ಬದುಕು ಬಂಗಾರವಾಗಿಸಿ ಭರಪೂರ ಆದಾಯ : ಪದವೀಧರ ಯುವಕನ ಕೃಷಿ ಯಶೋಗಾಥೆ

Published : Oct 14, 2019, 10:58 AM ISTUpdated : Oct 14, 2019, 11:44 AM IST
ಬದುಕು ಬಂಗಾರವಾಗಿಸಿ ಭರಪೂರ ಆದಾಯ : ಪದವೀಧರ ಯುವಕನ ಕೃಷಿ ಯಶೋಗಾಥೆ

ಸಾರಾಂಶ

ಇದೊಂದು ಪದವೀಧರ ಯುವಕನ ಯಶೋಗಾಥೆ. ಕೃಷಿಯಲ್ಲೇ ಖುಷಿ ಕಂಡವನ ಸ್ಪೂರ್ತಿ ದಾಯಕ ವಿಚಾರ. 

ಸಿ.ಸಿದ್ದರಾಜು ಮಾದಹಳ್ಳಿ

ಮಳವಳ್ಳಿ [ಅ.14]:  ಕೃಷಿ ಕಾಯಕದಲ್ಲೇ ಖುಷಿ ಕಂಡ ಪದವೀಧರ ಯುವಕನೊಬ್ಬನ ಯಶೋಗಾಥೆ ಇದು.  ಸಾಂಪ್ರದಾಯಕ ಬೆಳೆ ಬೆಳೆದು ಸರಿಯಾದ ವೈಜ್ಞಾನಿಕ ಬೆಲೆ ಸಿಗದೇ, ಹಾಕಿದ್ದ ಬಂಡವಾಳವು ಕೈ ಸೇರದೇ ಆತಂಕದಲ್ಲೇ ಕಂಗೆಟ್ಟಿರುವ ರೈತರ ನಡುವೆ ಇಲ್ಲೊಬ್ಬ ಯುವಕ ಸಮುದಾಯಕ್ಕೆ ಮಾದರಿಯಾಗಿದ್ದಾರೆ.

ತಾಲೂಕಿನ ತಳಗವಾದಿ ದಿಲೀಪ್‌ ಕುಮಾರ್‌ (ವಿಶ್ವ) ಎಂಬ ಪದವೀಧರ ಯುವಕ ವೈಜ್ಞಾನಿಕ ಕೃಷಿ ಮೂಲಕ ಫೈರೋ (ಉದ್ದನೆಯ ಬೀನ್ಸ್‌) ಅಲ್ಪಾವಧಿ ಬೆಳೆ ಬೆಳೆದು ಉತ್ತಮ ಲಾಭಗಳಿಸಿ ಕೃಷಿಯಲ್ಲೇ ಖುಷಿ ಕಂಡುಕೊಂಡಿದ್ದಾರೆ.

ತಳಗವಾದಿಯ ದಿಲೀಪ್‌ ಕುಮಾರ್‌ ಎಂಎಸ್‌ಡಬ್ಲ್ಯೂ ವ್ಯಾಸಂಗ ಮಾಡಿದ್ದಾರೆ. ಮೈಸೂರಿನಲ್ಲಿ ಖಾಸಗಿ ಕಂಪನಿ ಕೆಲಸ ಪಡೆದು ಕೈ ತುಂಬಾ ಸಂಬಳ ಪಡೆಯುತ್ತಿದ್ದ ವೇಳೆಯಲ್ಲಿಯೇ ಕೃಷಿಯತ್ತ ಒಲವು ಮೂಡಿದ್ದರಿಂದ ಕೆಲಸಕ್ಕೆ ಸಲಾಂ ಹೊಡೆದು ಗ್ರಾಮಕ್ಕೆ ವಾಪಸ್‌ ಬಂದರು. ಮೊದಲಿಗೆ ಎಂದಿನಂತೆ ಕಬ್ಬನ್ನು ಹಾಕಿದ್ದರು. ವರ್ಷದವರೆಗೂ ಹಣಕ್ಕಾಗಿ ಕಾಯುವ ಸ್ಥಿತಿ ಮತ್ತು ನಿಗದಿತ ಸಮಯಕ್ಕೆ ಕಬ್ಬು ಕಟಾವು ಆಗದೇ ಹೋಯಿತು. ಇದರಿಂದ ಬೇಸರಗೊಂಡ ದಿಲೀಪ್‌ ಅಲ್ಪಾವಧಿ ತೋಟಗಾರಿಕೆ ಬೆಳೆ ಬೆಳೆಯಬೇಕೆಂದು ನಿರ್ಧರಿಸಿ ಮೊದಲು ಕಲ್ಲಂಗಡಿ ಹಾಕಿದ್ದರು. ಅದರಲ್ಲಿ ಲಾಭಕಂಡ ನಂತರ ಬೇಡಿಕೆಗೆ ತಕ್ಕಂತೆ ಸೌತೇಕಾಯಿ, ಪಪ್ಪಾಯಿ, ಚಂಡು ಹೂ ಸೇರಿದಂತೆ ಇತರೆ ಅಲ್ಪವಧಿ ಬೆಳೆ ಬೆಳೆದು ಯಶ ಕಂಡಿದ್ದಾರೆ.

ಫೈರೋ ಬೆಳೆಯಲ್ಲಿ ಹೆಚ್ಚಿನ ಲಾಭ:

ಕೇವಲ 3 ತಿಂಗಳ ಬೆಳೆಯಾದ ಉದ್ದನೆಯ ಬೀನ್ಸ್‌ ಅನ್ನು ಕಳೆದ ಐದಾರು ವರ್ಷಗಳಿಂದ ನಿರಂತರವಾಗಿ ಬೆಳೆದು ಲಾಭ ಗಳಿಸುತ್ತಿದ್ದಾರೆ. ಬೀನ್ಸ್‌ ಮೂರು ತಿಂಗಳ ಬೆಳೆಯಾದರೂ ಒಂದೂವರೆ ತಿಂಗಳಲ್ಲಿಯೇ ತರಕಾರಿ ಕಟಾವಿಗೆ ಬರುತ್ತಿದೆ. ಸುಮಾರು ಒಂದುವರೆ ತಿಂಗಳ ವರೆಗೆ ಪ್ರತಿದಿನ ಒಂದು ಟನ್‌ ಬೀನ್ಸ್‌ ಸಿಗುತ್ತಿದೆ. ಮೂರು ತಿಂಗಳಲ್ಲಿ ಒಂದೂವರೆಯಿಂದ ಎರಡು ಲಕ್ಷದ ಆದಾಯವನ್ನು ಪಡೆಯುತ್ತಿದ್ದಾರೆ. ಕರ್ನಾಟಕಕ್ಕಿಂತ ಕೇರಳ ಹಾಗೂ ತಮಿಳುನಾಡಿನ ಜನರು ಫೈರೋ ಬೀನ್ಸ್‌ ಅನ್ನು ಹೆಚ್ಚಾಗಿ ಉಪಯೋಗಿಸುತ್ತಾರೆ. ವರ್ಷದಿಂದ ವರ್ಷಕ್ಕೆ ಬೆಡಿಕೆ ಹೆಚ್ಚಾಗುತ್ತಿದೆ. ಓಣಂ ಹಬ್ಬದ ದಿನಗಳಲ್ಲಿ ಪ್ರತಿ ಕೆಜಿಗೆ .100ಕ್ಕೂ ಹೆಚ್ಚು ಬೆಲೆ ಸಿಗುವುದರಿಂದ ಫೈರೋ ಬೆಳೆ ರೈತರಿಗೆ ವರದಾನವಾಗಿದೆ.

ನೀರಿನ ಬಳಕೆ ಕಡಿಮೆ:

ತೋಟಗಾರಿಕೆ ಬೆಳೆಗೆ ಹನಿ ನೀರಾವರಿ ಅಳವಡಿಸಿದರೆ ನೀರನ್ನು ಅತಿ ಕಡಿಮೆ ರೀತಿಯಲ್ಲಿ ಬಳಕೆ ಮಾಡಲಾಗುತ್ತದೆ. ಬೋರ್‌ ವೆಲ್‌ನಿಂದ ಬರುವ ಉಳಿಕೆ ನೀರಿನಲ್ಲಿ ಉಳಿದ ಜಮೀನಿಗೂ ನೀರನ್ನು ಒದಗಿಸಬಹುದಾಗಿದೆ. ಜೊತೆಗೆ ನೀರನ್ನು ಮಿತವಾಗಿ ಬಳಸುವುದರಿಂದ ಗಿಡಗಳ ಮಧ್ಯೆ ಕಳೆ ಬೆಳೆಯಲು ಅವಕಾಶ ಇಲ್ಲದಂತಾಗಿದೆ.

ಮೈಸೂರು ಕೃಷಿ ಮಾರುಕಟ್ಟೆಗೆ ರವಾನೆ:

ಪ್ರತಿದಿನವೂ ಕಟಾವು ಮಾಡಿದ ತರಕಾರಿಯನ್ನು ಮೈಸೂರು ಕೃಷಿ ಮಾರುಕಟ್ಟೆಗೆ ಕೊಂಡೊಯ್ಯುತ್ತಾರೆ. ಪ್ರತಿದಿನವೂ ಬೆಲೆ ಪ್ರಮಾಣ ಏರಿಳಿತ ಕಂಡರೂ ಪ್ರತಿ ಕೆಜಿಗೆ ಸರಾಸರಿ 25 ರು. ಸಿಗುತ್ತಿದೆ. ಇದರಿಂದ ಯಾವುದೇ ರೀತಿಯ ನಷ್ಟವಾಗುತ್ತಿಲ್ಲ. ಆದರೇ ತಾಲೂಕು ಮಟ್ಟದಲ್ಲಿ ತೋಟಗಾರಿಕೆ ಬೆಳೆಗಳ ಮಾರಾಟಕ್ಕೆ ಅವಕಾಶ ಕಲ್ಪಿಸಿದರೆ ಇಲ್ಲಿನ ರೈತರಿಗೆ ಇನ್ನೂ ಹೆಚ್ಚಿನ ಅನುಕೂಲವಾಗುತ್ತದೆ ಎಂಬುವುದು ರೈತರ ಒತ್ತಾಯವಾಗಿದೆ.

ಕೃಷಿಯತ್ತ ಮುಖಮಾಡಿದ ಯುವಕರು

ಮಳವಳ್ಳಿ ತಾಲೂಕಿನ ತಳಗವಾದಿ ಗ್ರಾಮದಲ್ಲಿಯೇ ಸುಮಾರು 25ರಿಂದ 30ರ ಯುವಕ ತಂಡ ಸುಮಾರು 30 ಎಕರೆಯಲ್ಲಿ ಫೈರೋ ಬೀನ್ಸ್‌ ಬೆಳೆಯನ್ನು ಬೆಳೆಯುತ್ತಿದ್ದಾರೆ. ಎಲ್ಲರೂ ಒಂದೆಡೆ ಸೇರಿ ಒಂದು ಟ್ಯಾಕ್ಸಿಯ ಮೂಲಕ ಬೆಳೆಯನ್ನು ತೆಗೆದುಕೊಂಡು ಹೋಗುತ್ತಾರೆ. ಜೊತೆಗೆ ಅನಾವಾಶ್ಯಕ ಖರ್ಚು ವೆಚ್ಚಗಳನ್ನು ಕಡಿಮೆ ಮಾಡಿಕೊಂಡು ಹೆಚ್ಚು ಲಾಭ ಗಳಿಸಲು ಯುವಕರ ತಂಡ ಚಿಂತನೆ ನಡೆಸುತ್ತಿದ್ದಾರೆ. ಹನಿ ನೀರಾವರಿ ಅಳವಡಿಸಿರುವುದರಿಂದ ಬೇಡವಾದ ಗಿಡಗಳು ಕೂಡ ಬೆಳೆಯುವುದಿಲ್ಲ. ಕಬ್ಬನ್ನು ಹಾಕಿ ಸರಿಯಾದ ವೈಜ್ಞಾನಿಕ ಬೆಲೆ ಸಿಗದೇ ಪರದಾಡುತ್ತಿರುವ ಮಂಡ್ಯ ಜಿಲ್ಲೆಯ ರೈತರು ಒಂದೇ ತರಹದ ಬೆಳೆಯನ್ನು ಬೆಳೆಯುವ ಬದಲು ವಿವಿಧ ರೀತಿಯ ಅಲ್ಪವಧಿ ಬೆಳೆಗಳನ್ನು ಬೆಳೆಯುವುದರ ಮೂಲಕ ಲಾಭ ಗಳಿಸಬಹುದು.

ನಾನು ಮಾಡುತ್ತಿದ್ದ ವೃತ್ತಿಗೆ ರಾಜೀನಾಮೆ ನೀಡಿ ವ್ಯವಸಾಯ ಮಾಡಲು ಬಂದೆ. ಮೊದಲು ಕಬ್ಬು ಬೆಳೆದೆ. ಆದರೆ ಅದರಲ್ಲಿ ಲಾಭವೂ ಕಡಿಮೆ ಜೊತೆಗೆ ಒಂದು ವರ್ಷ ಹಣಕ್ಕಾಗಿ ಕಾಯಬೇಕಿತ್ತು. ವೈಜ್ಞಾನಿಕ ಕೃಷಿ ಪದ್ಧತಿ ಯೊಂದಿಗೆ ಅಲ್ಪವಧಿ ಬೆಳೆ ಬೆಳೆಯಲು ಪ್ರಾರಂಭ ಮಾಡಿದ್ದಾಗಿನಿಂದ ಕಡಿಮೆ ಅವಧಿಯಲ್ಲಿ ಹೆಚ್ಚು ಲಾಭ ಸಿಗುತ್ತಿದೆ. ಕೃಷಿಯಲ್ಲಿಯೇ ಖುಷಿ ಕಂಡಿದ್ದೇನೆ.

ದಿಲೀಪ್‌ ಕುಮಾರ್‌ (ವಿಶ್ವ). ಯುವ ಕೃಷಿಕ

PREV
click me!

Recommended Stories

Breaking ಮಂಡ್ಯ ಬಸ್ ಅಪಘಾತದಲ್ಲಿ 23 ಪ್ರಯಾಣಿಕರಿಗೆ ಗಾಯ, ಇಬ್ಬರು ಗಂಭೀರ
ದೇವರ ದರ್ಶನ ಮುಗಿಸಿ ಬೆಂಗಳೂರಿಗೆ ಮರಳುತ್ತಿದ್ದ ಬಸ್ ಮಂಡ್ಯ ಬಳಿ ಪಲ್ಟಿ, 8 ಮಂದಿಗೆ ಗಾಯ