ಚಿತ್ರ ವಿಮರ್ಶೆ: ಇಂಡಿಯಾ ವರ್ಸಸ್‌ ಇಂಗ್ಲೆಂಡ್‌

By Suvarna News  |  First Published Jan 25, 2020, 8:28 AM IST

ಬದುಕಲ್ಲಿ ಸಿಕ್ಕಿರುವುದು ನಿಜವಾದ ವಜ್ರವೋ ಅಥವಾ ವಜ್ರದ ಹೆಸರಲ್ಲಿರುವ ನಕಲಿ ಪದಾರ್ಥವೋ ಎಂಬುದನ್ನು ಕಂಡುಹಿಡಿಯುವುದು ಕಷ್ಟಮತ್ತು ಕಂಡು ಹಿಡಿದು ಅದು ಎಲ್ಲಿ ಸೇರಬೇಕು ಅಲ್ಲಿ ಸೇರಿಸಿದಾಗಲೇ ನೆಮ್ಮದಿ ಪ್ರಾಪ್ತಿ ಎಂಬುದನ್ನು ಸೂಚ್ಯವಾಗಿ ಹೇಳಿರುವುದೇ ಈ ಸಿನಿಮಾದ ಶಕ್ತಿ. ಆ ವಜ್ರವನ್ನು ಯಾವುದಕ್ಕೆ ಬೇಕಾದರೂ ಹೋಲಿಸಬಹುದು ಅನ್ನುವುದೇ ಚಿತ್ರದ ವಿಶೇಷತೆ.


ರಾಜೇಶ್‌ ಶೆಟ್ಟಿ

ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್‌ ಈ ಸಲ ನೆಚ್ಚಿಕೊಂಡಿದ್ದು ಇಂಗ್ಲೆಂಡ್‌ ದೇಶವನ್ನು. ಅಲ್ಲಿ ಹೋಗಿ ಬದುಕು ಕಟ್ಟಿಕೊಂಡ ಆದ ಕನ್ನಡಿಗರ ಆತಂಕ, ಅಲ್ಲೇ ಹುಟ್ಟಿಬೆಳೆಯುತ್ತಿರುವ ಮಕ್ಕಳ ಲೋನ್ಲಿನೆಸ್‌, ಕನ್ನಡ ಪ್ರೇಮ ಬೆಳೆಸಬೇಕಾದ ಅನಿವಾರ್ಯತೆ, ದೇಶಪ್ರೇಮ ಜಾಗೃತಗೊಳಿಸಬೇಕಾದ ಸಾಧ್ಯತೆ ಇವೆಲ್ಲವನ್ನೂ ಸಾದ್ಯಂತವಾಗಿ ತಮ್ಮ ಎಂದಿನ ಶೈಲಿಯಲ್ಲಿ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕರು. ಇಲ್ಲಿ ಅವರಿಗೆ ಬಹುದೊಡ್ಡ ವರವಾಗಿ ಸಿಕ್ಕಿದ್ದು ಕಲಾವಿದರು. ವಸಿಷ್ಠ ಸಿಂಹ ಸ್ಕ್ರೀನ್‌ ಪ್ರೆಸೆನ್ಸ್‌ ಎಷ್ಟುಚೆನ್ನಾಗಿದೆ ಎಂದರೆ ಅವರು ತೆರೆ ಮೇಲೆ ಕಾಣಿಸಿಕೊಂಡಾಗೆಲ್ಲಾ ತೆರೆಗೆ ಘನತೆ ಬರುತ್ತದೆ. ಹಾಗಾಗಿ ಕನ್ನಡಕ್ಕೆ ಮತ್ತೊಬ್ಬ ಹೀರೋ ಸಿಕ್ಕ ಅನ್ನುವುದರಲ್ಲಿ ಡೌಟಿಲ್ಲ. ಮಾನ್ವಿತಾ ಮತ್ತು ಅವರ ಜೋಡಿ ಚೆಂದಾಚೆಂದ.

Tap to resize

Latest Videos

ಒಂದುಕಡೆ ಮಾನ್ವಿತಾ ಮತ್ತು ವಸಿಷ್ಠ ಪ್ರೇಮದಲ್ಲಿ ಬೀಳುತ್ತಿದ್ದರೆ ಇನ್ನೊಂದು ಕಡೆ ವಜ್ರದ ಹುಡುಕಾಟ ನಡೆಯುತ್ತಿರುತ್ತದೆ. ಹುಡುಕಾಟದಲ್ಲಿ ಕಡೆಗೆ ವಜ್ರದ ಮುಖವಾಡದ ಕಲ್ಲೂ ಸಿಗಬಹುದು, ಕಲ್ಲಿನ ರೂಪದ ವಜ್ರವೂ ದಕ್ಕಬಹುದು. ಅವರವರ ಪ್ರಾಪ್ತಿ. ಇಲ್ಲಿ ಒಂದು ಕತೆ ಹಲವು ಕವಲುಗಳಿವೆ. ಬೇರೆ ಬೇರೆ ದೃಷ್ಟಿಕೋನಗಳಿವೆ. ದೇವನೊಬ್ಬ ನಾಮ ಹಲವು ಎನ್ನುವಂತೆ ಹತ್ತು ಹಲವಾರು ನಿರ್ಮಾಪಕರೂ ಇದ್ದಾರೆ. ಆಗೊಮ್ಮೆ ಈಗೊಮ್ಮೆ ತೆರೆ ಮೇಲೆ ಕಾಣಿಸಿಕೊಳ್ಳುತ್ತಾರೆ. ಅನೇಕ ವಿಚಿತ್ರ, ವಿಶಿಷ್ಟಪಾತ್ರಗಳನ್ನು ನಿಭಾಯಿಸಿದ್ದೂ ಕೂಡ ಈ ಚಿತ್ರದ ಹೆಗ್ಗಳಿಕೆ. ಅದರಲ್ಲೂ ಡಾನ್‌ ಗೋಪಾಲ ಕುಲಕರ್ಣಿ ಲೆವೆಲ್ಲೇ ಬೇರೆ. ಸೆಟಲ್ಡ್‌ ಆ್ಯಕ್ಟರ್‌ ಅವರು. ಕಡೆಯವರೆಗೂ ಅವರ ಮುಖಭಾವ ಮತ್ತು ಕೂಲಿಂಗ್‌ ಗ್ಲಾಸು ಎರಡೂ ಬೆಳಕಿನ ಉಂಡೆಯಂತೆ ಒಂದೇ ಥರ ಕಾಣಿಸುತ್ತದೆ.

ಇಂಡಿಯಾ v/s ಇಂಗ್ಲೆಂಡ್‌ ಪ್ರೇಕ್ಷಕರು ಗೌರವಿಸುವ ಸಿನಿಮಾ: ನಾಗತಿಹಳ್ಳಿ ಚಂದ್ರಶೇಖರ್‌

ನಾಗತಿಹಳ್ಳಿಯವರು ತನ್ನದಲ್ಲದ ಕತೆಗೆ ತಮ್ಮ ಶಕ್ತಿಮೀರಿ ತನ್ನತನವನ್ನು ತುಂಬಿದ್ದಾರೆ. ಅಲ್ಲಲ್ಲಿ ನಾಗತಿಹಳ್ಳಿಯ ಟಚ್‌ ಕಾಣಿಸುತ್ತದೆ. ಒಮ್ಮೊಮ್ಮೆ ನೀವು ಮಾತನಾಡುತ್ತಿರುವ ಚಂದಾದಾರು ನೆಟ್‌ವರ್ಕ್ ಕ್ಷೇತ್ರದಿಂದ ದೂರ ಉಳಿಯುತ್ತಾರೆ. ಆಗೆಲ್ಲಾ ದೇಶಪ್ರೇಮವೆಂಬ ಶಕ್ತಿ ಮದ್ದು ತುಂಬಿ ವಾಪಸ್ಸು ಕರೆತರಲಾಗುತ್ತದೆ. ಕಡೆಗೆ ವಿಜಯ್‌ ಮಲ್ಯ ಗಾಂಧೀಜಿ ಕನ್ನಡಕವನ್ನು ಸತತ ಪ್ರಯತ್ನದ ಬಳಿಕ ಇಂಗ್ಲೆಂಡ್‌ನಿಂದ ಭಾರತಕ್ಕೆ ತಂದಾಗ ಆದಷ್ಟೇ ಸಂತೋಷ ಆಗುತ್ತದೆ. ಅಷ್ಟರ ಮಟ್ಟಿಗೆ ದೇಶಪ್ರೇಮದ ಕಿಡಿ ಹೊತ್ತಿಸುವಲ್ಲಿ ಇಂಡಿಯಾ ವರ್ಸಸ್‌ ಇಂಗ್ಲೆಂಡ್‌ ಯಶಸ್ವಿಯಾಗಿದೆ.

click me!