
ಆಫೀಸ್‍ನಲ್ಲಿ ಸಿಕ್ಕಾಪಟ್ಟೆ ವರ್ಕ್ ಪ್ರೆಷರ್ ಇದ್ದ ದಿನ ಮನೆಗೆ ಬಂದ ತಕ್ಷಣ ಪತ್ನಿ ಅಥವಾ ಮಕ್ಕಳ ಮೇಲೆ ರೇಗಾಡುವ ಅಭ್ಯಾಸ ಕೆಲವರಿಗಿರುತ್ತದೆ. ಮನಸ್ಸಿನ ಮೇಲೆ ಒತ್ತಡ ಹೆಚ್ಚಿದಾಗ ನಮಗೇ ಗೊತ್ತಿಲ್ಲದಂತೆ ಚಿಕ್ಕಪುಟ್ಟ ವಿಷಯಕ್ಕೂ ಸಿಟ್ಟು ತೋರಿಸೋದು, ಸಿಡುಕೋದು ಮಾಡುತ್ತೇವೆ. ಇದು ನಮ್ಮ ವೈಯಕ್ತಿಕ ಬದುಕಿನ ಮೇಲೆ ನಕಾರಾತ್ಮಕ ಪ್ರಭಾವ ಬೀರುತ್ತದೆ.ಅದರಲ್ಲೂ ದಾಂಪತ್ಯ ಬದುಕಿಗೆ ಮುಳ್ಳಾಗುವ ಎಲ್ಲ ಸಾಧ್ಯತೆಗಳೂ ಇವೆ. ಒಬ್ಬ ವ್ಯಕ್ತಿಗೆ ತನ್ನ ಸುತ್ತಮುತ್ತಲಿನ ಜನರೊಂದಿಗೆ ಆರೋಗ್ಯಕರ ಹಾಗೂ ಖುಷಿಯ ಸಂಬಂಧಗಳನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲದಿದ್ದಾಗ ಇದು ಆತನ ಮಾನಸಿಕ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಹಾಗಿದ್ರೆ ಕೆಲಸದೊತ್ತಡ ಸಂಬಂಧಗಳ ಮೇಲೆ ಪರಿಣಾಮ ಬೀರದಂತೆ ತಡೆಯಲು ಏನ್ ಮಾಡ್ಬೇಕು?
ದಂಪತಿ ಮಧ್ಯೆ ಹುಳಿ ಹಿಂಡಿದ ಕೊರೋನಾ, ಒಂದಾಗಿ ಬಾಳಲು ಬಿಡಲ್ವಣ್ಣ!
ನಿಮ್ಮನ್ನೇ ನೀವು ಟ್ಯೂನ್ ಮಾಡಿಕೊಳ್ಳಿ: ಹೇಗೆ ಆಫೀಸ್‍ಗೆ ಹೋದ ತಕ್ಷಣ ನೀವು ಅಲ್ಲಿನ ಪರಿಸರಕ್ಕೆ ಹೊಂದಿಕೊಂಡು ಕೆಲಸಗಳಲ್ಲಿ ಮುಳುಗಿ ಬಿಡುತ್ತೀರೋ ಹಾಗೆಯೇ ಮನೆಯೊಳಗೆ ಪ್ರವೇಶಿಸುತ್ತಿದ್ದಂತೆ ನಿಮ್ಮ ಮನಸ್ಸಿನಿಂದ ಆಫೀಸ್ ಟೆನ್ಷನ್‍ಗಳನ್ನು ಕಿತ್ತೆಸೆದು ಪತಿ ಅಥವಾ ಪತ್ನಿ, ಅಪ್ಪ ಅಥವಾ ಅಮ್ಮ, ಮಕ್ಕಳು...ಹೀಗೆ ಆ ಮನೆಯೊಳಗಿರುವ ವ್ಯಕ್ತಿಗಳೊಂದಿಗಿನ ನಿಮ್ಮ ಸಂಬಂಧ ಹಾಗೂ ಅದಕ್ಕೆ ಸಂಬಂಧಿಸಿದ ಕರ್ತವ್ಯಗಳನ್ನು ನೆನಪಿಸಿಕೊಳ್ಳಿ. ಮನೆಗೆ ಬಂದ ತಕ್ಷಣ ಅಲ್ಲಿನ ಜವಾಬ್ದಾರಿಗಳಿಗೆ ನಿಮ್ಮ ಮನಸ್ಸನ್ನು ಟ್ಯೂನ್ ಮಾಡಿಕೊಳ್ಳಿ.
ಆಫೀಸ್ ವಿಷಯಗಳನ್ನು ಹೆಚ್ಚು ಚರ್ಚಿಸಬೇಡಿ: ಕೆಲವರಿಗೆ ಮನೆಗೆ ಬಂದ ತಕ್ಷಣ ಆಫೀಸ್‍ನಲ್ಲಿ ನಡೆದ ಪ್ರತಿಯೊಂದು ಘಟನೆಗಳನ್ನು ಚಾಚು ತಪ್ಪದೆ ಮನೆಮಂದಿಯೊಂದಿಗೆ ಹಂಚಿಕೊಳ್ಳುವ ಅಭ್ಯಾಸವಿರುತ್ತದೆ.ಇದೇನು ತಪ್ಪಲ್ಲ. ಆದ್ರೆ ಪ್ರತಿದಿನ ಮನೆಯಲ್ಲೂ ಆಫೀಸ್ ವಿಷಯವನ್ನೇ ಚರ್ಚಿಸುತ್ತಿದ್ರೆ ಮನೆಯವರ ಬಗ್ಗೆ ಮಾತನಾಡೋದು,ಅವರ ಇಷ್ಟ-ಕಷ್ಟಗಳನ್ನು ಅರಿಯೋದು ಯಾವಾಗ? ಅದಕ್ಕೂ ಸಮಯ ಕೊಡಬೇಕು ಅಲ್ವಾ? ಮಕ್ಕಳ ಓದಿನ ಬಗ್ಗೆ, ಶಾಲೆ ಬಗ್ಗೆ, ಅವರ ಆಸಕ್ತಿಗಳ ಕುರಿತೂ ಗಮನ ನೀಡೋದು ಪೋಷಕರ ಆದ್ಯ ಕರ್ತವ್ಯ ಅಲ್ಲವೆ? ಅಲ್ಲದೆ,ಆಫೀಸ್‍ನಲ್ಲಿ ನಡೆದ ಘಟನೆಗಳನ್ನು ಮೆಲುಕು ಹಾಕೋದ್ರಿಂದ ಮನಸ್ಸಿನ ಮೇಲಿನ ಒತ್ತಡ ಇನ್ನಷ್ಟು ಹೆಚ್ಚುವ ಸಾಧ್ಯತೆಯಿರುತ್ತದೆ. ಇದು ನೀವು ಮನೆಯಲ್ಲಿದ್ರೂ ಆಫೀಸ್ ಹೊರೆಯನ್ನು ತಲೆ ಮೇಲೆ ಹೊತ್ತುಕೊಂಡೇ ಇರುವಂತಹ ಅನುಭವ ನೀಡುತ್ತದೆ.
ಪ್ರೀತಿ ಮಾತಲ್ಲೇ ಖೆಡ್ಡಾಕ್ಕೆ ಕೆಡವೋ ಲವ್ ಬಾಂಬಿಂಗ್, ಏನಿದು?
ಆಫೀಸ್ ಕೆಲಸ ಮನೆಗೆ ತರಬೇಡಿ: ಕೆಲವರಿಗೊಂದು ಕೆಟ್ಟ ಚಟವಿರುತ್ತದೆ. ಅದೇನೆಂದ್ರೆ ಆಫೀಸ್‍ನಲ್ಲಿ ಆ ದಿನ ಪೂರ್ಣಗೊಳಿಸಲಾಗದ ಕೆಲಸವನ್ನು ಮನೆಗೆ ತಂದು ಮಾಡೋದು. ಲ್ಯಾಪ್‍ಟಾಪ್ ಹಿಡಿದು ಒಂದು ಮೂಲೆಯಲ್ಲಿ ಕೂತು ಕೆಲಸದಲ್ಲಿ ಮುಳುಗುವ ಇಂಥವರು ಪ್ರೀತಿಯಿಂದ ಮಾತನಾಡಿಸಲು ಅಥವಾ ಮುದ್ದು ಮಾಡಲು ಬರುವ ಮಕ್ಕಳ ಮೇಲೂ ಕೆಲವೊಮ್ಮೆ ಅರಿವಿಲ್ಲದಂತೆ ರೇಗಿ ಬಿಡುತ್ತಾರೆ. ಕೇವಲ ಮಕ್ಕಳ ಮೇಲಷ್ಟೇ ಅಲ್ಲ, ಮನೆಯಲ್ಲಿರುವ ಇತರ ಸದಸ್ಯರ ಮೇಲೂ ಇಂಥದ್ದೇ ವರ್ತನೆ ತೋರುತ್ತಾರೆ. ಹಾಗಂತ ಅವರು ಬೇಕಂತಲೇ ಹೀಗೆ ಮಾಡೋದಿಲ್ಲ. ಆದ್ರೆ ಕೆಲಸದ ಒತ್ತಡ ಹಾಗೇ ಮಾಡಿಸುತ್ತದೆ. ಆದಕಾರಣ ಅದೆಷ್ಟೇ ಕೆಲಸವಿರಲಿ, ಸಾಧ್ಯವಾದಷ್ಟು ಆಫೀಸ್‍ನಲ್ಲೇ ಮುಗಿಸಲು ಪ್ರಯತ್ನಿಸಿ. ಆಫೀಸ್ ಕೆಲಸದ ಹೊರೆ ಮನೆಗೆ ಬಂದ್ರೆ ಸಂಬಂಧ ಕೆಡುವುದು ಗ್ಯಾರಂಟಿ.
ಆಫೀಸ್ ಕಾಲ್‍ಗಳನ್ನು ಆದಷ್ಟು ನಿರ್ಲಕ್ಷಿಸಿ: ಮನೆಯಲ್ಲಿ ಹೆಚ್ಚಿನ ಸಮಯ ಆಫೀಸ್‍ಗೆ ಸಂಬಂಧಿಸಿದ ಕಾಲ್‍ಗಳಲ್ಲೇ ಇರುವ ಅಭ್ಯಾಸ ಕೆಲವರಿಗಿದೆ. ಈ ರೀತಿ ಮಾಡೋದ್ರಿಂದ ಸಹಜವಾಗಿ ಪತಿ ಅಥವಾ ಪತ್ನಿಗೆ ನಿಮ್ಮ ಮೇಲೆ ಅಸಮಾಧಾನ ಮೂಡುತ್ತದೆ. ಇದು ಇಬ್ಬರ ನಡುವಿನ ಸಂಬಂಧದಲ್ಲಿ ಬಿರುಕು ಮೂಡಿಸುವ ಸಾಧ್ಯತೆಯೂ ಇದೆ. ತುರ್ತು ಸಂದರ್ಭಗಳಲ್ಲಿ ಮಾತ್ರ ಆಫೀಸ್ ಕರೆಗಳನ್ನು ಸ್ವೀಕರಿಸಿ.
ಮುನಿಸಿಕೊಂಡ ಯಜಮಾನ್ರ ಮನಸ್ಸು ಗೆಲ್ಲೋದು ಹೇಗೆ?
ರಜಾ ದಿನಗಳಲ್ಲಿ ಪಕ್ಕಾ ಫ್ಯಾಮಿಲಿ ಮ್ಯಾನ್ ಆಗಿ: ರಜಾ ದಿನಗಳಲ್ಲೂ ಆಫೀಸ್ ಮೇಲ್‍ಗಳಿಗೆ ಉತ್ತರಿಸುತ್ತ ಕೂರುವುದು, ಇಲ್ಲವೆ ಕರೆಗಳನ್ನು ಮಾಡಿ ಮಾತನಾಡೋದು ಮಾಡಬೇಡಿ. ಆಫೀಸ್ ಕೆಲಸಗಳಿಗೆ ಬ್ರೇಕ್ ನೀಡುವುದಕೋಸ್ಕರವೇ ರಜೆ ನೀಡೋದು ಅಲ್ಲವೆ? ಹೀಗಿರುವಾಗ ಆ ದಿನಗಳಂದು ಕೂಡ ನೀವು ಆಫೀಸ್ ಕೆಲಸಗಳನ್ನೇ ಮಾಡಿದ್ರೆ ಹೇಗೆ? ರಜೆ ಅಂದ್ರೆ ಪಕ್ಕಾ ಫ್ಯಾಮಿಲಿ ಟೈಮ್. ಹೀಗಾಗಿ ರಜೆ ದಿನವನ್ನು ಸಂಪೂರ್ಣವಾಗಿ ಕುಟುಂಬ ಸದಸ್ಯರಿಗೆ ಮೀಸಲಿಡಿ. ಔಟಿಂಗ್ ಹೋಗಿ, ಪ್ರೇಕ್ಷಣೀಯ ತಾಣಗಳಿಗೆ ಟ್ರಿಪ್‍ಗೆ ತೆರಳಿ. ಶಾಪಿಂಗ್, ಹೋಟೆಲ್ ಎಂದು ರಜೆಯನ್ನು ಎಂಜಾಯ್ ಮಾಡಲು ಮರೆಯಬೇಡಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.