ಈ ಬಿಳಿಯಾದ ಗರಿಯಾದ ತೆಳುವಾದ ಬೀಜಗಳು ಸಂಜೆಯ ಸ್ನ್ಯಾಕ್ಸ್‌ನ್ನು ಪೂರ್ಣಗೊಳಿಸುತ್ತವೆ. ಆರೋಗ್ಯಕ್ಕೆ ಮನಸ್ಸಿಗೆ ಎರಡಕ್ಕೂ ಹಿತ ಕೊಡುವ ಮಿತಾಹಾರವಿದು.
ಸ್ವಲ್ಪ ತುಪ್ಪದಲ್ಲಿ ಹುರಿದರೆ ಗರಿಗರಿಯಾದ, ಹಗುರವಾದ, ನಾಲಿಗೆಗೆ ರುಚಿಸುವ, ತೂಕಕ್ಕೆ ಸೇರದ ಮಖಾನಾ- ಖೀರು, ರಾಯತಾ, ಕರಿಯಲ್ಲೂ ಬಳಕೆಯಾಗುತ್ತದೆ. ಕಾರ್ನ್ ಫ್ಲೇಕ್ಸ್‌ನ ಅಣ್ಣನೋ ತಮ್ಮನೋ ಎನ್ನಿಸುವ ಮಖಾನಾವನ್ನು ಉತ್ತರ ಬಾರತದ ಕೆಲವೆಡೆ ದೇವರಿಗೆ, ವಿಶೇಷವಾಗಿ ನವರಾತ್ರಿಯಲ್ಲಿ ನೈವೇದ್ಯವಾಗಿ ಕೂಡಾ ನೀಡಲಾಗುತ್ತದೆ. ಈ ನಟ್ ಎಲ್ಲಿಂದ ಬರುತ್ತದೆ, ಯಾವುದರಿಂದ ಇದನ್ನು ತೆಗೆಯಲಾಗುತ್ತದೆ ಗೊತ್ತಾ?
ಇದು ತಾವರೆಯ ಹೂವಿನ ಭಾಗ. ಸೌಂದರ್ಯಕ್ಕೆ ಹೆಸರಾದ, ರಾಷ್ಟ್ರ ಹೂವಾದ ತಾವರೆಯು ಮಖಾನವನ್ನೂ, ಬೀಜಗಳನ್ನೂ ನಮಗೆ ನೀಡುತ್ತದೆ. ಹಾಗಾಗಿಯೇ ಬಹುಷಃ ತಾವರೆ ಹೂವಿನ ಮೇಲೆ ನಿಲ್ಲುವ ಲಕ್ಷ್ಮಿ, ಸರಸ್ವತಿ ದೇವರಿಗೆ ಇದನ್ನು ಅರ್ಪಿಸಲಾಗುವುದು. ಮಖಾನಾವನ್ನು ನಮ್ಮ ದೇಶದಲ್ಲಿ ಬಿಹಾರದಲ್ಲಿ ಬಹಳವಾಗಿ ಉತ್ಪಾದಿಸಲಾಗುತ್ತದೆ. ಅದು ಬಿಟ್ಟರೆ ವಿದೇಶಗಳಲ್ಲಿ ಎಂದರೆ ಜಪಾನ್, ಕೊರಿಯಾ ಹಾಗೂ ರಷ್ಯಾದ ಕೆಲವೆಡೆ ಮಖಾನಾ ಉತ್ಪತ್ತಿ ಇದೆ.
ಸಂಜೆಯ ಕುರುಕಲು ಕರುಮಾಕುರುಂ ಟೊಮ್ಯಾಟೋ ಸೇವ್ !
ಹೇಗೆ ಇದನ್ನು ತೆಗೆಯಲಾಗುತ್ತದೆ?
ಇಂಡಿಯನ್ ಜರ್ನಲ್ ಆಫ್ ಟ್ರೆಡಿಶನಲ್ ನಾಲೆಡ್ಜ್ ಪ್ರಕಾರ, ಪ್ರೊಸೆಸ್ ಮಾಡಿದ ಬಳಿಕ ಈ ಬೀಜಗಳು ತಿನ್ನಲರ್ಹ ಅಷ್ಟೇ ಅಲ್ಲ, ನ್ಯೂಟ್ರಿಶಿಯಸ್ ಕೂಡಾ. ಬಿಹಾರದ ಮಲ್ಲಾ ಸಮುದಾಯ ಇದನ್ನು ಹೇಗೆ ಸಂಗ್ರಹಿಸುತ್ತಾರೆ, ಹೇಗೆ ಬೆಳೆಯುತ್ತಾರೆ ಎಂಬುದನ್ನು ಈ ಜರ್ನಲ್ ವಿವರವಾಗಿ ನೀಡಿದೆ.
ಸಂಗ್ರಹ
ಮಖಾನಾ ತೆಗೆಯಲು ಕೌಶಲ್ಯಯುತ ಅನುಭವಿಗಳು ಬೇಕು. ಬೆಳಗ್ಗೆ 10ರಿಂದ ಮಧ್ಯಾಹ್ನ ಮೂರರವರೆಗೆ ಇದರ ಕೊಯ್ಲು ನಡೆಯುತ್ತದೆ. ನದಿ ಅಥವಾ ಕೊಳದ ಬುಡದಿಂದ ಈ ಬೀಜಗಳನ್ನು ಸಂಗ್ರಹಿಸಲು 4ರಿಂದ 5 ಗಂಟೆಗಳು ಬೇಕು. ಕೆಲ ಸಮುದಾಯಗಳಲ್ಲಿ ಬಿದಿರಿನ ಕೋಲನ್ನು ಕೊಳದಾಳಕ್ಕೆ ಫಿಕ್ಸ್ ಮಾಡಲಾಗುತ್ತದೆ. ರೈತರು ಉದ್ದ ಕೊಲಿನೊಡನೆ ನೀರಿನಾಳದಲ್ಲಿ ಎಲ್ಲ ದಿಕ್ಕುಗಳಲ್ಲೂ ಈಜಿ, ತಾವರೆ ಬೀಜಗಳನ್ನು ಸಂಗ್ರಹಿಸಿ ಬಿದಿರ ಕೋಲಿನ ಬುಡದಲ್ಲಿ ತಂದು ಹಾಕುತ್ತಾರೆ. ನಂತರ ಸಂಗ್ರಹಿಸಿದ ಬೀಜಗಳನ್ನು ತೊಳೆದು ಸ್ವಚ್ಛಗೊಳಿಸಲಾಗುತ್ತದೆ.
ಸ್ವಚ್ಛತೆ ಹಾಗೂ ಸ್ಟೋರೇಜ್
ಗಾಂಜಾ ಎಂಬ ಅರ್ಧ ಚಂದ್ರಾಕೃತಿಯ ಬುಟ್ಟಿಯಲ್ಲಿ ಹೀಗೆ ಸಂಗ್ರಹಿಸಿದ್ದನ್ನೆಲ್ಲ ತಂದು ಹಾಕಲಾಗುತ್ತದೆ. ಇದನ್ನು ಬಹಳಷ್ಟು ಬಾರಿ ನೀರಿನಿಂದ ಸ್ವಚ್ಛಗೊಳಿಸಲಾಗುತ್ತದೆ. ಈ ಬೀಜಗಳನ್ನು ಸಿಲಿಂಡರ್ ಆಕಾರದ ಕಂಟೇನರ್‌ನಲ್ಲಿ ಹಾಕಿ ನೆಲದಲ್ಲಿ ಉರುಳಾಡಿಸಲಾಗುತ್ತದೆ. ಇದರಿಂದ ಅವುಗಳ ಮೇಲ್ಮೈ ನುಣುಪಾಗುತ್ತದೆ. ನಂತರ ಅದನ್ನು ಚಾಪೆಯ ಮೇಲೆ ಹಾಕಿ ಮೂರರಿಂದ ನಾಲ್ಕು ಗಂಟೆ ಬಿಸಿಲಿನಲ್ಲಿ ಒಣಗಲು ಬಿಡಲಾಗುತ್ತದೆ.
ಆಲೂ ಪೂರಿ ಮುಂದೆ ಮೊಟ್ಟೆ, ಓಟ್ಸ್ ವೇಸ್ಟ್!
ಗ್ರೇಡೇಶನ್
ಬೇರೆ ಬೇರೆ ಗಾತ್ರದ ಮಖಾನಾಗಳನ್ನು ಬೇರೆ ಮಾಡಲು ಸೋಸುವ ಪ್ರಕ್ರಿಯೆ ನಡೆಸಲಾಗುತ್ತದೆ. ಈ ರೀತಿ 10 ಬಾರಿ ಬೇರೆ ಬೇರೆ ಗಾತ್ರದ ಜಾಲರಿ ಇಟ್ಟುಕೊಂಡು ಸೋಸುವುದರಿಂದ ಒಂದೊಂದು ಗಾತ್ರದ ಮಖಾನಾ ಒಂದೊಂದು ಜಾಲರಿಯಲ್ಲಿ ಉಳಿಯುತ್ತದೆ. ಆಗ ಒಂದೇ ಗಾತ್ರದ ಗುಂಪುಗಳನ್ನು ಒಂದೊಂದು ಕಡೆ ಸ್ಟೋರ್ ಮಾಡಬಹುದು.
ಬಿಳಿಯ ಪಫ್
ಮಖಾನಾವನ್ನು ನೀರಿನಿಂದ ಒಣಗಿಸುತ್ತಿದ್ದಂತೆಯೇ ಅವನ್ನು ಹುರಿಯಬೇಕು. ಇಲ್ಲದಿದ್ದಲ್ಲಿ ಅವು ಕೆಡುವ ಸಂಭವ ಇರುತ್ತದೆ. ಹೀಗೆ ಹುರಿದಾದ ಬಳಿಕ ಅವನ್ನು ಬಿದಿರ ಎಳೆಗಳಿಂದ ಮಾಡಿದ ಕಂಟೇನರ್‌ನಲ್ಲಿ ಹಾಕಲಾಗುತ್ತದೆ. ಈ ಕಂಟೇನರ್ ಎಲ್ಲಿಯೂ ಸೋರದಂತೆ ಸಗಣಿಯಿಂದ ಪ್ಲ್ಯಾಸ್ಟರ್ ಮಾಡಲಾಗಿರುತ್ತದೆ. ಈ ಕಂಟೇನರ್‌ನ ಮೇಲ್ಬಾಗಕ್ಕೆ ಬಟ್ಟೆಯಿಂದ ಮುಚ್ಚಿ ಒಳಗಿನ ಉಷ್ಣತೆ ಕಾಪಾಡಲಾಗುತ್ತದೆ. ಕಕೆಲ ಗಂಟೆಗಳ ಬಳಿಕ ಅವನ್ನು ಮತ್ತೆ ಫ್ರೈ ಮಾಡಬೇಕು.
ಬೆಳಗಿನ ತಿಂಡಿಯನ್ನು ಆಕರ್ಷಕಗೊಳಿಸುವ ಎಲೆಕೋಸಿನ ಪರೋಟ!
ಬಳಿಕ ಅದನ್ನು ಮರದ ಪ್ಲೇಟ್‌ಗೆ ಹಾಕಿ ತಣ್ಣಗಾಗಲು ಬಿಡಲಾಗುತ್ತದೆ. ನಂತರ ಈ ಬೀಜಗಳ ಸಿಪ್ಪೆ ಬಿಡಿಸಿ ಕರಿಯ ಭಾಗವನ್ನು ತೆಗೆದು ಒಳಗಿನ ಬಿಳಿಯ ಪಫ್‌ಗಳನ್ನು ಉಳಿಸಿಕೊಳ್ಳಲಾಗುತ್ತದೆ. ಈ ಪಫ್‌ಗಳನ್ನು ಪ್ಯಾಕೆಟ್‌ಗೆ ಹಾಕಿ ಮಾರಲು ರೆಡಿ ಮಾಡಲಾಗುತ್ತದೆ. ಅಬ್ಬಬ್ಬಾ! ಒಂದು ಬೀಜ ಸಂಗ್ರಹಕ್ಕೆ ಇಷ್ಟೆಲ್ಲ ಕಷ್ಟಪಡಬೇಕಾ ಎಂದೆನಿಸುತ್ತಿದೆಯೇ? ಇದರ ರುಚಿ, ಪೋಷಕಾಂಶಗಳು ಕಷ್ಟಪಟ್ಟಿದ್ದಕ್ಕೊಂದು ಅರ್ಥ ನೀಡುತ್ತವೆ. ಮತ್ತೇಕೆ ತಡ? ಮಖಾನಾ ಬೀಜಗಳನ್ನು ಮನೆಗೆ ತಂದು ಹೊಸ ರುಚಿ ಸವಿಯಿರಿ.