ಇಲ್ಲಿ ಗಂಡಾಗಿ ಹುಟ್ಟಿ, ಹೆಣ್ಣಾಗಿ ಬೆಳೆಯುತ್ತಾರೆ

By Web Desk  |  First Published Sep 8, 2018, 12:16 PM IST

ಅಬ್ಬಾ ಗಂಡಿಗೆ 'ಬಳೆ ತೊಟ್ಟಿಕೋ, ಸೀರೆ ಉಟ್ಟಿಕೋ...' ಎಂದರೆ ಅಹಂಕಾರಕ್ಕೆ ಪೆಟ್ಟು ಬೀಳುತ್ತದೆ. ಆದರೆ, ಈ ದೇಶದಲ್ಲಿ ಗಂಡಾಗಿ ಹುಟ್ಟಿ ಹೆಣ್ಣಾಗಿ ಬೆಳೆಯುತ್ತಾರೆ, ಏನಿದು ಸಂಪ್ರದಾಯ?


ಇಲ್ಲಿಯವರು ಹೆಣ್ಣಾಗಿ ಹುಟ್ಟಿ ಗಂಡಾಗಿ ಬದುಕುತ್ತಾರೆ. ಗಂಡಾಗಿ ಹುಟ್ಟಿ ಹೆಣ್ಣಾಗುತ್ತಾರೆ. ಮದರ್ ಥೆರೇಸಾ ಹುಟ್ಟಿದ ಅಲ್ಬೇನಿಯಾ ದೇಶದಲ್ಲಿನ ಬುರ್ನೇಶಾ ಬುಡಕಟ್ಟಿನಲ್ಲಿ ಈ ಸಂಪ್ರದಾಯವಿದೆ...

ಯುರೋಪ್‌ನಲ್ಲಿ ರಿಪಬ್ಲಿಕ್ ಆಫ್ ಅಲ್ಬೇನಿಯಾ ಎಂಬ ದೇಶವಿದೆ. ಅಲ್ಲಿನ ಗುಡ್ಡುಗಾಡು ಪ್ರದೇಶದ ಜನಾಂಗದಲ್ಲಿ ಬುರ್ನೇಶಾ ಎಂಬ ವಿಶಿಷ್ಟ ಸಂಪ್ರದಾಯವಿದೆ. ಹಾಗೆಂದರೆ, ಅವನಾಗಿ ಹುಟ್ಟಿದವನು ಅವಳಾಗಿ ಬೆಳೆಯುವುದು! 

Tap to resize

Latest Videos

ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ ಒಂದು ಹೆಣ್ಣು ಗಂಡಾಗಿ ರೂಪಾಂತರಗೊಳ್ಳುವುದು. ಇದು ಲಿಂಗ ಪರಿವರ್ತನೆಯ ಕ್ರಮವಲ್ಲ. ಶಸ್ತ್ರಕ್ರಿಯೆಗೆ ಒಳಪಡಿಸಿ ಸ್ತ್ರೀ ಲಿಂಗವನ್ನು ಪುಲ್ಲಿಂಗವಾಗಿಸುವುದೂ ಅಲ್ಲ. ಇದು ಬಾಹ್ಯದಲ್ಲಿ ರೂಪಾಂತರ; ಅಂತರಂಗದಲ್ಲಿ ಭಾವಾಂತರ. ಹೆಣ್ಣು ತಾನಾಗಿಯೇ ಆರೋಪಿಸಿಕೊಳ್ಳುವ ಗಂಡುತನ.

ಅಲ್ಬೇನಿಯಾದ ಈ ಸಂಪ್ರದಾಯ 15ನೇ ಶತಮಾನದಷ್ಟು ಹಳೆಯದು. ಗಂಡು ಮಕ್ಕಳು ಅಕಾಲಿಕವಾಗಿ ಸಾವನ್ನಪ್ಪುತ್ತಿದ್ದರು. ಕುಟುಂಬದಲ್ಲಿರುವ ಕೊನೆಯ ಪುರುಷ ಸತ್ತನೆಂದರೆ ಅವನ ಜವಾಬ್ದಾರಿಯನ್ನು ನಿರ್ವಹಿಸಲು ಆ ಮನೆಯ ಹಿರಿಯ ಮಗಳು ಗಂಡಾಗಿ ಕುಟುಂಬದ ನಿರ್ವಣೆಗೆ ಮುಂದಾಗಬೇಕಿತ್ತು. ಆಗ ಅವಳಿಗೆ ಗಂಡಿಗೆ ಇರುವ ಎಲ್ಲ ಸೌಲಭ್ಯಗಳೂ ದೊರೆಯುತ್ತಿದ್ದವು. 

ಅವಳು ಹೆಣ್ಣಿನ ಉಡುಗೆಗಳನ್ನು ತೊರೆದು ಗಂಡಿನಂತೆ ಬಟ್ಟೆಬರೆಗಳನ್ನು ಧರಿಸಬೇಕಾಗುತ್ತಿತ್ತು. ಮೇಲ್ನೋಟಕ್ಕೆ ಇವಳು ಹೆಣ್ಣು ಎಂದು ಗುರುತಿಸುವುದೂ ಕಷ್ಟ ಎನ್ನುವಷ್ಟು ಅವಳು ಬದಲಾಗಿ ಬಿಡುತ್ತಿದ್ದಳು. ಗಂಡಿನಂತೆ ಮನೆಯ ಒಳಗೆ ಹಾಗೂ ಹೊರಗೆ ಅವಳು ಅವನಾಗಿ ವ್ಯವಹರಿಸಬೇಕಾಗುತ್ತಿತ್ತು. ಅವನಾದ ಅವಳು ಗಂಡಿನಂತೆ ಸಿಗರೇಟು ಸೇದಿದರೆ, ಬಾರಿನಲ್ಲಿ ಕುಳಿತು ಸರಾಯಿ ಕುಡಿದರೆ... ಸಮಾಜದಲ್ಲಿನ ಯಾರೂ ಅದನ್ನು ಆಕ್ಷೇಪಿಸುತ್ತಿರಲಿಲ್ಲ. ಅದೊಂದು ಸಹಜ ಕ್ರಿಯ ಎಂದು ನೋಡುತ್ತಿದ್ದರು. ಅವಳು ನಿಜವಾದ ಅರ್ಥದಲ್ಲಿ ಗಂಡೇ ಆಗಿ ಬಿಡುತ್ತಿದ್ದಳು! 

ಆದರೆ ಅವನಾಗುವ ಅವಳು ಒಂದು ಪ್ರತಿಜ್ಞೆ ಮಾಡಬೇಕಾಗುತ್ತಿತ್ತು. ಅದು, ಜೀವನಪೂರ್ತಿ ಕೌಮಾರ್ಯವನ್ನು ಕಾಪಾಡಿಕೊಂಡು ಬ್ರಹ್ಮಚರ್ಯವನ್ನು ಪಾಲಿಸುವ ಶಪಥವಾಗಿರುತ್ತಿತ್ತು. ಕುಮೈಲ್ ಸ್ಟೆಮಾ ಎಂಬ ಬುರ್ನೇಸಾಗೀಗ 92ರ ಪ್ರಾಯ. ಅವಳು ತನ್ನ 20ನೇ ವರ್ಷದಲ್ಲಿದ್ದಾಗಲೇ ಅವಳ ತಂದೆ ತೀರಿಕೊಂಡ. ಅವಳ ಹಿಂದೆ 9 ಜನ ತಂಗಿಯರಿದ್ದರು. ಅವರ ಪಾಲನೆ-ಪೋಷಣೆ-ಭವಿಷ್ಯಕ್ಕಾಗಿ ಸ್ಟೆಮಾ ಬುರ್ನೇಸಾ ಆಗಲು ಒಪ್ಪಿಕೊಂಡಳು. ವೈವಾಹಿಕ ಸುಖವನ್ನು  ಶಾಶ್ವತವಾಗಿ ತ್ಯಾಗ ಮಾಡಿದಳು. ಅದಕ್ಕಾಗಿ ಅವಳು ಈಗ ಪಶ್ಚಾತ್ತಾಪ ಪಡುವುದಿಲ್ಲ, ಹೆಮ್ಮೆ ಪಡುತ್ತಾಳೆ. ಸಂತೃಪ್ತಿ ಅವಳ ಮುಖದಲ್ಲಿ ಎದ್ದು ಕಾಣುತ್ತದೆ.

ಈ ಬುರ್ನೇಶಾಗಳ ಕಥೆ ಕೇಳುವಾಗ ನಮ್ಮ ಮಹಾಭಾರತದ ಭೀಷ್ಮನ ನೆನಪು ಬರುತ್ತದೆ. ಆತ ತನ್ನ ತಂದೆಯ ಸುಖಕ್ಕಾಗಿ ಆಜನ್ಮ  ಬ್ರಹ್ಮಚಾರಿಯಾಗುವ ಪ್ರತಿಜ್ಞೆ ಮಾಡುತ್ತಾನೆ. ಅದರಂತೆ ನಡೆಯುತ್ತಾನೆ. ವ್ಯತ್ಯಾಸ ಎಂದರೆ ಭೀಷ್ಮ ಪುರುಷ. ಬುರ್ನೇಶಾಗಳು ಪುರುಷ ವೇಷದ, ಪುರುಷ ಭಾವದ ಹೆಣ್ಣುಗಳು. 

ಅವರನ್ನು ನಮ್ಮ ಭಾಷೆಯಲ್ಲಿ ಅಲ್ಬೇನಿಯಾದ ಭೀಷ್ಮಿಗಳು ಎಂದು ಕರೆಯಬಹುದೇನೋ?! ಅವರಿಗೆ ಗಂಡುಗಳಿಗಿರುವ ಕೆಲವು ಸೌಕರ್ಯಗಳು ದೊರೆಯುವವಾದರೂ ಜೀವನವಿಡೀ ಒಂಟಿ ಜೀವನವನ್ನೇ ಅವರು ಸಾಗಿಸಬೇಕಾಗುತ್ತದೆ. 

ಸಮಾಜದಲ್ಲಿ, ಮನೆಗಳಲ್ಲಿ ಬುರ್ನೇಶಾಗಳನ್ನು ಗಂಡೆಂದೇ ನೋಡಲಾಗುತ್ತದೆ. ಗೌರವಿಸಲಾಗುತ್ತದೆ. ಅವರ ತಂಗಿಯ ಮಕ್ಕಳು ಅವರನ್ನು ಚಿಕ್ಕಪ್ಪ ಎಂದೇ ಸಂಬೋಧಿಸುವವು. ಮೊಮ್ಮಕ್ಕಳು ಅವರನ್ನು ಅಜ್ಜಿ ಎಂದು ಕರೆಯುವುದಿಲ್ಲ. ಅಜ್ಜ ಎಂದೇ ಕರೆಯುತ್ತವೆ. ಬುರ್ನೇಶಾಗಳನ್ನು ಯಾರಾದರೂ ಹಿಜಡಾಗಳೆಂದೋ, ಶಿಖಂಡಿಗಳೆಂದೋ ಕರೆದರೆ, ಅವರು ಬಹಳ ಸಿಟ್ಟಿಗೇಳುತ್ತಾರೆ. ದೈಹಿಕವಾಗಿ ಅವರು ಹೆಣ್ಣುಗಳಾಗಿದ್ದರೂ ಮಾನಸಿಕವಾಗಿ ಅವರು ಗಂಡುಗಳೇ! ಅವರನ್ನು ನೋಡುವಾಗ ಗಂಡುಗಳ ಗಟ್ಟಿತನ, ಠೀವಿ... ಎಲ್ಲವೂ ಎದ್ದು ಕಾಣುತ್ತವೆ. 

ಬುರ್ನೇಶಾಗಳಲ್ಲಿ ಹಾಗೂ ಗಂಡುಗಳಲ್ಲಿ ಕಿಂಚಿತ್ ವ್ಯತ್ಯಾಸವೂ ಕಾಣದಂತೆ ಅವರು ಗಂಡುಗಳಂತೆ ವರ್ತಿಸುತ್ತಾರೆ. ಹಜದಾರಿ 86 ವರ್ಷಗಳ ಬುರ್ನೇಶಾ. ಅವಳಿಗೆ ಗಂಡಾಗುವ ಯಾವ ಅನಿವಾರ್ಯತೆಯೂ ಇರಲಿಲ್ಲ. ಆಕೆ 6 ವರ್ಷದವಳಿದ್ದಾಗಲೇ ಗಂಡು ಹುಡುಗರ ಉಡುಗೆಗಳನ್ನು ತೊಡಲಾರಂಭಿಸಿದಳು. ಅವಳ ತಾಯಿ ಎಷ್ಟು ಒತ್ತಾಯಿಸಿದರೂ ಹೆಣ್ಣು ಮಕ್ಕಳ ಬಟ್ಟೆಗಳನ್ನು ಹಾಕಿಕೊಳ್ಳಲು ಅವಳು ನಿರಾಕರಿಸಿದಳು.

ಅವಳ ತಂದೆ ಅವಳ ಇಚ್ಛೆಯ ಮೇರೆಗೆ ಬುರ್ನೇಶಾ ಆಗಲು ಒಪ್ಪಿಗೆ ಕೊಟ್ಟ. ಆಗ ಅವಳಿಗೆ ಕೇವಲ 12 ವರ್ಷ. ಹಜದಾರಿಯಂತೆಯೇ  ಸ್ವಸಂತೋಷದಿಂದ ಗಂಡಾಗುವ ನಿರ್ಧಾರಕ್ಕ ಬಂದವಳು ಡಯಾನಾ ರಾಕಿಪಿ. ಅವಳಿಗೀಗ 59 ವರ್ಷ. ಹೆಣ್ಣಿಗಿರುವ ಬಂಧನವನ್ನು ತಿರಸ್ಕರಿಸಿ ಹಾಗೂ ಗಂಡಿಗಿರುವ ಸ್ವಾಂತಂತ್ರ್ಯವನ್ನು ಅನುಭಸುವುದಕ್ಕಾಗಿ ಬುರ್ನೇಶಾ ಆದವಳು ಈ ಡಯಾನಾ.

ಬುರ್ನೇಶಾ ಸಂಪ್ರದಾಯ ಗುಡ್ಡಗಾಡುಗಳಲ್ಲಿ ವಾಸಿಸುವ ಅಲ್ಬೇನಿಯಾ, ಕೋಸೋವೋ ಮತ್ತು ಮೊಂಟೆನೆಗ್ರೋ ಜನಾಂಗಗಳಲ್ಲಿ ಹೆಚ್ಚಾಗಿ ಇದ್ದಿತಾದರೂ, ಇತ್ತೀಚೆಗೆ ಅದು ತೀರಾ ಕಡಿಮೆಯಾಗಿದೆ. ಈಗ ಅಲ್ಲಲ್ಲಿ ಕೆಲವು ಡಜನ್ ಬುರ್ನೇಶಾಗಳು ದೊರೆಯಬಹುದು. ಅಲ್ವೇನಿಯಾ ತೀರಾ ಸಂಪ್ರದಾಯಬದ್ಧವಾದ ನಾಡು. ಅಲ್ಲಿ ಶೇ.30ರಷ್ಟು  ಕ್ರಿಶ್ಚಿಯನ್ನರು ಹಾಗೂ ಶೇ.70ರಷ್ಟು ಮುಸ್ಲಿಮರು ವಾಸಿಸುತ್ತಾರೆ. ನೋಬೆಲ್ ಶಾಂತಿ ಪ್ರಶಸ್ತಿ ಪಡೆದ, ಭಾರತದ ಮದರ್ ಥೆರೇಸಾ ಅಲ್ಬೇನಿಯಾದವರು ಎಂಬುದನ್ನಿಲ್ಲಿ ಸ್ಮರಿಸಬಹುದು.

click me!