
ವಿಗ್ ಧರಿಸುವುದೇ ಅವು ಸ್ವಂತ ಕೂದಲಂತೆ ನಮ್ಮ ಸೌಂದರ್ಯ ಕಾಪಾಡಲಿ ಎಂದು. ಆದರೆ, ಹಳತಾದಂತೆಲ್ಲ ವಿಗ್ ಎಷ್ಟು ಒರಟಾಗಿಬಿಡುತ್ತದೆ ಎಂದರೆ, ಅದನ್ನು ಧರಿಸುವುದಕ್ಕಿಂತ ಬಾಣಲೆ ತಲೆಯೇ ಲೇಸು ಎನಿಸಿದರೆ ಅಚ್ಚರಿಯಿಲ್ಲ. ಆದರೆ, ಸ್ವಲ್ಪ ಹೆಚ್ಚಿನ ಗಮನ ಕೊಟ್ಟಲ್ಲಿ ವಿಗ್‌ನ ಗುಣಮಟ್ಟವನ್ನು ಕಾಯ್ದುಕೊಳ್ಳಬಹುದು. ಅಷ್ಟೇ ಅಲ್ಲ, ವಿಗ್ ಹೆಚ್ಚು ಕಾಲ ಬಾಳಿಕೆ ಬರುವಂತೆ ನೋಡಿಕೊಳ್ಳಲು ನಿಮಗಿರುವುದು ಇದೊಂದೇ ಮಾರ್ಗ.
ವಿಗ್ ತೊಳೆವ ಮುನ್ನ
ವಿಗ್ ತೊಳೆಯುವ ಕನಿಷ್ಠ ಅರ್ಧ ಗಂಟೆ ಮೊದಲು ಅದಕ್ಕೆ ಚೆನ್ನಾಗಿ ಕಂಡೀಶನಿಂಗ್ ಮಾಡಿ. ಅಂದರೆ ಕೊಬ್ಬರಿ ಎಣ್ಣೆ ಅಥವಾ ಆಲಿವ್ ಆಯಿಲ್ ತೆಗೆದುಕೊಂಡು ವಿಗ್‌ನ ಪ್ರತಿ ಕೂದಲಿಗೂ ತಾಕುವಂತೆ ಹಚ್ಚಿ. ಎಣ್ಣೆಯ ಬದಲಿಗೆ ಮಾಯಿಶ್ಚರೈಸಿಂಗ್ ಕಂಡಿಶನರ್ ಕೂಡಾ ಬಳಸಬಹುದು. ಈ ಸಂದರ್ಭದಲ್ಲಿ ಕೂದಲು ಸಿಕ್ಕಾಗದಂತೆ ಎಚ್ಚರ ವಹಿಸಿ. ನಂತರ ವಿಗ್ ಅನ್ನು ಶವರ್ ಕ್ಯಾಪ್‌ನೊಳಗೆ ಹಾಕಿಡಿ. ಸುಮಾರು 25 ಬಾರಿ ಬಳಸಿದ ಬಳಿಕ ಒಮ್ಮೆ ವಿಗ್ ತೊಳೆದರೆ ಸಾಕು. ಅದನ್ನು ಪ್ರತಿನಿತ್ಯ ತೊಳೆವ ಅಗತ್ಯವಿಲ್ಲ.
ಕೂದಲು ಉದುರಲು ಈ ಆರೋಗ್ಯ ಸಮಸ್ಯೆಯೂ ಆಗಬಹುದು ಕಾರಣ..
ತೊಳೆಯುವಾಗ
ಕೂದಲನ್ನು ತೊಳೆಯಲು ತಣ್ಣನೆ ನೀರನ್ನೇ ಬಳಸಿ. ಸ್ವಚ್ಛಗೊಳಿಸಲು ಮಾಯಿಶ್ಚರೈಸಿಂಗ್ ಶಾಂಪೂ ಬಳಸಿ, ನಿಮ್ಮ ಬೆರಳುಗಳಲ್ಲೇ ನಯವಾಗಿ ತೊಳೆಯುತ್ತಾ ಬನ್ನಿ. ಕಡೆಯಲ್ಲಿ ಶಾಂಪೂವಿನ ನೊರೆ ಉಳಿಯದಂತೆ ಎಚ್ಚರ ವಹಿಸಿ. ಬಳಿಕ ವಿಗ್‌ನ ಪ್ರತಿ ಕೂದಲಿಗೂ ಮೇಲಿನಿಂದ ಕೆಳಗಿನವರೆಗೆ ಮಾಯಿಶ್ಚರೈಸಿಂಗ್ ಕಂಡೀಶನರ್ ಹಚ್ಚಿ. ಕೂದಲಿನ ತುದಿಗೆ ಹೆಚ್ಚಿನ ಕಂಡೀಶನರ್ ಬಳಸಿ. ಏಕೆಂದರೆ ಇಲ್ಲಿಯೇ ಕೂದಲು ಬ್ರೇಕ್ ಆಗುವುದು ಹೆಚ್ಚು.
ನೀರಿನಿಂದ ಚೆನ್ನಾಗಿ ತೊಳೆದು ಸಾಧ್ಯವಾದಷ್ಟು ನೀರನ್ನು ಕೈನಿಂದ ಹಿಂಡಿ ತೆಗೆಯಿರಿ. ಬಳಿಕ ವಿಗ್‌ನ್ನು ಬಾಚಣಿಕೆಯಿಂದ ನಿಧಾನವಾಗಿ ಬಾಚಿ, ಟವೆಲ್‌ನಲ್ಲಿ ನೀರನ್ನು ಸಾಧ್ಯವಾದಷ್ಟು ಹೀರಿ, 20 ನಿಮಿಷಗಳ ನೀರು ಆರಲು ಬಿಡಿ. ವಿಗ್ ಒಣಗಿಸಲು ಬ್ಲೋ ಡ್ರೈ ಬೇಡವೇ ಬೇಡ. ಏರ್ ಡ್ರೈನಿಂದ ಒಣಗಿದ ಬಳಿಕ ಮತ್ತೆ ಮಾಯಿಶ್ಚರೈಸರ್ ಹಚ್ಚಿ.
ಮಲಗುವಾಗ
ವಿಗ್ ಹಾಕಿಕೊಂಡೇ ಮಲಗುವಿರಾದರೆ ಮಲಗುವಾಗ ಕೂದಲನ್ನು ಸ್ಯಾಟಿನ್ ಸ್ಕಾರ್ಫ್‌ನಿಂದ ಕಟ್ಟಿಕೊಳ್ಳಿ. ಇದರಿಂದ ಎಸಿ ಅಥವಾ ಫ್ಯಾನ್ ಗಾಳಿಗೆ ಕೂದಲು ಡ್ಯಾಮೇಜ್ ಆಗುವುದನ್ನು ತಡೆಯಬಹುದು. ಸ್ಯಾಟಿನ್ ಕವರ್ ಇರುವ ದಿಂಬನ್ನೇ ಬಳಸಿ. ವಿಗ್ ತೆಗೆದಿಟ್ಟರೆ ಇನ್ನೂ ಉತ್ತಮ. ಹೀಗೆ ತೆಗೆದಿಡುವಾಗ ವಿಗ್ ಸ್ಟ್ಯಾಂಡ್ ಬಳಸಿ.
ವಿಗ್ ಹಾಕುವಾಗ
ಪ್ರತಿ ಬಾರಿ ವಿಗ್ ತೊಡುವಾಗಲೂ ಒಂದು ಹನಿ ಎಣ್ಣೆ ಬಿಟ್ಟು ಕೂದಲನ್ನು ಬಾಚಿಯೇ ಹಾಕಿಕೊಳ್ಳಿ. ಕೂದಲನ್ನು ಬಾಚುವಾಗ ಕೇರ್‌ಲೆಸ್ ಆದರೆ, ವಿಗ್‌ನ ಕೂದಲು ಕಿತ್ತು ಬರಬಹುದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.