ಬೆಂಗಳೂರಿನ ಕರಾವಳಿಗರ ಉತ್ಸವ ನಮ್ಮೂರ ಹಬ್ಬ!

By Web Desk  |  First Published Feb 9, 2019, 1:17 PM IST

ಬೆಂಗಳೂರಿನಲ್ಲಿ ನೆಲೆಸಿರುವ ಕರಾವಳಿಗರು ಆರು ವರ್ಷಗಳಿಂದ ‘ನಮ್ಮೂರ ಹಬ್ಬ’ ಹೆಸರಿನಲ್ಲಿ ಒಟ್ಟಾಗಿ ಸೇರಿ ತಮ್ಮ ನೆಲದ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆ, ದೇಶಿಯ ಖಾದ್ಯಗಳ ಪರಿಚಯವನ್ನು ಬೆಂಗಳೂರಿಗರಿಗೆ ಮಾಡುವ ಹಾಗೂ ಕರಾವಳಿಗರೆಲ್ಲರೂ ಒಟ್ಟಾಗಿ ಸೇರಿ ಸಂಭ್ರಮಿಸುವ ವೇದಿಕೆಯನ್ನು ಕಟ್ಟಿಕೊಂಡಿದೆ. ಅದು ಈ ವರ್ಷ ಫೆ. 9, 10ರಂದು ಬೆಳಿಗ್ಗೆ 10ರಿಂದ ರಾತ್ರಿ 10ರ ತನಕ ಬೆಂಗಳೂರಿನ ಹೊಸಕೆರೆಹಳ್ಳಿಯ ನೈಸ್‌ ಟೋಲ್‌ ಸಮೀಪ ಇರುವ ನಂದಿ ಲಿಂಕ್ಸ್‌ ಗ್ರೌಂಡ್‌ನಲ್ಲಿ ಅದ್ಧೂರಿಯಾಗಿ ನಡೆಯಲಿದೆ. ಈ ಕುರಿತು ಅಭಿನಂದನ ಸಾಂಸ್ಕೃತಿಕ ಟ್ರಸ್ಟ್‌ನ ರಾಘವೇಂದ್ರ ಕಾಂಚನ್‌ ಜತೆ ಮಾತುರತೆ. ಮಾತನಾಡಿದ್ದಾರೆ.


ಕೆಂಡಪ್ರದಿ

ನಮ್ಮೂರ ಹಬ್ಬದ ಉದ್ದೇಶ, ಆಶಯ ಏನು?

Tap to resize

Latest Videos

undefined

ಪ್ರದೇಶದಿಂದ ಪ್ರದೇಶಕ್ಕೆ ಸಂಸ್ಕೃತಿ, ಆಹಾರ ಪದ್ಧತಿ, ಭಾಷಾ ಶೈಲಿ ಬದಲಾಗುತ್ತಾ ಹೋಗುತ್ತದೆ. ಇದು ನಮ್ಮ ಅವಿಭಜಿತ ದಕ್ಷಿಣ ಕನ್ನಡ ಭಾಗದಲ್ಲಿ ತುಸು ಹೆಚ್ಚು. ಅಂದರೆ, ನಮ್ಮಲ್ಲಿ ಪ್ರತಿ 20 ಕಿಮೀಗೆ ಸಂಸ್ಕೃತಿ, ಭಾಷೆ, ಆಹಾರ ಕ್ರಮಗಳೆಲ್ಲವೂ ಬದಲಾಗುತ್ತಾ ಹೋಗುತ್ತದೆ. ಹಾಗಾಗಿ ಅವಿಭಜಿತ ದಕ್ಷಿಣ ಕನ್ನಡ ತನ್ನ ಒಡಲಲ್ಲಿ ಸಾಕಷ್ಟುವೈವಿಧ್ಯತೆಗಳನ್ನು ಇಟ್ಟುಕೊಂಡು ಒಟ್ಟಾರೆ ನಮ್ಮ ನಾಡಿನ ಸಾಂಸ್ಕೃತಿಕ ಸಿರಿವಂತಿಕೆಗೆ ತನ್ನದೇ ಆದ ಕೊಡುಗೆಯನ್ನು ನೀಡಿದೆ. ಇದನ್ನು ಬೆಂಗಳೂರಿಗರಿಗೆ ಪರಿಚಯಿಸಬೇಕು ಮತ್ತು ಬೆಂಗಳೂರಿನಲ್ಲಿ ಬಂದು ನೆಲೆಯಾಗಿರುವ ಲಕ್ಷಾಂತರ ಮಂದಿ ಕರಾವಳಿಗರನ್ನು ಸಾಂಸ್ಕೃತಿಕವಾಗಿ ಒಂದು ಮಾಡಬೇಕು ಎನ್ನುವ ಉದ್ದೇಶದಿಂದ ಆರು ವರ್ಷಗಳಿಂದ ‘ನಮ್ಮೂರ ಹಬ್ಬ’ವನ್ನು ಮಾಡುತ್ತಿದ್ದೇವೆ.

ಹಿಂದಿನ ಕಾರ್ಯಕ್ರಮಗಳಿಗೆ ಹೇಗಿತ್ತು ಪ್ರತಿಕ್ರಿಯೆ?

ನಾವು ಈ ರೀತಿಯ ಒಂದು ವೇದಿಕೆಯನ್ನು ಸೃಷ್ಟಿಮಾಡಬೇಕು ಎಂದುಕೊಂಡು ಚಿಕ್ಕ ಮಟ್ಟದಲ್ಲಿಯೇ ‘ನಮ್ಮೂರ ಹಬ್ಬ’ಕ್ಕೆ ಚಾಲನೆ ನೀಡಿದೆವು. ಮೊದಲ ವರ್ಷವೇ ಸುಮಾರು 50 ಸಾವಿರ ಮಂದಿ ಭೇಟಿ ನೀಡಿ ಕಾರ್ಯಕ್ರಮ ನಾವು ಅಂದುಕೊಂಡಿದ್ದಕ್ಕಿಂತಲೂ ಹೆಚ್ಚಿನ ಮಟ್ಟದಲ್ಲಿ ಯಶ ಕಂಡಿತ್ತು. ಹಾಗಾಗಿಯೇ ಇದು ಮುಂದುವರೆದು ಬಂದು ಆರನೇ ವರ್ಷಕ್ಕೆ ಕಾಲಿಟ್ಟಿದೆ. ಕಳೆದ ವರ್ಷ 2 ಲಕ್ಷದಷ್ಟುಮಂದಿ ಸೇರಿದ್ದರು. ಈ ಬಾರಿ ಇದು ದುಪ್ಪಟ್ಟಾಗುವ ಸಾಧ್ಯತೆ ಇದೆ. ಮೊದಲೆಲ್ಲಾ ಜಯನಗರದಲ್ಲಿ ‘ನಮ್ಮೂರ ಹಬ್ಬ’ ಮಾಡುತ್ತಿದ್ದೆವು. ಆದರೆ ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರುತ್ತಾರೆ ಎನ್ನುವ ಕಾರಣಕ್ಕಾಗಿ ಹೊಸಕೆರೆಹಳ್ಳಿಯ ನೈಸ್‌ ಟೋಲ್‌ ಸಮೀಪ ಇರುವ ನಂದಿ ಲಿಂಕ್ಸ್‌ ಗ್ರೌಂಡ್‌ನಲ್ಲಿ ಕಾರ್ಯಕ್ರಮ ಆಯೋಜನೆ ಮಾಡಿದ್ದೇವೆ. ನಮಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರ ನೀಡಿದೆ.

ಪೂರ್ವ ಸಿದ್ಧತೆ ಎಲ್ಲಾ ಹೇಗಿತ್ತು?

ಕರಾವಳಿಗರು ಅಚ್ಚುಕಟ್ಟುತನಕ್ಕೆ ಹೆಸರು. ನಾವು ಈ ಕಾರ್ಯಕ್ರಮ ಯಶ ಕಾಣಬೇಕು. ಎಲ್ಲಿಯೂ ಸಣ್ಣ ಲೋಪವೂ ಆಗಬಾರದು ಎನ್ನುವ ನಿಟ್ಟಿನಲ್ಲಿ ಕಳೆದ ಮೂರು ತಿಂಗಳಿನಿಂದ 236 ಮಂದಿ ಒಟ್ಟಾಗಿ ಸುಮಾರು 20 ತಂಡಗಳನ್ನು ರಚನೆ ಮಾಡಿಕೊಂಡು ಕೆಲಸ ಮಾಡಿದ್ದೇವೆ. ಒಂದೊಂದು ವಿಭಾಗಕ್ಕೂ ಒಂದೊಂದು ಸಮಿತಿ ಕೆಲಸ ಮಾಡುತ್ತದೆ. ಎಲ್ಲಿಯೂ ಗೊಂದಲವಾಗದಂತೆ, ಸಾಂಸ್ಕೃತಿಕ ಚಟುವಟಿಕೆ, ಕ್ರೀಡಾ ಚಟುವಟಿಕೆ ಮೊದಲಾದ ಎಲ್ಲವನ್ನೂ ವ್ಯವಸ್ಥಿತವಾಗಿ ನಡೆಯಲು ಬೇಕಾದ ಸಿದ್ಧತೆಯನ್ನು ಮಾಡಿ ಮುಗಿಸಿದ್ದೇವೆ.

ಈ ಬಾರಿಯ ಹಬ್ಬದ ವಿಶೇಷ ಏನು?

ಸಾಂಕೇತಿಕವಾಗಿ ಕಂಬಳ ಕೋಣಗಳು ಬರುವುದು ಈ ಬಾರಿಯ ಹೈಲೈಟ್‌. ಉಳಿದಂತೆ ಹುಲಿವೇಷ, ಕೊರಗ ಡೊಲು, ಚಂಡೆ, ಯಕ್ಷಗಾನ ಎಲ್ಲವೂ ಇರುತ್ತದೆ. ಕರಾವಳಿ ಭಾಗದ ಪ್ರತಿಭೆಗಳು, ನಾಡಿನ ಪ್ರಸಿದ್ಧರು ಪ್ರದಾನ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಡಲಿದ್ದಾರೆ. ದೇಶಿ ಕ್ರೀಡೆಗಳು, ಕರಾವಳಿಯ ಖಾದ್ಯ ಎಲ್ಲವೂ ಮೊದಲಿನಂತೆಯೇ ಇದ್ದರೂ ಈ ಭಾರಿ ಹೆಚ್ಚಿನ ಜನರು ಭಾಗವಹಿಸುವ ನಿರೀಕ್ಷೆ ಇರುವುದರಿಂದ ದೊಡ್ಡ ಮಟ್ಟದಲ್ಲಿ ಮಾಡುತ್ತಿದ್ದೇವೆ.

ಇಂತಹ ಚಟುವಟಿಕೆಯಿಂದ ಆಗುವ ಲಾಭವೇನು?

ಮುಖ್ಯವಾಗಿ ಈ ರೀತಿಯ ಸಾಂಸ್ಕೃತಿಕ ಸಮ್ಮಿಲನ ಆಗುತ್ತಿರಲೇಬೇಕು. ಬೆಂಗಳೂರು ಸೇರಿದಂತೆ ಇಂದು ಎಲ್ಲಾ ದೊಡ್ಡ ದೊಡ್ಡ ನಗರಗಳಲ್ಲಿ ಎಲ್ಲಾ ಭಾಷೆಯ, ಎಲ್ಲಾ ಸಂಸ್ಕೃತಿಯ ಜನರು ಬಂದು ನೆಲೆಸಿರುತ್ತಾರೆ. ಇವರೆಲ್ಲರೂ ಒಟ್ಟಾಗಿ ಈ ರೀತಿಯ ಕಾರ್ಯಕ್ರಮಗಳನ್ನು ಮಾಡಬೇಕು. ಆಗಲೇ ನಮ್ಮ ಮೂಲ ಸಂಸ್ಕೃತಿ ಉಳಿಯುವುದು ಮತ್ತು ಇನ್ನಷ್ಟುಮಂದಿಗೆ ತಲುಪುವುದು. ಬೆಂಗಳೂರಿನಲ್ಲೇ ಇರುವ ಬೇರೆ ಬೇರೆ ಸಂಸ್ಕೃತಿಯ ಜನರೂ ಇದೇ ರೀತಿಯ ಹಬ್ಬವನ್ನು ಮಾಡಿ ಅವರ ಸಂಸ್ಕೃತಿಯನ್ನು ಎಲ್ಲರಿಗೂ ಪರಿಚಯಿಸುವ ಕೆಲಸ ಮಾಡಬೇಕು. ಇದರಿಂದ ಸಂಸ್ಕೃತಿ, ದೇಶಿಯತೆ ಉಳಿಯಲು ಸಾಧ್ಯ. ಇದೇ ಇದರಿಂದ ಆಗುವ ಲಾಭ.

ಈ ಸಲದ ಕಾರ್ಯಕ್ರಮದ ಹೈಲೈಟ್ಸ್‌

* ಕೊರಗರ ಡೋಲು, ಹುಲಿವೇಷ ಇನ್ನಿತರ ತಂಡಗಳ ಪ್ರದರ್ಶನ.

* ಚಂದನ್‌ ಶೆಟ್ಟಿ, ಪ್ರವೀಣ್‌ ಡಿ.ರಾವ್‌, ಬೀಟ್‌ ಗುರೂಸ್‌ ತಂಡಗಳಿಂದ ಸಾಂಸ್ಕೃತಿಕ ವೈವಿಧ್ಯ

* ಜಯಂತ್‌ ಕಾಯ್ಕಿಣಿ ಹಾಗೂ ಯಕ್ಷ ಕೇಂದ್ರ ಉಡುಪಿ ಇವರಿಗೆ ಕಿರೀಟ ಪ್ರಶಸ್ತಿ

* ವಿಶೇಷ ಮೀನಿನ ಖಾದ್ಯಗಳು ಮತ್ತಿತರ ಕರಾವಳಿಯ ತಿಂಡಿತಿನಿಸುಗಳು

* ಕರಾವಳಿಯ ಅಪರೂಪದ ವಸ್ತುಗಳ ಪ್ರದರ್ಶನ ಮತ್ತು ಮಾರಾಟ

* ಕಂಬಳ ಓಟ, ದೋಣಿ ಓಟ, ಹಗ್ಗಜಗ್ಗಾಟ ಇನ್ನಿತರ ಕರಾವಳಿ ಕ್ರೀಡೆಗಳು

* ಸತೀಶ್‌ ಆಚಾರ್ಯ ಮತ್ತಿತರರ ಕಾರ್ಟೂನ್‌ ಪ್ರದರ್ಶನ, ಕರಾವಳಿಯ ಸಂಸ್ಕೃತಿ ಬಿಂಬಿಸುವ ಛಾಯಾಚಿತ್ರಗಳ ಅನಾವರಣ

* ಸೆಲ್ಫೀ ಪ್ರಿಯರಿಗಾಗಿ ವಿಶೇಷ ಸೆಲ್ಫೀ ಮನೆ

ಸಮಯ: ಫೆ. 9 ಮತ್ತು 10ರಂದು ಬೆಳಿಗ್ಗೆ 10 ರಿಂದ ರಾತ್ರಿ 10 ಗಂಟೆವರೆಗೆ

ಸ್ಥಳ: ನಂದಿ ಲಿಂಕ್ಸ್‌ ಗ್ರೌಂಡ್‌, ಹೊಸಕೆರೆಹಳ್ಳಿ ನೈಸ್‌ ಟೋಲ್‌ ಸಮೀಪ, ಬೆಂಗಳೂರು

click me!