2 ನಿಮಿಷದಲ್ಲಿ ಮಾಡೋ ಮ್ಯಾಗಿ ಬ್ಯಾನ್ ಆಗಿ ಮರುಳಿದರೂ, ಡಿಮ್ಯಾಂಡ್ ಮಾತ್ರ ಕಡಿಮೆಯಾಗಿಲ್ಲ. ಇದನ್ನು ತಿನ್ನಲು ವಯಸ್ಸಿನ ಹಂಗಿಲ್ಲ. ಜನರೇಷನ್‌ಗೆ ತಕ್ಕಂತೆ ಟೇಸ್ಟನ್ನೂ ಬದಲಾಯಿಸಲಾಗುತ್ತಿದೆ. ಇಂಥದ್ದೊಂದು ಆಹಾರ ಪದಾರ್ಥದ ಹಿಂದಿದೆ ರೋಚಕ ಇತಿಹಾಸ....
ಅಡುಗೆ ಮಾಡೋಕೆ ಬರಲ್ಲವೆಂದರೂ ಇಲ್ಲ ತೊಂದರೆ. ಮ್ಯಾಗಿ ಸದಾ ಜತೆಗೆ ಇರುತ್ತದೆ. ಎಂದಿಗೂ ಬೇಜಾರಾಗದ ಫಾಸ್ಟ್ ಫುಡ್ ಮ್ಯಾಗಿ ಭಾರತದ್ದಲ್ಲವೆಂದರೆ ನೀವು ನಂಬ್ತೀರಾ?
ಹೌದು. ಈ ಮ್ಯಾಗಿಯನ್ನು ಮೊದಲು ತಯಾರಿಸಿದ್ದು ಸ್ವಿಡ್ಜರ್‌ಲ್ಯಾಂಡ್‌ನ ವಾಣಿಜ್ಯೋದ್ಯಮಿ ಜೂಲಿಸ್ ಮ್ಯಾಗಿ ಎಂಬಾತ. ಎಲ್ಲಾ ವರ್ಗದ ಜನಾಂಗದವರನ್ನೂ ತಲೆಯಲ್ಲಿಟ್ಟಿಕೊಂಡು ತನ್ನ ತಂದೆಯ ಮಿಲ್‌ನಲ್ಲಿಯೇ ಇದನ್ನು ಮೊದಲು ತಯಾರಿಸಿದ.
ಇದೀಗ ನೂಡಲ್ಸ್ ರೀತಿಯಲ್ಲಿ ತಿನ್ನುತ್ತಿರುವ ಮ್ಯಾಗಿ ಮೊದಲು ಕ್ಯೂಬ್ ರೂಪದಲ್ಲಿ ಮಾರಕಟ್ಟೆಗೆ ಬಂದಿತ್ತು. ಮ್ಯಾಗಿಯದ್ದೇ ಕಂಪನಿ ಮೊದಲು ಶುರುವಾಗಿದ್ದು ಜರ್ಮನಿಯಲ್ಲಿ. ಮ್ಯಾಗಿ ಜಿಮಂಬಿಎಜ್ ಎನ್ನುವ ಈ ಕಂಪನಿ ತಾನು ತಯಾರಿಸಿದ ಆಹಾರ ಪದಾರ್ಥವನ್ನು ಪ್ರಚಾರ ಮಾಡಲು ವ್ಯಾನ್ ಬಳಸಿಕೊಳ್ಳುತ್ತಿತ್ತು. ಇದರೊಂದಿಗೆ ಮೊದಲು ಟೊಮ್ಯಾಟೋ ಸಾಸ್ ಅನ್ನೂ ಮಾರಲಾಗುತ್ತಿತ್ತು. ಆಮೇಲೆ ಇದು ಪಡೆದ ಜನಪ್ರಿಯತೆ ಅಷ್ಟಿಷ್ಟಲ್ಲ.
ನಂತರ ಭಾರತಕ್ಕೂ ತನ್ನ ಮಾರುಕಟ್ಟೆ ವಿಸ್ತಿರಿಸಿಕೊಂಡಿತ್ತು. ವಿಶ್ವದಲ್ಲಿಯೇ ಜನಸಂಖ್ಯೆಯಲ್ಲಿ 2ನೇ ಸ್ಥಾನದಲ್ಲಿರುವ ಭಾರತದಲ್ಲಿ ಇಂಥದ್ದೊಂದು ಆಹಾರ ಪದಾರ್ಥ ಅಥವಾ ಯಾವುದೇ ವಸ್ತುವನ್ನು ಸರಿಯಾಗಿ ಮಾರುಕಟ್ಟೆ ಮಾಡಿದರೆ ಅಥವಾ ಜನರು ಅವನ್ನು ಸ್ವೀಕರಿಸಿಬಿಟ್ಟರೆ ಕೇಳಬೇಕಾ? ಆ ಕಂಪನಿಯ ಲಕ್ಕೇ ಬದಲಾದಂತೆ. ಇಂಥ ಭಾರತದಲ್ಲಿ ಮ್ಯಾಗಿ ತನ್ನ ಮಾರುಕಟ್ಟೆ ವಿಸ್ತಿರಿಸಿಕೊಳ್ಳಲು ನೆಸ್ಲೆ ಜೊತೆ ಕೈ ಜೋಡಿಸಿತು. ನಂತರ ಅನೇಕರ ಮನೆ, ಮನ ಗೆದ್ದ ಮ್ಯಾಗಿ ಎಲ್ಲರ ಮನೆಯ ಅದರಲ್ಲಿಯೂ ನಗರ ಜೀವನದ ಅವಿಭಾಜ್ಯ ಅಂಗವೇ ಆಗಿ ಹೋಯಿತು. ಭಾರತಕ್ಕೆ ಮೊದಲು ಬಂದಾಗ 100 ಗ್ರಾಂ ಮ್ಯಾಗಿ ಬೆಲೆ ಕೇವಲ 2.30 ರೂ. ಇತ್ತು.
ಹಣ್ಣು, ತರಕಾರಿ ಮೇಲಿನ ಬಿಲ್ ಕೋಡನ್ನು ಇಗ್ನೋರ್ ಮಾಡ್ಬೇಡಿ!
ಮ್ಯಾಗಿಯಲ್ಲಿ ಅನಾರೋಗ್ಯಕಾರಿ ಮೊನೋಸೊಡಿಯಂ ಗುಲ್ಟಮೆಟ್ ಮತ್ತು ಸೀಸದ ಅಂಶ ನಿಗದಿತ ಪ್ರಮಾಣಕ್ಕಿಂತ ಅಧಿಕವಿದೆ. ಕ್ಯಾನ್ಸರ್ ತರುವಂಥ ರಾಸಾಯನಿಕಗಳಿವೆ ಎಂದು ಭಾರತದ ಆಹಾರ ಸುರಕ್ಷತಾ ಗುಣಮಟ್ಟ ಪ್ರಾಧಿಕಾರ ವರದಿ ನೀಡಿದ ಹಿನ್ನೆಲೆಯಲ್ಲಿ ಭಾರತದಲ್ಲಿ ಮ್ಯಾಗಿಯನ್ನು ಅಸುರಕ್ಷಿತವೆಂದು ನಿಷೇಧಿಸಲಾಗಿತ್ತು. ನಂತರದ ಕಾನೂನು ಸಮರದಲ್ಲಿ ಗೆದ್ದ ಮ್ಯಾಗಿ ಇದೀಗ ಮಾರುಕಟ್ಟೆಯಲ್ಲಿ ಲಭ್ಯವಿದ್ದು, ತನ್ನ ಮೊದಲಿನ ಜನಪ್ರಿಯತೆಯನ್ನು ಕಳೆದುಕೊಂಡಿಲ್ಲ. ಇತ್ತೀಚೆಗೆ ನೆಸ್ಲೆ ಸುಪ್ರೀಂ ಕೋರ್ಟ್ ಮುಂದೆ ಮ್ಯಾಗಿಯಲ್ಲಿ ಸೀಸದ ಅಂಶ ಇರುವುದನ್ನೂ ಒಪ್ಪಿಕೊಂಡಿದೆ.