ಎಟಿಎಂ ಪಿನ್ ಪಡೆದು 6900 ರೂ ಡ್ರಾ ಮಾಡಿರೋ ಅನಾಮಿಕ
ಅನಾಮಿಕರಿಗೆ ಪಿನ್ ನಂಬರ್ ಕೊಡುವ ಮುನ್ನ ಎಚ್ಚರ
ಪುಟ್ಟಸ್ವಾಮಿ ಎಂಬುವವರ ಅಕೌಂಟ್ ನಿಂದ ಹಣ ಡ್ರಾ
ಕುಶಾಲನಗರದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
ಕೊಡಗು(ಜು.೧೪): ಅನಾಮಧೇಯ ಕರೆಗೆ ಎಟಿಎಂ ಪಿನ್ ನೀಡಿ ಗ್ರಾಹಕರೊಬ್ಬರು ಹಣ ಕಳೆದುಕೊಂಡ ಘಟನೆ ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಕುಶಾಲನಗರದಲ್ಲಿ ನಡೆದಿದೆ.
ಕುಶಾಲನಗರದ ಎಸ್ ಬಿ ಐ ಬ್ಯಾಂಕ್ ನಲ್ಲಿ ಖಾತೆ ಹೊಂದಿರುವ ಪುಟ್ಟಸ್ವಾಮಿ ಅವರಿಗೆ ಕರೆ ಮಾಡಿದ ಅನಾಮಧೇಯ, ಬ್ಯಾಂಕ್ ಸಿಬ್ಬಂದಿ ಎಂದು ಸುಳ್ಳು ಹೇಳಿ ಪಿನ್ ಮಾಹಿತಿ ಪಡೆದಿದ್ದಾನೆ. ನಿಮ್ಮ ಎಟಿಎಂ ನಾಳೆ ಬ್ಲಾಕ್ ಆಗುತ್ತಿದ್ದು, ಅದನ್ನು ಆ್ಯಕ್ಟೀವ್ ಮಾಡಲು ಪಿನ್ ಮಾಹಿತಿ ಕೊಡಿ ಎಂದು ಕೇಳಿದ್ದ ಎನ್ನಲಾಗಿದೆ.
ಈ ಮಾತನ್ನು ನಂಬಿದ ಪುಟ್ಟಸ್ವಾಮಿ ತಮ್ಮ ಎಟಿಎಂ ಪಿನ್ ನಂಬರ್ ನ್ನು ಖದೀಮನಿಗೆ ಕೊಟ್ಟಿದ್ದಾರೆ. ಕೆಲವೇ ಕ್ಷಣಗಳಲ್ಲಿ ಪುಟ್ಟಸ್ವಾಮಿ ಅವರ ಅಕೌಂಟ್ ನಿಂದ 4500, 300, 2000, ಮತ್ತು 100 ರೂ ಡ್ರಾ ಮಾಡಲಾಗಿದೆ.
ಇದರಿಂದ ಅನುಮಾನಗೊಂಡ ಪುಟ್ಟಸ್ವಾಮಿ, ಬ್ಯಾಂಕಿಗೆ ಹೋಗಿ ಪರಿಶೀಲನೆ ನಡೆಸಿದಾಗ ಹಣ ಡ್ರಾ ಆಗಿರುವುದು ಗೊತ್ತಾಗಿದೆ. ಪುಟ್ಟಸ್ವಾಮಿ ಅವರಿಗೆ ನಿನ್ನೆ ಸಂಜೆ 6:15ಕ್ಕೆ 7808995895 ನಂಬರಿನಿಂದ ಕರೆ ಬಂದಿದ್ದು, ಈ ಕುರಿತು ಕುಶಾಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.