ನಮ್ಮನ್ನು ನಾವೇ ಸಂರಕ್ಷಿಸಿಕೊಳ್ಳುವುದಕ್ಕೆ ಎಲ್ಲರೂ ದೇವರ ಮೊರೆ ಹೋಗುವುದು ಸಾಮಾನ್ಯ. 'ದೇವರಾಣೆ ನಾನು ಮಾಡಿಲ್ಲಪ್ಪ..' ಎಂದಿದ್ದು ಸುಳ್ಳಾದರೆ ದೇವರು ನೋಡಿಕೊಳ್ಳುತ್ತಾನೆ ಎನ್ನುವ ನಂಬಿಕೆ ಭಾರತೀಯರದ್ದು. ಆದರೆ, ಪಿಂಕಿ ಪ್ರಾಮೀಸ್...?
'ಯಾರಿಗೂ ಹೇಳೋಲ್ಲ ಅಂಥ ಪ್ರಾಮೀಸ್ ಮಾಡು. ನಿಂಗೆ ಒಂದು ವಿಷ್ಯ ಹೇಳ್ತೇನೆ....' ಎಂದು ಮಾಡುವ ಪ್ರಾಮೀಸ್‌ಗೂ ತನ್ನದೇ ಆದ ಮಹತ್ವವಿದೆ. ಸಾಮಾನ್ಯವಾಗಿ ಎಲ್ಲರೂ ಜೀವನದಲ್ಲಿ ಒಂದಲ್ಲ ಒಂದು ಬಾರಿ ಇಂಥ ಪ್ರಾಮೀಸ್ ಮಾಡಿರುತ್ತಾರೆ. ಇದಕ್ಕೂ ತನ್ನದೇ ಆದ ಹಿನ್ನೆಲೆಯೂ ಇದೆ.
ಮನುಷ್ಯ, ಜೀವನ ಎಂದ ಮೇಲೆ ಒಬ್ಬರಿಗೊಬ್ಬರು ಅಗತ್ಯವಾಗಿ ನಂಬಲೇ ಬೇಕು. ಮನಸ್ಸಿನ ಮರ್ಮವನ್ನು ಅರಿಯುವವರು ಯಾರು. ಎಲ್ಲ ಸಮಯದಲ್ಲಿಯೂ, ಎಲ್ಲ ಕಾರ್ಯಕ್ಕೂ ಕಾನೂನು, ಸಾಕ್ಷಿ, ದಾಖಲೆ ಎಂದು ಹೋಗುವುದು ಹೇಗೆ? ಆಗ ಮನುಷ್ಯನ ಜೀವನಕ್ಕೆ ಅರ್ಥವಾದರೂ ಏನು? ಇದೇ ಕಾರಣಕ್ಕೆ ದೇವರಾಣೆ, ಪಿಂಕಿ ಪ್ರಾಮೀಸ್ ಎನ್ನುವಂಥ ಪದ್ಧತಿಗಳು ಚಾಲ್ತಿಗೆ ಬಂದವು.
undefined
ಎಲೆಲ್ಲೆಲ್ಲಿಯೂ, ಎಲ್ಲರಲ್ಲಿಯೂ ಇರೋ ದೇವರೇ ನಮ್ಮ ಮಾತಿಗೆ ಸಾಕ್ಷಿ. ಮಾತು ತಪ್ಪಿದರೆ ಕೊಡುತ್ತಾನೆ ಶಿಕ್ಷೆ, ಎನ್ನುವ ನಂಬಿಕೆ ಭಾರತೀಯರದ್ದು. ಆದರೆ, ಬೇರೆ ದೇಶಗಳಲ್ಲಿ ಇದೇ ಅರ್ಥ ಬರೋ ಪ್ರಾಮೀಸ್‌ಗಳಿದ್ದು, ತಪ್ಪಿದರೆ, ಪ್ರಾಮೀಸ್ ಮಾಡಿಸಿಕೊಂಡವ, ಪ್ರಾಮೀಸ್ ಮುರಿದವನಿಗೆ ಶಿಕ್ಷಿಸುವಂಥ ಪರಿಪಾಠವೂ ಇದೆ! ಇತ್ತು.
ಇದು ಮೂಲತಃ ಹುಟ್ಟಿಕೊಂಡಿದ್ದು ಜಪಾನ್‌ನಲ್ಲಿ. ಆ ದೇಶದ ಸಂಪ್ರದಾಯದ ಒಂದು ಭಾಗವೆಂದೇ ಇದನ್ನು ಪರಗಿಣಿಸುತ್ತಾರೆ. 'ಯುಬಿಕಿರ್' ಎಂದೂ ಕರೆಯುವ ಪಿಂಕಿ ಪ್ರಾಮೀಸ್ ಎಂದರೆ 'ಫಿಂಗರ್ ಕಟ್-ಆಫ್' ಎಂದರ್ಥ. ಮಾತು ತಪ್ಪಿದವನಿಗೆ ಕಿರು ಬೆರಳು ಕತ್ತರಿಸುವ ಸಂಪ್ರದಾಯವಿದೆ.
ಆತ್ಮಸಾಕ್ಷಿ ಅಥವಾ ಮನಃಸಾಕ್ಷಿಗಿಂತ ಮಿಗಿಲಾದ ಕಾನೂನು ಎಲ್ಲಿದೆ. ಆ ಕಾರಣದಿಂದಲೇ ಇಂಥ ಪ್ರಾಮೀಸ್ ಅಸ್ತಿತ್ವಕ್ಕೆ ಬಂದಿದ್ದು, ಒಂದೊಂದು ದೇಶದಲ್ಲಿ ಒಂದೊಂದು ರೀತಿಯ ಆಚರಣೆ ಇದೆ. ಕಿರು ಬೆರಳು ಮುಟ್ಟಿ ಮಾತಿಗೆ ಬದ್ಧವಾಗಿರೋಣವೆಂದು ಪತಿಜ್ಞೆ ಸ್ವೀಕರಿಸಿದರೆ ಮತ್ತೆ ಕೆಲವೆಡೆ ರಕ್ತದಲ್ಲಿ ಮಾತನ್ನು ಬರೆದಿಡಲಾಗುತ್ತಿತ್ತು.
ಬದಲಾದ ಕಾಲಘಟ್ಟದಲ್ಲಿ ಪ್ರಾಮೀಸ್ ತನ್ನ ಮೌಲ್ಯವನ್ನು ಕಳೆದುಕೊಂಡಿದ್ದು, ಎಲ್ಲವೂ ಕರಾರುವಕ್ಕಾಗಿ, ನ್ಯಾಯಯುತವಾಗಿಯೇ ಇದ್ದರೆ ಮಾತ್ರ ಬೆಲೆ ಪಡೆಯುತ್ತದೆ. ಆದರೆ, ಎಲ್ಲರೂ ಅವರವರ ಆತ್ಮಸಾಕ್ಷಿಗನುಗುಣವಾಗಿ ನಡೆದರೆ, ಜಗತ್ತು ಎಷ್ಟು ಚೆಂದ ಅಲ್ಲವೇ? ಮಾತು ತಪ್ಪದಂಥ ಜೀವನ ನಡೆಸೋಣ. ನೆಮ್ಮದಿಯ ಬದುಕ ಸಾಗಿಸೋಣ.