Kishkindha Kaandam: ಕಾಡಿನ ಒಂಟಿ ಮನೆಯಲ್ಲಿನ ರಹಸ್ಯಗಳ ರೋಚಕ ತಿರುವಿನ ಕಣ್ಣೀರು ತರಿಸೋ ಭಾವನಾತ್ಮಕ ಕಥೆ

By Veena Rao  |  First Published Jan 7, 2025, 6:27 PM IST

ಕಿಷ್ಕಿಂದಾ ಕಾಂಡಂ ಚಿತ್ರವು ಕಾಡಿನಲ್ಲಿ ನಡೆಯುವ ಒಂದು ರೋಚಕ ಥ್ರಿಲ್ಲರ್ ಕಥೆಯಾಗಿದೆ. ಕಾಣೆಯಾದ ಮಗು, ನಿಗೂಢ ಸಾವುಗಳು ಮತ್ತು ಕಪಿಗಳ ಉಪದ್ರವದ ನಡುವೆ, ಒಂದು ಕುಟುಂಬದ ರಹಸ್ಯಗಳು ಬಯಲಾಗುತ್ತವೆ.


ಚಿತ್ರ: ಕಿಷ್ಕಿಂದಾ ಕಾಂಡಂ

ನಿರ್ದೇಶನ: ದಿನ್ ಜಿತ್ ಅಯ್ಯಥಾನ್

Tap to resize

Latest Videos

ತಾರಾಗಣ: ಅಸಿಫ್ ಆಲಿ, ವಿಜಯರಾಘವನ್, ಅಪರ್ಣಾ ಬಾಲಮುರಳಿ.

ಒಟಿಟಿ " ಡಿಸ್ನಿ ಹಾಟ್ ಸ್ಟಾರ್

ಭಾಷೆ: ಮಲೆಯಾಳಂ (ಹಿಂದಿಯಲ್ಲೂ ಲಭ್ಯವಿದೆ)

ದಟ್ಟ ಕಾಡಿನ ನಡುವೆ ಇರುವ ಗ್ರಾಮ, ಅಲ್ಲಿ ಲೆಕ್ಕವಿಲ್ಲದಷ್ಟು ಕಪಿಗಳು. ಆ ಕಪಿಗಳಿಂದ ನಾನಾ ತೊಂದರೆಗೊಳಗಾಗುವ ಆ ಗ್ರಾಮದ ಜನರು. ಅಲ್ಲಿನ ಫಾರೆಸ್ಟ್ ಆಫೀಸರ್ ಅಜೇಯ್ ಅವನ ದುರ್ಮರಣಕ್ಕೀಡಾದ ಪತ್ನಿ, ಅಜೇಯನ ಕಣ್ಮರೆಯಾದ ಮಗ. ಯಾರನ್ನೂ ಮಾತನಾಡಿಸದ ಮಾತನಾಡಿದರೆ ಸಿಡುಕುವ ಅಜೇಯನ ತಂದೆ ಅಪ್ಪು ಪಿಳ್ಳೈ ಅವನ ಕಳೆದು ಹೋದ ಪಿಸ್ತೂಲ್. ಈ ಅಪ್ಪು ಪಿಳ್ಳೆನ ಕಳೆದು ಹೋದ ಪಿಸ್ತೂಲ್ ಗೂ ಅಜೇಯನ ಕಣ್ಣರೆಯಾದ ಮಗನಿಗೂ ಏನಾದರೂ ಲಿಂಕ್ ಇದೆಯೇ? ಅಜೇಯನ ಮಗ ಹೇಗೆ ಕಾಣೆಯಾದ? ಅವನು ಮರಳಿ ಸಿಕ್ಕಿದನೇ? ಆ ಏರಿಯಾದಲ್ಲಿ ಕಪಿಗಳು ಏಕೆ ಅಷ್ಟೊಂದು ಇವೆ? ಸುರುಳಿ ಸುರುಳಿಯಾಗಿ ಬಿಚ್ಚಿಕೊಳ್ಳುವ ಥ್ರಿಲ್ಲರ್ ಚಿತ್ರ ಕಿಷ್ಕಿಂದಾ ಕಾಂಡಂ.

ಅಜಯ್ (ಅಸಿಫ್ ಆಲಿ) ಯ ಎರಡನೆಯ ಮದುವೆಯೊಂದಿಗೆ ಚಿತ್ರ ಪ್ರಾರಂಭವಾಗುತ್ತದೆ. ಅಜಯ್ ನ ಮೊದಲ ಮಡದಿ ಮಾರಣಾಂತಿಕ ಕಾಯಿಲೆಯಿಂದ ತೀರಿಕೊಂಡಿದ್ದಾಳೆ. ಅವರ ಒಬ್ಬನೇ ಮಗ ಚಾಚ್ಚು ತನ್ನ ತಾಯಿ ತೀರಿಕೊಂಡಾಗಿನಿಂದ ಕಾಣೆಯಾಗಿದ್ದಾನೆ. ಮಡದಿಯ ಸಾವು, ಮಗನ ಕಣ್ಮರೆ ಅಜಯ್ ಜೀವನವನ್ನು ದುಸ್ತರಗೊಳಿಸಿದೆ. ಹಿರಿಯರ ಹಿತವಚನಗಳಿಂದ ತನ್ನ ಮನಸ್ಸನ್ನು ನಿಯಂತ್ರಿಸಿ ಕೊಂಡು ಅಪರ್ಣಾಳೊಡನೆ ಮರುಮದುವೆಯಾಗಿದ್ದಾನೆ. ಅಜಯ್ ಒಬ್ಬ ನಿಷ್ಟಾವಂತ ಅರಣ್ಯಾಧಿಕಾರಿ. ವಿವಾಹ ನೋಂದಣಿ ಮಾಡಿಸಿದ ಅಜೇಯ್ ಪತ್ನಿಯೊಡನೆ ತನ್ನ ಮನೆಗೆ ತೆರಳುತ್ತಾನೆ. ಅಜೇಯ್ ಮನೆಯಲ್ಲಿ ಸೈನ್ಯದಿಂದ ನಿವೃತ್ತಿ ಹೊಂದಿದ ಅವನ ತಂದೆ ಮಾತ್ರವೇ ಇದ್ದಾರೆ. ಅವರ ಸ್ವಭಾವ ಕೊಂಚ ವಿಚಿತ್ರ. ಸೈನ್ಯದಲ್ಲಿ ಇದ್ದುದರಿಂದ ಕಠಿಣ ಸ್ವಭಾವದ ಅವರು ಯಾರೊಡನೆಯೂ ಬೆರೆಯುವುದಿಲ್ಲ. ತಮ್ಮ ಕೋಣೆಗೆ ಯಾರು ಬರುವುದೂ ಸಹಿಸುವುದಿಲ್ಲ.

ಅಜೆಯ್ ಎರಡನೇ ಪತ್ನಿ ಅಪರ್ಣಾಗೆ ತನ್ನ ಗಂಡನ ಮೊದಲ ಪತ್ನಿಯ ಸಾವೂ ಹಾಗೂ ಮಗ ಕಾಣೆಯಾಗಿರವುದು ತಿಳಿದಿರುತ್ತದೆ. ಅದರ ಬಗ್ಗೆ ಅವಳಿಗೂ ವಿಷಾದ ಇರುತ್ತದೆ. ಅಜೇಯ್‌ನ ಮನೆ ಇರುವುದು ಕೇರಳದ ದಟ್ಟ ಕಾಡಿನ ನಡುವೆ ಒಂದು ಗ್ರಾಮ. ಆ ಗ್ರಾಮದಲ್ಲಿ ಲೆಕ್ಕವಿಲ್ಲದಷ್ಟು ಕಪಿಸೈನ್ಯ ಇರುತ್ತದೆ ಮತ್ತು ಈ ಕಪಿಗಳಿಂದ ಆ ಗ್ರಾಮದ ಜನರಿಗೆ ನಾನಾ ವಿಧದ ಉಪದ್ರವ ಇದ್ದೇ ಇರುತ್ತದೆ. ಈ ಮಧ್ಯೆ ಅಪ್ಪು ಪಿಳ್ಳೆನ ಲೈಸನ್ಸ್ ಪಡೆದ ಗನ್ ಎರಡು ವರ್ಷದ ಹಿಂದೆ ಕಾಣೆಯಾಗಿರುತ್ತದೆ. ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರೂ ಅದು ಇನ್ನೂ ಸಿಕ್ಕಿರುವುದಿಲ್ಲ. ಆಗಾಗ ಇದರ ಬಗ್ಗೆ ವಿಚಾರಿಸಲು ಪೊಲೀಸರು ಅಜೇಯನ ಮನೆಗೆ ಬರುತ್ತಲೇ ಇರುತ್ತಾರೆ. ಪೊಲೀಸರ ವಿಚಾರಣೆಗೆ ಅಪ್ಪು ಪಿಳ್ಳೆ ಸಿಡುಕುತ್ತ ಉತ್ತರಿಸುವುದು ಅಪರ್ಣಾಗೆ ಸೋಜಿಗವೆನಿಸುತ್ತದೆ. ತನ್ನ ಮಾವನ ಅನೇಕ ನಡವಳಿಕೆಗಳು ಅಪರ್ಣಾಗೆ ಪ್ರಶ್ನಾರ್ಥಕವಾಗುತ್ತದೆ.

ಅಜೇಯ್ ತನ್ನ ಕಾಣೆಯಾದ ಮಗನನ್ನು ಹುಡುಕಲು ನಾನಾ ಪ್ರಯತ್ನ ಮಾಡುತಿರುತ್ತಾನೆ. ಅಂತರರಾಜ್ಯ ಪೊಲೀಸರಿಗೂ ಮಾಹಿತಿ ಹೋಗಿರುತ್ತದೆ. ಯಾವಾಗ ತನ್ನ ಮಗನ ಬಗ್ಗೆ ಮಾಹಿತಿ ಕೊಡಬೇಕಾದಾಗಲೂ ಅವನ ಧ್ವನಿ ಗದ್ಗದಿತವಾಗಿರುತ್ತದೆ. ಇದನ್ನು ಗಮನಿಸುವ ಅಪರ್ಣಾಗೆ ಕನಿಕರವೆನಿಸುತ್ತದೆ. ಮಗನನ್ನು ಹುಡುಕಲು ಎಷ್ಟು ದೂರದ ಪ್ರದೇಶಕ್ಕಾದರೂ ಹೋಗಿ ಬರಲು ತಯಾರಿರುತ್ತಾನೆ.

ಅಪರ್ಣಾ ತನ್ನ ಹೊಸ ಬದುಕಿನಲ್ಲಿ ಹೊಂದಿಕೊಳ್ಳುತ್ತಿರುತ್ತಾಳೆ. ಅವಳಿಗೆ ಅವಳ ಮಾವನ ನಡವಳಿಕೆಯೇ ಸಂಶಯಾಸ್ಪದ. ಅವನ ಸಿಡುಕುತನ, ನಿಗೂಢ ಮನೊಭಾವ, ಯಾರೊಂದಿಗೂ ಮನಸ್ಸು ಬಿಚ್ಚಿ ಮಾತನಾಡದೆ ಇರುವುದು, ಎಲ್ಲೋ ಧ್ಯಾನ ಇವೆಲ್ಲ ಅವಳು ಗಮನಿಸಿ ಅಜೇಯನ ಬಳಿಯೂ ಹೇಳಿರುತ್ತಾಳೆ. ಆದರೆ ಅಜೇಯ ಅವಳ ಸಂಶಯವನ್ನು ತಳ್ಳಿಹಾಕುತ್ತಾನೆ. ತಂದೆಗೆ ವಯಸ್ಸಾಗಿರುವುದರಿಂದ ಅವೆಲ್ಲವೂ ವೃದ್ಧಾಪ್ಯದ ಸಮಸ್ಯೆಗಳು ಎಂದು ಬಿಡುತ್ತಾನೆ. ಒಮ್ಮೆ ಅಪ್ಪು ಪಿಳ್ಳೈ ತನ್ನದೇ ಕಾರಿನಲ್ಲಿ ಎಲ್ಲಿಗೋ ಹೋಗಿ ಬರುವಾಗ ದಾರಿ ಮಧ್ಯೆ ಪೆಟ್ರೋಲ್ ತೀರಿಹೋಗಿದೆ ಎಂದು ಮಗನನ್ನು ಕರೆದು ಅವನ ಕಾರಿನಲ್ಲಿ ಮನೆಗೆ ಬರುತ್ತಾನೆ. ಅಪರ್ಣಾ ಮಾವನ ಕಾರನ್ನು ಚೆಕ್ ಮಾಡಿದಾಗ ಪೆಟ್ರೋಲ್ ಇರುತ್ತದೆ. ಅವಳಿಗೆ ಆಶ್ಚರ್ಯವಾಗುತ್ತದೆ. ಇದನ್ನು ಅವಳು ಅಜೇಯ್‌ಗೆ ಹೇಳಿ ಮಾವನಿಗೆ ಅಲ್ಜೆಮೈರ್ ಕಾಯಿಲೆ ಇರಬಹುದಾ ಎಂದು ಸಂಶಯ ವ್ಯಕ್ತ ಪಡಿಸುತ್ತಾಳೆ. ಆಗ ಅಜೇಯ್ ತನ್ನ ತಂದೆಗೆ ಮರೆವಿನ ಕಾಯಿಲೆ ಇದೆಯೆಂದು ಒಪ್ಪಿಕೊಳ್ಳುತ್ತಾನೆ ಹಾಗೂ ಆ ಕಾಯಿಲೆ ಅವರಿಗೆ ಇದೆಯೆಂದು ಅವರ ಬಳಿ ಎಂದೂ ತೋರಿಸಿಕೊಳ್ಳಬೇಡ ಅವರಿಗೆ ಬಹಳ ಕೋಪ ಬರುತ್ತದೆ ಎಂದು ಹೇಳುತ್ತಾನೆ. ಅದಕ್ಕೆ ಟ್ರೀಟ್ಮೆಂಟ್ ಮಾಡಿಸಬಹುದಲ್ಲ ಎಂದರೆ ಒಬ್ಬರು ಡಾಕ್ಟರ್ ಮನೆಗೆ ಬಂದು ಅವರ ಬಳಿ ಕೌನ್ಸೆಲಿಂಗ್ ಮಾಡುತ್ತಾರೆ ಆದರೆ ಅವರು ಡಾಕ್ಟರ್ ಎಂದು ಅಪ್ಪನಿಗೆ ಗೊತ್ತಿಲ್ಲ ಅವರ ಹಳೆಯ ಸ್ನೇಹಿತರು ಎಂದು ತಿಳಿದಿದ್ದಾರೆ ಎಂದು ಹೇಳುತ್ತಾನೆ. ಆದರೆ ತನ್ನ ತಂದೆ ಆ ಕಾಯಿಲೆಯನ್ನು ಮರೆಮಾಚಲು ಏನೇನೋ ಉಪಾಯಗಳನ್ನು ಕಂಡುಕೊಂಡಿದ್ದಾರೆ,  ಆ ಉಪಾಯಗಳೊಂದಿಗೆ ತಮ್ಮ ಕಾಯಿಲೆಯನ್ನು ನಿಭಾಯಿಸಿಕೊಂಡಿದ್ದಾರೆ ಎಂದು ಹೇಳುತ್ತಾನೆ.

ಒಮ್ಮೆ ವನ್ಯಜೀವಿ ಛಾಯಾಗ್ರಾಹಕರ ಒಂದು ಫೋಟೋ ಎಲ್ಲೆಡೆ ವೈರಲ್ ಆಗುತ್ತದೆ. ಅದರಲ್ಲಿ ಒಂದು ಕಾಡಿನ ಕೋತಿ ಕೈಯಲ್ಲಿ ಪಿಸ್ತೂಲು ಹಿಡಿದಿರುವ ಚಿತ್ರ ಅದಾಗಿರುತ್ತದೆ. ಆ ಪಿಸ್ತೂಲು ಅಪ್ಪು ಪಿಳ್ಳಯನ ಕಳೆದುಹೋದ ಪಿಸ್ತೂಲು ಆಗಿರುತ್ತದೆ. ಇದು ಪೊಲೀಸಿನವರಲ್ಲಿ ಸಂಚಲನ ಹುಟ್ಟಿಸುತ್ತದೆ. ಕೊನೆಗೆ ಆ ಪಿಸ್ತೂಲು ಏನಾಯಿತೆಂದು ಯಾರಿಗೂ ತಿಳಿದಿರುವುದಿಲ್ಲ. ಮತ್ತೊಮ್ಮೆ ಆ ಗ್ರಾಮದ ಸುತ್ತಮುತ್ತ ಅರಣ್ಯ ಪ್ರದೇಶದಲ್ಲಿ ಭೂಮಿ ಅಗೆಯುತ್ತಿದ್ದಾಗ ಒಂದು ಅಸ್ತಿಪಂಜರ ಸಿಗುತ್ತದೆ. ಅದು ಅಜೇಯನ ಕಾಣೆಯಾದ ಮಗನದು ಇರಬಹದೇನೋ ಎಂದು ಎಲ್ಲರೂ ಗಾಬರಿಯಾಗುತ್ತಾರೆ. ಅದು  ಯಾವುದು ಏನು ಎಂದು ಪತ್ತೆ ಮಾಡಲಾಗಿ ಅದು ಒಂದು ದೊಡ್ಡ ಕೋತಿಯ ಅಸ್ಥಿಪಂಜರ ಎಂದು ತಿಳಿದುಬರುತ್ತದೆ. ಆದರೆ ಆ ಕೋತಿಯನ್ನು ಯಾರು ಸಾಯಿಸಿದರು ಎಂದು ಅಲ್ಲಿ ಯಾರಿಗೂ ಗೊತ್ತಿರುವುದಿಲ್ಲ. ಕೋತಿ ಬುಲೆಟ್ ಶಾಟ್ ನಿಂದ ಸತ್ತಿರುತ್ತದೆ. ಆ ಗುಂಡು ಅಪ್ಪುಪಿಳ್ಳಯನ ಗನ್ ಗೆ ಸಂಬಂಧಿಸಿದ ಗುಂಡಾಗಿರುತ್ತದೆ. ಕೋತಿ ವನ್ಯಪ್ರಾಣಿ ಆಗಿರುವುದರಿಂದ ಅದರ ಹತ್ಯೆ ಅಪರಾಧವಾಗುತ್ತದೆ ಹಾಗಾಗಿ ಅದನ್ನು ಯಾರು ಕೊಂದಿದ್ದಾರೋ ಅವರ ಮೇಲೆ ಕೇಸಾಗುತ್ತದೆ, ಜೈಲೂ ಆಗಬಹುದು ಎಂದು ಅಲ್ಲಿ ಮಾತನಾಡಿಕೊಳ್ಳುತ್ತಾರೆ. ಪೊಲೀಸರು ಅಪ್ಪುವನ್ನು ವಿಚಾರಣೆ ಮಾಡಿದರೂ ಅವನ ಮರೆವಿನ ಕಾರಣದಂದ ಏನೂ ಮಾಹಿತಿ ತಿಳಿಯುವುದಿಲ್ಲ. ಈ ಘಟನೆಯ ನಂತರ ಅಪ್ಪು ಪಿಳ್ಳೈ ಕೊಂಚ ಉದ್ವಿಗ್ನ ಮನಸ್ಥಿತಿಯಲ್ಲಿ ಇರುತ್ತಾನೆ.

ಕಲೀಗ್ ನ ರೂಪದಲ್ಲಿ ಅಪ್ಪುವಿನ ಆಪ್ತಸಮಾಲೋಚನೆ ಮಾಡುವ ಅಮೃತ್ ಎಂಬ ವ್ಯಕ್ತಿ ಒಮ್ಮೆ ಅಪ್ಪುವನ್ನು ಮಾತನಾಡಲು ಬಂದಾಗ ಅಪ್ಪು ತನ್ನ ರೂಮಿನ ಡ್ರಾ ದಲ್ಲಿ ಇರಿಸಿದ್ದ ಚೀಟಿಗಳನ್ನು ನೋಡುತ್ತ ಅವನೊಂದಿಗೆ ಸಂಭಾಷಿಸುತ್ತಾನೆ. ಅಪ್ಪು ತನ್ನ ಮರೆವಿನ ಕಾರಣದಿಂದ ತನ್ನ ಕಲೀಗ್ಸ್ ಬಗ್ಗೆ ತನಗೆ ಬೇಕಾದ ಎಲ್ಲ ವಿಷಯಗಳ ಬಗ್ಗೆ ಸಣ್ಣ ಸಣ್ಣ ಚೀಟಿಗಳಲ್ಲಿ ಬರೆದುಕೊಂಡು ಅದನ್ನು ಆಗಾಗ ನೋಡುತ್ತಾ ತನ್ನಮರೆವಿನ ಕಾಯಿಲೆಯನ್ನು ಬೇರೆಯವರಿಗೆ ಗೊತ್ತಾಗದ ಹಾಗೆ ಮೇನೇಜ್ ಮಾಡುತ್ತಿರುತ್ತಾನೆ. ಈ ಸಲ ಅಮೃತ್ ಅಪ್ಪುವಿನ ಬಳಿ ಇರುವ ಕೆಲವು ಚೀಟಿಗಳನ್ನು ಎಗರಿಸಿಬಿಡುತ್ತಾನೆ. ಅದರಲ್ಲಿ ಒಂದು ರಹಸ್ಯ ಮಾಹಿತಿ ಸಿಗುತ್ತದೆ. ಅದೆಂದರೆ ಅಪ್ಪು ಸೈನ್ಯದಿಂದ ನಿವೃತ್ತಿಯಾಗಿ ಬಂದಿರುವುದಲ್ಲ  ತನ್ನ ಮರೆವಿನಕಾರಣದಿಂದ ವೃತ್ತಿಯಿಂದ ವಜಾ ಆಗಿ ಬಂದಿದ್ದಾನೆ ಎಂಬ ಮಾಹಿತಿ ಅಮೃತ್ ಪತ್ತೆ ಮಾಡಿ ಅಜೇಯ್ ಗೆ ಹೇಳುತ್ತಾನೆ. ಅಜೇಯ ಮತ್ತು ಅಪರ್ಣಾಗೆ ಇದು ಕೇಳಿ ಶಾಕ್ ಆಗುತ್ತದೆ.

ಒಂದು ದಿನ ಅಪ್ಪು ಪಿಳ್ಳೈ ಒಂದು ಬಾಕ್ಸಿನ ತುಂಬಾ ಯಾವುದೋ ಪೇಪರುಗಳನ್ನು ಕಾಡಿನ ಮಧ್ಯೆ ಯಾರಿಗೂ ಕಾಣದ ಹಾಗೆ ಸುಡುತ್ತಿರುತ್ತಾನೆ. ಇದನ್ನು ಅಪರ್ಣ ನೋಡಿಬಿಡುತ್ತಾಳೆ. ಅವಳು ಏನು ಮಾಡುತ್ತಿರುವಿರಿ ಎಂದು ಪ್ರಶ್ನಿಸಲು ಬಂದಾಗ ಅವಳನ್ನು ಅಪ್ಪು ನೂಕಿಬಿಡುತ್ತಾನೆ. ಆಗ ಅಜೆಯ್ ಮಧ್ಯ ಪ್ರವೇಶಿಸಿ ಅಪ್ಪವನ್ನು ಮನೆಯೊಳಗೆ ಕರೆದುಕೊಂಡು ಹೋಗುತ್ತಾನೆ. ಆಗ ಅಪರ್ಣಾ ಅಳಿದುಳಿದ ಪೇಪರ್ ಗಳನ್ನು ನೀರು ಹಾಕಿ ನಂದಿಸಿ ಒಳಗೆ ಕೊಂಡೊಯ್ಯುತ್ತಾಳೆ ಹಾಗೂ ಅಪ್ಪು ಇಲ್ಲದಿರುವಾಗ ಅವನ ರೂಮನ್ನು ಪ್ರವೇಶಿಸಿ ಅವನ ಬೀರುವಿನ ಡ್ರಾ ಎಲ್ಲ ಶೋಧಿಸಿದಾಗ ಅನೇಕ ಚಿಕ್ಕಚಿಕ್ಕ ನೋಟ್ಸ÷ಗಳು ಏನೇನೋ ಪೇಪರ್ ಗಳು ಸಿಗುತ್ತದೆ. ಬೀರುವನ್ನು ಮತ್ತಷ್ಟು ತಡಕಾಡಿದಾಗ ಅದರ ತಳದಲ್ಲಿ ಒಂದು ಝಿಪ್ ಎಳೆದಾಗ ಅಪ್ಪುವಿನ ಕಳೆದುಹೋದ ಲೋಡೆಡ್ ಗನ್ ಅಲ್ಲಿರುತ್ತದೆ. ಅದರಲ್ಲಿ ಎರಡು ಬುಲೆಟ್ ಕಡಿಮೆ ಇರುತ್ತದೆ. ಅಪರ್ಣಾ ಚಿಕಿತಳಾಗುತ್ತಾಳೆ. ಗನ್ ಇಲ್ಲೇ ಇದೆ, ಹಾಗಾದರೆ ಅಪ್ಪುವಿನ ಕಳೆದುಹೋದ ಗನ್ ಯಾವುದು? ಅಜೇಯನ ಮಗ ಚಾಚ್ಚು ಎಲ್ಲಿ ಹೋದ? ಅವನ ಕಣರೆಯಲ್ಲಿ ಅಪ್ಪು ಪಿಳ್ಳೈ ನ ಕೈವಾಡವೇನಾದರೂ ಇದೆಯೇ ಎಂದೆಲ್ಲ ರಹಸ್ಯವಾಗಿ ತನಿಖೆ ನಡೆಸುತ್ತಾಳೆ. ಗನ್ ನ ಒಂದು ಬುಲೆಟ್ ಕೋತಿಯನ್ನು ಕೊಂದಿದ್ದರೆ ಮತ್ತೊಂದು ಬುಲೆಟ್ ಎಲ್ಲಿ ಹೋಯಿತು? ಅಪರ್ಣಾಳ ಸಂಶಯ ತೀವ್ರವಾಗುತ್ತದೆ.

ಅವಳು ಎಲ್ಲವನ್ನು ತನ್ನ ತಂದು ಬಚ್ಚಿಡುತ್ತಾಳೆ. ಅಪ್ಪು ಪಿಳ್ಳೈ ಗೆ ತನ್ನ ಕೋಣೆಯನ್ನು ಯಾರೋ ಶೋಧಿಸಿದ್ದಾರೆ ಎಂಬ ಸಂಶಯ ಬರುತ್ತದೆ. ಅವನು ಮಗ ಸೊಸೆಯ ಜೊತೆ ಜಗಳವಾಡುತ್ತಾನೆ.  ಅಪರ್ಣಾ ತನ್ನ ಗಂಡನಿಗೆ ತಾನು ಮಾವನ ಕೋಣೆಯಲ್ಲಿ ಶೋಧಿಸಿದ ಪೇಪರ್ ಗಳು ಮತ್ತು ಗನ್ ತೋರಿಸಿ ಇದಕ್ಕೂ ಚಾಚ್ಚುವಿನ ಕಣ್ಮರೆಗೂ ಏನೋ ಸಂಬಂಧ ಇದೆ ನೀವು ಮಾವನವರನ್ನು ಸರಿಯಾಗಿ ಪ್ರಶ್ನಿಸಿ ಅವರೇನೋ ಮುಚ್ಚಿಡುತ್ತಿದ್ದಾರೆ ಎಂದು ಹೇಳುತ್ತಾಳೆ.

ಇದನ್ನೂ ಓದಿ: Sikandar Ka Muqaddar: ವಜ್ರಗಳ ಕಳ್ಳತನದ ವಿಷಯದಲ್ಲಿ ಪೊಲೀಸ್ ಅಧಿಕಾರಿಯ ಆರನೇ ಇಂದ್ರಿಯ ಕೆಲಸ ಮಾಡಿದ್ದೇಗೆ?

ಆಗ ಅಜೇಯ್ ಇಷ್ಟು ಕಟ್ಟಕೊಂಡಿದ್ದ ತನ್ನೊಳಗೇ ಬಚ್ಚಿಟ್ಟುಕೊಂಡಿದ್ದ ರಹಸ್ಯವನ್ನು ಸ್ಫೋಟಿಸುತ್ತಾನೆ. ಗಳಗಳನೆ ಅಳುತ್ತಾನೆ. ಚಚ್ಚೂ ತನ್ನ ತಾತನ ಮರೆವಿನ ಕಾಯಿಲೆಯನ್ನು ಗುರುತಿಸಿ ಅವನ ಗನ್ ರಹಸ್ಯವಾಗಿ ತೆಗೆದುಕೊಂಡು ಆಟವಾಡುತ್ತಿರುತ್ತಾನೆ. ಅಪ್ಪು ಎಷ್ಟುಸಲ ಎಚ್ಚರಿಸಿದರೂ ಕೇಳುವುದಿಲ್ಲ. ಹೀಗೇ ಒಮ್ಮೆ ಆಟವಾಡುವಾಗ ಒಂದು ಕೋತಿಗೆ ಶೂಟ್ ಮಾಡಿರುತ್ತಾನೆ. ಮಗು ಮಾಡಿದ್ದ ಈ ಕೆಲಸಕ್ಕೆ ಬೆಚ್ಚಿದ ಅಪ್ಪು ತನ್ನ ಸ್ನೇಹಿತನ ಸಹಾಯದಿಂದ ಅದನ್ನು ಮಣ್ಣುಮಾಡಿರುತ್ತಾನೆ. ಆ ಮಣ್ಣು ಮಾಡಿದ ಜಾಗ ಮರೆತುಬಿಟ್ಟಿರುತ್ತಾನೆ. ಇವೆಲ್ಲ ನಡೆಯುವಾಗ ಅಜೇಯ್ ತನ್ನ ಹೆಂಡತಿ ಪ್ರವೀಣಾಳ ಕ್ಯಾನ್ಸರ್ ಚಿಕಿತ್ಸೆಗೆ ಓಡಾಡುತ್ತಿರುತ್ತಾನೆ. ಅಜೇಯ್ ಪ್ರವೀಣಾಗೆ ಈ ಯಾವುದೂ ತಿಳಿಯುವುದಿಲ್ಲ. ಹೀಗೆಯೇ ಒಮ್ಮೆ ಪ್ರವೀಣಾ ಚಾಚ್ಚುವಿನ ಕೈಲ್ಲಿ ಗನ್ ನೋಡಿ ಗಾಬರಿಯಿಂದ ಕಿತ್ತುಕೊಳ್ಳಲು ಬಂದು ಎಳೆದಾಟದಲ್ಲಿ ಗನ್ ಶೂಟ್ ಆಗಿ ಚಾಚ್ಚು ಮರಣಿಸುತ್ತಾನೆ. ಪ್ರವೀಣಾ ಮಗನನ್ನು ತಾನೇ ಕೊಂದೆ ಎಂಬ ತಪ್ಪಿತಸ್ಥ ಭಾವನೆಯಲ್ಲಿ ತನ್ನ ಮಾತ್ರೆಗಳನ್ನು ಹೆಚ್ಚು ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸುತ್ತಾಳೆ. ಮನೆಗೆ ಬಂದ ಅಜೇಯ್ ಇವೆಲ್ಲವನ್ನೂ ನೋಡಿ ಪ್ರವೀಣಾಳನ್ನು ಆಸ್ಪತ್ರೆಗೆ ಸೇರಿಸುತ್ತಾನೆ, ಗಾಬರಿಯಲ್ಲಿ ಮಗನ ಕಳೇಬರವನ್ನು ಹಾಗೆಯೇ ಬಿಟ್ಟಿರುತ್ತಾನೆ. ಅವಳನ್ನು ಆಸ್ಪತ್ರೆಗೆ ಸೇರಿಸಿ ಅವಳ ಕ್ಯಾನ್ಸರ್ ರಿಪೋರ್ಟುಗಳನ್ನು ತೆಗೆದುಕೊಂಡು ಹೋಗಲು ಮತ್ತೆ  ಮನೆಗೆ ಬರುವ ಅಜೇಯ್‌ಗೆ ರೂಮಿನಲ್ಲಿ ತನ್ನ ರಕ್ತಸಿಕ್ತ ಮಗನ ಕಳೇಬರ ಕಾಣದೆ ಗಾಬರಿಯಾಗುತ್ತದೆ. ಕೋಣೆ ಸ್ವಚ್ಛವಾಗಿ ಶುಭ್ರವಾಗಿ ಇರುತ್ತದೆ.

ಅಜೇಯ್ ಪ್ರವೀಣಾ ಆಸ್ಪತ್ರೆಗೆ ಹೋದ ಸಂದರ್ಭದಲ್ಲಿ ಮನೆಗೆ ಬರುವ ಅಪ್ಪು ಪಿಳ್ಳೈ ಮೊಮ್ಮಗನ ಶವ ನೋಡಿ ಷಾಕ್ ಆಗುತ್ತಾನೆ, ತನ್ನ ಗನ್ ನಿಂದಲೇ ಇಷ್ಟೆಲ್ಲ ಅನಾಹುತ ನಡೆದಿದೆ ಎಂದು ಆ ಗನ್ ನನ್ನು ಅಡಗಿಸಿಡುತ್ತಾನೆ, ಹಾಗೂ ಮೊಮ್ಮಗನ ಶವವನ್ನು ತಾನೊಬ್ಬನೇ ರಹಸ್ಯವಾಗಿ ಮಣ್ಣುಮಾಡಿ ಆ ಜಾಗವನ್ನು ಶುಭ್ರಮಾಡುತ್ತಾನೆ. ತನ್ನ ಕಾಯಿಲೆಯ ಕಾರಣದಿಂದ ಮೊಮ್ಮಗನನ್ನು ಎಲ್ಲಿ ಮಣ್ಣು ಮಾಡಿರುವೆನೆಂದು ಮರೆತುಬಿಟ್ಟಿರುತ್ತಾನೆ. ಚಾಚ್ಚು ಸತ್ತಿದ್ದಾನೆ ಎಂದು ಅಪ್ಪುವಿಗೆ ಅಜೇಯ್ ಇಬ್ಬರಿಗೂ  ಗೊತ್ತಿದ್ದರೂ ಪರಸ್ಪರ ಹೇಳಿಕೊಳ್ಳದೆ ಚಾಚ್ಚು ಕಾಣೆಯಾಗಿದ್ದಾನೆಂದು ಪೊಲೀಸ್ ದೂರು ಕೊಟ್ಟು ಅವನನ್ನು ಹುಡುಕುವ ನೆಪ ಮಾಡುತ್ತಲೇ ಇರುತ್ತಾರೆ. ಈ ಮದ್ಯೆ ಪ್ರವೀಣಾ ಕೂಡ ಕ್ಯಾನ್ಸರಿನಿಂದ ಸಾವನ್ನಪ್ಪುತ್ತಾಳೆ.

ಇದನ್ನೂ ಓದಿ:ಅಕೇಲಿ: ಯುದ್ಧಭೂಮಿಯಲ್ಲಿ ಸಿಲುಕಿದ ಯುವತಿಯ ಕಥೆ

ಇಡೀ ಚಿತ್ರ ನಮ್ಮನ್ನು ಸ್ತಬ್ಧವಾಗಿಸಿಬಿಡುತ್ತದೆ.  ಎಲ್ಲಿಯೂ ನಮಗೆ ಯಾರ ಮೇಲೂ ಅನುಮಾನ ಬರುವುದಿಲ್ಲ. ಅಪ್ಪು ಪಿಳ್ಳೈನ ಸಿಡುಕು ಕೋಪ ನಮಗೆ ಆ ಪಾತ್ರದ ಮೇಲೆ ದ್ವೇಷಭಾವನೆ ಮೂಡಿಸುತ್ತದೆ. ಪ್ರತಿಕ್ಷಣ ಏನಾಗುವುದೋ ಎಂಬ ತಲ್ಲಣದಲ್ಲಿ ಜೀವ ಬಿಗಿಹಿಡಿದು ನೋಡುವಂತೆ ಮಾಡುತ್ತದೆ ಕಿಷ್ಕಿಂದಾ ಕಾಂಡಂ. ಕೊನೆಗೆ ನಿಜ ಗೊತ್ತಾದಾಗ ಚಾಚ್ಚುವಿನ ಅನ್ಯಾಯದ ಸಾವು ನಮ್ಮ ಕಣ್ಣಲ್ಲಿ ನೀರು ತರಿಸುತ್ತದೆ. ಅಪ್ಪುವಿನ ದೌರ್ಬಲ್ಯ ಕೂಡ ಪ್ರೇಕ್ಷಕನ ಅನುಕಂಪ ಗಿಟ್ಟಿಸಿಬಿಡುತ್ತದೆ. ಕೇರಳದ ಹಚ್ಚಹಸಿರಿನ ಅದ್ಭುತ ಪರಿಸರದಲ್ಲಿ ಚಿತ್ರೀಕರಿಸಿದ ಈ ಸಿನಿಮಾ ಎಲ್ಲರೂ ನೋಡಬಹುದಾದ ಯಾವುದೇ ಮಸಾಲೆ ಇಲ್ಲದ ಸದಭಿರುಚಿಯ ಥ್ರಿಲ್ಲರ್ ಜಾನರ್‌ನ ಚಿತ್ರ.
ಮೂಲ ಮಲೆಯಾಳಂ ಆದರೂ ತಮಿಳು ತೆಲುಗು ಹಿಂದಿಯಲ್ಲೂ ಲಭ್ಯವಿದೆ

click me!