ಹಳ್ಳಿಯಲ್ಲೇಯೇ ಹುಟ್ಟಿ, ಬೆಳೆದು, ಬಹುತೇಕ ಶಿಕ್ಷಣವನ್ನೂ ಅಲ್ಲಿಯ ಪರಿಸರದಲ್ಲಿ ಮುಗಿಸಿರುತ್ತೇವೆ. ಆದರೆ, ಉದ್ಯೋಗ ಅರಸಿ ಬೆಂಗಳೂರಿನಂಥ ಮಹಾನಗರಿಗೆ ಬರುತ್ತೇವೆ. ಇಲ್ಲಿಯೂ ಅತೃಪ್ತ ಆತ್ಮಗಳಂತೆಯೇ ಬದುಕು ನಡೆಸುತ್ತೇವೆ. ಮತ್ತೆ ಹಳ್ಳಿಗೆ ಹೋಗಲು ಇಚ್ಛಿಸುತ್ತೇವೆ. ಆದರೆ, ಅಲ್ಲಿಯೂ ಬದುಕುವುದು ಕಷ್ಟ. ಏಕೆ ಜೀವನ ಹೀಗೆ?
ವಿಭಾ ಡೋಂಗ್ರೆ
ಪಚ್ಚೆ ಹಸಿರಿನ ರೌದ್ರ ನೀರವತೆಯ ಕಾನನ ನಡುವೆ, ಸುಳಿ ಹಾವಿನಂತೆ ಪಾಚಿ ಗಟ್ಟಿದ ಟಾರು ರಸ್ತೆ ನಮ್ಮನ್ನು ಹೊತ್ತೊಯ್ಯುತ್ತಿತ್ತು. ಏರಿದ ಕಾರಿನ ಗಾಜನ್ನು ಜಿಟಿ ಜಿಟಿ ಮಳೆ ಮಬ್ಬಾಗಿಸಿ ಆಚೆಗಿನ ಹೆಪ್ಪುಗಟ್ಟಿದ ಚೆಲುವನ್ನು ಅಸ್ಪಷ್ಟಗೊಳಿಸಿತ್ತು. ಬೀರ್ಬಕ್ಕಿಗಳು ಒಂದೇ ಶ್ರುತಿಯಲ್ಲಿ ತಮ್ಮ ಪಾಡಿಗೆ ತಾವು ಕಾಡಿನೊಂದಿಗೆ ಹರಟುತ್ತಿದ್ದವು. ಅಷ್ಟರಲ್ಲಿ ಕಾರಿನೊಳಗೆ ಆವರೆಗೂ ಸದ್ದಿಲ್ಲದೆ ಒದರುತ್ತಿದ್ದ ಎಫ್‌ಎಂ ‘ಕರ್...ಕರ್...’ ಎನ್ನಲು ಪ್ರಾರಂಭಿಸಿತು. ಗೇರಿನ ಗೂಟಕ್ಕೆ ಕೈಯಿಟ್ಟು ಕೂತಿದ್ದ ಗೆಳೆಯ ಹರೀಶ, ‘ಹೈಕ್...’ ಎಂಬ ಉದ್ಘಾರದೊಂದಿಗೆ ಅದರ ಕಿವಿ ಹಿಂಡಿ ಅದರ ಬಾಯಿ ಮುಚ್ಚಿಸಿದ. ಅಟ್ಟಡವಿಯ ದಟ್ಟಮೌನ ಇನ್ನೂ ಭಯಂಕರವಾಗಿ ಕೇಳಿಸಿತು.
ಕಣ್ಣರಳಿಸಿ ಕೂತ ನನ್ನನ್ನು ನೋಡಿ ಆತ ‘ಸಿಗ್ನಲ್ಲೇ.. ಸಿಗುದಿಲ್ಲ ಮಾರಾಯ್ತಿ’ ಎಂದ. ಇದು ಎಲ್ಲರಲ್ಲೂ ಇರುವ ಸೌಕರ್ಯ ಸಹಜ ದೂರು ಎಂದು ನಂಬಿದ್ದ ನಾನು, ಸಮಜಾಯಿಷಿ ಕೊಡುವವಳಂತೆ ‘ಸುಮ್ನಿರು ಮಾರಾಯ, ಇದು ಒಂದ್ ಪ್ರಾಬ್ಲಮ್ಮಾ? ಇಲ್ಲಿ ಎಷ್ಟುಪೀಸ್ ಆಫ್ ಮೈಂಡ್ ಇದೆ ನೋಡು’ ಇಷ್ಟುಹೇಳಿದ್ದೇ ತಡ ಆತ ಈ ಪೀಸ್ ಆಫ್ ಮೈಂಡ್ ಹಿಂದಿನ ಊಹಾತೀತ ಬಣವೆಗಳನ್ನು ವಿಸ್ತಾರವಾಗಿ ವಿವರಿಸಲು ಶುರುಮಾಡಿದ. ನಾನೂ ಹುಟ್ಟಿಬೆಳೆದಿದ್ದು ಹಳ್ಳಿಗಾಡಿನಲ್ಲಿಯಾದರೂ, ಕಾಡ ದಾರಿಗಳ ಪರಿಚಯ ಬಹುವಾಗಿ ಇದ್ದಿತ್ತಾದರೂ. ಹರೀಶನ ದೃಷ್ಟಿಯಲ್ಲಿ ಎಂದೂ ಅವುಗಳನ್ನು ಅನುಭವಿಸಿರಲಿಲ್ಲ. ಇಷ್ಟುದಿನ ಸೌಂದರ್ಯದ ಗರ್ಭದಂತೆ ಕಾಣುತ್ತಿದ್ದ ಇದೇ ಅಟ್ಟಡವಿಗಳು ಇಂದು ಮುಪ್ಪಡರಿದ ಅಥವಾ ಯಾರದೋ ಬರುವಿಕೆಗಾಗಿ ಕಾಯುತ್ತಾ ನಿಂತಿರುವ ವಿಪಿನ ರಾಶಿಯಂತೆ ಗೋಚರಿಸಿತು. ಹರೀಶನೂ ತನ್ನ ಉಸಿರಿಗೂ ಬ್ರೇಕಿಲ್ಲದಂತೆ ನಿರರ್ಗಳವಾಗಿ ತನ್ನ 65 ಎಕರೆ ಜಮೀನನ್ನು ನನಗೆ ಪರಿಚಯಿಸುತ್ತಾ, ಅಲ್ಲಲ್ಲಿ ಅನಾದಿ ಕಾಲದಲ್ಲಿ ನೂರಾರು ಜನರನ್ನು ಹೊತ್ತು ಬೀಗಿದ ಗರತಿಯಂಥಾ ಚೌಕಿ ಮನೆಗಳು ಸ್ತಬ್ಧ ಚಿತ್ರದಂತೆ ನಿಂತಿರುವುದನ್ನು ತೋರಿಸುತ್ತಾ ಮುನ್ನಡೆದ. ಆತನ ದನಿಯಲ್ಲಿ ಯಾವುದೇ ಉತ್ಸಾಹವಿರಲಿಲ್ಲ. ತನ್ನ ಮನೆಯ ಮುಂದೆ ಕಾರು ನಿಲ್ಲಿಸಿ ‘ಬಾ ಇದೇ ನಮ್ಮನೆ’ ಎಂದು ಗೇಟು ತೆಗೆದ. ಅಂಗಳದಲ್ಲಿ ನಿಟಾರಾಗಿ ನಿಂತಿದ್ದ ಚಪ್ಪರದ ಕಲ್ಲು ಕಂಬಗಳು ನನ್ನನ್ನು ನಿಷ್ಟೂರವಾಗಿ ನೋಡುತ್ತಿವೆಯೇನೋ ಎಂದೆನಿಸಿತು. ಬಾಗಿಲಲ್ಲೇ ಮುಗ್ಧ ನಗುವಿನೊಂದಿಗೆ ನನ್ನನ್ನು ಸ್ವಾಗತಿಸಿದ ಆತನ ತಂದೆ-ತಾಯಿಯ ಆದರಾತಿಥ್ಯಗಳು ನನ್ನನ್ನು ಭಾವುಕಗೊಳಿಸಿದವು.
ಹರೀಶನ ಮನೆಯೂ...ಅದರ ಆಕ್ರಂದನವೂ...
ಪಡಸಾಲೆಯಲ್ಲಿ ಕಾಫೀ ಹೀರುತ್ತಾ, ಹೊಳೆವ ಹಲಸಿನ ಕಂಬಗಳು, ಹೆಬ್ಬಾವಿನಂತೆ ಹೊಳೆಯುತ್ತಾ ಮಲಗಿದ್ದ ನಾಗಂದಿಗೆಯನ್ನು ತದೇಕಚಿತ್ತದಿಂದ ನೋಡುತ್ತಿದ್ದ ನನ್ನನ್ನು ಹರೀಶ ಮನೆ ತೋರಿಸುವುದಾಗಿ ಕರೆದೊಯ್ದ. ಅಲ್ಲಿದ್ದ ಅಸಂಖ್ಯಾತ ದ್ವಾರಗಳು, ಪುಟ್ಟಕಿಟಕಿಗಳು, ಬೆಳಕಿನ ಕಿಂಡಿಗಳು, ದೊಡ್ಡಪ್ಪನಿದ್ದ ಕೋಣೆ, ಚಿಕ್ಕಪ್ಪನಿದ್ದ ಕೋಣೆ ಹೀಗೆ ಆ ಮನೆಯ ಇಂಚಿಂಚೂ ಇಲ್ಲಿದ್ದ ಹಳೆ ತಲೆಗಳ ಕುರುಹುಗಳನ್ನು ಪುನರ್ ಮನನ ಮಾಡಿಕೊಂಡಂತಿತ್ತು. ಮೂರ್ನಾಲ್ಕು ಚೌಕಿಗಳಿದ್ದ ಆ ಮನೆಯ ಒಳಗೆ ಮಳೆ ನುಗ್ಗಿ ಥಂಡಿ ಹವೆ ಏರ್ಪಡಿಸಿತ್ತು. ಹಸಿರು ಹೊದ್ದ ಮಾಡಿನಿಂದ ಇಳಿಯುತ್ತಿದ್ದ ಮುಸಲ ಮಳೆಯು ನನಗೆ ಸಾಕ್ಷಾತ್ ಆ ಮನೆಯ ಆಕ್ರಂದನದಂತೆ ಕಾಣಿಸಿತು. ಮನಸ್ಸು ತೀರ ಪರಿತಪಿಸಲು ಶುರುವಿಟ್ಟಿತು.
ಹರೀಶ ನನ್ನ ಶಾಲಾ ದಿನಗಳ ಸಹಪಾಠಿ. ಕಲಿಕೆಯಲ್ಲಿ ಮುಂದಿದ್ದ ಹುಡುಗ. ತನಗೆ ಪಟ್ಟಣ ಸೇರುವ ಆಸೆಯಿದ್ದರೂ ತನ್ನ ಕನಸನ್ನೆಲ್ಲಾ ಬದಿಗೊತ್ತಿ ಊರಿಗೆ ಬಂದು ಕೃಷಿ ಕಾಯಕ ಹಿಡಿದ. ಈ ಬಗ್ಗೆ ನನಗೆ ಅತೀವ ಹೆಮ್ಮೆಯಿತ್ತಾದರೂ ಎಂದೂ ಆತನ ಮೇಲೆ ಇಂಥಾ ಮರುಕ ಹುಟ್ಟಿರಲಿಲ್ಲ. ‘ಕೆಲಸಕ್ಕೆ ಜನಾನೆ ಸಿಗಲ್ಲ, ಮನೆಗ್ ಹೋಗಿ ಬೇಡಿದ್ರೂ ಬರಲ್ಲ, ಸಾಲ ತಗೊಂಡು ಊರೇ ಬಿಡ್ತಾರೆ, ಎಸ್ಟೇಟು- ಗಾರ್ಮೆಂಟ್ಸು ಅಂತ ಹೋಗ್ತಾರೆ, ದಿನಕ್ಕೆ ಸಾವಿರಾರ್ ರೂಪಾಯಿ ಖಚ್‌ರ್ ಇರತ್ತೆ. ಜೊತೆಗೆ ಇಂಥಾ ಕುಗ್ರಾಮ ಹಳ್ಳಿಮನೆ ಅಂತ ನನ್ನಂಥೋನ್ನ ಯಾವ್ ಹುಡ್ಗೀನು ಒಪ್ಪಲ್ಲ. ಈಗೇನೋ ಅಪ್ಪನ್ ಕಾಲದವ್ರು ಕೆಲಸಕ್ ಸಿಗ್ತಾರೆ. ಆದ್ರೆ ಮುಂದೇನ್ ಮಾಡ್ಲಿ?’ ಎನ್ನುವ ಆತನ ಮಾತಿಗೆ ನನ್ನಲ್ಲಿ ಉತ್ತರವಿರಲಿಲ್ಲ.
ಅರ್ಥವಾಗದ ಪ್ರೀತಿಯ ಸೆಳವು
ನನ್ನನ್ನು ವಾಪಾಸು ಬಸ್ಸಿಗೆ ಹತ್ತಿಸಿ ಹರೀಶ ಹೊರಟು ಹೋದ. ಆದರೆ ನನ್ನ ಆಂತರ್ಯದಲ್ಲಿ ಅವನ ಮನೋಸ್ಥಿತಿಯ ಬಗ್ಗೆ ಯೋಚನೆ ಶುರುವಾಯ್ತು. ಅದೆಷ್ಟೋ ಹಳ್ಳಿಗಳಲ್ಲಿ ಇಂಥಾ ಹರೀಶನ ಕಥೆಗಳಿವೆ. ಹಲವೆಡೆ ಮಕ್ಕಳು ತಮ್ಮ ಕನಸಿನ ಬೆನ್ನೇರಿ ಪಟ್ಟಣಕ್ಕೆ ಕಾಲಿಡುತ್ತಾರೆ, ಇತ್ತ ಮನೆ-ಮನಗಳಿಗೆ ಗೆದ್ದಲಂಟುತ್ತದೆ. ಇನ್ನು ಹರೀಶನಂತೆ ಊರಿಗೆ ಬರುವವರೂ ಭವಿಷ್ಯದ ಆತಂಕದಲ್ಲಿ ಮುಳುಗುತ್ತಾರೆ. ತಮ್ಮ ಮಣ್ಣಿನ ಮೇಲಿನ ಅದ್ಯಾವುದೋ ಅರ್ಥವಾಗದ ಪ್ರೀತಿಯ ಪರಿಣಾಮವೊಂದೇ ಹರೀಶನಂಥವರನ್ನು ಊರಿಗೆ ಕರೆತರುತ್ತದೆ. ಆದರೆ ಮತ್ತದೇ ಉತ್ತರ ಸಿಗದ ಪ್ರಶ್ನೆಯೊಂದಿಗೆ. ಅಪ್ಪ, ಅಜ್ಜ ಕಷ್ಟಪಟ್ಟು ಮಕ್ಕಳಂತೆ ಪೊರೆದ ಜಮೀನು ಎಂದೋ, ತಮಗೆ ಬದುಕು ಕೊಟ್ಟಭೂಮಿಯೆಂದೋ, ಪಟ್ಟಣದ ಜಂಜಾಟದಿಂದ ಬೇಸತ್ತು ಹೀಗೆ ಹಲವು ನಾನ್ ಪ್ರಾಕ್ಟಿಕಲ್ ಕಾರಣಗಳು ನಮ್ಮನ್ನು ರಿವರ್ಸ್ ಮೈಗ್ರೇಷನ್ (ಹಿಮ್ಮುಖ ವಲಸೆ)ಗೆ ಉತ್ತೇಜಿಸುತ್ತವೆ. ಆದರೆ, ಹೀಗೆ ಪೀಸ್ ಆಫ್ ಮೈಂಡ್ ಹುಡುಕುತ್ತಾ ಬರುವ ನಾವುಗಳು ಎಷ್ಟರ ಮಟ್ಟಿಗೆ ಈ ಜವಾಬ್ದಾರಿಗೆ ಸಮರ್ಥರು..? ಎನ್ನುವುದು ಮುಖ್ಯ.
ಹಳ್ಳಿಗರನ್ನು ಕರೆಯುತ್ತಿದೆ ಹಳ್ಳಿ ಮನೆಯ ಸುಖ
ಎಲ್ಲಿ ಎಡವುತ್ತಿದ್ದೀವಿ?
ನಮ್ಮ ಯೌವನವನ್ನೆಲ್ಲ ಓದಿಗೆ, ಓದಿನ ಪೈಪೋಟಿಗೆ ಮೀಸಲಿಡುವಂತೆಯೆ, ಹೊಲ ಗದ್ದೆ ಕೆಲಸಗಳಲ್ಲೂ ಸಮಾನ ಆಸಕ್ತಿ ಬೆಳೆಸಿಕೊಳ್ಳಬೇಕು. ಎಲ್ಲಾ ಉದ್ಯಮಗಳಂತೆ ಕೃಷಿಯೂ ಒಂದು ಬೃಹತ್ ಉದ್ಯಮವೇ. ಅಂದಮೇಲೆ ಇದರ ಬಗ್ಗೆ ಸಮರ್ಪಕ ಅಧ್ಯಯನ, ಸೂಕ್ತ ವ್ಯವಸ್ಥೆಗಳ, ಪದ್ಧತಿಗಳ ಅರಿವು ಬಹುವಾಗಿ ಇರಬೇಕಾಗುತ್ತದೆ. ಬೇರೆ ಎಲ್ಲಾ ವೃತ್ತಿಗಳಿಗಿಂತಲೂ ಹೆಚ್ಚು ದೈಹಿಕ-ಆರ್ಥಿಕ-ಮಾನಸಿಕ ಸ್ಥೆ ೖರ್ಯ ಬೇಡುವ ಇಂಥಾ ಪರಿಸರದೊಳಗಿನ ಜೀವನವು, ಪಟ್ಟಣದಲ್ಲಿದ್ದಂತೆ ಅಂಕಿ ಅಂಶಗಳ, ಲೆಕ್ಕಾಚಾರದ ವಹಿವಾಟಿನಲ್ಲಿ ನಡೆಸುವುದು ಅಸಾಧ್ಯದ ಮಾತು. ‘ತಾನು ಸಾಯಬೇಕು, ಸ್ವರ್ಗ ಪಡೀಬೇಕು’ ಎನ್ನುವ ಮಾತಿನಂತೆ ಸ್ವತಃ ನಾವೇ ನೀರಿಗಿಳಿಯದ ಹೊರತು ಆಳ ತಿಳಿಯದು. ಕೊಟ್ಟು ಮಾಡಿಸುವ ಕೆಲಸಗಳನ್ನು, ಸಮಾನವಾಗಿ ನಾವೂ ಕಲಿಯುತ್ತಾ ಸಾಗಬೇಕು. ಬಹುಶಃ ಇಂಥಾ ಹೆಜ್ಜೆ ಮುಂದೊಂದು ದಿನ ಕೃಷಿಯನ್ನು ವೈಟ್ ಕಾಲರ್ ಜಾಬ್ ಆಗಿ ಮಾರ್ಪಾಡು ಮಾಡುವಲ್ಲಿಯೂ ಸಂದೇಹವಿಲ್ಲ.