ಬೆಳಗ್ಗೆ ಎದ್ದಾಗಿನಿಂದ ಸಂಜೆ ಮಲಗುವವರೆಗೂ ಅಥವಾ ಮಲಗಿದ ಮೇಲೂ ನಮ್ಮ ಜೊತೆಗೆ ಇರುವ ಒಂದೇ ಒಂದು ವಸ್ತು ಎಂದರೆ ಅದು ಮೊಬೈಲ್ ಫೋನ್. ಅಪ್ಪಿತಪ್ಪಿ ಮೊಬೈಲ್ ಬಳಸುವಾಗ ಅದು ಕೆಳಗೆ ಬಿದ್ದರೆ ಜೀವವೇ ಬಾಯಿಗೆ ಬಂದ ಹಾಗೆ ಆಗುತ್ತದೆ ಅಲ್ಲವೇ?
Tech Desk: ಇತ್ತೀಚಿಗಂತೂ ಮೊಬೈಲ್ (Mobile) ನಮ್ಮ ದೇಹದ ಅಂಗವೇ ಆಗಿದೆ. ಒಂದು ಹೊತ್ತಿನ ಊಟ ಬೇಕಾದರೂ ಬಿಟ್ಟು ಇರಬಹುದೇನೋ ಅದರ ಮೊಬೈಲ್ ಬಿಟ್ಟಿರೋದು ಸಾಧ್ಯವಿಲ್ಲ ಎನ್ನುವಂತಹ ಪರಿಸ್ಥಿತಿ ಬಂದಿದೆ. ಮೊಬೈಲ್ ಫೋನ್ ಮೇಲೆ ಇಷ್ಟೊಂದು ಅವಲಂಬಿತವಾಗಿರುವ ನಾವು ಅದು ಕೆಳಗೆ ಬಿದ್ದು ಸ್ಕ್ರಾಚ್ (Scratch) ಆದರೆ ಗಾಬರಿಯಾಗಿ ಬಿಡುತ್ತೀವಿ. ಸಣ್ಣಪುಟ್ಟ ಸ್ಕ್ರಾಚಸ್ ಆದರೆ ಅದನ್ನು ಮೊಬೈಲ್ ಅಂಗಡಿಗೆ ತೆಗೆದುಕೊಂಡು ಹೋಗಿ ಹೊಸ ಸ್ಕ್ರೀನ್ ಗಾರ್ಡ್ ಹಾಕಿಸಲು ಕಷ್ಟವಾಗಬಹುದು. ಆದರೆ ಇದು ನೀಡುವ ಕಿರಿಕಿರಿಯನ್ನು ಸಹಿಸಿಕೊಳ್ಳಲು ಕಷ್ಟ. ಮೇಲ್ನೋಟಕ್ಕೆ ಗೊತ್ತಾಗದೆ ಇದ್ದರೂ ಬಳಕೆ ಮಾಡುವಾಗ ಇದರ ಅನುಭವವಾಗುವುದು.
ಮೊಬೈಲ್ ಸ್ಕ್ರೀನ್ (Screen) ಮೇಲೆ ಗೆರೆಗಳು!
ನಿಮ್ಮ ಜೇಬಿನಲ್ಲಿ ಪೆನ್ನು ಅಥವಾ ಕೀ (Key)ಯಂಥ ಶಾರ್ಪ್ ವಸ್ತುವಿನೊಂದಿಗೆ ಮೊಬೈಲ್ ಫೋನನ್ನು ಇಟ್ಟುಕೊಂಡಿದ್ದರೆ ಆಗ ಅಂತಹ ವಸ್ತುಗಳಿಂದ ಮೊಬೈಲ್ ಸ್ಕ್ರೀನ್ ಗೆ ಹಾನಿಯಾಗುವ ಸಾಧ್ಯತೆ ಇರುತ್ತದೆ. ಇದಕ್ಕೆ ಆಕಾಶವೇ ಕಳಚಿ ತಲೆಯ ಮೇಲೆ ಬಿತ್ತು ಎನ್ನುವಷ್ಟು ಗಾಬರಿ ಪಡುವ ಅವಶ್ಯಕತೆಯಿಲ್ಲ. ಇಂತಹ ಸ್ಕ್ರ್ಯಾಚ್ ಗಳನ್ನು ಹೋಗಲಾಡಿಸಲು ಒಂದು ಸರಳ ಉಪಾಯವಿದೆ. ಅದು ಕೂಡ ನಿಮ್ಮ ಮನೆಯಲ್ಲಿಯೇ ಇದೆ! ಹಾಗಂದ ಮಾತ್ರಕ್ಕೆ ಸಂಪೂರ್ಣವಾಗಿ ಸ್ಕ್ರಾಚಸ್ ನಿಂದ ತುಂಬಿರುವ ಮೊಬೈಲನ್ನು ಮನೆಯಲ್ಲಿಯೇ ಸರಿ ಮಾಡಬಹುದಾ ಎಂದು ಕೇಳಿದರೆ ಇಲ್ಲ, ಅದು ಸಾಧ್ಯವಿಲ್ಲ. ಅದಕ್ಕೆ ನೀವು ಮೊಬೈಲ್ ಅಂಗಡಿಗೆ ಹೋಗಬೇಕು. ಮೊಬೈಲ್ ಸರಿಯಾಗಿ ಕೆಲಸ ಮಾಡುತ್ತಿದೆ ಆದರೆ ಸಣ್ಣಪುಟ್ಟ ಗೀರುಗಳಾಗಿದ್ದರೆ ಆಗ ಈ ಸಲಹೆ ನಿಮ್ಮ ಸಹಾಯಕ್ಕೆ ಬರುತ್ತದೆ.
ಇದನ್ನೂ ಓದಿ: Tech Investments Bengaluru: ವಿಶ್ವದಲ್ಲೇ ಬೆಂಗಳೂರಿಗೆ ಟಾಪ್ 5 ಪ್ಲೇಸ್!
undefined
ನೀವು ಮಾಡಬೇಕಾಗಿರುವುದು ಇಷ್ಟೇ
ಮೊದಲಿಗೆ ಮೊಬೈಲ್ ಸ್ಕ್ರೀನ್ ನ ಮೇಲೆ ಯಾವುದೇ ರೀತಿಯ ಧೂಳಿಲ್ಲ ಎಂಬುದನ್ನು ಖಚಿತ ಪಡಿಸಿಕೊಳ್ಳಿ. ಇಲ್ಲವಾದರೆ ಸ್ಕ್ರೀನ್ ಸರಿ ಮಾಡಲು ಹೋಗಿ ಇನ್ನೂ ಹೆಚ್ಚಿನ ಹಾನಿ ಮಾಡಿದಂತಾಗಬಹುದು. ಈಗ ಸ್ಕ್ರೀನ್ ನ ಮೇಲೆ ಟೂತ್ ಪೇಸ್ಟ್ ಅನ್ನು ಕ್ಯೂ ಟಿಪ್ (Ear buds) ನ ಸಹಾಯದಿಂದ ಸ್ಕ್ರಾಚ್ ಆದ ಭಾಗದ ಮೇಲೆ ನಿಧಾನವಾಗಿ ವೃತ್ತಾಕಾರವಾಗಿ ಹರಡಿ. ಸ್ಕ್ರೀನ್ ಹೆಚ್ಚು ಆಳವಾಗಿ ಹಾನಿಗೊಂಡಿಲ್ಲ ಎಂದಾದರೆ ಸ್ಕ್ರ್ಯಾಚಸ್ ಬೇಗ ಮಾಯವಾಗುತ್ತದೆ. ಇನ್ನು ಉಳಿದ ಭಾಗದಲ್ಲಿ ಇರುವ ಪೇಸ್ಟನ್ನು ನಿಧಾನವಾಗಿ ವೇಸ್ಟ್ ಬಟ್ಟೆಯ ಸಹಾಯದಿಂದ ಒರೆಸಿ ತೆಗೆಯಿರಿ.
ಇದು ಹೇಗೆ ಕೆಲಸ ಮಾಡುತ್ತದೆ?
ಈ ವಿಧಾನವನ್ನು ಕೇಳಿದಾಗ ನಿಮಗೆ ಆಶ್ಚರ್ಯವಾಗಬಹುದು ನಿಜವಾಗಿಯೂ ಟೂತ್ ಪೇಸ್ಟ್ (Toothpaste) ನಿಂದ ಇಂತಹ ಸಹಾಯವಾಗಬಹುದೇ ಎಂದು. ಆದರೆ ಇದರ ಹಿಂದಿನ ಮರ್ಮ ಎಂದರೆ ಟೂತ್ಪೇಸ್ಟ್ ನಿಮ್ಮ ಮೊಬೈಲ್ ನ ಸ್ಕ್ರೀನ್ ಗೆ ಪಾಲಿಶ್ ಮಾಡಿದ ಅನುಭವ ನೀಡುತ್ತದೆ. ಪೇಸ್ಟ್ ಹೇಗೆ ನಿಮ್ಮ ಹಲ್ಲನ್ನು ಬಿಳುಪಾಗಿ ಕಾಣುವಂತೆ ಪಾಲಿಶ್ ಮಾಡುತ್ತದೆಯೋ ಹಾಗೆಯೇ ಮೊಬೈಲ್ ಸ್ಕ್ರೀನನ್ನು ಕೂಡ ಪಾಲಿಶ್ ಮಾಡುತ್ತದೆ. ಈ ಪ್ರಯೋಗ ಮಾಡುವಾಗ ಹೆಚ್ಚು ಪೇಸ್ಟ್ ಬಳಸಬೇಡಿ. ಇದರಿಂದಾಗಿ ಸ್ಕ್ರಾಚ್ ಕಡಿಮೆ ಮಾಡಲು ಹೋಗಿ ಮೊಬೈಲ್ ಸ್ಕ್ರೀನ್ ಬ್ಲರ್ (Blur) ಆಗಿಬಿಡಬಹುದು. ಅಲ್ಲದೆ, ಮೊಬೈಲ್ ಪೇಸ್ಟ್ ಪರಿಮಳವನ್ನು ತನ್ನೊಂದಿಗೆ ಅಂಟಿಸಿಕೊಂಡು ಬಿಡಬಹುದು!
ಇದನ್ನೂ ಓದಿ: 6G Mobile Technology: 6ಜಿ ತಂತ್ರಜ್ಞಾನ ಅಭಿವೃದ್ಧಿಪಡಿಸುತ್ತಿರುವ ಚೀನಾ, 2030ಕ್ಕೆ ಸೇವೆಗೆ!
ಹೀಗೆ ಮಾಡಬೇಡಿ
ಇಂಟರ್ನೆಟ್ (Internet) ನೋಡಿಕೊಂಡು ನಿಮ್ಮ ಮೊಬೈಲಿನ ಸ್ಕ್ರೀನಿನ ಮೇಲೆ ಯಾವುದೇ ಕಾರಣಕ್ಕೂ ಸಿಲ್ವರ್ ಪಾಲಿಶ್ ಮಾಡಲು ಹೋಗಬೇಡಿ. ಇದರಿಂದಾಗಿ ಒಳ್ಳೆಯ ಫಲಿತಾಂಶ ಸಿಗುವ ಬದಲು ನಿಮ್ಮ ಮೊಬೈಲ್ ಸಂಪೂರ್ಣವಾಗಿ ಹಾಳಾಗಿ ಬಿಡುವ ಸಾಧ್ಯತೆ ಇರುತ್ತದೆ.