ವಿವಾಹ (Wedding), ಜೀವನ (Life)ದ ಮಹತ್ವದ ಘಟ್ಟ. ಪ್ರತಿಯೊಬ್ಬರೂ ಮದುವೆ ದಿನ ಸದಾ ನೆನಪಿರಲೆಂದು ಅದಕ್ಕೆ ಪ್ರಯತ್ನ ಮಾಡ್ತಾರೆ. ಮದುವೆಯನ್ನು ಸ್ಮರಣೀಯವಾಗಿಸಲು ಲಕ್ಷಾಂತರ ರೂಪಾಯಿ ಖರ್ಚು ಮಾಡ್ತಾರೆ. ಸಾಲ ಮಾಡಿ ಬಟ್ಟೆ ಖರೀದಿ ಮಾಡುವವರಿದ್ದಾರೆ. ಸಂಬಂಧಿಕರ,ಸ್ನೇಹಿತರನ್ನು ಕರೆದು ಅದ್ಧೂರಿಯಾಗಿ ಮದುವೆಯಾಗ್ತಾರೆ. ಭಾರತದ ಮದುವೆಯಲ್ಲಿ ವಿಭಿನ್ನತೆಯಿದೆ. ಒಂದೊಂದು ಪ್ರದೇಶ,ಜನಾಂಗ,ಕುಟುಂಬದಲ್ಲಿ ವಿವಾಹ ಪದ್ಧತಿಗಳು ಭಿನ್ನವಾಗಿವೆ. ಮದುವೆಗೆ ಎಲ್ಲರೂ ದುಬಾರಿ ಡ್ರೆಸ್ ಖರೀದಿ ಮಾಡಿದ್ರೆ ಭಾರತದ ಈ ಪ್ರದೇಶದಲ್ಲಿ ವರ ಬರೀ ಬನಿಯನ್ ಧರಿಸಬೇಕು. ಹಾಗೆ ಬರಿಗಾಲಿನಲ್ಲಿ ವಧುವನ್ನು ಕರೆದುಕೊಂಡು ಹೋಗಬೇಕು. ಕೇವಲ ಒಂದು ಮನೆಯಲ್ಲಿ ಮದುವೆ ನಡೆಯುವುದಿಲ್ಲ. ವಯಸ್ಸಿಗೆ ಬಂದ ಎಲ್ಲ ಮಕ್ಕಳ ಮದುವೆ ಒಂದೇ ದಿನ ನಡೆಯುತ್ತದೆ. ಅದಕ್ಕೆ ಮದುವೆಗಳ ಒಲಿಂಪಿಕ್ಸ್ ಎಂದು ಕರೆಯಲಾಗುತ್ತದೆ. ಇಂದು ಮದುವೆ ಒಲಿಂಪಿಕ್ಸ್ (Wedding Olympic) ಎಲ್ಲಿ ನಡೆಯುತ್ತದೆ ಎಂಬುದನ್ನು ಹೇಳ್ತೇವೆ.
ಎಲ್ಲಿ ನಡೆಯುತ್ತೆ ಮದುವೆ ಒಲಿಂಪಿಕ್ಸ್? : ಎಲ್ಲರಿಗೂ ಒಲಿಂಪಿಕ್ಸ್ ಗೊತ್ತು. ಆಟಕ್ಕೆ ಮಾತ್ರ ಒಲಿಂಪಿಕ್ಸ್ ಹೆಸರು ಸೀಮಿತವಲ್ಲ. ಮದುವೆಯ ಒಲಿಂಪಿಕ್ಸ್ ಕೂಡ ಇದೆ. ಯಸ್,ರಾಜಸ್ಥಾನದ ಬಿಕಾನೇರ್ ನಗರದ ಪುಷ್ಕರ್ಣ ಸಮಾಜದಲ್ಲಿ ಮದುವೆ ಒಲಿಂಪಿಕ್ಸ್ ನಡೆಯುತ್ತದೆ.
ಒಂದಲ್ಲ ಎರಡಲ್ಲ 300 ಕ್ಕೂ ಹೆಚ್ಚು ಮನೆಗಳಲ್ಲಿ ಏಕಕಾಲದಲ್ಲಿ ಮದುವೆ ಮಂಗಳ ವಾದ್ಯವನ್ನು ನೀವು ಕೇಳಬಹುದು. ಈ ಸಂಪ್ರದಾಯ ಸುಮಾರು 450 ವರ್ಷಗಳಷ್ಟು ಹಳೆಯದು ಎಂಬುದು ಮತ್ತೊಂದು ವಿಶೇಷ.
ನೂರಾರು ವರ್ಷಗಳ ಹಿಂದಿನ ಈ ಸಂಪ್ರದಾಯವನ್ನು ಬಿಕಾನೇರ್‌ನಲ್ಲಿ ಮಾತ್ರ ಆಚರಿಸಲಾಗುತ್ತದೆ. ಪುಷ್ಕರ್ಣ ಸಮಾಜವು ಒಂದೇ ದಿನಾಂಕದಂದು ಮದುವೆಗೆ ಅರ್ಹರಾದ ತಮ್ಮ ಮಕ್ಕಳಿಗೆ ಮದುವೆ ಮಾಡುತ್ತದೆ. ಇದರ ಹಿಂದೆ ಸಮಾಜದ ಉತ್ತಮ ಚಿಂತನೆ ಇದೆ. ಎಲ್ಲಾ ಮನೆಗಳಲ್ಲಿ ಮದುವೆಯಾದರೆ, ಯಾವುದೇ ಒಂದು ಮನೆಗೆ ಹೆಚ್ಚು ಅತಿಥಿಗಳು ಬರುವುದಿಲ್ಲ. ಒಂದೊಂದು ಮನೆಯಲ್ಲಿ ಮದುವೆ ನಡೆದರೆ ಮದುವೆಗೆ ಬರುವ ಸಂಬಂಧಿಕರ ಸಂಖ್ಯೆ ಹೆಚ್ಚಾಗುತ್ತದೆ. ಇದ್ರಿಂದ ವಧುವಿನ ತಂದೆಗೆ ಖರ್ಚು ಹೆಚ್ಚಾಗುತ್ತದೆ. ಅವರ ಖರ್ಚು ಕಡಿಮೆ ಮಾಡಲು ಒಂದೇ ದಿನ ಎಲ್ಲ ಮದುವೆ ಮಾಡಲಾಗುತ್ತದೆ. ಪುರೋಹಿತರು ಒಂದು ದಿನವನ್ನು ಫಿಕ್ಸ್ ಮಾಡ್ತಾರೆ. ಗಂಡು-ಹೆಣ್ಣಿನ ಜಾತಕ ನೋಡಿ ಮದುವೆ ದಿನಾಂಕ ಫಿಕ್ಸ್ ಆಗುವುದಿಲ್ಲ.
ಮದುವೆ ಒಲಿಂಪಿಕ್ಸ್ ಗೆ ಸಜ್ಜಾಗುವ ನಗರ : ಇಡೀ ನಗರವೇ ಮದುವೆಗೆ ಸಜ್ಜಾಗುತ್ತದೆ. ಅಲ್ಲಿನ ಎಲ್ಲ ಪಂಡಿತರೂ ಅಂದು ಬ್ಯುಸಿಯಾಗಿರ್ತಾರೆ. ಒಬ್ಬ ಪಂಡಿತ 5-10 ಮದುವೆಗಳನ್ನು ಮಾಡುತ್ತಾರೆ. ಎಲ್ಲ ಮದುವೆ ಮಂಟಪಗಳು ತುಂಬಿರುತ್ತವೆ.
ಫಟಾಫಟ್ ನಡೆಯುತ್ತೆ ಕೆಲ ಮದುವೆ : ಅನೇಕ ವಧು-ವರರು ಮದುವೆ ಮೊದಲು ಮುಖವನ್ನೇ ನೋಡಿರುವುದಿಲ್ಲವಂತೆ. ಫಟಾ ಫಟ್ ಅಂತಾ ಸಂಬಂಧ ಫಿಕ್ಸ್ ಮಾಡಿ ಮದುವೆ ಮಾಡಲಾಗುತ್ತದೆಯಂತೆ. ಇದಕ್ಕೆ ಲವ್ ಕುಮಾರ್ ಉತ್ತಮ ನಿದರ್ಶನ. ಮಾರುಕಟ್ಟೆಯಲ್ಲಿದ್ದ ಕುಮಾರ್ ಗೆ ತಂದೆಯಿಂದ ಕರೆ ಬಂದಿದೆ. ನಾಳೆ ಮದುವೆ,ಬೇಗ ಬಾ ಎಂದಿದ್ದಾರೆ. ವಧುವನ್ನೇ ನೋಡದ ಕುಮಾರ್ ಮದುವೆಗೆ ಸಿದ್ಧನಾಗಿದ್ದಾನೆ.
Shower Secrets: ಸ್ನಾನಕ್ಕೆ ತಣ್ಣೀರು ಒಳ್ಳೆಯದಾ ? ಬಿಸಿ ನೀರಾ ?
ವರ ವಿಷ್ಣುವಾದ್ರೆ ವಧು ಲಕ್ಷ್ಮಿ : ಪುಷ್ಕರನ್ ಸಮಾಜದ ಈ ಸಂಪ್ರದಾಯದಲ್ಲಿ, ವರನನ್ನು ವಿಷ್ಣುವಿನ ರೂಪವೆಂದು ಮತ್ತು ವಧುವನ್ನು ಲಕ್ಷ್ಮಿ ಎಂದು ಪರಿಗಣಿಸಲಾಗುತ್ತದೆ. ಇಲ್ಲಿ ಮದುವೆಗಳಲ್ಲಿ ಮಂಗಳ ವಾದ್ಯದ ಬದಲು ಶಂಖವನ್ನು ಊದಲಾಗುತ್ತದೆ. ದೇಶಾದ್ಯಂತ ಜನರು ಈ ಮದುವೆ ನೋಡಲು ಬಿಕಾನೇರ್‌ಗೆ ಬರುತ್ತಾರೆ.
ವಧು ಮತ್ತು ವರ ಓಟ, ಬಹುಮಾನ : ಇದರಲ್ಲಿ ವಧು-ವರರ ಓಟವೂ ನಡೆಯುತ್ತದೆ. ವಧುವನ್ನು ನಗರದ ಅನೇಕ ಪ್ರದೇಶಗಳಲ್ಲಿ ನಿಲ್ಲಿಸಿ ಬಹುಮಾನ ನೀಡಲಾಗುತ್ತದೆ. ಅದೇ ರೀತಿ, ಮದುವೆಯ ದಿನದಂದು ಮೊದಲು ಮೆರವಣಿಗೆಯೊಂದಿಗೆ ಚೌಕದಿಂದ ಹೊರಡುವ ವರನಿಗೂ ಬಹುಮಾನ ನೀಡಲಾಗುತ್ತದೆ. ನಗರದ ಸಂಸ್ಕೃತಿಯನ್ನು ಕಾಪಾಡಿಕೊಳ್ಳಲು ಇದೆಲ್ಲವನ್ನೂ ಮಾಡಲಾಗುತ್ತದೆ.
Kids Food: ಮಕ್ಳು ಏನ್ ಕೊಟ್ರೂ ತಿನ್ತಾನೆ ಇಲ್ವಾ ? ಈ ಟ್ರಿಕ್ಸ್ ಯೂಸ್ ಮಾಡಿ
ವರದಕ್ಷಿಣೆ ಇಲ್ಲಿಲ್ಲ : ಮದುವೆಗಳಲ್ಲಿ ಯಾವುದೇ ವರದಕ್ಷಿಣೆ ವ್ಯವಹಾರವಿಲ್ಲ. ಹಾಗೆಯೇ ಈ ಮದುವೆಗಳಿಗೆ ಸರ್ಕಾರ ನೆರವು ನೀಡುತ್ತದೆ. ರಾಜ್ಯ ಸರ್ಕಾರ ಈ ಮದುವೆಗಳಿಗೆ ಅನುದಾನ ನೀಡುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.