ಶೂನ್ಯ ಕೃಷಿಯಿಂದ ಲಕ್ಷಾಂತರ ಲಾಭ ಪಡೆಯುತ್ತಿರುವ ಐಟಿಐ ಪದವೀಧರ!

By Suvarna News  |  First Published Mar 24, 2020, 4:30 PM IST

ಒಂಚೂರೂ ರಾಸಾಯನಿಕ ಬಳಸದೇ ಅದ್ಭುತವಾದ ಕೃಷಿ ಮಾಡಿದ ಯುವಕ ಶಂಕರ್‌ ಸೊಗಲಿ. ಸುಭಾಷ್‌ ಪಾಳೇಕರ್‌ ಜೊತೆಗೇ ಇದ್ದು ಕೃಷಿ ಕಲಿತು ತಮ್ಮ ಜಮೀನಿನಲ್ಲಿ ಅಳವಡಿಸುತ್ತಿದ್ದಾರೆ. ಅವರ ಕೃಷಿಯ ವಿವರ ಇಲ್ಲಿದೆ.


- ಪ.ನಾ.ಹಳ್ಳಿ.ಹರೀಶ್‌ ಕುಮಾರ್‌

ರಾಜ್ಯಕ್ಕೆ ಭೇಟಿ ನೀಡುವ ವಿದೇಶೀ ಕೃಷಿ ಅಧ್ಯಯನಕಾರರ ಪಯಣವೀಗ ಹಾವೇರಿ ಜಿಲ್ಲೆಯ ಶಿಗ್ಗಾವ ತಾಲ್ಲೂಕಿನ ಕುನ್ನೂರೆಂಬ ಸಣ್ಣ ಗ್ರಾಮದ ಕಡೆಗೆ ಸಾಗಿದೆ. ಅವರ ಭೇಟಿಗೆ ಪ್ರಮುಖ ಕಾರಣ ಕುನ್ನೂರು ಗ್ರಾಮದ ಯುವ ರೈತ ಶಂಕರ್‌ ಸೊಗಲಿಯವರ ಅದ್ವಿತೀಯ ಸಹಜ ಕೃಷಿ ಪದ್ಧತಿಯ ಅದ್ಬುತ ಯಶಸ್ಸು.

Tap to resize

Latest Videos

undefined

ಇದ್ದ 1.29 ಎಕರೆ ಜಮೀನಿನಲ್ಲಿ ಸಿಗುತ್ತಿದ್ದ ಅಲ್ಪ ಸ್ವಲ್ಪ ಅಂತರ್ಜಲದಿಂದ ತೋಟವನ್ನು ಉಳಿಸಿಕೊಳ್ಳಲು ಪರದಾಡುತ್ತಿದ್ದ ಅಪ್ಪನ ಹರಸಾಹಸವನ್ನು ನೋಡಲಾಗದೇ, ಯುವಕ ಶಂಕರ್‌ ಮಹಾರಾಷ್ಟ್ರಕ್ಕೆ ತೆರಳಿ ಸಹಜ ಕೃಷಿ ಪದ್ಧತಿಯ ಹರಿಕಾರ ಸುಭಾಷ್‌ ಪಾಳೇಕಾರ್‌ ಅವರನ್ನು ಭೇಟಿಮಾಡಿ ಅವರೊಂದಿಗೆ ಕೆಲಕಾಲ ತಂಗಿದ್ದು ಸಾಕಷ್ಟುಸಹಜ ಕೃಷಿ ವಿಧಾನಗಳನ್ನು ಕರಗತಮಾಡಿಕೊಂಡು ನೇರವಾಗಿ ತನ್ನ ಹಳ್ಳಿಗೆ ತೆರಳಿ ಪಾಳೇಕಾರರ ಕೃಷಿ ವಿಧಾನಗಳನ್ನು ಪ್ರಯೋಗಕ್ಕೆ ಅಳವಡಿಸಿದರು. ತತ್ಫಲವಾಗಿ ಇಂದು ಅವರ ಕೃಷಿ ತೋಟ ನೋಡುಗರ ಕಣ್ಮನಗಳ ತಣಿಸುವುದಲ್ಲದೇ ಶೂನ್ಯ ಬಂಡವಾಳ ಅನುಸರಿಸಿ ಆದಾಯ ಗಳಿಸುವುದು ಹೇಗೆನ್ನುವುದನ್ನು ಯುವ ಹಾಗೂ ಬಡ ಕೃಷಿಕರಿಗೆ ತಿಳಿಸಿಕೊಡುತ್ತಿದೆ.

ರೈಜೋಬಿಯಂ ಅಣುಜೀವಿ ಗೊಬ್ಬರದ ಪ್ರಯೋಜನವೇನು?

*

ಈ ವಿಧಾನದಲ್ಲಿ ನೀರು ದುಪ್ಪಟ್ಟಾಯ್ತು

ಸ್ವತಃ ಐಟಿಐ ಪದವೀಧರರಾದ ಶಂಕರ್‌ರವರು ಅಪ್ಪನೊಂದಿಗೆ ಕೈಜೋಡಿಸಿದಾಗ ಮೊದಲು ಅವರಿಗೆ ಎದುರಾದದ್ದು ನೀರಿನ ಅಭಾವ. ಇದ್ದ ಬೋರೊಂದರಲ್ಲಿ ಎರೆಡಿಂಚಿನಷ್ಟುನೀರು ಸಿಗುತ್ತಿತ್ತಾದರೂ ಅವರ ಜಮೀನಿಗೆ ಅದು ಸಾಕಾಗುತ್ತಿರಲಿಲ್ಲ. ಅದಕ್ಕಾಗಿ ಶಂಕರ್‌ ಮಾಡಿದ ಮೊದಲ ಕೆಲಸವೇ ಬೋರ್‌ವೆಲ್‌ನ ಎರಡೂ ಬದಿಗೆ ಎರಡು ಮೀಟರ್‌ ಆಳದ ಇಂಗುಗುಂಡಿಯನ್ನು ನಿರ್ಮಿಸಿ, ಮರಳು, ಇದ್ದಿಲು ಹಾಗೂ ದಪ್ಪ ಜಲ್ಲಿಕಲ್ಲನ್ನು ತುಂಬಿದರು. ಅಲ್ಲದೇ ಹೊಲದ ಸುತ್ತಲೂ ನೀರಿನ ಹರಿಯನ್ನು ನಿರ್ಮಿಸಿ ಮಳೆಗಾಲದಲ್ಲಿ ತೋಟದಿಂದ ಒಂದು ಹನಿ ನೀರನ್ನೂ ಹೊರಹೋಗದಂತೆ ಹರಿಯ ಮೂಲಕ ಇಂಗುಗುಂಡಿಗಳಿಗೆ ಹರಿಸುತ್ತಾರೆ. ಇದರ ಪರಿಣಾಮವಾಗಿ ಇಂದು ಬೋರ್‌ವೆಲ್‌ನಲ್ಲಿನಲ್ಲಿ ನೀರು ದುಪ್ಪಟ್ಟಾಗಿದೆ. ವರ್ಷಕ್ಕೆ ಒಂದು ಬೆಳೆ ಬೆಳೆಯಲೂ ಪರದಾಡುತ್ತಿದ್ದ ಅಪ್ಪನ ಹೊಲದಲ್ಲೀಗ ಮೂರು ಬೆಳೆಗಳನ್ನು ಬೆಳೆಯುವಲ್ಲಿ ಶಂಕರ್‌ ಯಶಸ್ವಿಯಾಗಿದ್ದಾರೆ.

ಸಹಜ ಕೃಷಿ ವಿಧಾನಗಳ ಅಳವಡಿಕೆ

ನೀರಿನ ಸಮಸ್ಯೆ ಬಗೆಹರಿದ ನಂತರ ಶಂಕರ್‌ರವರ ದೃಷ್ಟಿನೆಟ್ಟದ್ದು ಸುಭಾಷ್‌ ಪಾಳೇಕಾರರಿಂದ ತಾನು ತಿಳಿದು ಬಂದಿದ್ದ ಸಹಜ ಕೃಷಿಯ ಪ್ರಮುಖ ಆಧಾರಸ್ತಂಭಗಳಾದ ಬೀಜಾಮೃತ, ಘನಜೀವಾಮೃತ, ಹೊದಿಕೆ ಮತ್ತು ವಾಪಾಸಾ ವಿಧಾನಗಳ ಕಡೆಗೆ. ಅದಕ್ಕಾಗಿ ಒಂದು ಆಕಳನ್ನು ಸಾಕಿದ ಅವರು ಅದರಿಂದ ದೊರೆಯುವ ಸೆಗಣಿ ಹಾಗೂ ಗೋಮೂತ್ರದಿಂದ ತಾನು ಕಲಿತ ಸಹಜ ಬೇಸಾಯ ಕ್ರಮಗಳನ್ನು ಅನುಷ್ಠಾನಗೊಳಿಸಲು ಮುಂದಾದರು. ಈ ವಿಧಾನಗಳನ್ನು ಅನುಸರಿಸಿ ಕೃಷಿ ಮಾಡಿದರೆ ಕೃಷಿಯ ಕನಿಷ್ಠ ಅನುಭವವಿಲ್ಲದವರೂ ಸಹ ಶೂನ್ಯ ಬಂಡವಾಳದ ಕೃಷಿಯಿಂದ ಅಪಾರ ಲಾಭ ಪಡೆಯಬಹುದೆಂಬುದು ಶಂಕರ್‌ರವರ ಅಭಿಪ್ರಾಯ.

ಬೀಜಾಮೃತ ಪದ್ಧತಿ

ಶಂಕರ್‌ರವರ ಪ್ರಕಾರ ಬೀಜ ಬಿತ್ತನೆಗೂ ಮುನ್ನ ಬೀಜಾಮೃತ ಪದ್ಧತಿ ಅನುಸರಿಸಬೇಕಂತೆ. ಅಂದರೆ ಯಾವುದೇ ಬಿತ್ತನೆ ಅಥವಾ ನಾಟಿಗೆ ಮೊದಲು ಬೀಜಕ್ಕೆ ಸಂಸ್ಕಾರ ನೀಡುವುದೇ ಬೀಜಾಮೃತ ಪದ್ಧತಿ. 20 ಲೀಟರ್‌ ನೀರಿನೊಂದಿಗೆ 5 ಲೀಟರ್‌ ಗೋಮೂತ್ರ, 5 ಕಿಲೋ ಸೆಗಣಿ ಮತ್ತು 50 ಗ್ರಾಂ ಸುಣ್ಣವನ್ನು ಬೆರೆಸಿ ಸಿದ್ಧಪಡಿಸಲಾದ ದ್ರವದಲ್ಲಿ ಬಿತ್ತನೆ ಮಾಡಬೇಕಾದ ಬೀಜಗಳನ್ನು ಅದ್ದಿ ಬಿತ್ತನೆ ಮಾಡುತ್ತಾರೆ. ಇದರಿಂದಾಗಿ ಬಿತ್ತನೆಯಾದ ಬೀಜಕ್ಕೆ ಸುಮಾರು 40ದಿನಗಳ ಕಾಲ ಗಾಳಿ, ನೀರು, ಮಣ್ಣಿನಿಂದ ಯಾವುದೇ ರೋಗಬಾಧೆ ಉಂಟಾಗುವುದಿಲ್ಲವಂತೆ. ಇದೊಂದು ಶೂನ್ಯ ಬಂಡವಾಳ ವಿಧಾನವಾಗಿದ್ದು ಸುಣ್ಣಕ್ಕಷ್ಟೇ ಹಣ ಖರ್ಚಾಗಬಹುದು.

ಕಲಬುರಗಿಯಲ್ಲಿ 'ಭೀಮಾ' ಬಲ; ದ್ರಾಕ್ಷಿ ಕೃಷಿಯಿಂದ ರೈತನ ಕಜಾನೆ ಫುಲ್ ಕಾಂಚಣ!

ಜೀವಾಮೃತದ ಪೋಷಣೆ

ಬೆಳೆಯುತ್ತಿರುವ ಬೆಳೆಗಳಿಗೆ ಜೀವಾಮೃತ ವಿಧಾನವನ್ನು ಅನುಸರಿಸಿ ಕಾಲಕಾಲಕ್ಕೆ ಪೋಷಕಾಂಶಗಳನ್ನು ಒದಗಿಸುವುದು ಅವರ ಮತ್ತೊಂದು ಯಶಸ್ವೀ ಪದ್ಧತಿಯಾಗಿದೆ. ಜೀವಾಮೃತವೆಂದರೆ ಮಣ್ಣಿನ ಕಣಗಳಲ್ಲಿರುವ ಖನಿಜಾಂಶಗಳನ್ನು ಸಂಪೂರ್ಣವಾಗಿ ಸದ್ಭಳಕೆ ಮಾಡಿಕೊಳ್ಳುವ ವಿಧಾನವಾಗಿದ್ದು ಅಲಭ್ಯ ರೂಪದಲ್ಲಿನ ಖನಿಜಾಂಶಗಳನ್ನು

ಲಭ್ಯರೂಪಕ್ಕೆ ಮಾರ್ಪಡಿಸಿಕೊಳ್ಳುವ ನೈಸರ್ಗಿಕ ವಿಧಾನ ಇದಾಗಿದೆ. ಇದಕ್ಕಾಗಿ ಶಂಕರ್‌ ಅವರು 200 ಲೀಟರ್‌ ನೀರಿಗೆ 10ಕಿಲೋಗ್ರಾಂಗಳಷ್ಟುಸಗಣಿ (ಪ್ರತೀ ಗ್ರಾಂ ಸಗಣಿಯಲ್ಲಿ 500ಕೋಟಿ ಜೀವಕಣಗಳಿವೆಯಂತೆ), 2 ಕಿಲೋಗ್ರಾಂನಷ್ಟುಬೆಲ್ಲ (ಬೆಲ್ಲ ಲಭ್ಯವಿಲ್ಲದಿದ್ದರೆ ಕಳಿತ ಬಾಳೆಹಣ್ಣು, ಚಿಕ್ಕು ಅಥವಾ ಪಪ್ಪಾಯಗಳಾದರೂ ನಡೆದೀತು) ಮತ್ತು

2 ಕಿಲೋಗ್ರಾಂನಷ್ಟುದ್ವಿದಳ ಧಾನ್ಯದ ಹಿಟ್ಟನ್ನು ಬೆರೆಸುತ್ತಾರೆ. ಇವುಗಳೊಟ್ಟಿಗೆ ನ್ಯೂಟ್ರಿಯೆಂಟ್ಸ್‌ಗಳ ಅಭಿವೃದ್ಧಿಗಾಗಿ ಹೊಲದ ಬದುವಿನಲ್ಲಿನ ಹಿಡಿ ಮಣ್ಣನ್ನು ಅದಕ್ಕೆ ಸೇರಿಸುತ್ತಾರೆ. ಸಿದ್ಧಪಡಿಸಿದ ಮಿಶ್ರಣವನ್ನು 48 ಗಂಟೆಗಳವರೆಗೂ ಇಟ್ಟು ತದನಂತರ ತೇವಾಂಶವಿರುವ ಭೂಮಿಗೆ ಹನಿ ನೀರಾವರಿಯ ಕೊಳವೆಗಳ ಮೂಲಕ ಅಥವಾ ನೇರವಾಗಿ ಗಿಡಗಳ ಬುಡಕ್ಕೇ ಜೀವಾಮೃತವನ್ನು ತಲುಪಿಸುತ್ತಾರೆ. ಪ್ರತೀ 15 ದಿನಗಳಿಗೊಮ್ಮೆ ಹೀಗೆ ಜೀವಾಮೃತವನ್ನು ಹೊಲಕ್ಕೆ ನೀಡುತ್ತಾ ಹೋದರೆ ಮಣ್ಣಿನ ಫಲವತ್ತತೆ ಹೆಚ್ಚುತ್ತದೆಯಂತೆ. ಯಾವುದೇ ರಾಸಾಯನಿಕ ಉತ್ಪನ್ನಗಳನ್ನು ಬಳಸದೇ ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುವ ಈ ವಿಧಾನವು ಆಕರ್ಷಕ ಮತ್ತು ಉಪಯುಕ್ತವೂ ಆಗಿದೆ. ಜರ್ಸಿ ಆಕಳಿನ ಸೆಗಣಿಗಿಂತಲೂ ನಾಟಿ ಆಕಳ ಸಗಣಿಗೆ ಈ ಸೂತ್ರ ಹೆಚ್ಚು ಯಶಸ್ಸನ್ನು ನೀಡುತ್ತದೆಯಂತೆ.

ಜಮುನಾಪುರ ಮೇಕೆ ಮಾಂಸಕ್ಕೂ ಸೈ, ಹಾಲಿಗೂ ಸೈ!

ಮಣ್ಣಿನಲ್ಲಿನ ತೇವಾಂಶವನ್ನು ಸದಾಕಾಲ ಹಿಡಿದಿಡಲು ಶಂಕರ್‌ರವರು ರಸ್ತೆಬದಿಯ ಕಸ, ಸಂತೆಯ ತ್ಯಾಜ್ಯ ಸಂಗ್ರಹಿಸಿ ತಂದು ಹೊಲದ ನೆಲಕ್ಕೆ ಹೊದಿಸುತ್ತಾರೆ. ಇದಕ್ಕೆ ಸಹಜ ಕೃಷಿಯಲ್ಲಿ ಹೊದಿಕೆ ವಿಧಾನ ಎನ್ನುತ್ತಾರೆ. ಈ ವಿಧಾನದಿಂದಾಗಿ ಸೂರ್ಯನ ಬೆಳಕು ಚದುರುವುದಲ್ಲದೇ ಕಳೆ ಸಸ್ಯಕ್ಕೆ ಬೆಳೆಯಲು ಆಸ್ಪದವಿರುವುದಿಲ್ಲ. ಇಲ್ಲಿ ಭೂಮಿಯ ಗುರುತ್ವ ಬಲದೊಂದಿಗೆ ಕೇಶಾಕರ್ಷಣ ಬಲ ಕಾರ್ಯನಿರ್ವಹಿಸಿ ಭೂಮಿಯಲ್ಲಿನ ತೇವಾಂಶ ಆವಿಯಾಗದೇ ಆ ನೀರನ್ನು ಬೇರುಗಳು ಹೀರಲು ಸಹಾಯಕವಾಗಿ ಉತ್ತಮ ಇಳುವರಿ ಪಡೆಯಬಹುದಾಗಿದೆ.

ವಾಪಾಸಾ ಅನ್ನೋ ಹೊಸ ಟೆಕ್ನಿಕ್‌

ಕೊನೆಯದಾಗಿ ವಾಪಾಸಾ ವಿಧಾನವನ್ನೂ ಅನುಸರಿಸುವ ಶಂಕರ್‌ರವರು ಪ್ರತೀ ಮೂರು ವರ್ಷಕ್ಕೊಮ್ಮೆ ಸ್ವತಃ ಭೂಮಿಯು ತಾನಾಗಿಯೇ ಸೂಕ್ಷ್ಮ ಪರ್ಯಾವರಣದ ಮೂಲಕ ತನ್ನ ಸಂಪನ್ಮೂಲತೆಯನ್ನು ಹೆಚ್ಚಿಸಿಕೊಳ್ಳುತ್ತದೆ ಎನ್ನುತ್ತಾರೆ. ಇದಕ್ಕಾಗಿ ಹ್ಯೂಮಸ್‌ ಅಭಿವೃದ್ಧಿಯನ್ನು ನಡೆಸುತ್ತಾರೆ. ಇಲ್ಲಿ ಎರೆಹುಳುಗಳ ಕಾರ್ಯವು ಪ್ರಮುಖವಾಗಿದ್ದು ಜೀವಾಮೃತವನ್ನು ನೀಡಿ ಹೊದಿಕೆ ವಿಧಾನ ಅನುಸರಿಸಿದರೆ ನಾಲ್ಕೇ ವಾರಕ್ಕೆ ಎರೆಹುಳುಗಳು ಭೂಮಿಯ ಸಾಕಷ್ಟುಆಳದ ಮಣ್ಣನ್ನು ಹೊತ್ತು ತಂದು ಮೇಲ್ಬಾಗಕ್ಕೆ ತಲುಪಿಸಿ ಮಣ್ಣನ್ನು ಫಲವತ್ತಾಗಿಸುತ್ತವೆಯಂತೆ. ಈ ಫಲವತ್ತಾಗಿಸುವ ಕ್ರಿಯೆಯು ಅವಿಶ್ರಾಂತ ಮತ್ತು ನಿರಂತರವಾಗಿರುತ್ತದೆ.

ವಾಯುಮಂಡಲದಲ್ಲಿ ಯಥೇಚ್ಛವಾಗಿರುವ ಸಾರಜನಕವನ್ನು ಸ್ಥಿರೀಕರಿಸುವ ಸಲುವಾಗಿ ತೋಟದ ಸುತ್ತಲೂ ಗಾಳಿಮರಗಳನ್ನು (ಸರ್ವೇ ಗಿಡ) ನೆಟ್ಟಿರುವ ಶಂಕರ್‌ರವರು ಅಲಭ್ಯ ರೂಪದ ಸಾರಜನಕವನ್ನು ಲಭ್ಯರೂಪಕ್ಕೆ ಮಾರ್ಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಅಲ್ಲದೇ ಈ ಗಿಡಗಳು ಶುದ್ಧ ಆಕ್ಸಿಜನ್‌ ನೀಡುವುದರಿಂದ ಅದು ಇಳುವರಿಯ ಮೇಲೂ ಗುಣಾತ್ಮಕ ಪ್ರಭಾವ ಬೀರಿ ವಾತಾವರಣದಲ್ಲಿನ ಅನಿಲಗಳ ಸಮತೋಲನವನ್ನೂ ಕಾಯ್ದುಕೊಳ್ಳಲು ನೆರವಾಗುತ್ತದೆ.

ಆಕಳೊಂದು ಪ್ರತೀದಿನ ಹತ್ತು ಕಿಲೋ ಸೆಗಣಿ ಹಾಗೂ ಹತ್ತು ಲೀಟರಿನಷ್ಟುಗೋಮೂತ್ರವನ್ನು ನೀಡುವುದಿದ್ದು ಈ ಪ್ರಮಾಣವು ಒಂದು ಎಕರೆ ಜಮೀನಿಗೆ ಒಂದು ತಿಂಗಳಿಗೆ ಸಾಕಾಗುತ್ತದೆಯಂತೆ. ಆದ್ದರಿಂದ ಒಂದು ಆಕಳಿನಿಂದ ತಿಂಗಳಿಗೆ ದೊರೆಯುವ ಗೋಮೂತ್ರ ಹಾಗೂ ಸೆಗಣಿಯಿಂದ 30 ಎಕರೆಯಷ್ಟುಹೊಲದಲ್ಲಿ ಸಹಜ ಕೃಷಿ ವಿಧಾನ ಅಳವಡಿಸಬಹುದಂತೆ. ತನ್ನ ಬೆಳೆಗಳಿಗೆ ಇದುವರೆವಿಗೂ ಯಾವುದೇ ರೀತಿಯ ರಾಸಾಯನಿಕ ರಸಗೊಬ್ಬರ ಅಥವಾ ಕೀಟನಾಶಕಗಳನ್ನು ಬಳಸದೇ ಇರುವ ಶಂಕರ್‌ರವರು ಅತೀ ಶುದ್ಧ ವಿಧಾನದಲ್ಲಿ ನೈಸರ್ಗಿಕ ಕೃಷಿಯನ್ನು ನಡೆಸುತ್ತಿದ್ದು ಗಿಡಗಳಿಗೆ ಯಾವುದಾದರೂ ಕೀಟಬಾಧೆ ಕಂಡುಬಂದರೆ ಅದಕ್ಕೂ ಸಹ ಗೋಮೂತ್ರದಿಂದ ನೇಮಾಸ್ತ್ರ, ಅಗ್ನಿಅಸ್ತ್ರ, ಗಜಕರ್ಣದಂತಹ ನೈಸರ್ಗಿಕ ಕೀಟನಾಶಕಗಳನ್ನೇ ಸಿದ್ಧಪಡಿಸಿ ಬಳಸುತ್ತಾರೆ.

ಶೂನ್ಯ ಬಂಡವಾಳದಿಂದ ಲಕ್ಷಾಂತರ ಲಾಭ

ತನ್ನ ತುಂಡು ಜಮೀನಿನಲ್ಲಿಯೇ ಅಡಿಕೆ, ಅಂಗಾಂಶಬಾಳೆ, ಶ್ರೀಗಂಧ, ತೆಂಗು, ಲಿಂಬೆ, ಪೇರಲ, ಸರ್ವೇಗಿಡ, ಅನೇಕ ಹೂ, ಹಣ್ಣು ತರಕಾರಿ ಗಿಡಗಳು ಹೀಗೆ ಬಹುಬೆಳೆಗಳನ್ನು ಮಿಶ್ರಬೇಸಾಯ ಕೃಷಿಯಲ್ಲಿ ಬೆಳೆಯುವ ಮೂಲಕ ಯಶಸ್ವೀ ರೈತರೆಂದೂ ಪ್ರಸಿದ್ಧಿಯಾಗಿರುವ ಶಂಕರ್‌ರವರು ಲಿಂಬೆಹುಲ್ಲು, ಮಾಗಣಿ ಬೇರು, ಬಿಳಿ ಗುಲಗಂಜಿ, ಪತ್ರಿಪಟ, ಒಂದೆಲಗ, ಮಧುನಾಶಿನಿಯಂತಹ ಔಷಧೀಯ ಸಸ್ಯಗಳನ್ನೂ ಬೆಳೆದಿದ್ದಾರೆ. ಎಲ್ಲದಕ್ಕೂ ಕೇವಲ ಗೋಮೂತ್ರ, ಸೆಗಣಿಯನ್ನೇ ಅವಲಂಬಿಸಿ ಶೂನ್ಯ ಬಂಡವಾಳದ ಸಹಜ ಕೃಷಿಯಲ್ಲಿ ತೊಡಗಿರುವ ಶಂಕರ್‌ ರವರು ಪ್ರತೀ ವರ್ಷಕ್ಕೆ ಒಂದು ಎಕರೆಗೆ ಕೇವಲ 2300ರೂಗಳಷ್ಟುಬಂಡವಾಳವನ್ನು ಮಾತ್ರ ವ್ಯಯಿಸುತ್ತಿದ್ದಾರಂತೆ ಮತ್ತು ವಾರ್ಷಿಕ 2 ರಿಂದ 2.5 ಲಕ್ಷದಷ್ಟುಆದಾಯವನ್ನೂ ಪಡೆಯುತ್ತಿದ್ದಾರೆ.

ವಿದೇಶಿಯರಿಗೂ ಪಾಠ

ತನ್ನ ಅಪ್ರತಿಮ ಸಾಧನೆಗಾಗಿ ಶಂಕರ್‌ರವರು ಧಾರವಾಡ ಕೃಷಿ ವಿವಿಯ ಶ್ರೇಷ್ಠ ಯುವ ಕೃಷಿಕ ಪ್ರಶಸ್ತಿ, ದೇಶಪಾಂಡೆ ಫೌಂಡೇಶನ್ನಿನ ಕೃಷಿ ಸಿಂಚನ ಪ್ರಶಸ್ತಿ, ಹಾವೇರಿ ಜಿಲ್ಲಾ ಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇಸ್ರೇಲ್‌ ಆಷ್ಟೆ್ರೕಲಿಯ, ಕೆನೆಡಾ ಸೇರಿದಂತೆ ಅನೇಕ ರಾಷ್ಟ್ರಗಳಿಂದ ಬಂದು ಶಂಕರ್‌ರವರ ಹೊಸ ವಿಧಾನವನ್ನು ಕಂಡು ಅಚ್ಚರಿಪಟ್ಟಿರುವ ಅಧ್ಯಯನ ತಂಡಗಳು ತಮ್ಮ ರಾಷ್ಟ್ರಗಳಲ್ಲಿಯೂ ಸಹಜ ಬೇಸಾಯ ಕೃಷಿ ವಿಧಾನವನ್ನು ಅಳವಡಿಸಿಕೊಳ್ಳುವುದಾಗಿ ಭರವಸೆ ವ್ಯಕ್ತಪಡಿಸಿವೆ.

ಸ್ವತಃ ತಾನೇ ಬಿಡುವು ಮಾಡಿಕೊಂಡು ಭೇಟಿ ನೀಡುವ ವಿದೇಶೀ ಅಧ್ಯಯನಕಾರರಿಗೆ, ಆಸಕ್ತ ರೈತರಿಗೆ, ಕೃಷಿ ಕಾಲೇಜಿನ ವಿಧ್ಯಾರ್ಥಿಗಳಿಗೆ, ಶಾಲಾ ಮಕ್ಕಳಿಗೆ ಸಹಜ ಬೇಸಾಯ ವಿಧಾನಗಳು ಹಾಗೂ ಅದರ ಪ್ರಾಮುಖ್ಯತೆಯ ಬಗ್ಗೆ ಶಂಕರ್‌ ತಿಳಿಸಿಕೊಡುತ್ತಾರೆ. ಸುಭಾಷ್‌ ಪಾಳೇಕಾರರ ನೈಸರ್ಗಿಕ ಕೃಷಿಯ ಪ್ರಮುಖ ಆಧಾರ ಅಂಶಗಳಾದ ಬೀಜಾಮೃತ, ಜೀವಾಮೃತ, ಹೊದಿಕೆ ಹಾಗೂ ವಾಪಾಸಾಗಳ ಕುರಿತು ಸಾಕಷ್ಟುಜಾಗೃತಿಯನ್ನು ಮೂಡಿಸುತ್ತಿರುವುದು ಶಂಕರ್‌ರವರ ಹೆಗ್ಗಳಿಕೆಯಾಗಿದೆ. ವಾರ ಹಾಗೂ ಹದಿನೈದು ದಿನಕ್ಕೊಮ್ಮೆ ತಮ್ಮ ತೋಟದಲ್ಲಿಯೇ ಕ್ಷೇತ್ರೋತ್ಸವ ಹಾಗೂ ರೈತ ಪಾಠಶಾಲೆಗಳನ್ನು ನಡೆಸುವ ಶಂಕರ್‌ ಆ ಭಾಗದ ಮಾದರಿ ಕೃಷಿಕರೂ ಹೌದು.

ಸಹಜ ಕೃಷಿಯಲ್ಲಿ ಆಸಕ್ತಿ ಇರುವವರಿಗಾಗಿ ಶಂಕರ್‌ರವರ ಸಂಪರ್ಕ ಸಂಖ್ಯೆ: 9738434329

click me!