ಪಂಚರಾಜ್ಯ ಚುನಾವಣೆ: ಬಿಜೆಪಿ ವಿರೋಧಿ ಅಲೆ ಎದ್ದಿದೆಯಾ?

By Web DeskFirst Published Nov 16, 2018, 5:15 PM IST
Highlights

ಪಂಚರಾಜ್ಯಗಳ ಚುನಾವಣೆ ಸಮೀಪಿಸುತ್ತಿದೆ. ಎಲ್ಲಾ ಪಕ್ಷಗಳಿಗೂ ಅಗ್ನಿಪರೀಕ್ಷೆ ಶುರುವಾಗಿದೆ. ರಾಜಸ್ಥಾನ ಮುಖ್ಯಮಂತ್ರಿ ವಸುಂಧರಾ ರಾಜೆ ಚುನಾವಣೆಯ ಬಗ್ಗೆ ಸಂದರ್ಶನದಲ್ಲಿ ಮಾತನಾಡಿದ್ದಾರೆ. ಚುನಾವಣಾ ತಯಾರಿ ಹೇಗಿದೆ? ಚುನಾವಣಾ ಪೂರ್ವ ಸಮೀಕ್ಷೆ ಏನು ಹೇಳುತ್ತದೆ ಎಂದು ಹೇಳಿದ್ದಾರೆ. ಇಲ್ಲಿದೆ ಸಂದರ್ಶನದ ಪೂರ್ಣಪಾಠ. 

ಬೆಂಗಳೂರು (ನ. 16): ಪಂಚ ರಾಜ್ಯಗಳ ಚುನಾವಣೆ ಸಮೀಪಿಸುತ್ತಿದೆ. ಹಿಂದಿ ರಾಜ್ಯಗಳಲ್ಲಿ ಬಿಜೆಪಿ ವಿರೋಧಿ ಅಲೆ ಇದೆ ಎನ್ನಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ರಾಜಸ್ಥಾನದ ಮುಖ್ಯಮಂತ್ರಿ ವಸುಂಧರಾ ರಾಜೇ ಚುನಾವಣಾ ಫಲಿತಾಂಶ ಯಾರ ಕಡೆ ಎಂಬ ಬಗ್ಗೆ ಟೈಮ್ಸ್ ನೌ ಸಂದರ್ಶನದಲ್ಲಿ ಮಾತನಾಡಿದ್ದಾರೆ. ಆಯ್ದ ಭಾಗ ಇಲ್ಲಿದೆ.

ಎಲ್ಲಾ ಚುನಾವಣಾ ಪೂರ್ವ ಸಮೀಕ್ಷೆಗಳೂ ರಾಜಸ್ಥಾನದಲ್ಲಿ ಬಿಜೆಪಿಗೆ ಹಿನ್ನಡೆಯಾಗುತ್ತದೆ ಎಂದೇ ಹೇಳಿವೆ. 1993 ರಿಂದ ಇಲ್ಲಿಯವರೆಗೆ 25 ವರ್ಷಗಳಲ್ಲಿ ಯಾವತ್ತೂ ಆಡಳಿತ ಪಕ್ಷ ಮತ್ತೆ ಅಧಿಕಾರಕ್ಕೆ ಬಂದಿಲ್ಲ. ಈ ಬಗ್ಗೆ ಏನು ಹೇಳುತ್ತೀರಿ?

ನನ್ನ ಪ್ರಕಾರ ಇದು ತಪ್ಪು ತಿಳಿವಳಿಕೆ. ಹಿಂದೊಮ್ಮೆ ರಾಜ್ಯದಲ್ಲಿ ಕಾಂಗ್ರೆಸ್ 48 ವರ್ಷ ಅಧಿಕಾರದಲ್ಲಿತ್ತು. ಆಗಲೂ ಆಡಳಿತ ವಿರೋಧಿ ಅಲೆ ಇತ್ತು. ಆದರೆ ನನ್ನ ಅವಧಿಯಲ್ಲಿ ಆಡಳಿತ ವಿರೋಧಿ ಅಲೆಯೇ ಇಲ್ಲ. ನಾನು 247 ಪ್ರಯಾಣಿಸುತ್ತೇನೆ. ಕಳೆದ ೬ ತಿಂಗಳಿಂದಲೂ ಓಡಾಡುತ್ತಿದ್ದೇನೆ. ಹಾಗಾಗಿ ಈ ಬಗ್ಗೆ ನನಗೆ ಸ್ಪಷ್ಟತೆ ಇದೆ. ಜೈಪುರ-ದೆಹಲಿಗೆ ಏರ್ ಕಂಡೀಶನ್‌ನಲ್ಲಿ ಓಡಾಡುವವರಿಗೆ ರಾಜಸ್ಥಾನದಲ್ಲಿ ಏನಾಗ್ತಿದೆ ಎಂಬುದು ಗೊತ್ತಿರುವುದಿಲ್ಲ.

ಆದರೆ ಕಳೆದ ನಾಲ್ಕು ವರ್ಷದಿಂದ ವಸುಂಧರಾ ರಾಜೇ ಜನರ ಹತ್ತಿರವೇ ಬರುತ್ತಿರಲಿಲ್ಲ. ಈಗ ಬರುತ್ತಿದ್ದಾರೆ ಎಂಬ ಆರೋಪ ಇದೆಯಲ್ಲಾ?

ಇಲ್ಲ, ನಾನು ಚುನಾವಣೆ ಗೆದ್ದಾಗಿನಿಂದ ಜನರ ಸಮಸ್ಯೆಗಳನ್ನು ಆಲಿಸುತ್ತಿದ್ದೇನೆ. ‘ಸರ್ಕಾರ್ ಆಪ್ ಕೆ ದ್ವಾರ್’ ಯೋಜನೆ ಪ್ರಾರಂಭವಾಗಿ ಒಂದೂವರೆ ವರ್ಷವಾಗಿದೆ. ಇದರಡಿಯಲ್ಲಿ ಪ್ರತಿ ವಿಭಾಗವೂ ಚುರುಕಾಗಿ ಕೆಲಸ ಮಾಡುತ್ತಿದೆ. ಜೊತೆಗೆ ಪ್ರತಿವರ್ಷವೂ ಜನರ ಸಮಸ್ಯೆಗಳನ್ನು ಆಲಿಸುವ ಕಾರ್ಯಕ್ರಮಗಳನ್ನು ಜಾರಿಗೆ ತರುತ್ತಿದ್ದೇವೆ. ಹಾಗಾಗಿ ಜನರಿಂದ ದೂರ ಇದ್ದೇವೆ ಎಂದು ಯಾವತ್ತೂ ನನಗೆ ಅನಿಸಿಲ್ಲ.

5 ವರ್ಷದ ಹಿಂದೆ ನೀವು ಸಿಎಂ ಆಗುವುದಕ್ಕೂ ಮೊದಲು ವಸುಂಧರಾ ರಾಜೇ ಅಂದರೆ ‘೮ಪಿಎಂ, ನಾಟ್ ಸಿಎಂ’ ಎಂದು ಕರೆಯಲಾಗುತ್ತಿತ್ತು. ರಾತ್ರಿ ೮ ಗಂಟೆ ನಂತರ ತಮ್ಮ ಕೋಟೆಯೊಳಗೆ ಹೋಗಿಬಿಡ್ತಾರೆ, ತಮ್ಮದೇ ಕೆಲಸದವರಿಗೂ ಸಿಗುವುದಿಲ್ಲ ಎಂಬ ಟೀಕೆಯಿತ್ತು.

ಮಹಿಳೆಯರ ಬಗ್ಗೆ ಅವರಿಗನಿಸಿದ ಹಾಗೆ ಮಾತನಾಡುತ್ತಾರೆ. ಇಂತಹ ಅಡೆತಡೆಗಳಿಂದ ಹೊರಬರುವುದು ಕಷ್ಟ. ಅದು ಗ್ಲಾಸ್ ಸೀಲಿಂಗ್ ಒಡೆದಂತೆ. ಅದರಲ್ಲೂ ಊಳಿಗಮಾನ್ಯ ರಾಜ್ಯದಲ್ಲಿ ಮಹಿಳೆಯೊಬ್ಬಳು ಮುಖ್ಯಮಂತ್ರಿಯಾಗುವುದು ಕಷ್ಟಕರ. ಆದರೆ ಅದೆಲ್ಲವನ್ನೂ ನಾನು ನಿಭಾಯಿಸಿದ್ದೇನೆ. ನಮ್ಮ ಸಮಾಜದಲ್ಲಿ ಪುರುಷ ಏನನ್ನಾದರೂ ಮಾಡಬಹುದು, ಆದರೆ ಮಹಿಳೆ ಮಾಡುವಂತಿಲ್ಲ. ಒಂದು ಕಾಲದಲ್ಲಿ ಮಹಿಳೆ ಮನೆಯೊಳಗೇ ಇರಬೇಕು, ಪುರುಷ ಹೊರಗೆ ದುಡಿಯಬೇಕು ಎಂಬುದಿತ್ತು. ಆದರೆ ಈಗ ಪ್ರತಿಯೊಬ್ಬರಿಗೂ ಗೊತ್ತು, ಮುಖ್ಯಮಂತ್ರಿ ಕಚೇರಿಯಲ್ಲಿ ಮಧ್ಯರಾತ್ರಿಯೂ ದೀಪ ಉರಿಯುತ್ತದೆ ಎಂದು.

ವಿರೋಧ ಪಕ್ಷ ಯಾಕೆ ನಿಮ್ಮನ್ನು ‘ಹೊರಗಿನವರು’ ಎಂದು ಕರೆಯುತ್ತಿದೆ. ಇದು ಲಿಂಗ ತಾರತಮ್ಯವೇ?

ಇಲ್ಲ, ನನ್ನನ್ನು ಯಾರೂ ‘ಹೊರಗಿನವಳು’ ಎಂದು ಕೆರೆದಿಲ್ಲ. ಕೆಲವೇ ಕೆಲವರು ಹಾಗೆ ಕರೆಯುತ್ತಾರೆ. ಏಕೆಂದರೆ ಅವರು ಅವರ ಸ್ವಂತ ಸೊಸೆಯನ್ನೂ ಹೊರಗಿನವರು ಎನ್ನುತ್ತಾರೆ! ನಾನು ಇಲ್ಲೇ ವಿವಾಹವಾದೆ, ನನ್ನ ಮಕ್ಕಳೂ ಇಲ್ಲೇ ಜನಿಸಿದ್ದಾರೆ. ನನ್ನ ಜೀವಮಾನವನ್ನೇ ರಾಜಸ್ಥಾನದಲ್ಲಿ ಕಳೆಯುತ್ತಿದ್ದೇನೆ. ವಿವಾಹವಾದಾಗಿನಿಂದ ಇಲ್ಲಿಯವರೆಗೆ ಇಲ್ಲಿಯೇ ಇದ್ದೇನೆ, ಮುಂದೆಯೂ ಇಲ್ಲೇ ಇರುತ್ತೇನೆ. ಹೀಗಿದ್ದೂ ನಾನು ಹೊರಗಿನವಳು ಎಂಬ ಟ್ಯಾಗ್ ಹೇಗೆ ಬಂತು ಅರ್ಥವಾಗುತ್ತಿಲ್ಲ. ಸೋನಿಯಾ ಗಾಂಧಿ ಇಟಲಿಯವರಲ್ಲವೇ? ನಮ್ಮದೇ ದೇಶದ ಬೇರೆ ರಾಜ್ಯದಿಂದ ಬಂದವಳು ನಾನು. ಹಾಗಾದರೆ ಬೇರೆ ದೇಶದಿಂದ ಬಂದವರ ಬಗ್ಗೆ ಏನು ಹೇಳಬಹುದು?

ನಿಮ್ಮದೇ ಪಕ್ಷದ ಕೇಂದ್ರದ ನಾಯಕತ್ವ ನಿಮಗೆ ಬೆಂಬಲ ನೀಡುತ್ತಿಲ್ಲ. ನೀವು ಮತ್ತು ಅಮಿತ್ ಶಾ ಒಟ್ಟಿಗೇ ಚುನಾವಣಾ ಪ್ರಚಾರ ಉದ್ಘಾಟನೆ ಮಾಡಿದರೂ ಆಮೇಲೆ ಪ್ರತ್ಯೇಕ ರ‌್ಯಾಲಿ ಮಾಡಿದಿರಿ. ಈ ಬಗ್ಗೆ ಏನು ಹೇಳುತ್ತೀರಾ?

ಮಾಧ್ಯಮದವರಿಗೆ ಹೇಳಲು ಬೇರೇನೂ ಇಲ್ಲ! ವಾಸ್ತವವಾಗಿ ನಮ್ಮ ನಡುವೆ ಯಾವುದೇ ಸಮಸ್ಯೆ ಇಲ್ಲ. ಇದು ಮಾಧ್ಯಮಗಳ ಕಲ್ಪನೆಯಷ್ಟೆ. ಅವರು ನನಗೆ ಕೆಲವೊಂದು ಜವಾಬ್ದಾರಿ ನೀಡಿದ್ದಾರೆ. ನಾನು ನನ್ನ ಕರ್ತವ್ಯ ಮಾಡುತ್ತಿದ್ದೇನೆ. ನನಗೆ ಪ್ರಧಾನಿ ಅವರ ಆಶೀರ್ವಾದವಿದೆ. ಅಮಿತ್ ಶಾ ನನ್ನ ಬೆನ್ನ ಹಿಂದಿದ್ದಾರೆ.

2014 ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ೨೫/೨೫ ಸೀಟುಗಳನ್ನು ಗೆಲ್ಲುತ್ತದೆ ಎಂದು ನೀವೇ ಊಹಿಸಿರಲಿಲ್ಲ. ಅದು ವಸುಂಧರಾ ರಾಜೇ ಅವರ ಮ್ಯಾಜಿಕ್ಕೋ ಅಥವಾ ಮೋದಿ ಅವರದೋ?

ಖಂಡಿತವಾಗಿಯೂ ಅದು ಮೋದಿ ಅಲೆ. ಅವರ ವರ್ಚಸ್ಸು ಬಹುದೊಡ್ಡದು. ಜೊತೆಗೆ ಪಕ್ಷದ ಕಾರ್ಯಕರ್ತರು, ಮುಖಂಡರು ಕೂಡ ಶ್ರಮಪಟ್ಟಿದ್ದರು. ಲೋಕಸಭಾ ಚುನಾವಣೆಗೂ ಪೂರ್ವದಲ್ಲಿ ನಾವು 163 ಸೀಟುಗಳನ್ನು ಪಡೆದಿದ್ದೆವು. ಪ್ರತಿಯೊಬ್ಬರೂ ಬದಲಾವಣೆಯನ್ನು ಬಯಸಿದ್ದರು. ಮೋದಿಯವರೂ ಪ್ರಚಾರಕ್ಕೆ ಆಗಮಿಸಿದ್ದರು.

ಈ ಚುನಾವಣೆಯಲ್ಲಿ ಜಾತಿ ಲೆಕ್ಕಾಚಾರ ಎಷ್ಟು ಮುಖ್ಯ?

ರಜಪೂತರು 12 % ಇದ್ದಾರೆ. ಹಲವರು ರಜಪೂತರಿಗೆ ರಾಜೇ ಅವರ ಬಗ್ಗೆ ವಿರೋಧವಿದೆ ಎಂದು ಹೇಳುತ್ತಿದ್ದಾರೆ. ರಜಪೂತರು ಸಾಂಪ್ರದಾಯಿಕವಾಗಿ

ಬಿಜೆಪಿಯ ಪ್ರಬಲ ಶಕ್ತಿ. ಈ ಬಗ್ಗೆ ನಿಮ್ಮ ನಿಲುವೇನು?

ನನ್ನ ಪ್ರಕಾರ ವಿರೋಧ ಪಕ್ಷದವರು ಸುಖಾಸುಮ್ಮನೆ ಜಾತಿ ವಿಚಾರವಾಗಿ ಗೊಂದಲ ಮೂಡಿಸಿ ರಾಜಕೀಯ ಮಾಡುತ್ತಿದ್ದಾರೆ. ಆದರೆ ನಾವು ಒಂದು ಕುಟುಂಬ ಎಂಬಂತೆ ಎಲ್ಲರೊಂದಿಗೂ ಕೆಲಸ ಮಾಡುತ್ತಿದ್ದೇವೆ. ಅಭಿವೃದ್ಧಿ ಕಾರ್ಯಗಳು ನಡೆದಾಗ ಅದರಿಂದ ಎಲ್ಲರಿಗೂ ಉಪಯೋಗವಾಗುತ್ತದೆ. ನಾನು ಪಂಚಾಯಿತಿಗಳಲ್ಲಿನ ಶಾಲೆಗಳನ್ನು ಉನ್ನತೀಕರಿಸಿದರೆ ಎಲ್ಲರೂ ಉಪಯೋಗ ಪಡೆಯುತ್ತಾರೆ. ಯೋಜನೆಗಳಿಗೆ ಜಾತಿ ಭೇದ ಎಲ್ಲಿದೆ?

ರಾಮಮಂದಿರದ ವಿಷಯವಾಗಿ ಬಿಜೆಪಿ ಈಗ ಮಾತನಾಡತೊಡಗಿದೆ. ಈ ಬಗ್ಗೆ ಏನು ಹೇಳುತ್ತಿರಿ?

ನಾನು ಈ ಬಗ್ಗೆ ಮಾತನಾಡುವುದಿಲ್ಲ. ಅದು ನನ್ನ ವ್ಯಾಪ್ತಿಗೆ ಸಂಬಂಧಿಸಿದ್ದಲ್ಲ. ನಮ್ಮ ಪಕ್ಷದ ನಾಯಕರು ಈ ವಿಚಾರವಾಗಿ ಕಾಳಜಿ ವಹಿಸಲು ಸಮರ್ಥರಿದ್ದಾರೆ. ನನ್ನ ಧರ್ಮದ ಬಗ್ಗೆ ನನಗೆ ಹೆಮ್ಮೆ ಇದೆ. ಜೊತೆಗೆ ಅನ್ಯ ಧರ್ಮವನ್ನೂ ಗೌರವಿಸುತ್ತೇನೆ.

ರಾಹುಲ್ ಗಾಂಧಿ ಇತ್ತೀಚೆಗೆ ನಿಮ್ಮನ್ನು ‘ಮಹಾರಾಣಿ’ ಎಂದಿದ್ದರು. ಪ್ರಧಾನಿಯನ್ನು ‘ಚೋರ್, ಚೌಕಿದಾರ್’ ಎಂದಿದ್ದರು. ಈ ಬಗ್ಗೆ ಏನು ಹೇಳುತ್ತೀರಿ?

ನನಗೆ ಈ ಬಗ್ಗೆ ಗೊತ್ತಿಲ್ಲ. ಈ ವ್ಯಕ್ತಿ ಕಾಂಗ್ರೆಸ್‌ನ ಪ್ರಧಾನಿ ಅಭ್ಯರ್ಥಿ! ಅವರು ಪ್ರಧಾನಿ ಬಗ್ಗೆ ಏನು ಹೇಳಿದ್ದಾರೋ ಗೊತ್ತಿಲ್ಲ. ಆದರೆ ಪ್ರಧಾನಿ ನರೇಂದ್ರ ಮೋದಿ ರಾಜಸ್ಥಾನದಲ್ಲಿ ಲಕ್ಷಾಂತರ ಜನರನ್ನು ಉದ್ದೇಶಿಸಿ ಮಾತನಾಡಿದಾಗ ಅಸಂಖ್ಯಾತ ಜನರು ಬಂದು ಆಲಿಸುತ್ತಾರೆ. ಅದೇ ರಾಹುಲ್ ಗಾಂಧಿ ಮತ್ತು ಅವರ ಗ್ಯಾಂಗ್ ಬಂದಾಗ ರೋಡ್ ಶೋ ಮಾಡಿದರೂ ಜನರೇ ಇರುವುದಿಲ್ಲ. ಇದು ಜನ ಅವರ ಬಗ್ಗೆ ಹೇಗೆ ಯೋಚಿಸುತ್ತಾರೆ ಎಂಬುದನ್ನು ಸೂಚಿಸುತ್ತದೆ, ನಾನೇನೂ ಹೇಳಬೇಕಿಲ್ಲ.

ಲೋಕಸಭೆ ಚುನಾವಣೆಗೆ ಭೂಮಿಕೆಯಂತಿರುವ ಈಗಿನ ಪಂಚರಾಜ್ಯ ಚುನಾವಣೆಯಲ್ಲಿ ಬಿಜೆಪಿ ವಿರೋಧಿ ಅಲೆಯಿದೆ ಎಂದು ಹೇಳಲಾಗುತ್ತಿದೆ. ಪಕ್ಷದ ಭವಿಷ್ಯ ಏನು?

ನೀವೇನು ಯೋಚಿಸುತ್ತಿದ್ದೀರೋ ಜನ ಅದನ್ನು ಯೋಚಿಸುತ್ತಿಲ್ಲ. ನಾವು ಈ ಚುನಾವಣೆಯಲ್ಲಿ ಗೆದ್ದೇ ಗೆಲ್ಲುತ್ತೇವೆ. ನೀವು ತಿಳಿದಿರುವಂತೆ ವಿರೋಧಿ ಅಲೆ ಇಲ್ಲ. ಡಿಸೆಂಬರ್ ೧೧ರ ಫಲಿತಾಂಶದಂದು ನಿಮಗೇ ಅರ್ಥವಾಗುತ್ತದೆ. ಇದಕ್ಕಿಂತ ನಾನೇನೂ ಹೇಳಲಾರೆ.


 

click me!