ಬಾಳೆಹಣ್ಣು ಬೆಳೆದು ವರ್ಷಕ್ಕೆ 48 ಲಕ್ಷ ಗಳಿಸುತ್ತಾರೆ ಈ ಕೃಷಿಕ

By Web Desk  |  First Published Dec 19, 2018, 3:45 PM IST

ಹತ್ತನೇ ಕ್ಲಾಸು ಓದಿದ ಒಬ್ಬ ಸಾಮಾನ್ಯ ರೈತನ ಮಗ ರಾಮ್‌ಶರಣ್ ಶರ್ಮಾ ಆಧುನಿಕ ಕೃಷಿಯಿಂದ ಇಡೀ ಊರನ್ನೇ ಗೆದ್ದ ಕತೆ ಇದು. ಎಲ್ಲರಿಗೂ ಮಾದರಿಯಾಗಬಹುದಾದ ಸ್ಫೂರ್ತಿ ಕತೆ ಇದು. 


ಲಕ್ನೋ (ಡಿ. 19): ಎಲ್ಲರಂತೆ ಇದ್ದ ವ್ಯಕ್ತಿ ಅವರು. ಹೆಸರು ರಾಮ್‌ಶರಣ್ ಶರ್ಮಾ. ಜಾಸ್ತಿ ಓದಿ ವಿದ್ಯಾವಂತನಾಗಬೇಕು ಎಂಬ ಆಸೆ ಇತ್ತು. ಆದರೆ ಮನೆಯಲ್ಲಿ ಆರ್ಥಿಕ ಪರಿಸ್ಥಿತಿ ಸರಿ ಇರಲಿಲ್ಲ. ಹೀಗಾಗಿ ಹತ್ತನೇ ತರಗತಿಗೆ ಓದನ್ನು ನಿಲ್ಲಿಸಬೇಕಾಯಿತು. ತಂದೆ ರೈತ. ಹಾಗಾಗಿ ಕೃಷಿ ಕೆಲಸ ಶುರುವಾಯಿತು.

ತಂದೆ ಸಾಂಪ್ರದಾಯಿಕ ಕೃಷಿ ಮಾಡುತ್ತಿದ್ದರು. ಭತ್ತ, ಗೋಧಿ, ಕಬ್ಬು ಮತ್ತು ಸಾಸಿವೆ ಬೆಳೆಯುತ್ತಿದ್ದರು. ಅದಕ್ಕೆ ಜಾಸ್ತಿ ಖರ್ಚಾಗುತ್ತಿತ್ತು ಮತ್ತು ಹೆಚ್ಚು ಕೆಲಸಗಾರರ ಅವಶ್ಯಕತೆ ಇತ್ತು. ರಾಮ್‌ಶರಣ್ ಇದನ್ನು ನೋಡಿ ಏನಾದರೂ ಹೊಸ ರೀತಿಯಲ್ಲಿ ಕೃಷಿ ಮಾಡಬೇಕು ಎಂದುಕೊಂಡರು. ಕಷ್ಟಪಟ್ಟು ಒಂದು ಐದು ಸಾವಿರ ರೂಪಾಯಿಗಳನ್ನು ಒಟ್ಟು ಮಾಡಿದರು. ನಂತರ ದೇಶದ ನಾನಾ ರಾಜ್ಯಗಳಿಗೆ ಭೇಟಿ ನೀಡಿ ಅಲ್ಲಿನ ಕೃಷಿ ಬಗ್ಗೆ ಅಧ್ಯಯನ ಮಾಡುವ ಕುರಿತಾದ ಯೋಜನೆ ಹಾಕಿಕೊಂಡರು. ಜರ್ನಿ ಶುರುವಾಯಿತು.

Tap to resize

Latest Videos

undefined

ಎರಡು ವರ್ಷ ಅಧ್ಯಯನ ಪ್ರವಾಸ

ಉತ್ತರ ಪ್ರದೇಶದಲ್ಲಿ ದೌಲತಾಪುರ್‌ನ ಪುಟ್ಟ ಹಳ್ಳಿ ಬಾರಾಬಂಕಿಯಿಂದ ಹೊರಟರು ರಾಮ್‌ಶರಣ್. ಮಹಾರಾಷ್ಟ್ರ, ಗುಜರಾತ್, ಪಂಜಾಬ್, ಹರಿಯಾಣ ಮುಂತಾದ ಅನೇಕ ರಾಜ್ಯಗಳಿಗೆ ಹೋದರು. ಅಲ್ಲಿನ ಯಶಸ್ವೀ ರೈತರು, ವಿಜ್ಞಾನಿಗಳು, ಪರಿಸರ ತಜ್ಞರು ಹೀಗೆ ಎಲ್ಲರ ಜತೆ ಮಾತನಾಡಿದರು. ಹೀಗೆ ಅವರು ಸುತ್ತಾಡುತ್ತಾ, ಕಲಿಯುತ್ತಾ, ಜ್ಞಾನ ವೃದ್ಧಿಸಿಕೊಳ್ಳುತ್ತಾ ಕಳೆದಿದ್ದು ಬರೋಬ್ಬರಿ ಎರಡು ವರ್ಷ. ಈ ಪಯಣದಲ್ಲಿ ಅವರು ಒಂದು ನಿರ್ಧಾರಕ್ಕೆ ಬಂದರು. ತಾನು ಬಾಳೆಹಣ್ಣು ಬೆಳೆಸುವ ನಿರ್ಧಾರ. ಮನೆಗೆ ಬಂದವರೇ ತಂದೆಗೆ ಈ ನಿರ್ಧಾರವನ್ನು ತಿಳಿಸಿದರು. ಆದರೆ ತಂದೆ ಒಪ್ಪಲಿಲ್ಲ. ಕಡೆಗೆ ಒಂದು ಎಕರೆಯಲ್ಲಿ ಬಾಳೆ ಹಣ್ಣು ಬೆಳೆಸಲು ಅನುಮತಿ ಪಡೆದುಕೊಂಡರು. ಇವರ ಯಶಸ್ಸಿನ ಕಥೆ ಶುರುವಾಗಿದ್ದು ಹೀಗೆ.

ಬಾಳೆಹಣ್ಣು ಕೃಷಿ ಆರಂಭ

ರಾಮ್‌ಶರಣ್ ಟಿಶ್ಯೂ ಕಲ್ಚರ್ ವಿಧಾನವನ್ನು ತನ್ನ ಕೃಷಿಗೆ ಅಳವಡಿಸಿಕೊಂಡರು. ಇದರಿಂದ ಕಡಿಮೆ ಅವಧಿಯಲ್ಲಿ ಹೆಚ್ಚು ಇಳುವರಿ ಪಡೆಯುವುದು ಮತ್ತೆ ಒಂದೇ ಗಾತ್ರದ, ಒಂದೇ ರೀತಿ ಬಾಳೆಹಣ್ಣುಗಳನ್ನು ಬೆಳೆಯುವುದು ಅವರಿಗೆ ಸಾಧ್ಯವಾಯಿತು. ಹಾಗಾಗಿ ಒಂದೇ ವರ್ಷದಲ್ಲಿ ಬಾಳೆ ಹಣ್ಣು ಕೃಷಿಯಲ್ಲಿ ಲಾಭ ಬಂತು. ಈ ಬಾಳೆಹಣ್ಣುಗಳಿಗೆ ಸ್ಥಳೀಯ ಮಾರುಕಟ್ಟೆಯಲ್ಲೂ ಬೇಡಿಕೆ ಇತ್ತು. ಅಲ್ಲದೇ ರಫ್ತು ಮಾಡಿದರೂ ಒಳ್ಳೆಯ ಬೆಲೆ ಬಂತು. ಅವರು ಒಂದು ಎಕರೆಯಲ್ಲಿ 400 ಕ್ವಿಂಟಾಲ್ ಬಾಳೆ ಹಣ್ಣು ಬೆಳೆದಿದ್ದರು. ಅವರು ಅದಕ್ಕೆ ಖರ್ಚು ಮಾಡಿದ್ದು ಒಂದು ಲಕ್ಷ. ಆದಾಯ ಗಳಿಸಿದ್ದು ನಾಲ್ಕು ಲಕ್ಷ.

ವರ್ಷಕ್ಕೆ 48 ಲಕ್ಷ ಆದಾಯ

ಆ ಯಶಸ್ಸಿನಿಂದ ಖುಷಿಯಾಗಿ ಅವರು ಬೇರೆ ಬೇರೆ ಥರದ ಬಾಳೆ ಹಣ್ಣು ಬೆಳೆಯುವ ಪ್ರಯತ್ನ ಮಾಡಿದರು. ದಕ್ಷಿಣ ಭಾರತದಲ್ಲಿ ಸಿಗುವ ಜಾಸ್ತಿ ಪ್ರೊಟೀನ್ ಇರುವ, ಕಡಿಮೆ ಸಕ್ಕರೆ ಅಂಶ ಇರುವ ಬಾಳೆಹಣ್ಣು ಬೆಳೆದರು. ನಂತರ ಮರೂನ್ ಬಣ್ಣದ ಒಂದು ಸಾವಿರ ಬಾಳೆ ಗಿಡಗಳನ್ನು ನೆಟ್ಟರು. ಆ ಗಿಡಗಳೂ ಯಥೇಚ್ಛ ಫಲ ನೀಡಿದುವು. ಸಾಮಾನ್ಯ ಬಾಳೆಹಣ್ಣು ತಳಿಗಳ ಬೆಲೆ ಕೆಜಿಗೆ ರೂ.೧೫ರಿಂದ ೨೦ ಇದ್ದರೆ ಈ ಬಾಳೆಹಣ್ಣಿನ ಬೆಲೆ ಕೆಜಿಗೆ ರೂ.೮೦ರಿಂದ ೧೦೦ರವರೆಗೆ ಇತ್ತು. ಅಲ್ಲಿಂದ ಅವರ ಪ್ರಯೋಗಗಳು ಇನ್ನೂ ಜಾಸ್ತಿಯಾದುವು.

ರಾಮ್ ತಮ್ಮ ಈ ಅಣುವಂಶಿ ಪದ್ಧತಿಯ ಪ್ರಯೋಗದಿಂದ ಭೂ ಸವಕಳಿ ತಪ್ಪಿಸಿದ್ದು, ಮಣ್ಣಿನ ಫಲವತ್ತತೆ ಹಾಗೂ ಉತ್ತಮ ಬೆಳೆಯನ್ನೂ ಪಡೆದರು. ಬಾಳೆಯ ಜೊತೆಗೆ ಒಮ್ಮೆ ಆಲೂಗಡ್ಡೆ, ಇನ್ನಮ್ಮೆ ಹೈಬ್ರಿಡ್ ಟೊಮೆಟೊ, ಮತ್ತೊಮ್ಮೆ ಮೆಂತ್ಯ ಬೆಳೆದರು. ಇವು ಯಾವುದೂ ಅವರ ಕೈ ಬಿಡಲಿಲ್ಲ.

ಸಾಮಾನ್ಯ ರೈತರು ಎಕರೆಗೆ 200 ಕ್ವಿಂಟಾಲ್ ಟೊಮೆಟೋ ಬೆಳೆದರೆ ಇವರು ಮಾತ್ರ ತಮ್ಮ ಆಧುನಿಕ ಕೃಷಿ ಪದ್ಧತಿಯಿಂದ ಎಕರೆಗೆ ಸುಮಾರು 400 ಕ್ವಿಂಟಾಲ್ ಟೊಮೆಟೋ ಬೆಳೆದು ತೋರಿಸಿದರು. ಒಂದು ಎಕರೆಯಿಂದ ಆರಂಭವಾದ ಇವರ ಕೃಷಿ ಈ ಸಂದರ್ಭದಲ್ಲಿ 120 ಎಕರೆಗೆ ಬಂತು. ಅವರು ಬಾಳೆಹಣ್ಣಿನಿಂದಲೇ ವರ್ಷಕ್ಕೆ 48 ಲಕ್ಷ ರೂಪಾಯಿ ಆದಾಯ ಪಡೆಯುವಷ್ಟರ ಮಟ್ಟಿಗೆ ಬೆಳೆದರು.

click me!