ನಟ ದುಲ್ಕರ್ ಸಲ್ಮಾನ್‌ರನ್ನು ಇಷ್ಟ ಪಡುತ್ತಿ ದ್ದಾಳೆಂದು ತನ್ನ ಹೆಂಡತಿಯನ್ನು ಗಂಡ ದ್ವೇಷಿಸುತ್ತಿದ್ದ ಸುದ್ದಿಯೊಂದು ಯಾವುದೋ ವೆಬ್‌ಸೈಟ್‌ನಲ್ಲಿ ಓದಿದ ನೆನಪು. ಸಿನಿಮಾ ನಟರ ಮೇಲೆ ಹೆಣ್ಣು ಮಕ್ಕಳಿಗೆ ಕ್ರಷ್ ಆಗಬಾರದೆಂಬ ಅಲಿಖಿತ ನಿಯಮ ಆದರೂ ಬಾಲಿವುಡ್‌ನ ಸಲ್ಮಾನ್ ಖಾನ್, ಶಾರೂಖ್ ಖಾನ್‌ರನ್ನು ಸುಪ್ತವಾಗಿ ಪ್ರೀತಿಸುತ್ತಿದ್ದ ಹುಡುಗಿಯರು ತೊಂಭತ್ತರ ದಶಕದಲ್ಲಿ ಮಾತ್ರವಲ್ಲ ಈಗಲೂ ಇದ್ದಾರೆ.
ಅರ್. ಕೇಶವಮೂರ್ತಿ
ರೂಪ ರಾವ್ ಇವರ ಮೇಲೊಂದು ಕತೆ ಮಾಡಿಕೊಂಡು, ‘ಇದು ಶಾಲಾ ದಿನಗಳಲ್ಲಿ ನಡೆಯುವ ನಮ್ಮ- ನಿಮ್ಮೆಲ್ಲರ ಕತೆ’ ಎಂದಿದ್ದಾರೆ. ಈ ಕಾರಣಕ್ಕೆ ಈ ಮೇಲಿನ ಪೀಠಿಕೆ. ಹಾಗೆ ಅವರು ಹೇಳಿದ ಆ ಕತೆಯ ಹೆಸರು ‘ಗಂಟುಮೂಟೆ’.
ಡಿಡಿಎಲ್‌ಜೆ, ಕುಚ್ ಕುಚ್ ಹೋತಾ ಹೈ, ಅಮ್ ಅಪ್‌ಕೇ ಹೇನ್ ಕೋನ್ ಮುಂತಾದ ಚಿತ್ರಗಳೇ ಆಳುತ್ತಿದ್ದ ದಿನಗಳಲ್ಲಿ ಆಗಷ್ಟೆ ಹೈಸ್ಕೂಲ್ ಮೆಟ್ಟಿಲೇರಿದ ಹುಡುಗಿಯರ ಪಾಲಿಗೆ ತಮ್ಮ ಸಹಪಾಠಿಗಳೇ ಸಲ್ಮಾನ್ ಖಾನ್, ಶಾರೂಖ್ ಖಾನ್‌ಗಳು. ಅವರನ್ನು ಇವರಲ್ಲಿ ಕಾಣುತ್ತ ಸುತ್ತಾಡುವ ಕ್ರೇಜ್ ಬೇರೆ. ಕಣ್ಣು ಕಣ್ಣು ಕಲೆತ ಮೇಲೆ ತುಟಿ ಸೇರಬಾರದೆ ಎನ್ನುವ ಯೋಚನೆ ಬರುವ ಹೊತ್ತಿಗೆ ಇವರಿಗೆ ಲೈಬ್ರರಿ, ಶಾಲೆಯ ಹಿಂಬಾಗ, ಖಾಲಿ ಚಿತ್ರಮಂದಿರದ ಕಾರ್ನರ್ ಸೀಟು, ಮರು- ಗಿಡಗಳಿಂದ ಕೂಡಿದ ಪಾರ್ಕುಗಳೇ ಲವ್ ಸ್ಪಾಟ್‌ಗಳು. ಕೈ ಕೈ ಮುಟ್ಟುವ, ಪರಸ್ಪರ ಹೆಗಲ ಮೇಲೆ ಕೈ ಹಾಕಿಕೊಂಡು ಓಡಾಡುವ ಪ್ರೇಮ ಪಕ್ಷಿಗಳನ್ನು ನೋಡಿ ರೇಗಿಸುವ ಗುಂಪು, ಹೈಸ್ಕೂಲ್ ಮುಗಿಸುವ ಮುನ್ನವೇ ಹೆಣ್ಣು ಮಕ್ಕಳಿಗೆ ಮದುವೆ ಮಾಡಲು ಯೋಚಿಸುವ ಹೆತ್ತವರು... ಹತ್ತಾರು ಅಂಶಗಳನ್ನು ಹೊತ್ತು ‘ಗಂಟುಮೂಟೆ’ ತೆರೆ ಮೇಲೆ ತೆರೆದುಕೊಳ್ಳುತ್ತದೆ.
ಫಿಲ್ಮ್ ಫೆಸ್ಟಿವಲ್‌ಗಳಲ್ಲಿ ಬಹು ಚರ್ಚಿತ ಸಿನಿಮಾ 'ಗಂಟುಮೂಟೆ'!
ರೂಪ ರಾವ್ ಅವರು ಆ ದಿನಗಳ ಪ್ರತಿಯೊಬ್ಬ ಹುಡುಗಿಯ ಕತೆ ಇದು ಎಂದು ಹೇಳಿದರೂ ಇದು ತಮ್ಮದೇ ಪ್ರೀತಿಯ ಪುಟಗಳು ಎನ್ನುವಷ್ಟು ತನ್ಮತೆಯಿಂದ ನಿರೂಪಿಸಿದ್ದಾರೆ. ಸಹಜತೆ ಹೆಸರಿನಲ್ಲಿ ಅಸಹಜತೆಯ ರೇಖೆ ದಾಟಿದ್ದಾರೆ ಅನಿಸುತ್ತದೆ. ಮೊದಲ ಭಾಗ ಶಾಲೆಯ ಸುತ್ತಲೇ ಗಿರಕಿ ಹೊಡೆಯುತ್ತದೆ. ಇಲ್ಲಿ ಸಂಕಲನಕಾರನ ಗೈರು ಹಾಜರಿ ಎದ್ದು ಕಾಣುತ್ತದೆ. ವಿರಾಮದ ನಂತರ ಮತ್ತೆ ಕಾಲೇಜು ಸುತ್ತ ತಿರುಗುತ್ತದೆ. ಶಾಲೆ ಮತ್ತು ಕಾಲೇಜಿನ ಕತೆಗೆ ವ್ಯತ್ಯಾಸವೇ ತೋರಿಸಲ್ಲ. ಶಾಲೆಯಲ್ಲಿ ಓದುವ ಕೆಲಸ ಬಿಟ್ಟು ಮೈ ಕೈ ತಾಕಿಸಿಕೊಂಡು ದೇಹಗಳ ಹಸಿವು ಹೆಚ್ಚಿಸಿಕೊಂಡರೆ ಬದುಕು ‘ಗಂಟುಮೂಟೆ’ ಕಟ್ಟಿಕೊಳ್ಳಬೇಕಾಗುತ್ತದೆಂದು ನಾಯಕನ ಪಾತ್ರದ ಮೂಲಕ ಹೇಳುವ ನಿರ್ದೇಶಕಿ, ಅದೇ ಹುಡುಗನ ಜತೆ ಹಸಿಬಿಸಿ ದೃಶ್ಯಗಳಲ್ಲಿ ಕಾಣಿಸಿಕೊಳ್ಳುವ ಹುಡುಗಿಗೆ ಮಾತ್ರ ಅದೊಂದು ಮರೆಯಲಾಗದ ಜೀವನ ಪುಟಗಳಾಗಿ ಉಳಿಯುವುದು ಹೇಗೆ?
ಸದ್ಯ ಈ ಜನರೇಷನ್ ಬಹುತೇಕ ಯುವ ಮನಸ್ಸುಗಳಲ್ಲಿ ಅರ್ಜುನ್ ರೆಡ್ಡಿಯೇ ತುಂಬಿಕೊಂಡಿದ್ದಾನೆ. ಒಂದು ಹಂತದಲ್ಲಿ ರಾಪ ರಾವ್ ಅವರ ‘ಗಂಟುಮೂಟೆ’ಯ ಶಾಲೆಗೆ ಅರ್ಜುನ್ ರೆಡ್ಡಿ ಬಂದುಬಿಟ್ನಾ ಎಂದು ಅಚ್ಚರಿ ಮೂಡಿಸುವ ದೃಶ್ಯಗಳನ್ನೇ ತುರುಕಿದ್ದಾರೆ. ಸಾಲದಕ್ಕೆ ಕಾಲು ಕೇಜಿ ಕತೆಗೆ ಎರಡು ಮುಕ್ಕಾಲು ಕೇಜಿ ಹಿನ್ನೆಲೆ ಡೈಲಾಗ್‌ಗಳನ್ನು ಹೇಳಿ, ಇಡೀ ಕತೆಯನ್ನು ಸಹಜತೆಯ ಹೆಸರಿನಲ್ಲಿ ಗ್ರಾಂಥಿ ಭಾಷೆಯಲ್ಲಿ ನಿರೂಪಿಸಿದಂತಿದೆ. ಇದರ ಹೊರತಾಗಿ ತೇಜು ಬೆಳವಾಡಿ ಒಳ್ಳೆಯ ನಟಿಯಾಗುವ ಭರವಸೆ ಮೂಡಿಸಿದರೆ, ತೆರೆ ಮೇಲೆ ಮತ್ತಷ್ಟು ಒಳ್ಳೆಯ ಕತೆಗಳನ್ನು ಮೂಡಿಸುವ ನಂಬಿಕೆ ಮೂಡಿಸುತ್ತಾರೆ ರೂಪ ರಾವ್. ತಾಂತ್ರಿಕವಾಗಿ ಸಹದೇವ್ ಕೆಲವಾಡಿ ಕೆಲಸ ಮೆಚ್ಚುವಂತಹುದು.