ಭಾರತದ ಏಕೈಕ ಸುಲ್ತಾನ ಈ ಹೋರಿ!

By Web DeskFirst Published Feb 25, 2019, 11:12 AM IST
Highlights

ಒಂದು ಹೋರಿ ಅಬ್ಬಬ್ಬಾ ಎಂದರೆ ಎಷ್ಟು ಭಾರ ತೂಗಬಹುದು? 100-200 ಕೆಜಿ ಹೋಗ್ಲಿ 500 ಕೆಜಿ? ಹೆಚ್ಚೆಂದರೇ 800 ಕೆಜಿ. ಆದರೇ ಇಲ್ಲೊಂದು ಹೋರಿ ಇದೆ, ಅದು ಬರೋಬ್ಬರಿ 1462 ಕೆಜಿ ತೂಕ ಇದೆ, 6.2 ಅಡಿ ಎತ್ತರ, 8.2 ಅಡಿ ಉದ್ದವಿದೆ. ಇದು ಭಾರತ ಅತೀದೊಡ್ಡ ಹೋರಿ. ಇದಕ್ಕೊಂದು ಚೆಂದದ ಸುಲ್ತಾನ್ ಎಂಬ ಹೆಸರಿದೆ. 

ಸುಭಾಶ್ಚಂದ್ರ ಎಸ್.ವಾಗ್ಳೆ 
ಉಡುಪಿ

ಉಡುಪಿ ಜಿಲ್ಲೆಯ ಬ್ರಹ್ಮಾವರ ಸಮೀಪದ ಉಪ್ಪಿಕೋಟೆ ಗ್ರಾಮದಲ್ಲಿರುವ ಪನಾಮ ಬೋವಿನ್ ಕನ್ಸರ್ವೇಶನ್ ಫಾರ್ಮಸ್‌ನ 67 ವರ್ಷದ ವಯಸ್ಸಿನ ಶೇಕ್ ಜೈನುಲ್ ಅಬಿದಿನ್ ಇದರ ಮಾಲೀಕ.

ಭಾರತದಲ್ಲಿ ದೇಶೀಯ 30ಕ್ಕೂ ಅಧಿಕ ಗೋತಳಿಗಳಿವೆ. ಅದರಲ್ಲೊಂದು ಆಂಧ್ರ ಪ್ರದೇಶದ ನೆಲ್ಲೂರು ಜಿಲ್ಲೆಯ ಓಂಗೋಲ್. ಈ ಸುಲ್ತಾನ್ ಓಂಗೋಲ್ ತಳಿಯ ಹೋರಿ. 8 ತಿಂಗಳ ಕರುವಾಗಿದ್ದಾಗ 55 ಸಾವಿರ ರು. ಕೊಟ್ಟು ಆಂಧ್ರದಿಂದ ಖರೀದಿಸಿ ತಂದಿದ್ದರು. ಈ ಸುಲ್ತಾನನಿಗೀಗ 6 ವರ್ಷ. ಸುಲ್ತಾನ್ ಇತ್ತೀಚೆಗೆ ರಾಯಚೂರಿನಲ್ಲಿ ನಡೆದ ಪಶು ಮೇಳದ ಹೋರಿಗಳ ಸ್ಪರ್ಧೆಯಲ್ಲಿ ಚಾಂಪಿಯನ್ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾನೆ. ಅಲ್ಲಿಯೇ ಈ ಹೋರಿಯನ್ನು ರು.15 ಲಕ್ಷ ಕೊಡುತ್ತೇವೆ, ಮಾರುತ್ತೀರಾ ಎಂದು ಯಾರೋ ಒಬ್ಬರು ಕೇಳಿದ್ದರು. ಆದರೇ ಮಾಲಿಕ ಅಬಿದಿನ್ ಅದನ್ನು ಮಾರುವುದಕ್ಕೆ ಬಿಲ್ಕುಲ್ ಒಪ್ಪಲಿಲ್ಲ.

2.5 ಎಕ್ರೆ ಪ್ರದೇಶದಲ್ಲಿ ಪನಾಮ ಫಾರ್ಮ್

ಅಬಿದಿನ್ ತಮ್ಮ 4 ಗಂಡು ಮಕ್ಕಳೊಂದಿಗೆ ಸುಮಾರು 2.5 ಎಕ್ರೆ ಪ್ರದೇಶದಲ್ಲಿ ಪನಾಮ ಫಾರ್ಮ್ ನಡೆಸುತ್ತಿದ್ದಾರೆ. ಅಲ್ಲಿ ಓಂಗೋಲ್ ಸೇರಿದಂತೆ ನಮ್ಮದೇ ದೇಶೀಯ ತಳಿಗಳಾದ ರಾಜಸ್ತಾನದ ಗಿರ್, ಸಿಂಧ್ ಪ್ರಾಂತ್ಯದ ರೆಡ್ ಸಿಂಧಿ, ಪಂಜಾಬ್ ಪ್ರಾಂತ್ಯದ ಸಹಿವಾಲ್ ಇತ್ಯಾದಿ 24ಕ್ಕೂ ಹೆಚ್ಚು ದನ-ಹೋರಿಗಳಿವೆ. ಮುಂದೆ ಗುಜರಾತಿನ ದೇಶೀ ತಳಿ ಕಾಂಕ್ರೇಜ್ ಗೋವೊಂದನ್ನು ಫಾರ್ಮ್‌ಗೆ ತರುವ ಯೋಚನೆ ಇದ್ದು, ದೇಶೀಯ ಎಲ್ಲಾ ತಳಿಗಳನ್ನು ತಮ್ಮ ಫಾರ್ಮ್‌ನಲ್ಲಿ ಅಭಿವೃದ್ಧಿಪಡಿಸಬೇಕು ಎಂಬ ಆಸೆಯೂ ಹೊಂದಿದ್ದಾರೆ.

ಭಾರತದ ಅತೀ ದೊಡ್ಡ ಹೋರಿ

ಹೋರಿಗಳ ಸ್ಪರ್ಧೆ ವಿಶ್ವದಾದ್ಯಂತ ನಡೆಯುತ್ತವೆ. ಪಕ್ಕದ ಪಾಕಿಸ್ತಾನದಲ್ಲಂತೂ ಇದು ಪ್ರತಿಷ್ಠೆಯ ಸ್ಪರ್ಧೆಯಾಗಿ ನಡೆಯುತ್ತದೆ. ಆದರೇ ಭಾರತದಲ್ಲಿ ಈ ಸ್ಪರ್ಧೆ ಬಹಳ ಕಡಿಮೆ. ಆದರೇ ಲಭ್ಯ ಇರುವ ಮಾಹಿತಿ ಪ್ರಕಾರ ಸುಲ್ತಾನ್ ಭಾರತದ ಅತೀ ದೊಡ್ಡ ಹೋರಿ ಮತ್ತು ಓಂಗೋಲ್ ತಳಿಯಲ್ಲಿ ವಿಶ್ವದಲ್ಲಿಯೇ ದೊಡ್ಡ ಹೋರಿ ಎನ್ನಲಾಗುತ್ತದೆ. ಪ್ರಸ್ತುತ ಪಾಕಿಸ್ತಾನದ ಕರಾಚಿಯಲ್ಲಿರುವ ಅಲ್ಲಿ ಸಿಬಿ ತಳಿಯ 7 ಅಡಿ ಎತ್ತರದ ಹೋರಿ ಏಷ್ಯಾದಲ್ಲಿಯೇ ದೊಡ್ಡ ಹೋರಿ ಎಂದು ಹೆಸರು ಪಡೆದಿದೆ. ವಿಶ್ವದಾಖಲೆ ಬ್ರಿಟನ್‌ನ ಚಾರೋಲೈಸ್ ತಳಿಯ ಹೋರಿ ಬ್ರಾಸ್ನ್ ಫೋರ್ಡ್ ಎಂಬ ಸುಮಾರು 2 ಟನ್ ತೂಕದ ಹೋರಿಯ ಹೆಸರಿನಲ್ಲಿದೆ.

ವೀರ್ಯಾಣುವಿಗೆ ಭಾರೀ ಬೇಡಿಕೆ

ಓಂಗೋಲ್ ಭಾರತದ ಸ್ವಂತ ದೇಶೀಯ ತಳಿಯಾಗಿದ್ದರೂ, ಇಂದು ಶುದ್ಧ ಓಂಗೋಲ್ ತಳಿ ವಿನಾಶದ ಅಂಚಿನಲ್ಲಿದೆ. ಆದರೇ ಭಾರತದಿಂದ 1868ರಲ್ಲಿಯೇ ಒಂದು ಜೊತೆ ಓಂಗೋಲ್ ಗೋವುಗಳನ್ನು ಆಮದು ಮಾಡಿಕೊಂಡಿದ್ದ ಬ್ರೆಜಿಲ್‌ನಲ್ಲಿ ಅವುಗಳ ವೈಜ್ಞಾನಿಕವಾಗಿ ಶುದ್ಧ ಓಂಗೋಲ್ ತಳಿಯನ್ನು ಬೆಳೆಸಲಾಗುತ್ತಿದೆ. ಬ್ರೆಜಿಲ್‌ನಲ್ಲಿ ಸಾಧ್ಯವಾಗುತ್ತದೆಯಾದರೇ ನಮ್ಮಲ್ಲಿ ಯಾಕೆ ಸಾಧ್ಯವಿಲ್ಲ ಎಂದು ಪ್ರಶ್ನಿಸುವ ಪನಾಮ ಫಾರ್ಮ್‌ನ ಶೇಕ್ ಮುದಸಿರ್, ತಮ್ಮ ಸುಲ್ತಾನನಿಗೊಂದು ಹೆಣ್ಣು (ಓಂಗೋಲ್ ತಳಿಯ ದನ) ಹುಡುಕುತ್ತಿದ್ದಾರೆ. ಸುಲ್ತಾನ್‌ನ ವೀರ್ಯಾಣುವಿಗೆ ಈಗಾಗಲೇ ನಾನಾ ಕಡೆಯಿಂದ ಬೇಡಿಕೆ ಬರುತ್ತಿದೆ. ಅದನ್ನು ವೈಜ್ಞಾನಿಕವಾಗಿ ಸಂಗ್ರಹಿಸಿ, ಶುದ್ಧ ತಳಿಯನ್ನು ಉಳಿಸಿ ಬೆಳೆಸುವುದಕ್ಕೆ ಪನಾಮ ಪಾರ್ಮ್ ಸಿದ್ಧತೆಗಳನ್ನು ನಡೆಸುತ್ತಿದೆ.

ಮುಸ್ಲಿಂ ಎಂದು ದನ ಕೊಡುವುದಕ್ಕೆ ಒಪ್ಪಿರಲಿಲ್ಲ

ಏಳೆಂಟು ವರ್ಷಗಳ ಹಿಂದೆ ಅಬಿದಿನ್ ಅವರು ಈ ಭಾಗದಲ್ಲಿ ಅತೀ ಹೆಚ್ಚು ಹಾಲು ಉತ್ಪಾದನೆ ಮಾಡುತ್ತಿದ್ದರು. ಅನೇಕ ಬಾರಿ ಬಹುಮಾನಗಳನ್ನೂ ಪಡೆದಿದ್ದಾರೆ. ಆದರೇ ಒಂದು ಬಾರಿ ಅವರ ಬಳಿ ಇದ್ದ ಹತ್ತಾರು ದನಗಳು ಯಾವುದೋ ಕಾಯಿಲೆಗೆ ತುತ್ತಾಗಿ ಮೃತಪಟ್ಟವು. ಇದರಿಂದ ತೀವ್ರ ಆಘಾತಕ್ಕೊಳಗಾದ ಅಬಿದಿನ್, ರೋಗನಿರೋಧಕ ದೇಶೀ ತಳಿಗಳನ್ನು ಸಾಕಲು ಯೋಚಿಸಿದರು. ಅದಕ್ಕಾಗಿ ಎರಡು ಸಿಂಧಿ ದನ ಖರೀದಿಗೆ ವ್ಯಾಪಾರಿಯೊಬ್ಬರಿಗೆ 10 ಸಾವಿರ ನೀಡಿದ್ದರು. ಆತ ದನಗಳನ್ನು ತಂದು, ನಂತರ ಅಬಿದಿನ್ ಅವರು ಮುಸ್ಲಿಂ ಎಂದು ತಿಳಿದು, ದನಗಳನ್ನು ನೀಡದೇ ಹಿಂದಕ್ಕೆ ತೆಗೆದುಕೊಂಡು ಹೋಗಿದ್ದರು. ಅನಂತರ 10 ಸಾವಿರ ರು. ಕೊಟ್ಟು ಅವುಗಳನ್ನು ಕೊಳ್ಳಬೇಕಾಯಿತು ಎಂದು ಅಬಿದಿನ್ ಹೇಳುತ್ತಾರೆ.

ಸುಲ್ತಾನ್‌ನ ದಿನನಿತ್ಯದ ಆಹಾರದ ಮೆನು

ಗುಣ ಮತ್ತು ವರ್ತನೆಯಲ್ಲಿ ತೀರಾ ಸಾಧುವಾಗಿರುವ ಈ ಸುಲ್ತಾನ್‌ನನ್ನು ಅಬಿದಿನ್ ಹಾಗೂ ಮಕ್ಕಳಾದ ನೌಶಾದ್ ಅಹಮ್ಮದ್, ಮುಮ್ಶಾದ್ ಆಲಮ್, ಮೊಹಮ್ಮದ್ ಇರ್ಷಾದ್ ಮತ್ತು ಶೇಕ್ ಮುದಸಿರ್ ಅತ್ಯಂತ ಆಸೆಯಿಂದ ನೋಡಿಕೊಳ್ಳುತ್ತಾರೆ. ಸಂಪೂರ್ಣವಾಗಿ ಸಾವಯವ ರೀತಿಯಲ್ಲಿಯೇ ಬೆಳೆಸುತ್ತಿದ್ದಾರೆ. ಸುಲ್ತಾನ್‌ಗೆ ದಿನಕ್ಕೆ 2 ಕೆಜಿ ಒಣ ಖರ್ಜೂರ, ಹಸಿ ಜೋಳದ ಗಿಡ, ಒಣ ಹುಲ್ಲು, ಎಳ್ಳು ಹಿಂಡಿ, ತೆಂಗಿನ ಹಿಂಡಿ ತಿನ್ನಿಸುತ್ತಾರೆ. ದಿನಕ್ಕೆ 19 ಬಕೆಟ್ ಮಜ್ಜಿಗೆ, ವಾರದಲ್ಲಿ ೩ ದಿನ ತುಪ್ಪವನ್ನೂ ನೀಡುತ್ತಾರೆ. ನಿತ್ಯ ಸಾಸಿವೆ ಎಣ್ಣೆಯಲ್ಲಿ ಮಸಾಜ್ ಮತ್ತು 2 ಕಿಮಿ ವಾಕ್ ಮಾಡಿಸುತ್ತಾರೆ. ಅಲ್ಲದೆ ಇದಕ್ಕೆ ರು. 3 ಲಕ್ಷ ವಿಮೆ ಕೂಡ ಮಾಡಿಸಿದ್ದಾರೆ. 

 

 

click me!