ಮಕ್ಕಳ ಕೈಗೆ ಸ್ಮಾರ್ಟ್‌ಫೋನ್; ಮೆದುಳಿನ ಬೆಳವಣಿಗೆಗೂ ಮಾರಕ!

By Web DeskFirst Published Jul 26, 2019, 3:47 PM IST
Highlights

ಸ್ಮಾರ್ಟ್ ಫೋನ್‌ಗಳನ್ನು ಬಳಸುವ ಮಕ್ಕಳನ್ನು ಸ್ಮಾರ್ಟ್ ಕಿಡ್ಸ್ ಎಂದು ಕೆಲ ಪೋಷಕರು ಭಾವಿಸುವುದಿದೆ. ಮಕ್ಕಳ ಕೈಲಿ ಇಡೀ ದಿನ ಫೋನ್ ಕೊಟ್ಟು ತಲೆ ಕೆಡಿಸಿಕೊಳ್ಳದವರು ನೀವಾದರೆ, ಮಗುವಿನ ಆರೋಗ್ಯದ ಜವಾಬ್ದಾರಿ ಮರೆತುಬಿಟ್ಟಿದ್ದೀರಾ ಎನಿಸುತ್ತದೆ. 

ಈಗಿನ ಮಕ್ಕಳೇ ಹಾಗೆ, 3 ತಿಂಗಳಿಂದ ಹಿಡಿದು 18 ವರ್ಷದವರೆಗೂ ಮಕ್ಕಳನ್ನು ಓಲೈಸಲು, ಅವರ ಗಮನ ಬೇರೆಡೆ ಸೆಳೆದು ಊಟ ಮಾಡಿಸಲು, ಹೇಳಿದ ಕೆಲಸ ಮಾಡಿಸಲು ಸ್ಮಾರ್ಟ್‌ಫೋನ್ ಕೊಡುವಷ್ಟು ಆಕರ್ಷಣೆ ಇನ್ನೊಂದಿಲ್ಲ. ಫೋನ್ ಮುಂದೆ ಯಾವ ಆಟಿಕೆಯೂ ಆಸಕ್ತಿ ಹುಟ್ಟಿಸದು. ಮಕ್ಕಳೊಂದಿಗೆ ಹೆಚ್ಚು ಸಮಯ ಕಳೆಯಲಾಗದ ಪೋಷಕರಿಗೆ ಫೋನ್ ಕೊಟ್ಟು ಕುಳಿತುಕೊಳ್ಳುವುದು ಸುಲಭ ಕೂಡಾ. ಹೀಗಾಗಿ, ಮಕ್ಕಳ ಕೈಗೆ ಸ್ಮಾರ್ಟ್‌ಫೋನ್ ನೀಡುವ ಟ್ರೆಂಡ್ ಹಿಗ್ಗಾಮುಗ್ಗ ಬೆಳೆಯುತ್ತಿದೆ. ಮಕ್ಕಳ ಮೇಲೆ ಸ್ಮಾರ್ಟ್‌ಫೋನ್‌ಗಳ ದುಷ್ಪರಿಣಾಮಗಳ ಬಗ್ಗೆ ಎಷ್ಟೇ ಅಧ್ಯಯನಗಳು ಏನೇ ಬಾಯ್ಬಡಿದುಕೊಳ್ಳಲಿ, ಪ್ರತಿದಿನ ಹತ್ತು ಹಲವು ಸುದ್ದಿಗಳನ್ನು ಓದಲಿ, ಯಾವುದೂ ಪೋಷಕರ ಮೇಲೆ ಕೆಲಸ ಮಾಡುತ್ತಿಲ್ಲ. 

ರಾತ್ರಿ ಹೊತ್ತಿನಲ್ಲಿ ಗಂಡ ಹೆಂಡತಿ ಇಬ್ಬರೂ ಮಲಗುವುದು ಬಿಟ್ಟು ಫೋನ್ ಹಿಡಿದು ಸ್ಕ್ರಾಲ್ ಮಾಡುತ್ತಾ ಗಂಟೆಗಟ್ಟಲೆ ಕಳೆಯುವುದು ಈಗೀಗ ಮಾಮೂಲು. ಬೆಳಗ್ಗೆದ್ದು. ನಿದ್ದೆಯಾಗಿಲ್ಲ, ಸುಸ್ತು, ಊಟ ಸೇರುವುದಿಲ್ಲ, ವೃಥಾ ಕಿರಿಕಿರಿ, ಫ್ರೆಶ್ ಇಲ್ಲ ಮುಂತಾದ ದೂರುಗಳೂ ನಿಮ್ಮವೂ ಹೌದು. ಅಂಥದರಲ್ಲಿ ಮಕ್ಕಳ ಕೈಗೆ ಫೋನ್ ಕೊಟ್ಟು ಕತೆ ನೋಡಿಕೋ, ವಿಡಿಯೋ ಗೇಮ್ ಆಡಿಕೋ ಎಂದೇನೋ ಹೇಳಿದರೆ ಅವರ ಎಳೆಯ ಕಣ್ಣು, ಮನಸ್ಸು ಹಾಗೂ ದೇಹ ಅದೆಷ್ಟು ದಣಿಯಬಹುದು ಲೆಕ್ಕ ಹಾಕಿ. ನಿಮ್ಮ ಮಕ್ಕಳು ಇಡೀ ದಿನ ಸುಸ್ತು, ಬೇಜಾರು, ನಿದ್ದೆ ಬರುತ್ತದೆ ಎಂದೆಲ್ಲ ಹೇಳುತ್ತಿದ್ದರೆ ಅವರಿಗೆ ನೀಡುವ ಸ್ಕ್ರೀನ್ ಟೈಂ ಬಗ್ಗೆ ಗಂಭೀರವಾಗಿ ಯೋಚಿಸಲೇಬೇಕು. 

ಇದು ಟಾಯ್ಲೆಟ್ ವಿಷ್ಯ, ತುಸು ಡೇಂಜರ್ ಶಿಷ್ಯ....

ಪೀಡಿಯಾಟ್ರಿಕ್ಸ್ ಜರ್ನಲ್‌ನಲ್ಲಿ ಇತ್ತೀಚೆಗೆ ವರದಿಯಾದ ಅಧ್ಯಯನ ಫಲಿತಾಂಶದಂತೆ, ಮಲಗುವ ಮುನ್ನ ಸ್ಮಾರ್ಟ್‌ಫೋನ್ ಬಳಕೆಯು ಮಕ್ಕಳಲ್ಲಿ ನಿದ್ರಾಹೀನತೆ ಸೇರಿದಂತೆ ಇತರೆ ಸಮಸ್ಯೆಗಳನ್ನು ತರುವಲ್ಲಿ ಮೊತ್ತಮೊದಲ ಖಳನಾಯಕ. 

ಮಗುವಿನ ಮೆದುಳು ಇನ್ನೂ ಬೆಳವಣಿಗೆಯ ಹಂತದಲ್ಲಿರುತ್ತದೆ. ಸ್ಮಾರ್ಟ್‌ಪೋನ್‌ಗಳು ಹಾಗೂ ಇತರೆ ಗ್ಯಾಜೆಟ್‌ಗಳು ಹೊರಸೂಸುವ ನೀಲಿಬೆಳಕು ಅವರ ಜೈವಿಕ ಗಡಿಯಾರವನ್ನು ಡಿಸ್ಟರ್ಬ್ ಮಾಡುತ್ತದೆ. ಮಕ್ಕಳ ಕಣ್ಣಿನ ದೊಡ್ಡ ಪಾಪೆಗಳು ಬಹುಬೇಗ ಬೆಳಕಿನ ಕುಕ್ಕುವಿಕೆಗೆ ಡ್ಯಾಮೇಜ್ ಆಗುತ್ತವೆ. ಇವೆರಡೂ ಒಟ್ಟಾಗಿ ಮಗುವಿನ ದೇಹದಲ್ಲಿ ಮೆಲಟೋನಿನ್ ಹಾರ್ಮೋನ್ ಮಟ್ಟದ ಮೇಲೆ ದುಷ್ಪರಿಣಾಮ ಬೀರುತ್ತವೆ. 

ಮೆಲಟೋನಿನ್ ನಮ್ಮ ದೇಹದಲ್ಲಿ ನಿದ್ರೆಯನ್ನು ನಿಯಂತ್ರಿಸುವ ಹಾರ್ಮೋನ್. ಹೆಚ್ಚಿನ ಬೆಳಕು ರೆಟಿನಾಗೆ ಬಿದ್ದಾಗ ಮೆಲಟೋನಿನ್ ಮಟ್ಟ ಕಡಿಮೆಯಾಗುತ್ತದೆ. ಹಾಗಿದ್ದರೆ, ನೀವೇ ಕಲ್ಪಿಸಿಕೊಳ್ಳಿ, ಸ್ಕ್ರೀನ್ ಹೆಚ್ಚು ನೋಡಿದಷ್ಟೂ ಮಕ್ಕಳ ದೇಹದಲ್ಲಿ ಮೆಲಟೋನಿನ್ ಹೇಗೆ ಕಡಿಮೆಯಾಗುತ್ತದೆ, ಇದರಿಂದ ಅವರ ನಿದ್ರೆಯ ಮೇಲೆ ಎಷ್ಟು ಪರಿಣಾಮ ಬೀರುತ್ತದೆ ಎಂದು. 
 

ನೀವೇನು ಮಾಡಬೇಕು?

ಎಲ್ಲಕ್ಕಿಂತ ಮುಖ್ಯವಾಗಿ ಮಕ್ಕಳಿಗೆ ಸ್ಮಾರ್ಟ್ ಪೋನ್ ಕೊಡುವುದನ್ನು ಬಿಡಬೇಕು. ಕತೆಗಳಿಗಾಗಿಯೋ, ವಿಡಿಯೋ ನೋಡಲೋಸ್ಕರವೋ ಫೋನ್ ಕೊಡುವುದು ಬಿಟ್ಟು ಮಲಗುವ ಸಮಯದಲ್ಲಿ ಕತೆ ಪುಸ್ತಕ ಓದಿ ಮಲಗುವುದನ್ನು ರೂಢಿಸಿ. ಇಷ್ಟವಿಲ್ಲವೆಂದರೆ ಎಷ್ಟಾದರೂ ಆಡಿಕೊಳ್ಳಲಿ. ಆದರೆ, ಫೋನ್‌ನಲ್ಲಿ ಅಲ್ಲ. 

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಈ ವೀಡಿಯೋ ನೋಡಿ....

"

ಒಂದು ವೇಳೆ ಫೋನ್ ಕೊಟ್ಟರೂ ಕೊಡುವಾಗಲೇ ಎರಡೇ ವಿಡಿಯೋ ನೋಡಿ ಹಿಂದಿರುಗಿಸುವಂತೆ ರೂಲ್ಸ್ ಮಾಡಿ. ಮಲಗುವ ಮುಂಚೆಯಂತೂ ಫೋನ್ ಬಳಕೆ ಬೇಡವೇ ಬೇಡ. ಮಕ್ಕಳ ಮುಂದೆ ಪೋಷಕರು ಫೋನ್ ಬಳಕೆ ಕಡಿಮೆ ಮಾಡಿದರೆ ಮಕ್ಕಳಲ್ಲೂ ಫೋನ್ ಕುರಿತ ಆಕರ್ಷಣೆ ಕಡಿಮೆಯಾಗುತ್ತದೆ. ಇನ್ನು ಮಕ್ಕಳ ಕೋಣೆಯಲ್ಲಿ ಮೊಬೈಲ್ ಫೋನ್ ಇಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಿ. 

ಟೆಕ್ನಾಲಜಿ ಟೆನ್ಷನ್‌ನಿಂದ ಹೊರ ಬರೋದು ಹೇಗೆ?

ಒಟ್ಟಾರೆಯಾಗಿ, ಸ್ಮಾರ್ಟ್ ಫೋನ್‌ಗಳು ಹಾಗೂ ಲ್ಯಾಪ್‌ಟಾಪ್‌ಗಳು ನಿಮ್ಮದಷ್ಟೇ ಅಲ್ಲ, ನಿಮ್ಮ ಮಕ್ಕಳ ನಿದ್ದೆಯನ್ನೂ ಕದಿಯುತ್ತಿವೆ. ಮಕ್ಕಳಿಗೆ ನೀವೇ ಉದಾಹರಣೆಯಾಗಬೇಕೆಂಬ ಆಸೆಯಿದ್ದರೆ ಅರ್ಧ ರಾತ್ರಿವರೆಗೆ ನೆಟ್‌ಫ್ಲಿಕ್ಸ್, ಪ್ರೈಮ್ ಮೂವೀಸ್ ನೋಡುವುದು, ಸೋಷ್ಯಲ್ ಮೀಡಿಯಾ ಸ್ಕ್ರಾಲ್ ಮಾಡುತ್ತಿರುವುದನ್ನು ಬಿಡಿ. ಮಗು ನಿದ್ರೆಗೆ ಹೋಗುವ ಕನಿಷ್ಠ 2 ಗಂಟೆ ಮುನ್ನ ಫೋನ್ ದೂರವಿಡಿ. 

click me!