ಯುಗಾದಿಗೂ ಎರಡು ದಿನ ಮೊದಲು ಆಫೀಸ್ ಗೆ ಹೋದದ್ದು. ಆಮೇಲೆ ಇವತ್ತೇ. ನಿಂತಲ್ಲೇ ನಿಂತಿದ್ದ ಗಾಡಿ ಸೊಂಟಕ್ಕೊಂದು ಕಿಕ್ ಕೊಟ್ಟಮೇಲೇ ಮನಸ್ಸಿಲ್ಲದ ಮನಸ್ಸಿಂದ ಸ್ಟಾರ್ಟ್ ಆಯ್ತು. ವಾರದಿಂದ ಮನೆಯೊಳಗೇ ಗುಮ್ಮನಂತಿದ್ದದ್ದಲ್ವಾ, ಹನ್ನೊಂದರ ಸುಟಿ ಸುಟಿ ಬಿಸಿಲು ಮೈ ಸವರಿದರೆ ಕಚಗುಳಿ. ಸಣ್ಣ ಗೊಂದಲ, ವಿನಾ ಕಾರಣ ಆತಂಕ. ಎಲ್ಲೆಲ್ಲ ಬ್ಯಾರಿಕೇಡ್ ಹಾಕಿದ್ದಾರೋ, ಐಡಿ ಕಾರ್ಡ್ ಎಲ್ಲಾದ್ರೂ ಬಿದ್ದು ಹೋದ್ರೆ..
- ಪ್ರಿಯಾ ಕೆರ್ವಾಶೆ
ಮೇನ್ ರೋಡ್ ತಲುಪಿದ್ದೇ ಗಾಡಿ ಸಿಕ್ಕಿದ್ದೇ ಚಾನ್ಸ್ ಅಂತ ನಿಯಂತ್ರಣಕ್ಕೇ ಬಾರದೇ ಓಡ್ತಾ ಇತ್ತು. ಹಂಪ್ ಬಂದಾಗ ಬ್ರೇಕ್ ಹಿಡಿದು ಸ್ಲೋ ಮಾಡಿದರೆ ಗಾಡಿಯ ಜೊತೆಗೆ ಜೀವಕ್ಕೂ ನಡುಕ. ಅಲ್ಲೊಬ್ಬ ಇಲ್ಲೊಬ್ಬ ನರ ಮನುಷ್ಯ ಬೋನಿಂದ ಹೊರ ಬಿದ್ದವರ ಹಾಗೆ ಓಡಾಡುತ್ತಿದ್ದ. ಮುಚ್ಚಿದ ಅಂಗಡಿ ಮುಂದೆ ನಾಲ್ಕೈದು ಜನ ಬಾಯಿಗೆ ಕರ್ಚೀಫ್ ಕಟ್ಟಿಕೊಂಡು ಕೂತಿದ್ದವರು. ಅವರಿಗೆ ಹಸಿವೋ, ತಿಂಡಿಯ ನಿರೀಕ್ಷೆಯಲ್ಲಿದ್ದಾರಾ ಅಥವಾ ಒಂದಾದರೂ ಗೂಡಂಗಡಿ ತೆರೆದರೆ ದಮ್ಮು ಹೊಡೀಬಹುದು ಅಂದುಕೊಂಡು ಕೂತಿದ್ದಾರಾ.. ಪಾಸಿಂಗ್ ಶಾಟ್ ನಲ್ಲಿ ಅದೆಲ್ಲಿ ಗೊತ್ತಾಗುತ್ತದೆ..
undefined
‘ಏನ್ ಮೇಡಂ, ಯಾವ ಕಡೆ? ಪಾಸ್ ಐತಾ?’ ಲೇಡಿ ಪೊಲೀಸ್ ಕೈ ಅಡ್ಡ ಹಾಕಿ ಗಾಡಿ ನಿಲ್ಲಿಸಿದರು. ‘ಹೂಂ, ತೋರಿಸಬೇಕಾ?’ ಅಂದೆ. ‘ಪರ್ವಾಗಿಲ್ಲ, ನಡೀರಿ..’ ಅಂದ್ರು. ‘ಮತ್ಯಾಕವ್ವಾ ಗಾಡಿ ನಿಲ್ಲಿಸಿದೆ?’ ಅಂತ ಕೇಳಹೊರಟವಳು ಸುಮ್ಮನೆ ಆಕ್ಸಿಲೇಟರ್ ತಿರುವಿದೆ. ರಸ್ತೆಯ ಅಲ್ಲಲ್ಲಿ ಬ್ಯಾರಿಕೇಡ್‌ಗಳು. ಈ ಬಿಸಿಲು ಗಿಸಿಲು ಎಲ್ಲ ನಿಮ್ಮಂಥಾ ಹುಲು ಮಾನವರಿಗೆ. ನಮ್ಮಂಥಾ ಅತೀತರಿಗಲ್ಲ.. ಅನ್ನೋ ಹಾಗೆ ಪೋಸು ಇವುಗಳದ್ದು. ಚಾಮರಾಜಪೇಟೆಯ ಉಮಾ ಟಾಕೀಸ್ ಪಕ್ಕದ ರಸ್ತೆಯ ಮಧ್ಯ ನಿಂತಿದ್ದವು, ನಮ್ಮನ್ನು ದಾಟಿ ಹೋಗೋವಷ್ಟುಧಂ ಇದೆಯಾ ಅಂತ ವಾರೆ ವಾರೆ ನಗುವ ಹಳೇ ಕನ್ನಡ ಸಿನಿಮಾದ ರೌಡಿಗಳ ಹಾಗೆ. ಪೊಲೀಸ್ ಸ್ಟೇಶನ್ ಪಕ್ಕದ ರಸ್ತೆಯಲ್ಲೂ ಪೊಲೀಸರಿಗಿಂತ ಹೆಚ್ಚು ಈ ಬ್ಯಾರಿಕೇಡ್‌ಗಳ ಕಾರುಬಾರು.
ಕೊರೋನಾ ತಡೆಗಟ್ಟಲು ಥಟ್ಟಂತ ಹೇಳಬಲ್ಲ ಉಪಾಯಗಳು!
ಎದುರೆದುರೇ ಬಿಳಿ ಬಟ್ಟೆಬಾಯಿಗೆ ಕಟ್ಟಿಕೊಂಡಿದ್ದ, ತೆಳು ನೂಲಿನ ಬಟ್ಟೆಯಿಂದ ಮೈ ಮುಚ್ಚಿಕೊಂಡಿದ್ದ ವಿರಾಗಿಗಳು. ರಸ್ತೆ ಮಧ್ಯೆ ಬರಿಗಾಲಿನ ನಡಿಗೆ. ಸುಡು ಬಿಸಿಲು ಅವರನ್ನು ಕಂಗೆಡಿಸಿದ ಹಾಗೆ ಕಾಣಲಿಲ್ಲ. ಆ ಬಿಳಿ ಶುಭ್ರ ಬಟ್ಟೆ, ಮೃದು ನೋಟ, ಚಿಂತೆಮುಕ್ತ ಮುಖ.. ನಮ್ಮ ನಿಮ್ಮ ಹಾಗಲ್ಲವರ ಹಾಗೆ. ಹಾಗೇ ಗಾಡಿ ಯೂ ಟರ್ನ್ ಮಾಡಿದೆ. ವಾರದ ಹಿಂದೆ ಇದ್ದ ದಾರಿ ಈಗ ಇರಲಿಲ್ಲ. ದಾರಿ ಕಾಣದವರ ಓಡಾಟ ಮುಂದುವರಿದಿತ್ತು.
ಸುತ್ತಿ ಸುತ್ತಿ ಕೆ ಆರ್ ಮಾರ್ಕೆಟ್ ದಾರಿ ಹಿಡಿದವಳು ನಡುವೆ ಒಬ್ಬ ಸ್ಮಾರ್ಟ್ ಪೊಲೀಸ್ ಪಕ್ಕ ಗಾಡಿ ನಿಲ್ಲಿಸಿದೆ. ‘ಬಿವಿಕೆ ಅಯ್ಯಂಗಾರ್ ರೋಡ್ ಓಪನ್ ಇದೆಯಾ?’ ಅಂದರೆ ಆತ ಮೆಟ್ಟಿಬಿದ್ದು, ‘ಹೂ ಹಾಂ, ಏನೂ..’ ಅಂದ. ಪುನರುಚ್ಚರಿಸಿದೆ. ಆಗ ಎಚ್ಚರಾದವನ ಹಾಗೆ ನನ್ನ ಗಾಡಿಯನ್ನೊಮ್ಮೆ ಅಮೂಲಾಗ್ರವಾಗಿ ಪರಿಶೀಲಿಸಿದ. ಆಮೇಲೆ ಎದೆ ಸೆಟೆಸಿ, ‘ಅದೆಲ್ಲ ನಂಗೊತ್ತಿಲ್ಲ..’ ಅಂದ.
‘ಪ್ಯಾರಲಲ್ ರೋಡ್ ಇದೆ ನೋಡಿ. ಅಲ್ಲೇ ಹೋಗಬಹುದು’ ಪಕ್ಕದಲ್ಲಿ ನಿಂತ ಅಪ್ಪನ ವಯಸ್ಸಿನ ಪೊಲೀಸ್ ಕಾಳಜಿಯಿಂದ ಉತ್ತರಿಸಿದರು. ಮಾಸ್ಕ್ ನೊಳಗೇ ನಕ್ಕು ‘ಥ್ಯಾಂಕ್ಯೂ’ ಅಂದೆ. ಮೊದಲು ಮಾತನಾಡಿಸಿದವನನ್ನೊಮ್ಮೆ ಗುರಾಯಿಸಿ ಗಾಡಿ ತಿರುಗಿಸಿ ಮುಂದೆ ಹೋದರೆ ಮಾರ್ಕೆಟ್ ಸಿಗ್ನಲ್‌ನಲ್ಲಿ ಕೆಂಪು ದೀಪ.
ಮಾರ್ಕೆಟ್ ನ ನೀರವತೆ
ಮುಂಜಾನೆ ಇನ್ನೂ ಬೆಳಕೂ ಮೂಡದ ಹೊತ್ತು ಗಿಜಿಗುಡುತ್ತಿದ್ದ ಮಾರ್ಕೆಟ್. ಎತ್ತೆತ್ತಲಿಂದಲೋ ಬಂದು ಹೊರೆ ಇಳಿಸಿ ಬಿಮ್ಮನೆ ರೋಡ್ ಸೈಡ್ ನಿಲ್ಲುತ್ತಿದ್ದ ಲಾರಿಗಳು, ತರಕಾರಿ ಮೂಟೆಯಲ್ಲಿದ್ದದ್ದನ್ನು ಸಮವಾಗಿ ವಿಂಗಡಿಸಿ ಅಲ್ಲಲ್ಲಿ ಕೂರುತ್ತಿದ್ದ ಅಜ್ಜಿಗಳು, ಆಂಟಿಗಳು, ಹುಡುಗರು. ರೇಟ್ ಕೂಗುತ್ತಾ, ‘ಎಷ್ಟುಕೆಜಿ ಹಾಕ್ಲಿ ಅಕ್ಕಾ?’ ಅಂತ ಕಿರುನಗೆಯಲ್ಲಿ ಮುಖ ದಿಟ್ಟಿಸುತ್ತಿದ್ದವರು, ವಾರಕ್ಕೊಮ್ಮೆಯೋ, ಹದಿನೈದು ದಿನಕ್ಕೊಮ್ಮೆಯೋ ದೊಡ್ಡ ಚೀಲ ಹಿಡಿದು ಸಾವಿರಾರು ಜನರ ನಡುವೆ ನುಸಿದು ಗುಪ್ಪೆ ಗುಪ್ಪೆಯಾಗಿ ಜೋಡಿಸಿಟ್ಟತರಕಾರಿಗಳಲ್ಲಿ ಒಂದು ಗುಪ್ಪೆಯನ್ನು ಚೀಲದೊಳಗೆ ಸೇರಿಸಿ ಮುಂದೆ ಹೋಗುತ್ತಿದ್ದ ಅದೆಷ್ಟೋ ಜನ. ‘ಏಯ್..’, ‘ರೇಟ್ ಜಾಸ್ತಿಯಾಯ್ತು’, ‘ಮಾಲ್ ನೋಡವ್ವ, ಎಷ್ಟುಪ್ರೆಶ್ಶಾಗೈತೆ’, ‘ಕೊತ್ತಂಬ್ರಿ ಹೆಂಗೆ?’, ‘ಐದು ಕೆಜಿ ತಗೋತೀನಿ. ಎಷ್ಟಕ್ಕೆ ಕೊಡ್ತೀಯಾ?’, ‘ಮುಂಡೇ ಗಂಡ ಏನೋ ನೋಡ್ತಿದ್ದೀಯಾ?’ ಜಗತ್ತೇ ಈ ಸಂತೆ ಎಂಬಂತೆ, ಇದರೊಳಗೆ ಸೇರಿಹೋಗುತ್ತಿದ್ದ ಸಾವಿರಾರು ದನಿಗಳು..
ಇದೆಲ್ಲ ಕನಸೇನೋ ಅನ್ನುವ ಹಾಗೆ ನೀರವ ಮೌನದಲ್ಲಿ ಕಳೆದುಹೋಗಿತ್ತು ಮಾರ್ಕೆಟ್. ವಾಸನೆಯೊಂದೇ ಕೆಲವು ದಿನಗಳ ಹಿಂದೆ ಇಲ್ಲಿ ಮಾರ್ಕೆಟ್ ಇತ್ತು ಅನ್ನೋದನ್ನು ಸಾರಿ ಹೇಳಲು ವಿಫಲ ಪ್ರಯತ್ನ ಮಾಡುತ್ತಿತ್ತು.
ಸ್ವಲ್ಪ ದೂರ ಫುಟ್ ಪಾತಿನಲ್ಲಿ ಒಂದಿಷ್ಟುಜನ. ಅಬ್ಬರದ ನಗೆ, ಕೇಕೆ, ಏ..ಯ್ ಕೂಗಿಲ್ಲ. ಕಾಲೆಳೆದುಕೊಂಡು ಸ್ಮಶಾನದಿಂದ ಬಂದವರ ಹಾಗೆ ಆ ಸೋತ ಜನರ ಮುಖಭಾವ.
ರಸ್ತೆಯ ಮೇಲೆ ವಾಹನಗಳಲ್ಲಿದ್ದವರು ಖಾಲಿಯಾಗಿದ್ದರೂ ವಾಸನೆ ಹೊಡೆಯುತ್ತಿದ್ದ ಮಾರ್ಕೆಟ್ ಕಡೆ ನೋಡದೇ ಕ್ಯಾಕರಿಸುತ್ತಿದ್ದರು.
ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಹೀಗೆ ಮಾಡಿ ಅಂದಿದೆ ಆಯುಷ್ ಇಲಾಖೆ
ಹೆಚ್ಚು ಕಡಿಮೆ ಅರ್ಧ ಸೌತ್ ಬೆಂಗಳೂರು ಸುತ್ತಿದ್ದೆ ಅನಿಸುತ್ತೆ. ಆನಂದ ರಾವ್ ಸರ್ಕಲ ಪಕ್ಕ ಮತ್ತೆ ಪೊಲೀಸಪ್ಪ. ‘ಏನ್ ಪ್ರೆಸ್ಸಾ, ಐಡಿ ಇದ್ರೆ ತೋರ್ಸಿ..’ ಅಂದ್ರು. ಬ್ಯಾಗ್ ತಡಕಾಡಿ ಐಡಿ ತೆಗೆದೆ. ‘ಈ ಪ್ರಿಟಿಂಗ್ ಪ್ರೆಸ್ ಇಟ್ಕೊಂಡವೂ› ಪ್ರೆಸ್ ಅಂತ ಬೋರ್ಡ್ ಹಾಕ್ಕೊಂಡು ಹೋಗ್ತಾರೆ. ಹಾಗಾಗಿ ಚೆಕ್ ಮಾಡಿದೆ. ಬೇಜಾರು ಮಾಡ್ಕೋಬೇಡಿ’ ಅಂತ ಕೊನೆಗೊಂದು ದಾಕ್ಷಿಣ್ಯದ ನುಡಿ. ಕಣ್ಣುಗಳಲ್ಲಿ ನಗೆ ಕಂಡ ಆತನೂ ನಕ್ಕ. ನೂರು ಹೆಜ್ಜೆ ದೂರ ದಾಟಿದರೆ ಆಫೀಸು.
*
ಕೆಲಸ ಮುಗಿಸಿ ಬರುವಾಗ ಅಲ್ಲಲ್ಲಿ ಕತ್ತಲೆ. ಕೆಲವು ಕಡೆ ಖಾಲಿ ಖಾಲಿ ರಸ್ತೆಯ ಜೊತೆಗೆ ಬೀದಿ ದೀಪಗಳು ಮಾತು ಶುರು ಮಾಡಿದ್ದವು. ಎಲೆಬಿಟ್ಟಮರದ ನೆರಳೂ ಪಟ್ಟಾಂಗಕ್ಕೆ ರೆಡಿಯಾಗುತ್ತಿತ್ತು. ದಿನವಿಡೀ ಆಡಿ ದಣಿದ ಮಗುವಿನ ಹಾಗೆ ಮಹಾನಗರ ಎಂದಿಗಿಂತ ಮೊದಲೇ ನಿದ್ದೆಗೆ ಜಾರಿತ್ತು. ಗಾಂಧೀ ಬಜಾರ್‌ಗೂ ಮೊದಲೇ ಸಿಗುವ ಸಿಗ್ನಲ್‌ನಲ್ಲಿ ಹಸಿರು, ಕೆಂಪು ಲೈಟ್‌ಗಳಿಲ್ಲ. ಬರೀ ಹಳದಿ ಲೈಟು. ಬ್ರೇಕ್ ಇಲ್ಲದೇ ಬೆರಳೆಣಿಕೆಯ ಗಾಡಿಗಳು ಭರ್ರನೆ ಮುಂದೆ ಹೋಗುತ್ತಿವೆ, ಬುಟ್ಟಿಯಲ್ಲಿ ಮಲ್ಲಿಗೆ ಹೂ ಹಿಡಿದ ಆ ಹೆಣ್ಣು ಮಗಳು
ಅಸಹಾಯತೆಯಿಂದಲೋ, ವಿಷಾದದಿಂದಲೋ ಹಾದುಹೋಗುವ ಗಾಡಿಗಳನ್ನೇ ನೋಡುತ್ತಾ ಕೂತಿದ್ದಳು.