ಮಂಜು ಮುಸುಕಿದ ಊರಿನ ನೆನಪು; ತುಮರಿಯಲ್ಲೊಂದು ವೀಕೆಂಡು!

By Web DeskFirst Published Oct 6, 2019, 11:01 AM IST
Highlights

ಹಾಲ್ಕೆರೆ ಮಂಜುನಾಥ್ ಭಟ್ಟರ ನೆನಪಿನಲ್ಲಿ ಅಭಿವ್ಯಕ್ತಿ ಬಳಗ ಆಯೋಜಿಸುವ  ಸಂಸ್ಕೃತಿ ಉತ್ಸವದಲ್ಲಿ ಭಾಗವಹಿಸಲು ತುಮರಿಗೆ ಹೋಗಿದ್ದ ಕತೆಗಾರನ ಅನುಭವ ಕಥನ. 

ಪ್ರತಿಯೊಂದು ಊರಲ್ಲೂ ಅಲ್ಲಿಂದ ತಪ್ಪಿಸಿಕೊಂಡು ಹೋಗೋಕೆ ಒಂದು ಒಳದಾರಿ ಇರಲೇಬೇಕು, ಇಲ್ಲದಿದ್ದರೆ ಯಾರೋ ನಮ್ಮನ್ನು ಬಂಧಿಸಿಟ್ಟ ಹಾಗನಿಸಿ ಬದುಕು ದುಸ್ತರವೆನಿಸೋಕೆ ಶುರುವಾಗುತ್ತದೆ. ಅಂತಹದ್ದೊಂದು ಹೊರದಾರಿಯಿದ್ದಾಗ ಯಾವ ಊರಲ್ಲಾದರೂ ನೆಮ್ಮದಿಯಿಂದ ಇರಬಹುದು, ಇದಕ್ಕೆ ಬೆಂಗಳೂರು ಹೊರತಲ್ಲ.

ಪ್ರತಿ ವೀಕೆಂಡು ಈ ನಗರದ ಏಕತಾನತೆ ಬೇಸರವೆನಿಸಿ ಒಂದಷ್ಟು ರೀಚಾರ್ಜ್ ಆಗೋಕೆ ಎತ್ತಲಾದರೂ ಹೋಗೋಣ ಅಂತ ಇಲ್ಲಿರುವ ಎಲ್ಲರಿಗೂ ಅನ್ನಿಸುತ್ತಲೇ ಇರುತ್ತದೆ. ಹೋದ ವಾರಾಂತ್ಯ ಹಾಗೇ ನಾವೊಂದಿಷ್ಟುಗೆಳೆಯರು ಟೆಂಟೆತ್ತಿಕೊಂಡು ಹೊರಟಿದ್ದು ತುಮರಿಯೆಂಬ ಶರಾವತಿಯ ಹಿನ್ನೀರಿನ ನೆರಳಲ್ಲಿ ಬೆಚ್ಚಗೆ ಬಚ್ಚಿಟ್ಟುಕೊಂಡಿರುವ ಒಂದೈವತ್ತು ಮನೆಗಳಿರುವ ಒಂದು ಸಣ್ಣ ಊರಿಗೆ.

ಅಲ್ಲಿಗೆ ತಲುಪಲು ಮೊದಲು ಸಾಗರದ ಮೂಲಕ ರಸ್ತೆ ಮಾರ್ಗ ಹಿಡಿದು ಮಧ್ಯದಲ್ಲಿ ಇಳಿದರೆ, ಲಾಂಜ್‌ ಒಂದು ನಮ್ಮನ್ನೂ, ನಮ್ಮನ್ನು ಹೊತ್ತುಕೊಂಡು ಬಂದ ಗಾಡಿಯನ್ನ ಒಟ್ಟಿಗೆ ಎತ್ತಿಕೊಂಡು ಹಿನ್ನೀರಿನ ಮನಮೋಹಕವಾದ ಜಲಮಾರ್ಗದಲ್ಲಿ ಇನ್ನೊಂದು ದಡಕ್ಕೆ ತಲುಪಿಸುತ್ತದೆ.

ಅಲ್ಲಿಂದ ಆಚೆಗೆ ಒಂದರ್ಧ ಗಂಟೆ ಪ್ರಯಾಣಿಸಿದರೆ ಸಿಗುವುದೇ ತುಮರಿ. ಸುತ್ತಲೂ ನೀರು, ಅಲ್ಲಲ್ಲಿ ಕಾಡಿನ ದ್ವೀಪಗಳು, ದಿಗಂತಕ್ಕೆ ತಾಗಿ ನಿಂತಂತಿರುವ, ಹಸಿರು ಸ್ವೆಟರನ್ನ ಹೊದ್ದಂತಿರುವ ಬೆಟ್ಟಗುಡ್ಡಗಳು..ಹೊರಗಿನಿಂದ ಹೋಗುವ ನಮ್ಮಂತವರಿಗೆ ಹಿನ್ನೀರಿನ ಪರಿಸರ ರಮ್ಯವಾಗಿ ಕಾಣುತ್ತದೆ. ಆದರೆ ಆ ಕೃತಕ ಸೌಂದರ್ಯದ ಹಿಂದೆ ಮುಳುಗಡೆಯಾದ ಅದೆಷ್ಟೋ ಕುಟುಂಬಗಳ ನೋವಿನ ಕತೆಗಳಿರುತ್ತವೆ.

ಬಳ್ಳಾರಿಯ ಬಿಸಿಲು ನಿರೋಧಕ ಬ್ರಿಟಿಷ್ ಕಟ್ಟಡಗಳು ಈಗ ಪ್ರೇಕ್ಷಣೀಯ ತಾಣಗಳು!

ಸಕಲೇಶಪುರವನ್ನ ನೆನಪಿಸುವ ಉದ್ದುದ್ದ ಬಯಲಿನ ಸಾಲುಗಳು, ತೀರ್ಥಹಳ್ಳಿಯನ್ನ ನೆನಪಿಸುವ ಹಸಿರು ಜೊತೆಗೆ ಬಯಲುಸೀಮೆಯಲ್ಲಿ ಇದ್ದೆವೇನೋ ಎನ್ನುವಂತ ಚುಚ್ಚುವ ಬಿಸಿಲು. ಕೊನೆವರೆಗೋ ತುಮರಿ ಮಲೆನಾಡೋ ಅರೆ ಮಲೆನಾಡೋ ಅಥವಾ ಬಯಲುಸೀಮೆಯೋ ಗೊತ್ತಾಗಲಿಲ್ಲ.

ನಾವಲ್ಲಿಗೆ ಹೋಗಿದ್ದು ಹಾಲ್ಕೆರೆ ಮಂಜುನಾಥ ಭಟ್ಟರ ನೆನಪಿನಲ್ಲಿ ಹಾಲ್ಕೆರೆ ರಾಘವೇಂದ್ರ ಕುಟುಂಬ ಮತ್ತು ಅಭಿವ್ಯಕ್ತಿ ಬಳಗ ಪ್ರತಿವರ್ಷ ನಡೆಸಿಕೊಂಡು ಬರುತ್ತಿರುವ ಸಾಂಸ್ಕೃತಿಕ ಉತ್ಸವದಲ್ಲಿ ಭಾಗವಹಿಸಲು. ಮಂಜುನಾಥ ಭಟ್ಟರು ಎಂಬತ್ತರ ದಶಕದಲ್ಲೇ ‘ಅಭಿವ್ಯಕ್ತಿ ಬಳಗ’ ಎಂಬ ಸಂಸ್ಥೆಯನ್ನ ಕಟ್ಟಿಅದರ ಮೂಲಕ ತಮ್ಮೂರಿನ ಕಲಾಸ್ತಕರನ್ನ ಸೇರಿಸಿಕೊಂಡು ರಂಗಭೂಮಿ ಮತ್ತು ಸಾಹಿತ್ಯಕ ಚಟುವಟಿಕೆಗಳನ್ನ ತುಮರಿಯಂತಹ ಸಣ್ಣ ಊರಿನಲ್ಲಿ ನಡೆಸುತ್ತಿದ್ದರು. ಈಗ ಅವರ ನೆನಪಿನಲ್ಲಿ ಆ ಇಡೀ ಊರು ಸೇರಿಕೊಂಡು ರಾಜ್ಯದ ಎಲ್ಲಾ ಭಾಗಗಳಿಂದ ಕವಿಗಳನ್ನ ಕತೆಗಾರರನ್ನ ಮತ್ತು ನಾಟಕ ತಂಡಗಳನ್ನ ಕರೆಸಿಕೊಂಡು, ಅವರ ಕಲಾಭಿವ್ಯಕ್ತಿ ಅವಕಾಶ ಕೊಟ್ಟು ಮೂರುದಿನಗಳ ಕಾಲ ತುಮರಿ ರಂಗಭೂಮಿ ಮತ್ತು ಸಾಹಿತ್ಯ ಸಂಭ್ರಮದಲ್ಲಿ ಮುಳುಗಿ ಹೋಗುತ್ತದೆ.

ಎಲ್ಲಾ ಹಳ್ಳಿಗಳ ಹಾಗೆ ತುಮರಿಯಲ್ಲೂ ತರುಣ ತರುಣಿಯರು ಯಾರೂ ಕಾಣಿಸಲಿಲ್ಲ. ಇಡೀ ಊರು ಮಧ್ಯವಯಸ್ಕರಿಂದ ತುಂಬಿ ಹೋಗಿತ್ತು. ‘ಈ ಊರಿನ ಯೌವ್ವನ ಮುಗಿದಿದೆಯಲ್ವಾ..’ ಅಂತ ಜೊತೆಗಿದ್ದ ಸ್ನೇಹಿತರಿಗೆ ಹೇಳಿದ್ದಕ್ಕೆ ‘ಮತ್ತೆ ನಮ್ಮೆಲ್ಲರ ಊರಿನದ್ದು ಅದೇ ಕತೆಯಲ್ಲವಾ..’ ಅಂದರು. ಹೇಳುವುದಕ್ಕೆ ಏನೂ ಉಳಿದಿರಲಿಲ್ಲ.

ಊರಿನ ಮಧ್ಯೆ ತುಕ್ಕು ಹಿಡಿದು ಎಲ್ಲಿಗೋ ಹೋಗದೆ ಗಮ್ಯವನ್ನೆ ದಿಟ್ಟಿಸುತ್ತಾ ನಿಂತಲ್ಲೆ ನಿಂತಿದ್ದ ಬಸ್ಸೊಂದು ಮಲೆನಾಡಿನ ಹಳ್ಳಿಗಳನ್ನೆಲ್ಲಾ ಪ್ರತಿನಿಧಿಸುವ ರೂಪಕದಂತಿತ್ತು. ಕವಿಗೋಷ್ಠಿಯೊಂದನ್ನ ಮುಗಿಸಿ ಕವಿಗಳು ಕಟ್ಟಿಕೊಟ್ಟ ಪ್ರತಿಮೆಗಳನ್ನೆಲ್ಲಾ ಗುನುಗುತ್ತಾ ಅಲ್ಲೆ ಪಕ್ಕದಲ್ಲಿದ್ದ ಗೂಡಂಗಡಿಯೊಂದಕ್ಕೆ ಟೀ ಕುಡಿಯಲು ಹೋದೆವು. ಐದು ನಿಮಿಷದಲ್ಲಿ ಅಂಗಡಿಯಲ್ಲಿ ವ್ಯಾಪಾರ ಮಾಡುತ್ತಿದ್ದ ಮಹಿಳೆ ಇಡೀ ಊರಿನ ಜಿಯೋಗ್ರಫಿಯನ್ನೆ ನಮ್ಮ ಮುಂದೆ ತೆರೆದಿಟ್ಟರು. ಯಾವ ದಿಕ್ಕಿಗೆ ಅಡಿಕೆ ತೋಟವಿದೆ, ಎಲ್ಲಿ ಹೋದರೆ ಗದ್ದೆ ಬಯಲು ಸಿಕ್ಕುತ್ತದೆ ಅಂತ ಸವಿಸ್ತಾರವಾಗಿ ಹೇಳಿದ ಆಕೆ ನನ್ನನ್ನು ನೋಡಿ ‘ನಿಮ್ಮದು ಯಾವ ಊರು..?’ ಅಂತ ಕೇಳಿದರು.

ಮೈಸೂರು ದಸರಾ ಎಷ್ಟೊಂದು ಸುಂದರ! ಇವುಗಳನ್ನು ನೋಡೋದು ಮಿಸ್ ಮಾಡ್ಲೇಬೇಡಿ!

ಟೀಯ ಕೊನೆಯ ಸಿಪ್ಪನ್ನು ಮುಗಿಸಿ ‘ತೀರ್ಥಹಳ್ಳಿ’ ಅಂದೆ. ‘ಅಯ್ಯೋ ಅಲ್ಲೆ ನನ್ನ ತವರುಮನೆ ಇರೋದು..’ ಅಂದರು. ಸಂತಸವೋ ಸಂಕಟವೋ ಆಕೆಯ ಗಂಟಲು ಕಟ್ಟಿಕೊಂಡಿತ್ತು, ನಾನಾಕೆಗೆ ಭಾಗ್ಯದ ಬಳೆಗಾರ ಹಾಡಲ್ಲಿ ಬರುವ ಬಳೆಗಾರನ ಹಾಗೆ ಕಂಡಿರಬಹುದು. ಹಗಲೆಲ್ಲಾ ತಮ್ಮ ತಮ್ಮ ಕೆಲಸಗಳಲ್ಲಿ ಮುಳುಗಿ ಹೋಗಿದ್ದ ಊರು ಸಂಜೆಯಾಗುತ್ತಿದ್ದಂತೆ ರಂಗಮಂದಿರದಲ್ಲಿ ಜಮೆಯಾಗಿತ್ತು.

ಪಕ್ಕದಲ್ಲಿ ಕೂತಿತ್ತ ಚಿಕ್ಕ ಪೋರನೊಬ್ಬ ಇಡೀ ಊರನ್ನ ಎಬ್ಬಿಸುವ ಹಾಗೆ ನಾಟಕ ಮಧ್ಯದಲ್ಲಿ ಶಿಳ್ಳೆ ಹೊಡೆಯುತ್ತಲೇ ಇದ್ದ. ದಿನಪೂರ್ತಿ ತಮ್ಮ ಕೆಲಸಗಳನ್ನ ಮಾಡಿಕೊಂಡು ಸಂಜೆ ಊರೆಲ್ಲಾ ಸೇರಿ ನಾಟಕ ನೋಡುತ್ತಾ ಒಂದಾಗುವ, ರಂಗದ ಮೇಲಿನ ಪಾತ್ರಗಳು ಒಂದೊಂದಾಗೇ ಜೀವ ತಳೆಯುತ್ತಿದ್ದಂತೆ ಇವರೆಲ್ಲಾ ತಮ್ಮ ಲೌಕಿಕವನ್ನ ಕೆಲಹೊತ್ತು ಮರೆತು ಆ ಪಾತ್ರಗಳ ಜೊತೆ ಕಳೆದುಹೋಗುವ ಆ ಸಂಗತಿ ನನ್ನಲ್ಲಂತೂ ರೋಮಾಂಚನ ಮೂಡಿಸಿತು.

ನಾಟಕ ನೋಡಿ ವಾಪಾಸು ಬರುವಾಗ ತುಮರಿ ನಿಧಾನಕ್ಕೆ ನಿದ್ರೆಗೆ ಜಾರುತ್ತಿತ್ತು. ನಮಗೆ ಮೀನೊಂದನ್ನ ತಿನ್ನುವ ಆಸೆಯಾಗಿ ಆ ಅಪರಾತ್ರಿ ಊರನ್ನ ಮೇಲಿಂದ ಕೆಳಗೊಮ್ಮೆ ಸುತ್ತು ಹಾಕಿದೆವು. ಅಲ್ಲೊಬ್ಬ ತರಕಾರಿ ಮಾರ್ಕೆಟ್ಟಲ್ಲಿ ಮೀನು ಮಾರುವವನಂತೆ ಬರೀ ಸಸ್ಯಹಾರಿಗಳೇ ಹೆಚ್ಚಾಗಿರುವ ಊರಲ್ಲಿ ಸಣ್ಣದೊಂದು ಬಲ್ಬು ಉರಿಸುತ್ತಾ ಅಂಗಡಿ ತೆರೆದುಕೊಂಡಿದ್ದ. ನಮ್ಮನ್ನು ನೋಡಿ ಪರಮಾನಂದಗೊಂಡು ಮೀನಿನ ಫ್ರೈ ಮಾಡಿಕೊಟ್ಟು ಊರಿನ ಸಮಾಚಾರವನ್ನ ಮತ್ತೆ ಮೊದಲಿಂದ ಹೇಳಿದ.

ನಾವು ಮುಳ್ಳನ್ನ ಆಯ್ದುಕೊಳ್ಳುತ್ತಾ ತುಮರಿಯ ಸಮಾಚಾರವನ್ನ ಆತನ ಕಡೆಯಿಂದ ಹೊಸದಾಗಿ ಕೇಳಿಕೊಂಡೆವು. ಬೆಳಿಗ್ಗೆ ಎದ್ದು ನಾವೆಲ್ಲ ಬರೆದ ಕತೆಗಳನ್ನ ಓದಿದೆವು. ಆದರೆ ಸುಳ್ಯದ ಸಣ್ಣ ಹುಡುಗನೊಬ್ಬ ಕತೆ ಓದಿದ ಪರಿ ನಮ್ಮೆಲ್ಲರ ಕೆನ್ನೆಗೆ ಬಾರಿಸಿದಂತಿತ್ತು. ತನಗೆ ಗೊತ್ತಿದ್ದ ಭಾಷೆಯಲ್ಲಿ ಕತೆಯನ್ನ ಆ ಹುಡುಗ ನಾಟಕದ ಹಾಗೆ ಪ್ರಸ್ತುತ ಪಡಿಸುತ್ತಿದ್ದರೆ ಇಡೀ ಸಭಾಂಗಣ ಅವನ ಮೋಡಿಗೆ ಸಿಲುಕಿತ್ತು.

ಹೀಗೆ ಎರಡು ದಿನಗಳ ಕಾಲ ಮಲೆನಾಡಿನ ಹಳ್ಳಿಯೊಂದು ದೂರದಲ್ಲಿ ಕೂತು ಯಾವ ಸರ್ಕಾರದ ಅನುದಾನಗಳಿಗೆಲ್ಲಾ ಕೈಚಾಚದೆ ತನ್ನ ಮಿತಿಯಲ್ಲಿ ಒಂದು ಸಾಂಸ್ಕೃತಿಕ ಉತ್ಸವವನ್ನ ಅಚ್ಚುಕಟ್ಟಾಗಿ ಮಾಡಿದ್ದು ಎಲ್ಲರಿಗೂ ಮಾದರಿಯಂತಿತ್ತು. ಕಾವ್ಯ ಓದುವವನೋ, ಕತೆ ಬರೆಯುವವನೋ, ಚಿತ್ರ ಬಿಡಿಸುವವನೋ.. ಸೃಜನಶೀಲ ಮನಸ್ಸಿನ ವ್ಯಕ್ತಿ ತನ್ನ ಕಲೆಯನ್ನ ನಿಜವಾಗಿ ಮೆಚ್ಚುವ, ನಿರ್ದಯವಾಗಿ ವಿಮರ್ಶಿಸುವ ಒಬ್ಬನೇ ಒಬ್ಬ ಪ್ರೇಕ್ಷಕನಿಗಾಗಿ ಹುಡುಕಾಡುತ್ತಿರುತ್ತಾನೆ. ತುಮರಿಯಲ್ಲಿ ಕಲೆಯನ್ನ ಮೆಚ್ಚುವ ಪೋಷಿಸುವ ಅಂತಹ ನೂರಾರು ಮನಸ್ಸುಗಳಿದ್ದವು. ನಾಳೆ ನಾನೊಂದು ಸಾಲು ಬರೆದರೆ ಯಾರು ಓದುತ್ತಾರೆ ಅಂತನ್ನುವ ವೈರಾಗ್ಯ ಇವತ್ತಿನ ಬಹುತೇಕ ಬರಹಗಾರರನ್ನ ಕಾಡುತ್ತಿದೆ. ತುಮರಿಯಲ್ಲಿದ್ದ ಸಾಂಸ್ಕೃತಿಕ ಪರಿಸರ ಆ ಜನರ ಕಲಾಭಿರುಚಿ ನೋಡಿ ನನಗೆ ಖಂಡಿತಾ ಆ ವೈರಾಗ್ಯದಿಂದ ಮುಕ್ತಿ ಸಿಕ್ಕಿದೆ.

ಕೋಟಿಗಟ್ಟಲೆ ಖರ್ಚು ಮಾಡಿ ಮಾಡುವ ಸಾಹಿತ್ಯ ಸಮ್ಮೇಳನಗಳಿಂತ, ಒಂದು ಸಣ್ಣ ಊರು ಜೊತೆಯಾಗಿ ಸೇರಿಕೊಂಡು ಮಾಡುವ ಈ ಉತ್ಸವಗಳು ಹೆಚ್ಚು ಅರ್ಥಪೂರ್ಣ ಅನಿಸುತ್ತೆ. ಅಲ್ಲಿ ಭಾಗವಹಿಸಲು ಅವಕಾಶ ಕೊಟ್ಟು ನಮ್ಮೆಲ್ಲರ ಕತೆಗಳನ್ನ ಕೇಳಿ ತಮ್ಮ ಕತೆಗಳನ್ನ ಹೇಳಿ ಹಲವು ನೆನಪುಗಳೊಡನೆ ಬೀಳ್ಕೊಟ್ಟತುಮರಿಗೂ, ಅಭಿವ್ಯಕ್ತಿ ಬಳಗಕ್ಕೂ ನನ್ನ ನಮಸ್ಕಾರಗಳು.

- ಸಚಿನ್ ತೀರ್ಥಹಳ್ಳಿ 

click me!