ತಿಳಿಯ ಬನ್ನಿ ಗಣತಂತ್ರದ ಮೂಲಮಂತ್ರ!

By Kannadaprabha NewsFirst Published Jan 26, 2019, 1:59 PM IST
Highlights

ಪ್ರಜಾಸತ್ತಾತ್ಮಕ, ಜಾತ್ಯಾತೀತ ದೇಶದ ಪ್ರಜೆಗಳಾದ ನಮಗೆ ಸ್ವಾತಂತ್ರ್ಯ ದಿನ ಬಿಟ್ಟರೆ ಹರುಷದ ಹೊಳೆ ಹರಿಸುವ, ದೇಶಭಕ್ತಿ ಪುಟಿದೇಳುವಂತೆ ಮಾಡುವ ಮತ್ತೊಂದು ಹಬ್ಬವೆಂದರೆ ಗಣರಾಜ್ಯೋತ್ಸವ. ಪ್ರತಿಯೊಬ್ಬ ವ್ಯಕ್ತಿಯನ್ನೂ ಪ್ರಜಾಪ್ರಭುತ್ವದ ಹಕ್ಕುಗಳ ಧಾರಕನನ್ನಾಗಿ ಮಾಡಿದ ಭಾರತೀಯ ಸಂವಿಧಾನ ಜಾರಿಗೊಂಡ ದಿನವಿದು. ಈ ದಿನದ ಸವಿನೆನಪಿಗಾಗಿ ವರ್ಷಂಪ್ರತಿ ಜನವರಿ 26 ರಂದು ದೇಶದೆಲ್ಲೆಡೆ ಗಣರಾಜ್ಯೋತ್ಸವ ದಿನವನ್ನಾಗಿ ಆಚರಿಸಲಾಗುತ್ತದೆ.

ಭಾರತವು 1947ರಲ್ಲಿ ಬ್ರಿಟಿಷರ ಸಂಕೋಲೆಯಿಂದ ಬಿಡಿಸಿಕೊಂಡಿದ್ದರೂ ಪ್ರಜಾಪ್ರಭುತ್ವ ಹಾಗೂ ಭಾರತದ ಆಡಳಿತ ವ್ಯವಸ್ಥೆ ಒಂದು ಸರಿಯಾದ ಚೌಕಟ್ಟಿಗೆ ಒಳಪಟ್ಟಿರಲಿಲ್ಲ. ಇದಕ್ಕೆ ಪರಿಹಾರ ಕಂಡುಕೊಳ್ಳುವ ದೃಷ್ಟಿಯಿಂದ ಆಗಸ್ಟ್ 29ರಂದು ಡಾ. ಅಂಬೇಡ್ಕರ್ ರವರ ನೇತೃತ್ವದಲ್ಲಿ ಅಲ್ಲಾಡಿ ಕೃಷ್ಣಸ್ವಾಮಿ ಅಯ್ಯರ್, ಗೋಪಾಲಸ್ವಾಮಿ ಅಯ್ಯಂಗಾರ್, ಟಿ.ಟಿ.ಕೃಷ್ಣಮಚಾರಿ, ಡಿ.ಪಿ.ಖೇತಾನ್, ಸರ್ ಬೆನೆಗಲ್, ಕನ್ಹಯ್ಯಲಾಲ್ ಮುನ್ಷಿ ಮತ್ತು ಮೊಹಮ್ಮದ್ ಸಾಅದುಲ್ಲಾ
ಅವರುಗಳನ್ನೊಳಗೊಂಡ ಸಮಿತಿಯನ್ನು ರಚಿಸಲಾಯಿತು. ಆ ಸಮಿತಿಯು ಸಂವಿಧಾನದ ಕರಡು ಪ್ರತಿಯನ್ನು ತಯಾರಿಸಿ ನವೆಂಬರ್ 4, 1947ರಂದು ಶಾಸನಸಭೆಯಲ್ಲಿ ಮಂಡಿಸಲಾಯಿತು. ನವೆಂಬರ್ 26, 1949ರಂದು ಅಂಗೀಕರಿಸಲ್ಪಟ್ಟು ಅನೇಕ ಪರಿಶೀಲನೆ ಮತ್ತು ತಿದ್ದುಪಡಿಗಳ ನಂತರ ಜನವರಿ 26 1950ರಂದು ಭಾರತದ ಸಂವಿಧಾನ ಜಾರಿಗೊಂಡಿತು. ಲಾಹೋರ್‌ನಲ್ಲಿ ನಡೆದ ಕಾಂಗ್ರೆಸ್ 1930ರ ಅಧಿವೇಶನದಲ್ಲಿ ಜನವರಿ 26 ಅನ್ನು ಭಾರತದ ಸ್ವಾತಂತ್ರ್ಯ ದಿನ ಎಂದು ಘೋಷಿಸಲಾಯಿತು. ಅಲ್ಲದೆ, ಪೂರ್ಣ ಸ್ವರಾಜ್ಯಕ್ಕಾಗಿ ಒತ್ತಾಯಿಸಲಾಯಿತು. ಈ ಹಿನ್ನೆಲೆಯಲ್ಲಿ 1950ರ ಜನವರಿ 26 ರಂದು ಸಂವಿಧಾನ ಜಾರಿಗೊಳಿಸಲಾಯಿತು.

ಬೃಹತ್ ಗ್ರಂಥವಿದು

ನಮ್ಮ ದೇಶದ ಜನರನ್ನು ಆಳುವ ಸರ್ಕಾರದ ಮೂಲ ರಚನೆಯನ್ನು ನಿರ್ಧರಿಸುವ ಗ್ರಂಥವೇ ಸಂವಿಧಾನ. ಪ್ರಜೆಗಳಿಂದ, ಪ್ರಜೆಗಳಿಗಾಗಿ ಮತ್ತು ಪ್ರಜೆಗಳಿಗೋಸ್ಕರ ಸರ್ಕಾರ ನಡೆಸುವ ಮೂಲತತ್ತ್ವ ಸಂವಿಧಾನದಲ್ಲಿ ಅಡಗಿವೆ. ಸರಕಾರಿ ಅಂಗಗಳ ಮೂಲಭೂತ ರಾಜಕೀಯ ತತ್ವಗಳ ರಚನೆ, ಆಡಳಿತದ ಕರ್ತವ್ಯ ಹೇಗಿರಬೇಕು ಎಂಬುದಕ್ಕೆ ಸ್ಪಷ್ಟ ನೆಲೆಯನ್ನು ಸಂವಿಧಾನ ಒದಗಿಸುತ್ತದೆ. ಜನರ ಮೂಲಭೂತ ಹಕ್ಕುಗಳ ರಕ್ಷಣೆ ಮತ್ತು ಪ್ರತಿಯೊಬ್ಬ ನಾಗರಿಕನ ಕರ್ತವ್ಯದ ಕುರಿತು ಸಂವಿಧಾನ ಸ್ಪಷ್ಟ ಉಲ್ಲೇಖಗಳನ್ನು ನೀಡಿದೆ. ಭಾರತದಲ್ಲಿರುವ ಸಾಮಾಜಿಕ ಅಸಮಾನತೆಗಳನ್ನು ಕೊನೆಗೊಳಿಸುವ ಉದ್ದೇಶವುಳ್ಳ ತತ್ತ್ವಗಳು ಮತ್ತು ಸಮಾಜೋದ್ಧಾರದ ಆಕಾಂಕ್ಷೆಗಳು, ಭಾರತೀಯ ಸಮಾಜವನ್ನು ಆಧುನಿಕ ಸಮಾಜವನ್ನಾಗಿ ಪರಿವರ್ತಿಸುವ ಗುರಿಯೊಂದಿಗೆ ರಚನೆಗೊಂಡಿರುವ ಗ್ರಂಥವಿದು. ಇದು 444 ವಿಧಿಗಳನ್ನು 22 ಭಾಗಗಳಲ್ಲಿಯೂ, 10 (ನಂತರ 12) ಅನುಚ್ಛೇದಗಳನ್ನೂ, 118 ತಿದ್ದುಪಡಿಗಳನ್ನೂ ಹೊಂದಿದೆ. ಪ್ರಜೆಗಳಿಗೆ ಏನೆಲ್ಲಾ ಹಕ್ಕುಗಳಿವೆ, ಅವುಗಳನ್ನು ಸರ್ಕಾರ ಹೇಗೆ ಪೂರೈಸಬೇಕು, ಸರ್ಕಾರ ಮತ್ತು ಪ್ರಜೆಗಳ ನಡುವಿನ ಸಂಬಂಧ, ಕರ್ತವ್ಯಗಳ ಬಗ್ಗೆ ಸಂಪೂರ್ಣ ವಿವರ ನೀಡಲಾಗಿದೆ. ಭಾರತೀಯ ಸಂವಿಧಾನ ಜಗತ್ತಿನ ಅತಿ ದೀರ್ಘ ಸಂವಿಧಾನ. ಸಂವಿಧಾನದ ಮೂಲ ಪ್ರತಿಗಳು ಹಿಂದಿ ಹಾಗೂ ಇಂಗ್ಲಿಷ್ ಭಾಷೆಯ ಕೈಬರಹದಲ್ಲಿವೆ. ಜಪಾನ್, ಅಮೆರಿಕ, ಐರ್ಲೆಂಡ್, ಜರ್ಮನಿ ಮತ್ತು ಯುಎಸ್‌ಎಸ್‌ಆರ್ ಸೇರಿದಂತೆ ಜಗತ್ತಿನ ಅನೇಕ ರಾಷ್ಟ್ರಗಳ ಸಂವಿಧಾನಗಳಿಂದ ಉತ್ತಮ ಅಂಶಗಳನ್ನು ನಮ್ಮ ಸಂವಿಧಾನದಲ್ಲಿ ಅಳವಡಿಸಿಕೊಳ್ಳಲಾಗಿದೆ. ಇದನ್ನು ಸಂವಿಧಾನದ ಮೂಲ ಪ್ರತಿಗಳನ್ನು ಪಾರ್ಲಿಮೆಂಟ್ ಗ್ರಂಥಾಲಯದಲ್ಲಿ ಸಂರಕ್ಷಿಸಿ ಇಡಲಾಗಿದೆ.

ನವದೆಹಲಿಯಲ್ಲಿ ಮೂರು ದಿನಗಳ ಆಚರಣೆ

ಪ್ರತಿವರ್ಷ ನವದೆಹಲಿಯಲ್ಲಿ ಗಣರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಗುತ್ತದೆ. ಈ ಕಾರ್ಯಕ್ರಮದಲ್ಲಿ ಪ್ರಧಾನಿ ಅವರ ಭಾಷಣ ಪ್ರಮುಖವಾಗಿದ್ದರೂ ರಾಷ್ಟ್ರಪತಿಗಳೇ ಕಾರ್ಯಕ್ರಮದ ಅಧ್ಯಕ್ಷರಾಗಿರುತ್ತಾರೆ. ಭಾರತದ ರಕ್ಷಣಾ ವ್ಯವಸ್ಥೆಗಳಾದ ಭೂಸೇನೆ, ನೌಕಾಸೇನೆ ಮತ್ತು ವಾಯುಸೇನೆಯ ಪಡೆಗಳಿಂದ ರಾಷ್ಟ್ರವಂದನೆಯನ್ನು ಸಲ್ಲಿಸಲಾಗುತ್ತದೆ. ಗಣರಾಜ್ಯೋತ್ಸವ ಕೇವಲ 26ಕ್ಕೆ ಮಾತ್ರವಲ್ಲ ಮೂರು ದಿನಗಳವರೆಗೆ ನಡೆಯುತ್ತದೆ. ಜನವರಿ 29ಕ್ಕೆ ‘ಅಬೈಡ್ ವಿಥ್ ಮಿ’ ಎಂಬ ಹಾಡಿನೊಂದಿಗೆ ಮುಕ್ತಾಯಗೊಳ್ಳುತ್ತದೆ. ಈ ಕಾರ್ಯಕ್ರಮದಲ್ಲಿ ಭಾರತ ಸರ್ಕಾರ ನೀಡುವ ಪ್ರಮುಖ ಪ್ರಶಸ್ತಿಗಳಾದ ಭಾರತ ರತ್ನ, ಪದ್ಮ ಭೂಷಣ ಪ್ರಶಸ್ತಿಯನ್ನು ಸಾಧಕರಿಗೆ ನೀಡಿ ಗೌರವಿಸುವುದು ಈ ದಿನದಂದೆ.

ಶಾಂತಿ, ಅಹಿಂಸೆ, ಸಮಾನತೆ, ಸಹಬಾಳ್ವೆ ಮತ್ತು ಸರ್ವಧರ್ಮ ಸಹಿಷ್ಣುತೆಯು ಗಣತಂತ್ರ ವ್ಯವಸ್ಥೆಯ ಮೂಲ ಆಶಯವಾಗಿದೆ. ವಿಭಿನ್ನ ಧರ್ಮ, ಭಾಷೆ, ಆಚಾರ-ವಿಚಾರಗಳ ವೈವಿಧ್ಯತೆಯ ನಡುವೆಯೂ ದೇಶದ ಐಕ್ಯತೆಯನ್ನು ಕಾಪಾಡಿಕೊಂಡು ಬರುತ್ತಿರುವುದು ಸಂವಿಧಾನದ ಹೆಗ್ಗಳಿಕೆ. ನಮ್ಮ ಗಣತಂತ್ರದ ಪ್ರಜಾಸತ್ತಾತ್ಮಕ ಜಾತ್ಯಾತೀತ ಆಧಾರದ ಮೇಲೆ ಪ್ರತಿಯೊಂದು ದಾಳಿಯನ್ನು ಹಿಮ್ಮೆಟ್ಟಿಸಬೇಕಾಗಿದೆ. ಈ ದೇಶದ ಪ್ರತಿ ಪ್ರಜೆಯು ಸಂವಿಧಾನಿಕ ತತ್ತ್ವಗಳಿಗನುಗುಣವಾಗಿ ನಡೆದರೆ ನಮ್ಮ ದೇಶ ಸುಭಿಕ್ಷವಾಗಿರುವುದರಲ್ಲಿ ಸಂಶಯವೇ ಇಲ್ಲ.

 

click me!