೆಗೆ ಅನುಮತಿ ಪಡೆದ ಸಿಸಿಬಿ ಅಧಿಕಾರಿಗಳು ಬಳಿಕ ರಾಜಕಾರಣಿಗಳು, ಅವರ ಸಹಾಯಕರು, ಆಪ್ತರು, ಉದ್ಯಮಿಗಳು ಹಾಗೂ ಕೆಲ ಅಧಿಕಾರಿಗಳು ಸೇರಿದಂತೆ ವಿವಿಧ ಸ್ತರದ ವ್ಯಕ್ತಿಗಳ ಮೊಬೈಲ್‌ಗಳಿಗೆ ಕಳ್ಳಗಿವಿ ಇಟ್ಟಿದ್ದರು ಎಂಬ ಮಾತುಗಳು ಕೇಳಿ ಬಂದಿವೆ. ಈಗ ಪ್ರತಿಯೊಂದು ಅಪರಾಧ ಪ್ರಕರಣದ ಕುರಿತು ಸಿಸಿಬಿಯಿಂದ ಸಿಬಿಐ ಮಾಹಿತಿ ಕೋರಿದೆ ಎನ್ನಲಾಗುತ್ತಿದೆ. ಈಗಾಗಲೇ ನಮ್ಮ ತಾಂತ್ರಿಕ ವಿಭಾಗದಲ್ಲಿನ ಕಂಪ್ಯೂಟರ್ ಸೇರಿದಂತೆ ಕೆಲ ವಸ್ತುಗಳನ್ನು ಸಿಬಿಐ ವಶಪಡಿಸಿಕೊಂಡಿದೆ. ಕದ್ದಾಲಿಕೆ ಪ್ರಕರಣದ ತನಿಖೆಗೆ ಎಲ್ಲಾ ರೀತಿಯ ಸಹಕಾರ ನೀಡಿದ್ದೇವೆ ಎಂದು ಸಿಸಿಬಿ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.