ಫನಿ ಚಂಡಮಾರುತಕ್ಕೆ ಹೆಸರಿಟ್ಟೋರ‍್ಯಾರು?

Published : May 02, 2019, 03:33 PM IST
ಫನಿ ಚಂಡಮಾರುತಕ್ಕೆ ಹೆಸರಿಟ್ಟೋರ‍್ಯಾರು?

ಸಾರಾಂಶ

 ಒಂದೊಂದು ಚಂಡಮಾರುತಕ್ಕೆ ಒಂದೊಂದು ವಿಚಿತ್ರ, ಫನ್ನಿ ಹೆಸರುಗಳಿರುತ್ತವೆ. ಇವಗಳಿಗೆ ಹೆಸರಡಲೂ ಒಂದು ಪ್ರಕ್ರಿಯೆ ಇರುತ್ತದೆ. ಅಷ್ಟಕ್ಕೂ ಈಗ ಬೀಸುತ್ತಿರುವ ಫನಿಗೆ ಈ ಹೆಸರು ಬರಲು ಯಾರು ಕಾರಣ?

ಒಡಿಶಾ, ತಮಿಳುನಾಡು, ಆಂಧ್ರಪ್ರದೇಶಗಳಲ್ಲಿ ಫನಿ ಚಂಡಮಾರುತ ಚಂಡಿ ಹಿಡಿವ ಎಚ್ಚರಿಕೆಯನ್ನು ಹವಾಮಾನ ಮುನ್ಸೂಚನಾ ಇಲಾಖೆ ನೀಡಿದೆ. ಅದನ್ನು ಎದುರಿಸುವ ಸಕಲ ಸಿದ್ಧತೆಗಳೂ ನಡೆದಿವೆ. ಅವೆಲ್ಲ ಒತ್ತಟ್ಟಿಗಿರಲಿ, ಈ ಚಂಡಮಾರುತ್ತಕ್ಕೆ ಫನಿ ಎಂದು ಹೆಸರಿಟ್ಟೋರ್ಯಾರು ಗೊತ್ತಾ?

ಪಕ್ಕದ ಬಾಂಗ್ಲಾ ದೇಶ

ಏನಪ್ಪಾ ಇವರು, ನಾವಿಲ್ಲಿ ಹವಾಮಾನ ವಿಕೋಪದಿಂದ ಪಡಿಪಾಟಲು ಪಡುತ್ತಿದ್ರೆ ಜವಾಬ್ದಾರಿಯುತ ನೆರೆದೇಶವಾಗುವುದು ಬಿಟ್ಟು ನಾಮಕರಣ ಮಾಡುತ್ತಾ ಕೂತಿದ್ದಾರಾ ಅಂತ ನಿಮಗನಿಸಬಹುದು. ಆದ್ರೆ ವಿಷಯ ಹಾಗಲ್ಲ. ಚಂಡಮಾರುತಗಳಿಗೆ ಹೆಸರಿಡಲು ಒಂದು ಪ್ರಕ್ರಿಯೆ ಇದೆ. ಪ್ರತಿ ವರ್ಷ ದೇಶಗಳು ಮುಂದೆ ಬರಬಹುದಾದ ಚಂಡಮಾರುತಕ್ಕೆ ಇಡಬಹುದಾದ ಒಂದಿಷ್ಟು ಹೆಸರುಗಳ ಪಟ್ಟಿ ಮಾಡಿ ವಿಶ್ವ ಹವಾಮಾನ ಇಲಾಖೆಗೆ ಕಳುಹಿಸಿಕೊಡಬೇಕು. ಆ ಪ್ರದೇಶಕ್ಕೆ ಹೊಂದುವಂತೆ ಇದರಲ್ಲಿ ಒಂದು ಹೆಸರನ್ನು ಆಯ್ಕೆ ಮಾಡಲಾಗುತ್ತದೆ. 

ಬಂಗಾಳ ಕೊಲ್ಲಿಯಲ್ಲಿ ಏಳುವ ಚಂಡಮಾರುತಗಳಿಗೆ ಭಾರತ, ಶ್ರೀಲಂಕಾ, ಬಾಂಗ್ಲಾದೇಶ, ಮಾಲ್ಡೀವ್ಸ್, ಮ್ಯಾನ್ಮಾರ್, ಓಮನ್, ಪಾಕಿಸ್ತಾನ ಹಾಗೂ ಥೈಲ್ಯಾಂಡ್‌ ದೇಶಗಳು ತಲಾ 8 ಹೆಸರಂತೆ ಪ್ರಾದೇಶಿಕ ಸೈಕ್ಲೋನ್ ಸಮಿತಿಗೆ ನೀಡಿದ ಒಟ್ಟು 64 ಹೆಸರುಗಳು ಪಟ್ಟಿಯಲ್ಲಿವೆ. 

ಇದರಲ್ಲಿ ಫನಿ(ಫೋನಿ) ಎಂಬ ಹೆಸರು ಬಾಂಗ್ಲಾದೇಶ ನೀಡಿದ್ದಾಗಿದ್ದು, ಅದರರ್ಥ ಹಾವಿನ ಹೆಡೆ ಎಂದಾಗಿದೆ. ಕಳೆದ ವರ್ಷ ಆಂಧ್ರಪ್ರದೇಶಕ್ಕೆ ಅಪ್ಪಳಿಸಿದ ತಿತ್ಲಿ ಚಂಡಮಾರುತಕ್ಕೆ ಪಾಕಿಸ್ತಾನ ನೀಡಿದ ಹೆಸರು ಬಳಸಿಕೊಳ್ಳಲಾಗಿತ್ತು. ಇನ್ನು ಅಗ್ನಿ, ಆಕಾಶ್, ಬಿಜ್ಲಿ, ಜಲ್, ಲೆಹರ್, ಮೇಘ್, ಸಾಗರ್ ಹಾಗೂ ವಾಯು ಈ ಪಟ್ಟಿಗೆ ಭಾರತ ನೀಡಿರುವ ಹೆಸರುಗಳು. 

ಹಾಗಿದ್ದರೆ ಈ ದೇಶಗಳು ಹೆಸರನ್ನು ಆಯ್ಕೆ ಮಾಡುವುದಾದರೂ ಹೇಗೆ?

ಆಯಾ ಪ್ರದೇಶದ ಜನರಿಗೆ ಸುಲಭವಾಗಿ ಅರ್ಥವಾಗುವಂಥ, ಮುಂದೆ ನೆನಪಿಟ್ಟುಕೊಳ್ಳಬಹುದಾದ ಪದಗಳನ್ನೇ ದೇಶಗಳು ಹೆಸರುಗಳಾಗಿ ನೀಡುತ್ತವೆ. ಜೊತೆಗೆ ಲಾಂಗಿಟ್ಯೂಡ್, ಲ್ಯಾಟಿಟ್ಯೂಡಿನಂಥ ಮಾಹಿತಿಗಳಿಂದ ಚಂಡಮಾರುತ ಗುರುತಿಸುವುದಕ್ಕಿಂತ ಹೆಸರಿದ್ದರೆ ಸಮಿತಿಗೂ, ಮೀಡಿಯಾಗಳಿಗೂ ಅದನ್ನು ಗುರುತಿಸುವುದು, ವರದಿ ಮಾಡುವುದು ಸುಲಭವಲ್ಲವೇ?

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮೋದಿ ಅವರೇ ನನ್ನ ಗಂಡ ವಿಕ್ರಂನನ್ನು ಪಾಕಿಸ್ತಾನಕ್ಕೆ ಕಳುಹಿಸಿ: ಪಾಕ್ ಮಹಿಳೆಯ ಮನವಿ
ರಾತ್ರಿ ವೇಳೆ ಅಪ್ಪಿತಪ್ಪಿಯೂ ತಿನ್ನಬಾರದ ಹಣ್ಣುಗಳು ಇವು: ತಜ್ಞರು ಹೇಳೋದೇನು?