ಕೆಲವು ದಿನಗಳ ಹಿಂದೆ ದಕ್ಷಿಣಕನ್ನಡ ಜಿಲ್ಲೆಯ ಒಂದು ಹಳ್ಳಿಯಲ್ಲಿ ಕೊರಗಜ್ಜ ದೈವಕ್ಕೆ ಯುವಕರು ಅವಮಾನವಾಗುವಂಥ ಕೃತ್ಯ ಮಾಡಿದ್ದು, ಬಳಿಕ ಅವರಿಗೆ ಏನೆಲ್ಲ ಅನಾರೋಗ್ಯ ಬಾಧಿಸಿದ್ದು ಸುದ್ದಿಯಾಯ್ತು. ಅಷ್ಟಕ್ಕೂ ಈ ಆಧುನಿಕ ಯುಗದಲ್ಲೂ ಸದ್ದು ಮಾಡುತ್ತಿರುವ ಕೊರಗಜ್ಜನ ಹಿನ್ನೆಲೆ ಏನು? ತುಳುನಾಡಿನ ಜನ ಅಷ್ಟೊಂದು ಬರದ ನಾಡಿಗೆ ಭಕ್ತಿಯಿಂದ ಅಜ್ಜನನ್ನು ನೆನೆಯುವುದು ಯಾಕೆ?
ವಜ್ರ ಗುಜರನ್ ಮಾಡೂರು
ಕೊರಗಜ್ಜ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಜನಪ್ರಿಯ ದೈವ. ಬೆಲೆ ಬಾಳುವ ವಸ್ತು ಕಳೆದು ಹೋದರೆ, ಆರೋಗ್ಯ ಸಮಸ್ಯೆ ಬಂದರೆ ಮೊದಲು ಹರಕೆ ಹೊತ್ತುಕೊಳ್ಳುವುದು ಕೊರಗಜ್ಜನಿಗೆ. ಹಲವೆಡೆ ಹರಕೆ ಈಡೇರಿದ್ದೂ ಇದೆ. ಕೊರಗಜ್ಜನ ಮೂಲಸ್ಥಾನ ಮಂಗಳೂರು ಸಮೀಪದ ಕುತ್ತಾರು.
ಅನಾಥ ಮಗು ಕೊರಗ ತನಿಯನನ್ನು ಒಬ್ಬ ಸೇಂದಿ ಮಾರುವ ಹೆಂಗಸು ಸಾಕುತ್ತಾಳೆ. ಈತ ಮುಂದೆ ತನ್ನ ಅಸಾಮಾನ್ಯ ಕೆಲಸಗಳಿಂದ ಪ್ರಸಿದ್ಧನಾಗುತ್ತಾನೆ. ಹಣ್ಣು ಕೊಯ್ಯಲು ಹೋದವ ಅಲ್ಲಿಂದ ಮಾಯವಾಗುತ್ತಾನೆ ಎಂಬ ವಿವರ ತುಳುನಾಡಿನ ಜನಪದೀಯ ಹಾಡು ಪಾಡ್ದನದಲ್ಲಿ ಬರುತ್ತದೆ. ಈತ ಮುಂದೆ ತನ್ನ ನೆಲದ ಜನರನ್ನು ಕಾಯುವ ಭರವಸೆ ನೀಡಿದ. ಅದಕ್ಕೆ ಪ್ರತಿಯಾಗಿ ಇಲ್ಲಿನ ಜನರೂ ಏಳು ಕಲ್ಲುಗಳಲ್ಲಿ ಕೊರಗಜ್ಜನನ್ನು ಪೂಜಿಸತೊಡಗಿದರು ಎನ್ನಲಾಗಿದೆ.
ರಾತ್ರಿ ಹೊತ್ತು ಬೆಳಕು ಹಾಕುವಂತಿಲ್ಲ!
ಮಂಗಳೂರಿನ ಅಜ್ಜನ ಕಟ್ಟೆಯ ಬಳಿ ರಾತ್ರಿ ಹೊತ್ತಿನಲ್ಲಿ ವಾಹನ ಚಲಾಯಿಸುವಾಗ ವಾಹನದ ಹೆಡ್‌ಲೈಡ್ ಹಾಕುವಂತಿಲ್ಲ. ಇಲ್ಲಿ ಕೋಲ ನಡೆಯುವ ಸಂದರ್ಭದಲ್ಲಿ ಅಗರಬತ್ತಿಯ ಬೆಳಕು ಕೂಡ ಕಾಣಬಾರದು ಎಂಬ ನಿಯಮವಿದೆ. ಈ ಭಾಗದಲ್ಲಿ ರಾತ್ರಿ ಹೊತ್ತು ಸಂಚರಿಸುವ ವಾಹನಗಳು ಹೆಡ್‌ಲೈಟ್ ಒಮ್ಮೆ ಡಿಮ್ ಡಿಪ್ ಮಾಡಿ ಹೋಗುತ್ತಾರೆ. ಹಿಂದೆ ಒಂದಿಷ್ಟು ಜನ, ಸ್ಥಳೀಯರ ಮಾತನ್ನು ಅಲಕ್ಷಿಸಿ ಅಜ್ಜನ ಕಟ್ಟೆಯ ಬಳಿ ಗ್ಯಾಸ್‌ಲೈಟ್ ಹಿಡಿದು ಹೋದರು. ತಕ್ಷಣ ಗಾಸ್‌ಲೈಟ್‌ಗಳು
ಪುಡಿಯಾದವು. ಕೊರಗಜ್ಜನಿಗೆ ಶರಣು ಹೋಗುವವರೆಗೆ ಅವರಿಗೆ ತಲುಪಬೇಕಾದ ದಾರಿಯೇ ಸಿಗಲಿಲ್ಲ ಎಂಬುದನ್ನು 75ರ ಹರೆಯದ ಹಿರಿಯರು ಹೇಳುತ್ತಾರೆ. ರಾತ್ರಿ ಮಹಿಳೆಯರಿಗೆ ಪ್ರವೇಶ ಇಲ್ಲ ಅಜ್ಜನಿಗೆ ಹರಕೆಯ ರೂಪದಲ್ಲಿ ನೀಡುವ ಅಗೇಲು ಸೇವೆಯಲ್ಲಿ ಹುರುಳಿ ಹಾಗೂ ಬಸಳೆಯ ಸಾಂಬಾರು, ಮೀನು, ಕೋಳಿ, ಚಕ್ಕುಲಿ, ಸೇಂದಿ ಇತ್ಯಾದಿಗಳನ್ನು ಸೇವೆ ರೂಪದಲ್ಲಿ ನೀಡುತ್ತಾರೆ. ಮಂಗಳೂರಿನ ಕುತ್ತಾರು ಕೊರಗಜ್ಜನ ಕಟ್ಟೆಗೆ ಸಂಜೆ 7 ಗಂಟೆಯ ನಂತರ ಮಹಿಳೆಯರಿಗೆ ಪ್ರವೇಶವಿಲ್ಲ.
ಅವಮಾನಿಸಿದವರಿಗೆ ಶಿಕ್ಷೆ?
ಉಡುಪಿ ಜಿಲ್ಲೆಯ ಕಟುಪಾಡಿಯ ಬಬ್ಬುಸ್ವಾಮಿ ದೈವಸ್ಥಾನದಲ್ಲಿ ಕೊರಗಜ್ಜನ ಆರಾಧನೆಯೂ ನಡೆಯುತ್ತದೆ. ಇತ್ತೀಚೆಗೆ ಕೆಲವು ಯುವಕರು ಇಲ್ಲಿಯ ಕಾಣಿಕೆ ಹುಂಡಿಯ ಹಣ ಕದ್ದು ಮೂತ್ರ ವಿಸರ್ಜಿಸಿ, ಅದೇ ಹುಂಡಿಗೆ ಕಾಂಡೋಮ್ ಹಾಕಿದ್ದರು. ಈ ಘಟನೆ ನಡೆದು ಕೆಲವೇ ದಿನಗಳಲ್ಲಿ ಅವರಲ್ಲಿ ಒಬ್ಬನಿಗೆ ಕಿಡ್ನಿ ಸಂಬಂಧಿ ಕಾಯಿಲೆ ಬಾಧಿಸಿದರೆ ಮತ್ತೊಬ್ಬನಿಗೆ ಸೊಂಟದ ಕೆಳಗೆ, ಎರಡು ಕಾಲು ಬಲಹೀನವಾದವು. ತಜ್ಞರನ್ನು ಕಂಡು ಪರೀಕ್ಷಿಸಿದರೂ ಪ್ರಯೋಜನವಾಗದೇ ಜ್ಯೋತಿಷಿಯ ಬಳಿ ಕೇಳಿದಾಗ ಅಚ್ಚರಿಯೆಂಬಂತೆ ಮೇಲಿನ ವಿವರಗಳು ಬಯಲಾದವು. ಅವರು ಈ ಕ್ಷೇತ್ರಕ್ಕೆ ಕುಟುಂಬ ಸಮೇತರಾಗಿ ಬಂದು ಕೊರಗಜ್ಜನ ಮುಂದೆ ಕ್ಷಮೆ ಯಾಚಿಸಿದ್ದು ಸಾಮಾಜಿಕ ತಾಣಗಳಲ್ಲಿ ವೈರಲ್ ಆಯ್ತು. ಫೇಸ್‌ಬುಕ್‌ನಲ್ಲಿ ಕೊರಗಜ್ಜನನ್ನು ನಿಂದಿಸಿ ಬರೆದ ವಿಚಾರವಾದಿಯೊಬ್ಬರಿಗೂ ಸಮಸ್ಯೆ ತಲೆದೋರಿ ಅವರೂ ಕೊರಗಜ್ಜನಲ್ಲಿ ಕ್ಷಮೆ ಕೇಳಿದ್ದರು. ಇಂದಿಗೂ ಕೂಡ ಕುತ್ತಾರಿನಲ್ಲಿ ಕೋಲ ಹಾಗೂ ಹಗೆಲು ಸೇವೆಗಳನ್ನು ಕತ್ತಲಿನಲ್ಲಿಯೇ ಮಾಡಲಾಗುತ್ತದೆ. ಕೊರಗಜ್ಜ ಭೂತದ ಪಾತ್ರಿಯೂ ಅನೇಕ ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಶ್ರದ್ಧೆ ಭಕ್ತಿಯಿಂದ ನಂಬಿದವರಿಗೆ ಅಜ್ಜನ ಆರ್ಶಿವಾದ ಸದಾ ಇರುತ್ತದೆ.