ಮಂಗಳವಾರ ತಾಲೀಮು ನಡೆಸುವಾಗ ಸಂಭವಿಸಿದ ದುರಂತದಲ್ಲಿ ಅಗಲಿದ ವಿಂಗ್ ಕಮಾಂಡರ್ ಸಾಹಿಲ್ ಗಾಂಧಿ ಅವರಿಗೆ ಗುರುವಾರದಿಂದ ಆರಂಭವಾದ ‘ಏರೋ ಇಂಡಿಯಾ-2019’ ಮೊದಲ ದಿನ ವೈಮಾನಿಕ ಪ್ರದರ್ಶನ ತಂಡವು ‘ಮಿಸ್ಸಿಂಗ್ ಮ್ಯಾನ್ ಫಾರ್ಮೆಷನ್’ ಮೂಲಕ ಗೌರವ ಸಲ್ಲಿಸಿತು.
ಬೆಂಗಳೂರು (ಫೆ. 21): ಮಂಗಳವಾರ ತಾಲೀಮು ನಡೆಸುವಾಗ ಸಂಭವಿಸಿದ ದುರಂತದಲ್ಲಿ ಅಗಲಿದ ವಿಂಗ್ ಕಮಾಂಡರ್ ಸಾಹಿಲ್ ಗಾಂಧಿ ಅವರಿಗೆ ಗುರುವಾರದಿಂದ ಆರಂಭವಾದ ‘ಏರೋ ಇಂಡಿಯಾ-2019’ ಮೊದಲ ದಿನ ವೈಮಾನಿಕ ಪ್ರದರ್ಶನ ತಂಡವು ‘ಮಿಸ್ಸಿಂಗ್ ಮ್ಯಾನ್ ಫಾರ್ಮೆಷನ್’ ಮೂಲಕ ಗೌರವ ಸಲ್ಲಿಸಿತು.
ಏರೋ ಇಂಡಿಯಾ ಉದ್ಘಾಟನಾ ಕಾರ್ಯಕ್ರಮದ ವೇಳೆ ಮಾತನಾಡಿದ ರಕ್ಷಣಾ ಸಚಿವ ನಿರ್ಮಲಾ ಸೀತಾರಾಮನ್ ಹಾಗೂ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಸಾಹಿಲ್‌ಗಾಂಧಿ ಮೃತರಾದ ಬಗ್ಗೆ ಸಂತಾಪ ವ್ಯಕ್ತಪಡಿಸಿದರು. ಇದೇ ವೇಳೆ ಎರಡು ನಿಮಿಷಗಳ ಕಾಲ ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಅರ್ಪಿಸಿದರು.
ವೈಮಾನಿಕ ಕ್ಷೇತ್ರದಲ್ಲಿನ ಸಂಪ್ರದಾಯದಂತೆ ಅತ್ಯುನ್ನತ ಸಾಧನೆ ತೋರಿದ ಪೈಲಟ್ ವಿಮಾನ ದುರಂತದಲ್ಲಿ ಮೃತಪಟ್ಟರೆ ವೈಮಾನಿಕ ಪ್ರದರ್ಶನ ತಂಡಗಳಿಂದ ‘ಮಿಸ್ಸಿಂಗ್ ಮ್ಯಾನ್ ಫಾರ್ಮೇಷನ್’ ಮೂಲಕ ಗೌರವ ಸಲ್ಲಿಸಲಾಗುತ್ತದೆ. ಇಂತಹ ಗೌರವಕ್ಕೆ ಸಾಹಿಲ್‌ಗಾಂಧಿ ಅವರು ಪಾತ್ರರಾಗಿದ್ದು, ತೇಜಸ್-ಎಲ್‌ಸಿಎ, ಜಾಗ್ವಾರ್ ಹಾಗೂ ಸುಖೋಯ್ -30 ವಿಮಾನಗಳ ತಂಡವು ಮಿಸ್ಸಿಂಗ್ ಮ್ಯಾನ್ ಫಾರ್ಮೇಷನ್ ನಡೆಸಿವು.
ಇದಲ್ಲದೆ ಸೂಪರ್ ಸಾನಿಕ್ ವೇಗದ ತೇಜಸ್-ಎಲ್‌ಸಿಎ ಹಾಗೂ ರಫೇಲ್ ಯುದ್ಧ ವಿಮಾನಗಳು ತಮ್ಮ ವೇಗ ಸಾಮರ್ಥ್ಯದ ಪ್ರದರ್ಶನದ ನಡುವೆ ವೇದಿಕೆ ಬಳಿ ನಿಧಾನವಾಗಿ ಚಲಿಸುವ ಮೂಲಕ ಸಾಹಿಲ್‌ಗಾಂಧಿಗೆ ಗೌರವ ಸಲ್ಲಿಸಿದರು.
‘ಮಿಸ್ಸಿಂಗ್ ಮ್ಯಾನ್ ಫಾರ್ಮೇಷನ್’ ಹೇಗೆ:
ಮಂಗಳವಾರ ದುರಂತ ಅಂತ್ಯ ಕಂಡ ಸಾಹಿಲ್ ಗಾಂಧಿ ಅವರು ವೈಮಾನಿಕ ತಂಡದಿಂದ ದೂರವಾಗಿ ತಪ್ಪಿ ಹೋಗಿದ್ದಾರೆ. ಈ ಮೂಲಕ ಅವರ ಸ್ಥಾನವನ್ನು ಖಾಲಿ ಇಟ್ಟು ವೈಮಾನಿಕ ಪ್ರದರ್ಶನ ನೀಡುವ ಮೂಲಕ ಅಗಲಿದ ಹುತಾತ್ಮರಿಗೆ ಗೌರವ ಸಲ್ಲಿಸಲಾಗುತ್ತದೆ.
ಇದರಂತೆ ಬುಧವಾರ ಬೆಳಗ್ಗೆ ಉದ್ಘಾಟನಾ ಕಾರ್ಯಕ್ರಮದ ಬಳಿಕ ನಡೆದ ವೈಮಾನಿಕ ಪ್ರದರ್ಶನದ ವೇಳೆ ಸುಖೋಯ್-30, ತೇಜಸ್, ಜಾಗ್ವಾರ್ ಮೂರು ಯುದ್ಧ ವಿಮಾನಗಳು ‘ಮಿಸ್ಸಿಂಗ್ ಮ್ಯಾನ್ ಫಾರ್ಮೇಷನ್’ ನಡೆಸಿಕೊಟ್ಟವು. ಇದರಲ್ಲಿ ವೇಗವಾಗಿ ಸಮಾನಂತರವಾಗಿ ಚಲಿಸುತ್ತಿದ್ದ ವಿಮಾನಗಳ ಪೈಕಿ ಜಾಗ್ವಾರ್ ಯುದ್ಧ ವಿಮಾನವು ವೇಗವಾಗಿ ಚಲಿಸಿ ಗುಂಪಿನಿಂದ ದೂರವಾಗುತ್ತದೆ. ಈ ಮೂಲಕ ಜಾಗ್ವಾರ್ ಖಾಲಿ ಬಿಟ್ಟಜಾಗವನ್ನು ಖಾಲಿಯಾಗಿಯೇ ಉಳಿಸಿ ತೇಜಸ್ ಹಾಗೂ ಸುಖೋಯ್-30 ವಿಮಾನಗಳು ಮುಂದೆ ಸಾಗಿದವು. ಈ ಮೂಲಕ ‘ಮಿಸ್ಸಿಂಗ್ ಮ್ಯಾನ್ ಫಾರ್ಮೇಷನ್’ ನಡೆಸಿದರು.
ಏನಿದು ಮಿಸ್ಸಿಂಗ್ ಮ್ಯಾನ್ ಫಾರ್ಮೇಷನ್?
‘ಮಿಸ್ಸಿಂಗ್ ಮ್ಯಾನ್’ ಫಾರ್ಮೇಷನ್ ಸಂಪ್ರದಾಯ ಅಗಲಿದ ಪೈಲಟ್‌ಗೆ ಗೌರವ ಸಲ್ಲಿಸಲು ಮೊದಲಿನಿಂದಲೂ ರೂಢಿಯಲ್ಲಿದೆ. ಅಮೆರಿಕದ ಸ್ಟಂಟ್ ಪೈಲಟ್ ಚಾರ್ಲ್ಸ್ ಸ್ಪೀಡ್ ಹೋಲ್ಮನ್ ವಿಮಾನ ಅಪಘಾತದಿಂದ ಮೃತಪಟ್ಟಿದ್ದರು. ಅವರಿಗೆ ಗೌರವ ಸಲ್ಲಿಸಲು ‘ಮಿಸ್ಸಿಂಗ್ ಮ್ಯಾನ್’ ಫಾರ್ಮೇಷನ್ ಶುರು ಮಾಡಲಾಯಿತು.
ಎರಡು ರೀತಿಯಲ್ಲಿ ‘ಮಿಸ್ಸಿಂಗ್ ಮ್ಯಾನ್’ ಫಾರ್ಮೇಷನ್ ನಡೆಸಲಾಗುತ್ತದೆ. ವೈಮಾನಿಕ ಪ್ರದರ್ಶನದ ಹೆಚ್ಚು ವಿಮಾನಗಳ ಗುಂಪು ಪ್ರದರ್ಶನ ನೀಡುತ್ತಿದ್ದರೆ ಒಟ್ಟಾಗಿ ಸಮಾನಾಂತರವಾಗಿ ಬರುವ ವಿಮಾನಗಳೆÜಲ್ಲಾ ನೇರವಾಗಿ ಮುಂದಕ್ಕೆ ಸಾಗಿ ಏಕಾಏಕಿ ಒಂದು ವಿಮಾನವು ಮಾತ್ರ ಗುಂಪು ಬಿಟ್ಟು ಮೇಲಕ್ಕೆ ಹಾರಿ ಹೋಗುತ್ತದೆ.
ಗುಂಪಿನಿಂದ ತಪ್ಪಿ ಹೋಗುವ ವಿಮಾನದ ಫಾರ್ಮೇಷನ್ನನ್ನು ಮಿಸ್ಸಿಂಗ್ ಮ್ಯಾನ್ ಫಾರ್ಮೇಷನ್ ಎಂದು ಕರೆಯಲಾಗುತ್ತದೆ. ಆ ಫಾರ್ಮೇಷನ್ ಮುಗಿಯುವವರೆಗೂ ವಿಮಾನ ಬಿಟ್ಟು ಹೋದ ಸ್ಥಳ ಖಾಲಿಯಾಗಿಟ್ಟು ವಿಮಾನಗಳು ಹಾರಾಡುತ್ತವೆ. ಇದು ತಮ್ಮ ನಾಯಕನ ಜಾಗ ಎಂಬುದನ್ನು ತೋರಿ ಗೌರವಿಸುತ್ತವೆ ಎನ್ನುತ್ತಾರೆ ಅಧಿಕಾರಿಗಳು.