ಸಂಪತ್ ಮೈತ್ರೇಯ, ಸುನೀತಾ, ಮಳವಳ್ಳಿ ಸಾಯಿಕೃಷ್ಣ, ಜೋಸೈಮನ್ ಅಭಿನಯಿಸಿರುವ ಸಿನಿಮಾ ರಿಲೀಸ್ ಆಗಿದೆ. ಸಿನಿಮಾ ಹೇಗಿದೆ?
ಪ್ರಿಯಾ ಕೆರ್ವಾಶೆ
ಈ ಸಿನಿಮಾವನ್ನು ಎಳೆ ಬಿಸಿಲು, ನಡು ಬಿಸಿಲು, ಸುಡು ಬಿಸಿಲು, ಬೆಂಕಿ ಬಿಸಿಲು ಅಂತ ನಾಲ್ಕು ಭಾಗಗಳಾಗಿ ವಿಂಗಡಿಸಬಹುದೇನೋ. ಆದರೆ ರೈತ ಬೇಡುವುದು ಪರಿಹಾರ ಎಂಬ ಸಕಾಲಿಕ ಮಳೆಯನ್ನು. ದುರದೃಷ್ಟವಶಾತ್ ಅದೇ ಇಲ್ಲಿ ಮರೀಚಿಕೆ.
ಕನಕಪುರ ಭಾಗದ ಮುಗ್ಧ ರೈತ ಚಿಕ್ಕೇ ಗೌಡ. ತಂದೆ ತೀರಿಕೊಂಡ ಬಳಿಕ ಈತನಿಗೆ ಬಂದದ್ದು ಅರ್ಧ ಎಕರೆ ಪಿತ್ರಾರ್ಜಿತ ಜಮೀನು, ನಾಲ್ಕು ಎಕರೆ ಕಾಡಂಚಿನಲ್ಲಿ ಪೂರ್ವಜರು ಒತ್ತುವರಿ ಮಾಡಿಕೊಂಡ ಜಾಗ. ಆ ನಾಲ್ಕೆಕರೆ ಜಾಗದಲ್ಲಿ ಚೆನ್ನಾಗಿ ಕೃಷಿ ಮಾಡಿ ನೆಮ್ಮದಿಯ ಬದುಕು ನಡೆಸಬೇಕು ಅನ್ನುವುದು ಈತನ ಕನಸು. ಅದಕ್ಕಾಗಿ ತನ್ನ ಅರ್ಧ ಎಕರೆ ಪಿತ್ರಾರ್ಜಿತ ಜಮೀನು ಮಾರುತ್ತಾನೆ. ಕಷ್ಟಪಟ್ಟು ಕಂದಾಯ ಇಲಾಖೆಯಿಂದ ಪಹಣಿ ಪತ್ರವನ್ನೂ ಪಡೆಯುತ್ತಾನೆ. ಕಷ್ಟದ ದಿನಗಳು ಕಳೆದವು ಅಂತ ನಿಟ್ಟುಸಿರು ಬಿಡುವಾಗ ಎದುರಾದದ್ದು ಕಡುಕಷ್ಟದ ದಿನಗಳು. ಅದನ್ನು ಈ ಬಡ ರೈತ ಎದುರಿಸಲು ಶಕ್ತನಾಗುತ್ತಾನಾ? ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗಗಳಲ್ಲಿ ಸಿಗದ ನ್ಯಾಯವನ್ನು ಮತ್ತೆಲ್ಲಿ ಪಡೆದುಕೊಳ್ಳುತ್ತಾನೆ ಅನ್ನುವುದು ಕಥೆ.
CHANDINI BAR REVIEW: ಬಾರ್ ಹುಡುಗರ ಬಯಾಗ್ರಫಿ
ತಾರಾಗಣ: ಸಂಪತ್ ಮೈತ್ರೇಯ, ಸುನೀತಾ, ಮಳವಳ್ಳಿ ಸಾಯಿಕೃಷ್ಣ, ಜೋಸೈಮನ್
ನಿರ್ದೇಶನ: ಹೃದಯಶಿವ
ರೇಟಿಂಗ್: 3
ಬಗರ್‌ಹುಕುಂ ಸಮಸ್ಯೆ ಬಹಳ ಹಿಂದಿನದು. ಕಂದಾಯ ಇಲಾಖೆ ಕಾಡಂಚಿನ ಜಮೀನು ಈ ರೈತನದೇ ಅಂತ ಪಹಣಿ ಪತ್ರ ನೀಡುತ್ತೆ. ಆ ಬಳಿಕ ಅರಣ್ಯ ಇಲಾಖೆ ಇದು ಅರಣ್ಯ ಪ್ರದೇಶ ಎಂದು ಘೋಷಿಸಿ ರೈತ ಉತ್ತು ಬಿತ್ತ ಆ ನೆಲವನ್ನು ತನ್ನ ವಶಕ್ಕೆ ಪಡೆಯುತ್ತೆ. ಈ ಸಮಸ್ಯೆಯಿಂದ ಆತ್ಮಹತ್ಯೆ ಮಾಡಿಕೊಂಡ ರೈತರು ಬಹಳ ಮಂದಿ. ಈ ಸಮಸ್ಯೆಯನ್ನೆತ್ತಿಕೊಂಡು ಹೃದಯಶಿವ ಎದೆಗೆ ತಟ್ಟುವಂಥಾ ಸಿನಿಮಾ ಮಾಡಿದ್ದಾರೆ. ಕನಕಪುರ ಭಾಗದ ರೈತ ಬದುಕಿನ ಚಿತ್ರಣ ಬಹು ಸಹಜವಾಗಿ ಬಂದಿದೆ. ಆ ಭಾಷೆಯನ್ನೂ ಸಶಕ್ತವಾಗಿ ಬಳಸಿಕೊಳ್ಳಲು ಯಶಸ್ವಿಯಾಗಿದ್ದಾರೆ. ಹಿನ್ನೆಲೆ ಸಂಗೀತ, ಹಾಡುಗಳು, ಸಾಹಿತ್ಯ ಕಥೆಗೆ ಮತ್ತಷ್ಟುಶಕ್ತಿ ತುಂಬುತ್ತವೆ. ಚಿಕ್ಕೇಗೌಡನ ಪಾತ್ರದ ಆಂತರ್ಯವನ್ನು ಅರಿತು ಮನಮುಟ್ಟುವಂತೆ ಅಭಿನಯಿಸಿದ್ದು ಸಂಪತ್ ಮೈತ್ರೇಯ. ಉಳಿದ ಕಲಾವಿದರದೂ ಸಹಜ, ಪ್ರಬುದ್ಧ ಅಭಿನಯ.
Shivaji Surathkal 2 review: ಕಳೆದುಹೋಗಲು ಒಂದೊಳ್ಳೆ ಸಿನಿಮಾ
ಎಲ್ಲೂ ಕೃತ್ರಿಮತೆ ಇರದಂತೆ ಹಳ್ಳಿ ಬದುಕನ್ನೇ ಎತ್ತಿಕೊಟ್ಟಹಾಗೆ ಸಿನಿಮಾ ಕಟ್ಟಿಕೊಟ್ಟದ್ದು ಹೃದಯ ಶಿವ ನಿರ್ದೇಶನದ ಪ್ಲಸ್ ಪಾಯಿಂಟ್. ಆದರೆ ಇಂಥಾ ಡಾಕ್ಯುಡ್ರಾಮಗಳು ಇರುವುದನ್ನು ಇರುವ ಹಾಗೆ ನಮ್ಮ ಮುಂದಿಡುತ್ತವೆ, ಅದರಾಚೆ ಹೊಸತೇನನ್ನೂ ಹೇಳುವ ಪ್ರಯತ್ನ ಮಾಡುವುದಿಲ್ಲ. ಹೀಗಾಗಿ ಕಥೆಯಲ್ಲಿ ಹೊಸತನ ಕಾಣಲ್ಲ. ಪ್ರತಿಯೊಂದೂ ನಮ್ಮ ಊಹೆಯಂತೆ ನಡೆಯುವಾಗ ಪ್ರೇಕ್ಷಕ ಬೇಗ ಆಸಕ್ತಿ ಕಳೆದುಕೊಳ್ಳಬಹುದು. ಕೆಲವರಿಗೆ ಒಂದು ವರದಿಯ ಸಿನಿಮಾ ರೂಪದ ಹಾಗೆ ಕಾಣಬಹುದು. ಹೃದಯಶಿವ ಇಂಥಾ ಗಟ್ಟಿಸಬ್ಜೆಕ್ಟ್ ಅನ್ನು ಇಟ್ಟುಕೊಂಡೇ ಕೆಲವು ಹೊಸ ಸಾಧ್ಯತೆಗಳತ್ತ ಗಮನ ಹರಿಸಬಹುದಿತ್ತು. ಆ ಸಣ್ಣ ಮಿತಿಯ ಹೊರತಾಗಿ ಈ ವ್ಯವಸ್ಥೆಯೊಳಗೆ ಕುರಿಗಳ ಹಾಗೆ ಬದುಕುತ್ತಿರುವ ನಮ್ಮೆಲ್ಲರಲ್ಲಿ ಒಂದು ಪಾಪಪ್ರಜ್ಞೆ, ಗಾಢ ವಿಷಾದ ಮೂಡಿಸುವಲ್ಲಿ ಸಿನಿಮಾ ಯಶಸ್ವಿ ಆಗಿದೆ ಅಂದರೆ ಅದು ಸಿನಿಮಾ ಯಶಸ್ಸೂ ಹೌದು ಎಂದೇ ಭಾವಿಸಬೇಕು.