WEB SPECIAL

ಪುರುಷ ಹಕ್ಕು, ಸಂಸಾರ ರಕ್ಷಣೆಗೆ SIFK ಬದ್ಧ

Nov 19, 2018, 4:23 PM IST

ದೇಶದಲ್ಲಿ ಎಲ್ಲ ದಿನಾಚರಣೆಗಳನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ. ಒಂದೊಂದಕ್ಕೆ ಒಂದೊಂದು ಅರ್ಥವಿದೆ. ಆದರೆ ವಿಶ್ವ ಪುರುಷರ ದಿನ? 
ಪುರುಷರಿಗೆ ಒಂದು ದಿನ ಮೀಸಲಿದೆ ಎನ್ನುವುದೇ ಬಹುತೇಕರಿಗೆ ಗೊತ್ತಿಲ್ಲ. ಇನ್ನು ಪುರುಷರ ಹಕ್ಕು, ಭಾವನೆ ಅವರ ಮನಸ್ಥಿತಿ ಅರಿಯುವುದು? ಹೌದು. ಇದೊಂದು ದೊಡ್ಡ ಪ್ರಶ್ನೆ. ಪುರುಷರಿಗೂ ಒಂದು ದಿನವಿದೆ. ಅವರ ಹಕ್ಕು ಕಾಪಾಡಲು ಸಂಘ-ಸಂಸ್ಥೆಗಳಿವೆ.
ಪ್ರಪಂಚದಲ್ಲಿ ಪ್ರತಿ ದಿನ ಅದೆಷ್ಟೋ ಪುರುಷರು ಹೆಂಡತಿಯಿಂದ, ಹೆಂಡತಿ ಕುಟುಂಬದವರಿಂದ, ಗೆಳತಿಯಿಂದ ದೌರ್ಜನ್ಯಕ್ಕೆ ಒಳಗಾಗುತ್ತಿರುತ್ತಾರೆ. ಪುರುಷ ಪ್ರದಾನ ಸಮಾಜದಲ್ಲಿ ಪುರುಷನಿಗೆಂಥ ದೌರ್ಜನ್ಯ ಎಂದೆನಿಸಬಹುದು? ಆದರೆ, ಇದು ಕಟು ಸತ್ಯ. ಮಹಿಳೆಯರ ರೀತಿ ಪುರುಷರ ಮೇಲೂ ಲೈಂಗಿಕ ದೌರ್ಜನ್ಯ ಸೇರಿ ಅನೇಕ ಪ್ರಕರಣಗಳು ನಡೆಯುತ್ತಲೇ ಇರುತ್ತವೆ. ಆದರೆ ಬೆಳಕಿಗೆ ಬರುವುದು ತುಂಬಾ ಕಡಿಮೆ. ಬಂದರೂ ಮಹಿಳೆಯಂತೆ ಪುರುಷ ಹೈಲೈಟ್ ಆಗೋದು ಕಮ್ಮಿ.  
ಸೇವ್ ಇಂಡಿಯನ್ ಫ್ಯಾಮಿಲಿ ಕರ್ನಾಟಕ ಎಂಬ ಸಂಸ್ಥೆ ಪುರುಷರ ಹಕ್ಕು ಕಾಪಾಡುವ ಕೆಲಸ ಮಾಡಿಕೊಂಡು ಬರುತ್ತಿದೆ. 2005ರಲ್ಲಿ ಆರಂಭವಾದ ಈ ಸಂಸ್ಥೆ ನೊಂದ ಪುರುಷರಿಗೆ ಚೈತನ್ಯ ತುಂಬುವ ಕಾರ್ಯದಲ್ಲಿ ನಿರತವಾಗಿದೆ. ಅಲ್ಲದೇ ಪುರುಷರ ಹಕ್ಕುಗಳಿಗಾಗಿ ಎಲ್ಲರಲ್ಲೂ ಜಾಗೃತಿ ಮೂಡುವಂತಾಗಲಿ ಹಾಗೂ ಪುರುಷರಲ್ಲಿ ಕಾಣಿಸಿಕೊಳ್ಳುವ ಪ್ರೊಸ್ಟೇಟ್ ಕ್ಯಾನ್ಸರ್ ಬಗ್ಗೆ ಅರಿವು ಮೂಡಿಸುವ ಸಲುವಾಗಿ ನವೆಂಬರ್ 19ನ್ನು ಮವೆಂಬರ್ ಎಂದೇ ಆಚರಿಸುತ್ತಿದೆ.
ಸ್ತೋತ್ರಗೀತೆ: ಸೇವ್ ಇಂಡಿಯನ್ ಫ್ಯಾಮಿಲಿ ಕರ್ನಾಟಕ ಸಂಸ್ಥೆಯು ಪುರುಷರ ಮಹತ್ವವನ್ನುಸಾರುವ 'ಗಂಡು ಎಂಬ ಜೀವಿ' ಎನ್ನುವ ಮೊಟ್ಟ ಮೊದಲ ಅಂತಾರಾಷ್ಟ್ರೀಯ ಪುರುಷರ ದಿನಾಚರಣೆ ಸ್ತೋತ್ರಗೀತೆಯನ್ನೂ ಬಿಡುಗಡೆ ಮಾಡಿದೆ.