ಓಟಕ್ಕೆ ನಿಂತ್ರೆ ಮೀರಿಸುವವರೇ ಇಲ್ಲ; ಇವನೇ ಕಂಬಳದ ಸೂಪರ್ ಸ್ಟಾರ್

By Kannadaprabha NewsFirst Published Dec 1, 2018, 1:30 PM IST
Highlights

ಕಂಬಳದ ಕೋಣಗಳನ್ನು ಮಕ್ಕಳಂತೆ ಸಾಕುತ್ತಾರೆ. ಒಂದು ಏಟು ಕೊಟ್ಟರೆ ಆ ಕೋಣವನ್ನು ನೋಡಿಕೊಳ್ಳುವವರು ಮೂರು ದಿನ ಬೇಸರ ಮಾಡಿಕೊಳ್ಳುತ್ತಾರೆ. ಇನ್ನು ಕಂಬಳಗಳಲ್ಲಿ ಓಡಿ ಗೆದ್ದರಂತೂ ಆ ಕೋಣ ಇಡೀ ಊರಿನ ಕಣ್ಮಣಿ. ಹೀಗೆ ಹಾಕ್ತರು ಕಂಬಳಗಳಲ್ಲಿ ಓಡಿ ಗೆದ್ದು ಇಡೀ ಕರಾವಳಿಯಲ್ಲಿ ಹೆಸರಾಗಿದ್ದ ಕೋಣದ ಹೆಸರು ರಾಕೆಟ್ ಮೋಡ. ಇತ್ತೀಚೆಗೆ ರಾಕೆಟ್ ಮೋಡ ಇಹಲೋಕ ತ್ಯಜಿಸಿದಾಗ ಇಡೀ ಊರೇ ನೋವಲ್ಲಿತು. ಅಂಥಾ ಸೂಪರ್ ಸ್ಟಾರ್ ರಾಕೆಟ್ ಮೋಡದ ಮನಕರಗುವ ಕಥೆ ಇಲ್ಲಿದೆ.

ಓಟದಲ್ಲಿ ಈತ ಹುಸೇ ಬೋಲ್ಟ್‌ನಂತೆ...
ರಾಕೆಟ್ ಅನ್ನೂ ಮೀರಿಸಬಲ್ಲ ವೇಗ!

ಕರಾವಳಿಯ ಜಾನಪದ ಕ್ರೀಡೆ ಕಂಬಳದಲ್ಲಿ ಗೆಲುವಿನ ಅಧಿಪತಿ ಸ್ಥಾಪಿಸಿದ್ದ, ಪದಕಗಳ ದಾಖಲೆವೀರ ‘ರಾಕೆಟ್ ಮೋಡ’ ಮರೆಯಾಗಿದ್ದಾನೆ. ಸುಮಾರು 10 ವರ್ಷಗಳಿಂದ ಕಂಬಳ(ಕೋಣಗಳ ಓಡಿಸುವ ಸ್ಪರ್ಧೆ)ದಲ್ಲಿ ಎದುರಾಳಿ ಕೋಣಗಳ ಜಂಘಾಬಲ ಉಡುಗುವಂತೆ ಮಾಡುತ್ತಿದ್ದ ಗೆಲುವಿನ ಸರದಾರ ಈತನಾಗಿದ್ದ.

ಕರಾವಳಿಯ ಗ್ರಾಮೀಣ ಕ್ರೀಡೆ ಕಂಬಳದಲ್ಲಿ ಆತ ಏನಾದರೂ ಕಣದಲ್ಲಿ ಇದ್ದಾನೆಂದರೆ ಮೋಡನಿಗೇ ಪದಕ ಖಚಿತ ಎಂದು ನಾವು ಮೊದಲೇ ಅಂದುಕೊಳ್ಳಬೇಕು. ಹೌದು ಆತ ಕಂಬಳಕ್ಕೆ ಬಂದಾಗಿನಿಂದಲೂ ಪದಕ ಪಡೆಯದೆ ಹಿಂದೆ ಸರಿದ ಮಾತಿಲ್ಲ. ಸುಮಾರು 10ಕ್ಕೂ ಅಧಿಕ ವರ್ಷಗಳಿಂದ ಕರಾವಳಿ ಕಂಬಳದಲ್ಲಿ ಪದಕಗಳ ಅಧಿಪತ್ಯ ಸ್ಥಾಪಿಸಿದ್ದ ರಾಕೆಟ್ ಮೋಡ. ಆದರೆ ವಿಧಿ ಈತನನ್ನು 20 ವರ್ಷದಲ್ಲಿ ಕರೆಸಿಕೊಂಡಿತು. ತನ್ನ ಗತ್ತು, ಗೈರತ್ತಿನಿಂದ ಎಲ್ಲರನ್ನೂ ವಿಸ್ಮಯಗೊಳಿಸುತ್ತಿದ್ದ ಮೋಡ, ಸಾಧು ಸ್ವಭಾವದವನಾಗಿದ್ದು, ಕಂಕುಳಲ್ಲಿ ವ್ರಣ ಉಲ್ಭಣಗೊಂಡು ಇತ್ತೀಚೆಗೆ ಇಹಲೋಕ್ಕೆ  ತ್ಯಜಿಸಿದ್ದಾನೆ.

ದಾಖಲೆಗಳು

ದ.ಕ, ಉಡುಪಿ ಹಾಗೂ ಕಾಸರಗೋಡು ಒಳಗೊಂಡ ಕರಾವಳಿ ಭಾಗದಲ್ಲಿ ಸುಮಾರು 400ಕ್ಕೂ ಅಧಿಕ ಕಂಬಳ ನಡೆಯುತ್ತದೆ. ಇದರಲ್ಲಿ ದೇವರ ಕಂಬಳ, ದೈವಗಳ ಕಂಬಳ, ಜೋಡುಕೆರೆ ಕಂಬಳ ಸೇರಿವೆ.
ರಾಕೆಟ್ ಮೋಡ ಪ್ರತಿ ವರ್ಷ ಸುಮಾರು 25ಕ್ಕೂ ಹೆಚ್ಚು ಕಂಬಳಗಳಲ್ಲಿ ಭಾಗವಹಿಸುತ್ತಿತು. 2014ರಲ್ಲಿ ಕಾರ್ಕಳದ ಮೀಯಾರಿನಲ್ಲಿ ನಡೆದ ಕಂಬಳದಲ್ಲಿ ಮೋಡ, ಜೊತೆಗಾರರ ಕುಟ್ಟಿಯೊಂದಿಗೆ 144 ಮೀಟರ್‌ನನ್ನು 13.57 ಸೆಕೆಂಡ್‌ಗಳಲ್ಲಿ ಕ್ರಮಿಸಿ ಕಂಬಳ ಇತಿಹಾಸದಲ್ಲೇ ಹೊಸ ದಾಖಲೆ ಬರೆದಿದ್ದ. ಈವರೆಗೂ ಈ ದಾಖಲೆಯನ್ನು ಯಾರೂ ಮುರಿದಿಲ್ಲ.ಮೋಡ ಈವರೆಗೂ ಸುಮಾರು 100ಕ್ಕೂ ಅಧಿಕ ಪದಕಗಳನ್ನು ತನ್ನ ಯಜಮಾನರ ಮಡಿಲಿಗೆ ಹಾಕಿದ್ದಾನೆ.

ಮೋಡನಿಗೆ ಅವನೇ ಸಾಟಿ

ಮೋಡ ಎಂಬ ಓಟದ ಕೋಣನನ್ನು ಕಾರ್ಕಳದ ನಂದಳಿಕೆ ಶ್ರೀಕಾಂತ್ ಭಟ್ ನೋಡಿಕೊಳ್ಳುತ್ತಿದ್ದರು. ಉಡುಪಿ ಕೋಟದ ಪೈರು ತಳಿಯ ಈ ಕೋಣನನ್ನು ಕೊಳಚ್ಚೂರು ಕೊಂಡೆಟ್ಟು ಸುಕುಮಾ ಶೆಟ್ಟಿ ಅವರು ಹಗ್ಗ ಕಿರಿಯ ವಿಭಾಗದಲ್ಲಿ ಓಡಿಸಿದ್ದರು. ಬಳಿಕ ಕೊಳಕೆ ಇರ್ವತ್ತೂರು ಭಾಸ್ಕರ್‌ ಸುಬ್ಬಯ್ಯ ಕೋಟ್ಯಾ ಅವರು ನೇಗಿಲು ವಿಭಾಗದಲ್ಲಿ ಓಡಿಸಿ ಈ ಕೋಣನ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದರು. ಮತ್ತೆ ಸುಕುಮಾ ಶೆಟ್ಟಿ ಅವರು ಮೋಡನನ್ನು ಖರೀದಿಸಿದರು. ಅವರಿಂದ ಶ್ರೀಕಾಂತ್ ಭಟ್ ಅವರು ಪಡೆದುಕೊಂಡು ಕಳೆದ 6 ವರ್ಷದಿಂದ ಹಗ್ಗ ಹಿರಿಯ ವಿಭಾಗದಲ್ಲಿ ಓಡಿಸುತ್ತಿದ್ದರು. ಕಂಬಳದ ಕೋಣಗಳನ್ನು ಅವಲೋಕಿಸಿದರೆ, ಕಂಬಳ ಕೆರೆಯಲ್ಲಿ ಮೋಡನ ಓಟಕ್ಕೆ ಇನ್ನಾರೂ ಸಾಟಿಯೇ ಇರಲಿಲ್ಲ.

ತಯಾರಿ ಮಾಡುವುದು ಹೀಗೆ

ಕರಾವಳಿಯಲ್ಲಿ ನವೆಂಬರ್‌ನಿಂದ ಮಾರ್ಚ್‌ ವರೆಗೆ ಕಂಬಳ
ಸ್ಪರ್ಧೆ ನಡೆಯತ್ತದೆ. ನವೆಂಬರ್ 6 ತಿಂಗಳು ವಿಶ್ರಾಂತಿ. ಆಗ ಹುರುಳಿ, ಮಸಾ, ಹಿಂಡಿ, ಹುಲ್ಲು, ಕಾಳುಕಡ್ಡಿಯನ್ನು ತಿಂದು ಕೊಬ್ಬುತ್ತದೆ. ಜೊತೆಗಾರನೊಂದಿಗೆ ಸೆಪ್ಟೆಂಬರ್‌ನಲ್ಲಿ ಗದ್ದೆಗೆ ಇಳಿಯತ್ತಾರೆ. ಶ್ರೀಕಾಂತ್ ಭಟ್ಟರ ಗದ್ದೆಯಲ್ಲಿ ಬೇಸಾಯಕ್ಕೆ ನೆರವಾಗುತ್ತಾವೆ. ಅಕ್ಟೋಬನಲ್ಲಿ ಗದ್ದೆಯಲ್ಲೇ ಪ್ರಾಯೋಗಿಕ ಕಂಬಳ ನಡೆಯುತ್ತದೆ. ನಂತರ ಕಂಬಳ ಕೆರೆಗೆ ಇಳಿಸಲಾಗುತ್ತದೆ.

ಮೋಡನ ಕೊನೆಯ ಓಟ

ರಾಕೆಟ್ ಮೋಡ-ಕುಟ್ಟಿ ಜೋಡಿಯನ್ನು ಕಂಬಳ ಕೆರೆಯಲ್ಲಿ ಕೊನೆಯ ಬಾರಿ ಓಡಿಸಿದ್ದು ಬಂಗಾಡಿ ಹಮೀದ್. ಅದಕ್ಕೂ ಮೊದಲು ಅರುವ ಸತೀಶ, ಬೈಂದೂರು ರವಿ, ಶ್ರೀನಿವಾಸ ಗೌಡ ಓಡಿಸಿದ್ದರು. ನಕ್ರೆ ಜಯಕರ ಮಡಿವಾಳ ಓಡಿಸುವುದರಲ್ಲಿ ಸಿದ್ದಹಸ್ತರು. ಒಮ್ಮೆ ಕಾಲಿಗೆ ಏಟು ಮಾಡಿಕೊಂಡ ಬಳಿಕ ಕಣದಿಂದ ನಿವೃತರಾದರು. ಶ್ರೀಕಾಂತ್ ಭಟ್ಟರಲ್ಲಿ ರಾಕೆ-ಕುಟ್ಟಿ ಅಲ್ಲದೆ ಬೇರೆ ನಾಲ್ಕು ಜೊತೆ ಕೋಣಗಳೂ ಇವೆ. ಅವನ್ನೆಲ್ಲ ಕಂಬಳದ ಬೇರೆ ವಿಭಾಗಗಳಲ್ಲಿ ಓಟಕ್ಕೆ ಬಳಸುಾಕ್ತರೆ.

ಮೋಡನ ಸ್ಥಾನ ಯಾರಿಗೆ...?
ರಾಕೆಟ್ ಮೋಡ ಅಪರಿಮಿತ ಓಟಗಾರನಾಗಿದ್ದು, ದಣಿವು ಎಂಬುದು ಆತನಲ್ಲಿ ಇರಲಿಲ್ಲ. ಆತನ ಸಾವು ಕಂಬಳ ಪ್ರೇಮಿಗಳಿಗೆ ಬೇಸರ ಮೂಡಿಸಿದೆ. ಅವನ ಸ್ಥಾನಕ್ಕೆ ರಾಕೆಟ್ ಮೋಡನ ಯಜಮಾನ ಶ್ರೀಕಾಂತ್ ಭಟ್ಟರು ಸಣ್ಣ ಮೋಡನನ್ನು ಸಿದ್ದಪಡಿಸುತ್ತಿದ್ದಾರೆ. ಈಗ ಈತನಿಗೆ 9 ವರ್ಷ. ಅತ್ತೂರು ಗುಂಡ್ಯಡ್ಕ ಶ್ರೀನಿವಾಸ ಕಾಮತ್, ಸಣ್ಣ ಮೋಡನನ್ನು ಶ್ರೀಕಾಂತ್ ಭಟ್ಟರು ಖರೀದಿಸಿದ್ದಾರೆ. ರಾಕೆಟ್ ಮೋಡನಿಗೆ ವಯಸ್ಸಾಗಿದ್ದರಿಂದ ಒಂದು ವರ್ಷದಿಂದ ಸಣ್ಣ ಮೋಡನನ್ನು ಶ್ರೀಕಾಂತ್  ತಯಾರುಗೊಳಿಸುತ್ತಿದ್ದಾರೆ. ಜೂನಿಯರ್ ವಿಭಾಗದಲ್ಲಿ ಭಾಗವಹಿಸಿ ಸಣ್ ಮೋಡ ತನ್ನ  ತಾಕತ್ತನ್ನು ಈಗಲೇ ತೋರಿಸಿಕೊಟ್ಟಿದ್ದಾನೆ.
ರಾಕೆಟ್ ಮೋಡನ ಜೊತೆ ಗಿದ್ದ ಕುಟ್ಟಿ ಈತನಿಗೆ ಜೊತೆಯಾಗಿ ನಿಂತಿದೆ. ಕುಟ್ಟಿಗೆ 12 ವರ್ಷ. ಇದನ್ನೂ ಶ್ರೀಕಾಂತ್ ಭಟ್ಟರೇ ಸಾಕಿದ್ದು, ಪದಕ ಜಯಿಸಲು ರಾಕೆಟ್ ಮೋಡನಿಗೆ ಸಾಥ್ ನೀಡುತ್ತಿದ್ದ. ಕುಟ್ಟಿ
ಹೊರತುಪಡಿಸಿದರೆ ಬೇರೆ ಯಾವ ಕೋಣವೂ ಸದ್ಯಕ್ಕಿಲ್ಲ. ರಾಕೆಟ್ ಮೋಡ 5.5 ಅಡಿ ಎತ್ತೆ ಹಾಗೂ 8.50 ಅಡಿ ಉದ್ದವಿದ್ದ. ಕುಟ್ಟಿ 5 ಅಡಿ ಎತ್ತರವಿದ್ದರೆ, 8 ಅಡಿ ಉದ್ದವಿದೆ.

 

click me!