ಐದು ದಿನದಲ್ಲಿ ಅಡಕೆ ಕೊಯ್ಯಲು ಕಲಿಯಿರಿ

By Kannadaprabha News  |  First Published Dec 6, 2018, 11:46 AM IST

ಅಡಕೆ ಬೆಳೆದವರ ದೊಡ್ಡ ಕಷ್ಟ ಅಡಕೆ ಕೊಯ್ಯುವುದು. ಈಗೀಗ ಅಡಕೆ ಕೊಯ್ಯುವ ಕೊನೆಗಾರರು ಸಿಗುವುದೇ ಕಷ್ಟ. ಕೊನೆಗಾರರು ಕೈಗೆ ಸಿಗುವುದು ಕಷ್ಟವಾಗಿರುವ ಹೊತ್ತಲ್ಲಿ ಅಡಕೆ ಬೆಳೆಗಾರರಿಗೆ ನೆರವು ನೀಡಲು ಹೊಸ ತರಬೇತಿ ಕೋರ್ಸು ಆರಂಭವಾಗಿದೆ. ಇಲ್ಲಿ ಅಡಕೆ ಕೊಯ್ಯುವುದನ್ನು ಕಲಿಸಲಾಗುತ್ತದೆ. ಈ ಸಂದರ್ಭದಲ್ಲಿ ಕೊನೆಗಾರರು ಮತ್ತು ಕೊನೆಗಾರರ ಅಗತ್ಯದ ಕುರಿತ ಬರಹ ಇಲ್ಲಿದೆ.


ಯುವಕರೆಲ್ಲ ಉದ್ಯೋಗ ಅರಸಿ ನಗರಮುಖಿಯಾದ ಬಳಿಕ ಕೃಷಿ ಕ್ಷೇತ್ರ ಬಣಗುಡುತ್ತಿವೆ. ಬೆಳೆ ಬೆಳೆಯಲು ಪರದಾಟ, ಕಷ್ಟಪಟ್ಟು ಬೆಳೆದರೂ ಬೆಳೆ ಕೊಯ್ಲು ಮಾಡಲು ರೈತರು ಹರಸಾಹಸ ಪಡುತ್ತಿದ್ದಾರೆ. ಎಷ್ಟೆಂದರೆ ಕೊನೆಗಾರಿಕೆಗೆ ಕೊನೆಗೌಡರು ಸಿಗದೇ ಬಿದ್ದ ಅಡಕೆಯನ್ನು ಹೆಕ್ಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಮರಕ್ಕೆ ಮದ್ದು ಬಿಡಲು ಸಕಾಲದಲ್ಲಿ ಜನ ಸಿಗದೇ ಅರ್ಧಕ್ಕರ್ಧ ಬೆಳೆ ಕೊಳೆರೋಗಕ್ಕೆ ತುತ್ತಾಗಿ ಉದುರಿದ್ದೂ ಇದೆ. ಇಂಥ ಸಂದರ್ಭದಲ್ಲಿ ಅಡಕೆ ಬೆಳೆ ಹಾಗೂ ಬೆಳೆಗಾರರ ನೆರವಿಗೆ ಅಡಕೆ ಯುವ ಕೌಶಲ್ಯದ ದೊಡ್ಡ ಪಡೆ ಸಿದ್ಧಗೊಳ್ಳುತ್ತಿದೆ. ಅಡಕೆ ಮರ ಏರುವ ಕುಶಲಕರ್ಮಿಗಳನ್ನು ತರಬೇತುಗೊಳಿಸುವ ನಿಟ್ಟಿನಲ್ಲಿ ತಡವಾಗಿಯಾದರೂ ಉತ್ತಮ ಪ್ರಯತ್ನ ನಡೆಯುತ್ತಿದೆ. ಕಾರ್ಮಿಕರ ಕೊರತೆಯಿಂದ ಕಂಗೆಟ್ಟಿದ್ದ ಬೆಳೆಗಾರರ ವಲಯದಲ್ಲಿ ದೊಡ್ಡ ಕ್ರಾಂತಿ ಹುಟ್ಟುಹಾಕಿದೆ.

ಕೊನೆಗಾರಿಕೆ ಎಂದರೆ? 

Latest Videos

undefined

ಎತ್ತರವಾಗಿ ಬೆಳೆಯುವ ಅಡಕೆ ಮರ ಏರಿ ಅಡಕೆ ಕೊನೆ ಕೊಯ್ಲು ಮಾಡುವುದಕ್ಕೆ ಕೊನೆಗಾರಿಕೆ ಎನ್ನುತ್ತಾರೆ. ಮರ ಏರುವುದು ಎಂದರೆ ಸುಲಭದ ಮಾತಲ್ಲ, ಎಲ್ಲರಿಂದಲೂ ಸಾಧ್ಯವೂ ಇಲ್ಲ. ಇದಕ್ಕೆ ನುರಿತ ಕಾರ್ಮಿಕರ ಅಗತ್ಯವಿದೆ. ಜೀವದ ಹಂಗು ತೊರೆದು ಮರ ಏರಲು, ಮರದಿಂದ ಮರಕ್ಕೆ ಸ್ಥಳಾಂತರಗೊಳ್ಳುವುದು, ಮಳೆಗಾಲದಲ್ಲಿ ಮದ್ದು ಬಿಡುವುದು ಅತ್ಯಂತ ನಾಜೂಕಿನ ಕೆಲಸ. ಸ್ವಲ್ಪವೇ ಆಯ ತಪ್ಪಿದರೂ ಜೀವಕ್ಕೆ ಕುತ್ತು. ಅಡಕೆ ಬೆಳೆಯುವ ಪ್ರದೇಶದಲ್ಲಿ ಈ ಕೌಶಲ್ಯತೆ ಹೊಂದಿರುವ ಬೆರಳೆಣಿಕೆಯ ಮಂದಿ ಮಾತ್ರ ಈಗ ಲಭ್ಯ. ಅವರಿಗೆ ಈಗ ವಯಸ್ಸಾಗುತ್ತಿದ್ದು, ನಿವೃತ್ತಿಯ ಅಂಚಿನಲ್ಲಿದ್ದಾರೆ. ಹಾಗಾದರೆ ಮುಂದೇನು ಎಂಬ ದೊಡ್ಡ ಪ್ರಶ್ನೆಗೆ ಈಗ ಉತ್ತರ ಸಿಗುತ್ತಿದೆ. ಅಲ್ಲಲ್ಲಿ ಯುವಕರಿಗೆ ಈ ಕುಶಲಗಾರಿಕೆಯ ತರಬೇತಿ ನೀಡಲಾಗುತ್ತಿದೆ. ಎರಡು ತಿಂಗಳ ಹಿಂದೆ ಮಲೆನಾಡಿನ ತೀರ್ಥಹಳ್ಳಿಯಲ್ಲಿ ಯುವಕರಿಗೆ ಅಡಕೆ ಕೊನೆಗಾರಿಕೆ ತರಬೇತಿ ನೀಡಲಾಗಿತ್ತು. ಶಿಬಿರಕ್ಕೆ ಉತ್ತಮ ಸ್ಪಂದನೆ ದೊರೆತಿದ್ದಲ್ಲದೇ ಕೌಶಲ್ಯ ಕಲಿತ ಹಲವು ಯುವಕರು ಸ್ವಂತ ಉದ್ಯೋಗದೊಂದಿಗೆ ಸ್ವತಂತ್ರ ಬದುಕು ಕಟ್ಟಿಕೊಂಡಿದ್ದಾರೆ. ಆ ತರಬೇತಿಯಿಂದ ಸ್ಫೂರ್ತಿ ಪಡೆದು ದ.ಕ. ಜಿಲ್ಲೆಯಲ್ಲಿಯೂ ಯುವಕರಿಗೆ ಇಂತಹ ತರಬೇತಿ ನೀಡಲಾಗುತ್ತಿದೆ.

ವಿಟ್ಲ ಸಿಪಿಸಿಆರ್‌ಐನಲ್ಲಿ ತರಬೇತಿ ಶಿಬಿರ:

ಯುವಕರನ್ನು ತರಬೇತಿಗೊಳಿಸಲು ಕ್ಯಾಂಪ್ಕೋ ಸಂಸ್ಥೆ ನೇತೃತ್ವದಲ್ಲಿ ಅಡಕೆ ಕೌಶಲ್ಯ ಪಡೆ ತರಬೇತಿ ಶಿಬಿರ ಡಿ.೫ರಿಂದ ಆರಂಭಗೊಂಡಿದ್ದು, ಐದು ದಿನಗಳ ಕಾಲ ನಡೆಯಲಿದೆ. ಶಿಬಿರದಲ್ಲಿ ಅಡಿಕೆ ಮರ ಏರುವ ಹಾಗೂ ಔಷಧಿ ಸಿಂಪಡಣೆ, ಅಡಿಕೆ ಕೊಯಿಲು, ತಳೆ ಕಟ್ಟುವುದು, ಕೊಕ್ಕೆ ಕಟ್ಟುವುದು, ಔಷಧಿ ತಯಾರಿ, ಪ್ರಾಥಮಿಕ ಚಿಕಿತ್ಸೆ, ಜೀವವಿಮೆ ಸಹಿತ ವಿವಿಧ ಅಂಶಗಳ ಬಗ್ಗೆ ತಜ್ಞರು ಮಾಹಿತಿ ನೀಡುತ್ತಾರೆ. ಐದಾರು ಮಂದಿ ನುರಿತ ಕೊಯ್ಲುಗಾರರು ಶಿಬಿರಾರ್ಥಿಗಳಿಗೆ ಈ ಕುಶಲವಿದ್ಯೆಗಳನ್ನು ಕಲಿಸಿಕೊಡಲಿದ್ದಾರೆ. ಶಿಬಿರಕ್ಕೆ ಹೆಚ್ಚಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದು, ವಿಟ್ಲ ಸಿಪಿಸಿಆರ್‌ಐ ವಠಾರದಲ್ಲಿ 5 ದಿನಗಳ ಕಾಲ ಶಿಬಿರ ನಡೆಯಲಿದೆ. ಸಿಪಿಸಿಆರ್‌ಐ, ಎಆರ್‌ಡಿಎಫ್, ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯ ಶಿವಮೊಗ್ಗ, ತೋಟಗಾರಿಕಾ ಇಲಾಖೆ, ಅಡಿಕೆ ಪತ್ರಿಕೆ ಮತ್ತು ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘ ಹಾಗೂ ಇತರ ಸಂಘಟನೆಗಳು ಈ ತರಬೇತಿ ಕಾರ್ಯಕ್ರಮಕ್ಕೆ ಸಹಕಾರ ಕೊಡುತ್ತಿವೆ.

ಹೆಚ್ಚಿದ ಬೇಡಿಕೆ, ಎರಡನೇ ಬ್ಯಾಚ್ ಶುರು:

18 ರಿಂದ 35 ವರ್ಷದ ಒಳಗಿನ ದಕ್ಷಿಣ ಕನ್ನಡ ಹಾಗೂ ಕಾಸರಗೋಡು ಜಿಲ್ಲೆಯ ಯುವಕರಿಗೆ ಆದ್ಯತೆ ನೀಡಲಾಗಿದೆ. 28 ವರ್ಷದೊಳಗಿನ 30 ಯುವಕರು ಮೊದಲ ಶಿಬಿರಕ್ಕೆ ಆಯ್ಕೆಯಾಗಿದ್ದಾರೆ. ಹೆಚ್ಚಿನ ಅರ್ಜಿಗಳು ಬಂದ ಹಿನ್ನೆಲೆಯಲ್ಲಿ ಎರಡನೇ ಬ್ಯಾಚ್ ತರಬೇತಿ ನೀಡಲು ಉದ್ದೇಶಿಸಲಾಗಿದೆ. ಈಗಾಗಲೇ ಕೆಲವು ಸಹಕಾರಿ ಸಂಘಗಳು ತರಬೇತಿ ನೀಡಲು ಮುಂದೆ ಬಂದಿದ್ದು, ಪ್ರತಿ ಸಹಕಾರಿ ಸಂಘದಲ್ಲಿ ತರಬೇತಿ ನೀಡಲು ಮುಂದೆ ಬಂದರೆ ಸಮಸ್ಯೆಗೆ ಶಾಶ್ವತ ಪರಿಹಾರ ಸಾಧ್ಯ ಎಂಬುದು ಕ್ಯಾಂಪ್ಕೋ ಉಪಾಧ್ಯಕ್ಷ ಶಂಕರನಾರಾಯಣ ಖಂಡಿಗೆಯವರ ಅಭಿಪ್ರಾಯ.

ವಿಮೆ ಸೌಲಭ್ಯ:

ತರಬೇತಿ ಸಂದರ್ಭದಲ್ಲಿ ಶಿಬಿರಾರ್ಥಿಗಳು ಐದು ದಿನವೂ ಶಿಬಿರದ ಕೇಂದ್ರದಲ್ಲೇ ಉಳಿದುಕೊಳ್ಳಬೇಕಾಗುತ್ತದೆ. ಇವರಿಗೆ ತರಬೇತಿ ಅವಧಿಯಲ್ಲಿ ಸಮವಸ್ತ್ರ, ವಸತಿ, ಊಟ ವ್ಯವಸ್ಥೆ ಇರುತ್ತದೆ. ತರಬೇತಿ ಪಡೆದವರಿಗೆ ವಿಳಾಸ, ಬ್ಲಡ್‌ಗ್ರೂಪ್ ಹೊಂದಿರುವ ಗುರುತಿನ ಚೀಟಿ, ಪ್ರಮಾಣಪತ್ರವನ್ನು ಶಿಬಿರದ ಕೊನೆಯಲ್ಲಿ ನೀಡಲಾಗುತ್ತದೆ. ಪ್ರತಿದಿನ 500 ರು. ಗೌರವಧನ ನೀಡಲಾಗುತ್ತದೆ. 5 ಲಕ್ಷ ರು. ವಿಮೆ ಸೌಲಭ್ಯವನ್ನೂ ನೀಡಲಾಗುತ್ತಿದ್ದು, ಆರಂಭಿಕ ಕಂತನ್ನು ಕ್ಯಾಂಪ್ಕೊ ಸಂಸ್ಥೆ ಭರಿಸುತ್ತದೆ, ಉಳಿದ ಕಂತುಗಳನ್ನು ಶಿಬಿರಾರ್ಥಿಗಳೇ ಭರಿಸಬೇಕಾಗುತ್ತದೆ.

ತೆಂಗು ಮಿತ್ರರು ಮಾದರಿ:

ತೆಂಗಿನ ಮರ ಹತ್ತಿ ತೆಂಗು ಕೊಯ್ಲು ಮಾಡಲು ತೆಂಗು ಮಂಡಳಿ ಯುವಕರಿಗೆ ಈಗಾಗಲೇ ತರಬೇತಿ ನೀಡಿ ತೆಂಗು ಮಿತ್ರರನ್ನು ತಯಾರಿಸಿದೆ. ಕಳೆದ 7 ವರ್ಷಗಳಲ್ಲಿ ತೆಂಗು ಮಂಡಳಿ ಸುಮಾರು 46,618 ಮಂದಿಗೆ ಮರ ಏರಲು ತರಬೇತಿ ನೀಡಿದೆ. ಅದೇ ಮಾದರಿಯಲ್ಲಿ ಅಡಕೆ ಕೌಶಲ್ಯ ಪಡೆ ಸಿದ್ಧಗೊಂಡಲ್ಲಿ ಅಡಕೆ ಬೆಳೆಗಾರರ ದೊಡ್ಡ ಸಮಸ್ಯೆಗೆ ಪರಿಹಾರ ದೊರೆಯಲಿದೆ.

  • ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಶಿವಮೊಗ್ಗ ಜಿಲ್ಲೆಗಳ ಆರ್ಥಿಕ ವಹಿವಾಟು ನಿರ್ಧರಿತವಾಗುವುದೇ ಅಡಕೆ ಬೆಳೆಯಿಂದ.
  • ಯುವಕರಿಗೆ ತರಬೇತಿ  ನೀಡುವ ಮೂಲಕ ಉದ್ಯೋಗ ಭದ್ರತೆ.
  • ತೆಂಗು ಮಂಡಳಿ ಕಳೆದ ೭ ವರ್ಷಗಳಲ್ಲಿ ಸುಮಾರು 46,618 ಮಂದಿಗೆ ಮರ ಏರಲುತರಬೇತಿ ನೀಡಿದೆ.
  • ಅಡಕೆ ಮರ ಏರಲು ತೀರ್ಥಹಳ್ಳಿಯಲ್ಲಿ ಮೊದಲ ಶಿಬಿರ.
  • ತೀರ್ಥಹಳ್ಳಿ ತರಬೇತಿ ಬಳಿಕ ವಿಟ್ಲದಲ್ಲಿ ಈಗ ಎರಡನೇ ಶಿಬಿರ.

ಅಡಕೆ ಕ್ಷೇತ್ರದಲ್ಲಿ ಈಗ ದೊಡ್ಡ ಸಮಸ್ಯೆ ಕೊನೆಗಾರರದ್ದು. ಮರ ಏರುವುದು ಕೌಶಲ್ಯಭರಿತ ಕಾರ್ಯ. ನುರಿತ ಕಾರ್ಮಿಕರು ಈಗ ಬೆರಳೆಣಿಕೆಯಲ್ಲಿದ್ದಾರೆ. ಅವರೂ ದುರದೃಷ್ಟವಶಾತ್ ಈಗ ನಿವೃತ್ತಿ ಅಂಚಿನಲ್ಲಿದ್ದಾರೆ. ಈ ಕಾರ್ಯಕ್ಕೆ ಯುವಕರು ಮುಂದೆ ಬರಬೇಕಾಗಿದ್ದು, ಯುವಕರನ್ನೇ ಉದ್ದೇಶಿಸಿ ತರಬೇತಿ ಹಮ್ಮಿಕೊಳ್ಳಲಾಗಿದೆ. ಇಲ್ಲಿಯವರೆಗೆ ಅಡಕೆ ಕೊಯ್ಲು ಕಾರ್ಮಿಕ ರೂಪದಲ್ಲಿ ಮಾತ್ರ ಇತ್ತು. ಈಗ ವೃತ್ತಿ ರೂಪದಲ್ಲಿ ತರಬೇತಿ ನೀಡಲಾಗುತ್ತಿದೆ. - ಶಂಕರನಾರಾಯಣ ಖಂಡಿಗೆ,ಉಪಾಧ್ಯಕ್ಷರು, ಕ್ಯಾಂಪ್ಕೋ

 

 

click me!