ಕೊರೋನಾ (Corona) ಕಾಲಾನಂತರ ಸಂಪೂರ್ಣ ಬದಲಾಗಿ ಹೋಗಿದ್ದ ಮನುಷ್ಯರ ಜೀವನಶೈಲಿ (Lifestyle) ಈಗ ಸಹಜತೆಗೆ ಮರಳುತ್ತಿದೆ. ಈಗಾಗ್ಲೇ ಹಲವು ನಗರಗಳಲ್ಲಿ ವರ್ಕ್ ಫ್ರಂ ಹೋಮ್ (Work From Home) ಕೆಲಸದ ಶೈಲಿ ಕೊನೆಗೊಂಡು ವರ್ಕ್ ಫ್ರಂ ಆಫೀಸ್ (Work From Office) ಕ್ರಮ ಆರಂಭಗೊಂಡಿದೆ. ಮರಳಿ ಆಫೀಸಿಗೆ ಹೋಗಲು ರೆಡಿಯಾಗೋದು ಹೇಗೆ ? ಇಲ್ಲಿದೆ ಕೆಲವೊಂದು ಟಿಪ್ಸ್.
ಕೋವಿಡ್ (Covid) ಸೋಂಕು ಹರಡಲು ಆರಂಭವಾದ ಕೆಲ ವರ್ಷಗಳಲ್ಲಿ ಜನಜೀವನ ಸಂಪೂರ್ಣ ಬದಲಾಗಿ ಹೋಗಿತ್ತು. ಲಾಕ್‌ಡೌನ್ (Lockdown), ಕರ್ಫ್ಯೂನಿಂದ ಜನರು ಸಂಪೂರ್ಣ ಕಂಗೆಟ್ಟಿದ್ದರು. ಸೋಂಕು (Virus0 ಹರಡುವುದನ್ನು ತಡೆಯಲು ಆನ್‌ಲೈನ್ ಕ್ಲಾಸ್, ವರ್ಕ್ ಫ್ರಂ ಹೋಮ್ ವ್ಯವಸ್ಥೆಗಳು ಬಂದವು. ಕೊರೋನಾದಿಂದ ಹಲವರ ಜೀವನಕ್ಕೆ ಅನುಕೂಲವಾಯಿತು. ಅದೆಷ್ಟೋ ಮಂದಿ ಸಂಕಷ್ಟಕ್ಕೆ ಸಿಲುಕಿದರು. ಈಗ ಕೊರೋನಾ ಅಲೆಯ ತೀವ್ರತೆ ಸ್ಪಲ್ಪ ಮಟ್ಟಿಗೆ ಕಡಿಮೆಯಾಗಿದೆ. ಜನ ಜೀವನ ಸಹಜತೆಗೆ ಮರಳುತ್ತಿದೆ. ಪ್ರವಾಸಿತಾಣಗಳು, ಅಂತಾರಾಷ್ಟ್ರೀಯ ಏರ್‌ಪೋರ್ಟ್‌ಗಳು ಜನರ ಸೇವೆಗೆ ಸಿದ್ಧವಾಗಿದೆ. ಇದೆಲ್ಲದರ ಜೊತೆಗೆ ಕೊರೋನಾ ಹರಡಲು ಆರಂಭವಾದಾಗಿನಿಂದ ವರ್ಕ್ ಫ್ರಂ ಹೋಮ್ ಆಪ್ಶನ್ ನೀಡಿದ್ದ ಕಂಪೆನಿಗಳು ಮರಳಿ ವರ್ಕ್ ಫ್ರಂ ಆಫೀಸ್‌ಗೆ (Work from office) ಸಿದ್ಧವಾಗಿದೆ. ಅದೆಷ್ಟೋ ಕಚೇರಿಗಳಿಗೆ ಉದ್ಯೋಗಿಗಳು (Employess) ಮರಳಿ ಬಂದಿದ್ದಾರೆ. ಇನ್ನೂ ಕೆಲ ಕಂಪೆನಿಗಳು ಉದ್ಯೋಗಿಗಳನ್ನು ವಾಪಾಸ್ ಆಫೀಸಿಗೆ ಕರೆಯಲು ಸಿದ್ಧತೆ ಮಾಡಿಕೊಳ್ಳುತ್ತಿದೆ.
ಕೊರೋನಾ ಕಾಲಘಟ್ಟದಲ್ಲಿ ಒಂದಷ್ಟು ಮಂದಿ ಮನೆಯಿಂದ ಕೆಲಸ ಎಂಬ ಕ್ರಮದಿಂದ ಖುಷಿಪಟ್ಟರೆ ಅದೆಷ್ಟೋ ಮಂದಿ ತೊಂದರೆ ಅನುಭವಿಸಿದರು. ಊರಲ್ಲಿ ನೆಟ್‌ವರ್ಕ್ ಇಲ್ಲ, ವಿದ್ಯುತ್ ಸಮಸ್ಯೆ ಎಂದು ತೊಂದರೆ ಪಡುವಂತಾಯ್ತು. ಇನ್ನು ಕೆಲವರು ಕುಳಿತುಕೊಳ್ಳುವ ಚೇರ್, ವಿತೌಟ್ ಎಸಿ ವ್ಯವಸ್ಥೆಯಿಂದ ಹೈರಾಣಾದರು. ಹೀಗಾಗಿ ಒಮ್ಮೆ ವರ್ಕ್ ಫ್ರಂ ಆಫೀಸ್ ಸಾಕಪ್ಪಾ ಎಂದುಕೊಂಡವರು ಕೆಲವರು. ಆದರೆ ಊರಲ್ಲಿ ಹೆಚ್ಚು ಸಮಯ ಕಲೆಯಬೇಕು ಎಂದುಕೊಂಡವರು ವರ್ಕ್ ಫ್ರಂ ಹೋಮ್ (Work from Home) ಕ್ರಮದಿಂದ ಸಿಕ್ಕಾಪಟ್ಟೆ ಖುಷಿಪಟ್ಟರು. ಹಳ್ಳಿಯ ವಾತಾವರಣವೂ ಸಿಕ್ತು, ನಗರದಲ್ಲಿ ತಿಂಗಳಿಗೆ ರೆಂಟ್, ಬಿಲ್ ಎಂದು ಸಾವಿರಗಟ್ಟಲೆ ಸುರಿಯೋದು ತಪ್ತು ಅಂತ ನಿರಾಳವಾದರು. ಹೀಗಾಗಿಯೇ ವರ್ಕ್ ಫ್ರಂ ಆಫೀಸ್ ಎಂದಾಗ ಹಲವರಿಗೆ ಖುಷಿಯಾಗುತ್ತಿದೆ, ಹಲವರಿಗೆ ಆತಂಕವಾಗುತ್ತಿದೆ.
undefined
Zerodha BMI Challenge ಈ ಕಂಪನಿಯಲ್ಲಿ ಬೋನಸ್ ಬೇಕಾದರೆ ದೇಹದ ತೂಕ ಇಳಿಸಿಕೊಳ್ಳಬೇಕು!
ನಿಮ್ಮನ್ನೂ ವರ್ಕ್ ಫ್ರಂ ಆಫೀಸ್‌ಗೆ ಕರೆದಿದ್ದರಾ ? ನೀವು ಸಹಜವಾಗಿಯೇ ಆತಂಕಗೊಂಡಿದ್ದೀರಾ ? ಜನರೊಂದಿಗೆ ಹೇಗೆ ಬೆರೆಯುವುದು, ಎಷ್ಟು ಅಂತರದಲ್ಲಿ ನಿಂತು ಮಾತನಾಡಬೇಕು ಮೊದಲಾದ ಆತಂಕ ಕಾಡುತ್ತಿದೆಯಾ ? ಹಾಗಿದ್ರೆ ವರ್ಕ್ ಫ್ರಂ ಆಫೀಸ್‌ಗೆ ರಡಿಯಾಗೋದು ಹೇಗೆ ನಾವ್ ಹೇಳ್ತೀವಿ.
ಇದು ಕಚೇರಿಗೆ ಮರಳುವ ಸಮಯ, ರೆಡಿಯಾಗೋದು ಹೇಗೆ ?
ಅಪರಿಚಿತರನ್ನು ಭೇಟಿ ಮಾಡಲು ಸಿದ್ಧರಾಗಿ: ಕೊರೋನಾ ಸೋಂಕು ಹರಡುತ್ತಿದ್ದ ಈ ಎರಡು ವರ್ಷಗಳಲ್ಲಿ ನಿಮ್ಮ ಕಂಪೆನಿಯಿಂದ ಅದೆಷ್ಟೋ ಮಂದಿ ಉದ್ಯೋಗವನ್ನು ತೊರೆದಿರಬಹುದು. ಅದೆಷ್ಟೋ ಮಂದಿ ಹೊಸದಾಗಿ ಜಾಯಿನ್ ಆಗಿರಬಹುದು. ಹೀಗಾಗಿ ಕಚೇರಿಯಲ್ಲಿ ಅಪರಿಚಿತರನ್ನು ಭೇಟಿ ಮಾಡಲಿದ್ದೀರಿ ಎಂಬುದಕ್ಕೆ ಮಾನಸಿಕವಾಗಿ ಸಿದ್ಧರಾಗಿರಿ. ಹಾಯ್ ಅಥವಾ ಒಂದು ಮುಗುಳುನಗೆಯ ಮೂಲಕ ಸ್ನೇಹವನ್ನು ಹಂಚಿಕೊಳ್ಳಿ. ಮೊದಲ ದಿನವೇ ಯಾರ ಜೊತೆಯೂ ಅತಿಯಾಗಿ ಮಾತನಾಡಲು ಹೋಗಬೇಡಿ. ಯಾರಾದರೂ ನಮ್ಮೊಂದಿಗೆ ಅತಿಯಾಗಿ ಮಾತನಾಡಲಿ ಎಂಬ ನಿರೀಕ್ಷೆಯನ್ನೂ ಇಟ್ಟುಕೊಳ್ಳಬೇಡಿ. ಎಲ್ಲರೂ ನಿಮ್ಮಂತೆ ಗೊಂದಲದ ಮನಸ್ಥಿತಿಯಲ್ಲಿರುತ್ತಾರೆ ಎಂಬುದನ್ನು ಅರ್ಥ ಮಾಡಿಕೊಳ್ಳಿ.
ಆತಂಕವನ್ನು ಕಡಿಮೆ ಮಾಡಿಕೊಳ್ಳಿ: ವರ್ಷಗಳ ಕಾಲ ಮನೆಯಿಂದಲೇ ಕೆಲಸ ಮಾಡಿರುವ ಕಾರಣ ಜನರನ್ನು ಮುಖತಃ ಭೇಟಿ ಮಾಡುವ ವಿಚಾರ ಆತಂಕ ಮೂಡುವುದು ಸಹಜ. ಅದಲ್ಲದೆ ಹೆಚ್ಚಿನವರು ಅಪರಿಚಿತರಾಗಿರುವ ಕಾರಣ ಈ ಆತಂಕವೂ ಸಹಜವಾಗಿದೆ. ಮೊದಲಿಗೆ ಈ ಆತಂಕವನ್ನು ಕಡಿಮೆ ಮಾಡಿಕೊಳ್ಳಿ. ನೀವು ನಿಮ್ಮದೇ ಕಚೇರಿಗೆ ಹೋಗುತ್ತಿದ್ದೀರಿ. ಇದು ನೀವು ಉದ್ಯೋಗ ಮಾಡುವ ಸ್ಥಳ. ಹೀಗಾಗಿ ಆತಂಕ ಬೇಕಿಲ್ಲ ಎಂಬುದನ್ನು ಮನಸ್ಸಿಗೆ ಮನದಟ್ಟು ಮಾಡಿ. ಆಫೀಸಿಗೆ ಹೋಗುವ ಮೊದಲು ಸಹೋದ್ಯೋಗಿಗಳಲ್ಲಿ ಮನಸಾರೆ ಮಾತನಾಡಿ ಆತ್ಮೀಯತೆ ಬೆಳೆಸಿಕೊಳ್ಳಿ. ಇದು ಆಫೀಸ್ ವಾತಾವರಣ ಆಹ್ಲಾದಕರವಾಗಿರುವಂತೆ ಮಾಡುತ್ತದೆ. ಅನಗತ್ಯ ಆತಂಕವು ನಿಮ್ಮ ಆರೋಗ್ಯ ಮತ್ತು ಪ್ರಮುಖ ಸಂಬಂಧಗಳಿಗೆ ಅನಪೇಕ್ಷಿತ ಪರಿಣಾಮಗಳಿಗೆ ಕಾರಣವಾಗಬಹುದು. ಉದಾಹರಣೆಗೆ, ನೀವು ನಿದ್ರಿಸಲು ಕಷ್ಟವಾಗಬಹುದು, ತಲೆನೋವು ಉಂಟಾಗಬಹುದು.
ಗಂಟೆಗಟ್ಟಲೆ ಕೂತಲ್ಲೇ ಕೂತು ಕೆಲ್ಸ ಮಾಡಿ ಬೆನ್ನು ನೋವಾ ? ಹತ್ತೇ ನಿಮಿಷ ಎಕ್ಸರ್‌ಸೈಸ್ ಮಾಡಿ ಸಾಕು
ತಾಳ್ಮೆಯಿಂದ ವರ್ತಿಸಿ: ದಿಢೀರ್ ವರ್ಕ್ ಫ್ರಂ ಹೋಮ್ ಕ್ರಮವನ್ನು ವರ್ಕ್ ಫ್ರಂ ಆಫೀಸ್‌ಗೆ ಬದಲಾಯಿಸಿರುವ ಬಗ್ಗೆ ಹಲವು ಉದ್ಯೋಗಿಗಳಿಗೆ ಅಸಮಾಧಾನವಿದೆ. ಅದರಲ್ಲೂ ಕೊರೋನಾ ನಾಲ್ಕನೇ ಅಲೆಯ ಭೀತಿಯೂ ಕಾಡುತ್ತಿರುವ ಕಾರಣ ಸಹಜವಾಗಿ ಆತಂಕ ಕಾಡುತ್ತಿದೆ. ಹಾಗೆಂದು ಆಫೀಸಿಗೆ ಕರೆದಿರುವ ನಿಮ್ಮ ಕಂಪೆನಿಯ ಕ್ರಮದ ಬಗ್ಗೆ ಸಿಟ್ಟಿಗೇಳಬೇಡಿ. ನಿಮ್ಮ ಕಂಪನಿಯ ಪ್ರೋಟೋಕಾಲ್‌ಗಳು ಪರಿಸ್ಥಿತಿಗೆ ತಕ್ಕಂತೆ ಬದಲಾಗುತ್ತದೆ ಮತ್ತು ನೀವದನ್ನು ಅನುಸರಿಬೇಕು. ಹೀಗಾಗಿ ತಾಳ್ಮೆಯಿಂದ ವರ್ತಿಸಿ.
ಖುಷಿ ಖುಷಿಯಾಗಿರಿ: ಕೆಲಸ ಮಾಡುವ ಸ್ಥಳದಲ್ಲಿ ಖುಷಿಯಾಗಿರುವುದು ಮುಖ್ಯ. ಹೀಗಾಗಿ ವರ್ಕ್ ಫ್ರಂ ಹೋಮ್ ಆಪ್ಶನ್ ಇಲ್ಲವೆಂದು ಕೊರಗುತ್ತಾ ಕೆಲಸ ಮಾಡಬೇಡಿ. ಆಫೀಸಿಗೆ ತಲುಪಿದ ತಕ್ಷಣ ಎಲ್ಲರೊಂದಿಗೆ ಖುಷಿಯಾಗಿ ಮಾತನಾಡಿ. ಆಹ್ಲಾದಕರ ವಾತಾವರಣವನ್ನು ಸೃಷ್ಟಿಸಿ. ಕೆಲಸ ಮಾಡುವ ವಾತಾವರಣ ಖುಷಿಯಾಗಿದ್ದರಷ್ಟೇ ನೆಮ್ಮದಿಯಿಂದ ಕೆಲಸ ಮಾಡಲು ಸಾಧ್ಯ. ಇನ್ನೂ ಮನೆಯಿಂದ ಕೆಲಸ ಮಾಡುತ್ತಿರುವ ಸಹೋದ್ಯೋಗಿಗಳ ಬಗ್ಗೆ ವಿಶೇಷ ಕಾಳಜಿ ವಹಿಸಿ. ನಾವು ಆಫೀಸಿನಿಂದ ದೂರವಿರುವ ಕಾರಣ ಸಹೋದ್ಯೋಗಿಗಳಿಗೆ ಆಪ್ತವಾಗಿಲ್ಲ ಎಂದು ಅವರು ಭಾವಿಸಬಹುದು. ಇಂಥಾ ಮನೋಭಾವವನ್ನು ಹೋಗಲಾಡಿಸಿ. ಎಲ್ಲರೂ ಒಂದೇ ಎಂಬ ಭಾವನೆಯನ್ನು ಮೂಡಿಸಿ.
ನಿಮ್ಮ ಬಗ್ಗೆ ಕೀಳರಿಮೆ ಬೇಡ, ಆತ್ಮವಿಶ್ವಾಸವಿರಲಿ: ಮನೆಯಿಂದಲೇ ಕೆಲಸ ಮಾಡುವ ಅಭ್ಯಾಸದಿಂದ ಕುಳಿತಲ್ಲೆ ಕುಳಿತು ಹಲವರು ದಪ್ಪಗಾಗಿದ್ದಾರೆ. ವಾತಾವರಣ ಹಿಡಿಸದೆ ಕೆಲವರು ಸಣ್ಣಗಾಗಿದ್ದಾರೆ. ಕೆಲವರು ಬಿಜ್ಜು ಬೆಳೆಸಿಕೊಂಡಿದ್ದಾರೆ. ಕೊರೋನಾ ಬಂದ ನಂತರ ಹಲವರಲ್ಲಿ ಕೂದಲುದುರುವ ಸಮಸ್ಯೆ ಕಾಣಿಸಿಕೊಂಡಿತ್ತು. ಹೀಗಾಗಿ ಕೆಲವರಲ್ಲಿ ಕೂದಲು ತೆಳುವಾಗಿರುವ ಸಮಸ್ಯೆ,ಯಿದೆ. ಈ ಯಾವುದೇ ವಿಚಾರದಿಂದಾಗಿ ನಿಮ್ಮ ಬಗ್ಗೆ ಕೀಳರಿಮೆ ಬೆಳೆಸಿಕೊಳ್ಳಬೇಡಿ. ಇದ್ಯಾವುದೋ ಯಾರೋ ಬೇಕೆಂದೇ ತಂದುಕೊಂಡಿರುವ ಸಮಸ್ಯೆಯಲ್ಲ. ಸಮಸ್ಯೆಯನ್ನು ನಿಧಾನವಾಗಿ ಬಗೆಹರಿಸಲು ಯತ್ನಿಸಿ. ಕಚೇರಿಯಲ್ಲಿ ಆತ್ಮವಿಶ್ವಾಸವೇ ನಿಮಗೆ ಭೋಷಣವಾಗಿರಲಿ.